ಮನಸ್ಸು ಸುತ್ತುವ “ತಾರಿ ದಂಡೆ” ನೆನಪುಗಳ ಬುತ್ತಿ!

Share This

• ನೂರಾರು ಸಣ್ಣ ಕಥೆಗಳನ್ನು ಹೇಳುವ ಬಿಡಿ ಬರಹಗಳ ಹೊಸ ಪುಸ್ತಕ.

“ತಾರಿದಂಡೆ”
ಲೇಖಕರು: ಜಯಂತ್ ಕಾಯ್ಕಿಣಿ
ಪ್ರಕಾಶಕರು: ಅಂಕಿತ ಪುಸ್ತಕ
ಮುಖಪುಟ ಚಿತ್ರ: ರಾವ್ ಬೈಲ್
ರೂಪಣೆ: ಅಪಾರ
ಬೆಲೆ: ₹250
” ತಾರಿ ದಂಡೆ (TAARI DANDE) “.
ಬಹಳ ಆಪ್ತವೆನಿಸುವ ಬಿಡಿ ಬರಹಗಳ ಹೊತ್ತಿಗೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿ ಬದಿಗಿಡುವಾಗ ಮತ್ತೆ ಕೈಗೆತ್ತಿಕೊಂಡು ‘ಇದು ನನ್ನದೂ ನೆನಪುಗಳ ಬುತ್ತಿ’ ಎಂದು ಅಭಿಮಾನ ಹೆಚ್ಚಿಸಿದ ಸುಂದರ ಸಾಲುಗಳ ಪುಸ್ತಕ.
Yes, ಜಯಂತ ಕಾಯ್ಕಿಣಿ (Jayant Kaikini) ನನ್ನೂರಿನವರು ಎನ್ನುವ ಅಭಿಮಾನಕ್ಕಿಂತ ಹೃದಯದಾಳದಲ್ಲಿ ಬೇರೂರಿರುವ ಮೇರು ವ್ಯಕ್ತಿತ್ವ.
” ತಾರಿ ದಂಡೆ ” ಬಿಡುಗಡೆಯಾದ ದಿನವೇ ತಂದಿಟ್ಟುಕೊಂಡೆ. ಓದಲಾಗಿರಲಿಲ್ಲ. ಅಂತೂ ನಿನ್ನೆ ಟೈಂ ಕೂಡಿಬಂತು, ಓದಿ ಮುಗಿಸಿದೆ.
ಭಾಗ 1:
ಮೊದಲ ಭಾಗದ ಮೊದಲ ಬರಹ ” ಮಿಸ್ ಕೋಡಂಗಿಯ ವ್ಯಾನಿಟಿ ಬ್ಯಾಗ್ ” ನಗಿಸುತ್ತಲೇ ನೆನಪುಗಳ ಪುಟಗಳನು ತೆರೆದಿಡುವ ಬರಹ.
ಉತ್ತರ ಕನ್ನಡ ಅದರಲ್ಲೂ ವಿಶೇಷವಾಗಿ ಕುಮಟ-ಹೊನ್ನಾವರ ಭಾಗದಲ್ಲಿ ಕಾಣ ಸಿಗುವ ಹಗಣ / ಹಗರಣ ಕುರಿತು ಬಹಳ ಸೊಗಸಾಗಿ ಹೇಳಿದ್ದಾರೆ. ‘ಹಗಣ’ ಅಂದರೆ ಸುಗ್ಗಿಯಕಾಲದ ಶ್ರಮಿಕರ ಸಂಭ್ರಮಾಚರಣೆ. ಒಮ್ಮೆ ನೋಡಿದರೆ ಪ್ರತಿವರ್ಷವೂ ನೋಡಲೇಬೇಕೆನಿಸುವ ಸಾಂಪ್ರದಾಯಿಕ ಮನರಂಜನಾ ಕಾರ್ಯಕ್ರಮ. ಬಹಳ ಸೂಕ್ಷ್ಮ ಗ್ರಹಿಕೆ ಈ ಬರಹದ ಶಕ್ತಿ.
ಇದೇ ಭಾಗದಲ್ಲಿರುವ ವಾಯಾ ಅಂತರವಳ್ಳಿ, ಕದಂ ತಾಲ್, ಕಿಟಕಿ ತೆರೆದ ರೈಲು, ತಾರಿ ದಂಡೆ, ಮಾರುವೇಷದ ಇಷ್ಟದೇವತೆಗಳು ಶೀರ್ಷಿಕೆಯ ಬರಹಗಳು ಬಹಳ ಆಪ್ತವೆನಿಸಿದವು. ಜಯಂತ್ ಕಾಯ್ಕಿಣಿ ಅವರ ವ್ಯಕ್ತಿತ್ವ ತೆರೆದಿಡಬಹುದಾದ ಬರಹಗಳು ಇವು. ಅವರ ಹೃದಯ ಊರಿನ ಒಂದೊಂದು ಸಂಗತಿಗಳನ್ನು ಹೇಗೆ ಸ್ಪರ್ಶಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಬಲ್ಲ ಸಾಲುಗಳು.
ಭಾಗ 2:
ಕಾಯ್ಕಿಣಿ ಅವರ ಗ್ರಹಿಕೆ ಹೇಗಿದೆ ಎನ್ನುವುದಕ್ಕೆ “ಮಾವಿನ ತುಮಕಿ : ಮಾಮಾ ಶಾಂತಾ” ಓದು ಉತ್ತರ ನೀಡಬಲ್ಲದು. ತಾಯಿಯ ಕುರಿತಾಗಿ ಬರೆದ ಬರಹ. ಗೋಕರ್ಣದ ಮನೆಯೊಂದನ್ನು ಕಣ್ತುಂಬಿಕೊಂಡಿದ್ದರೆ ಆ ಮನೆಯಲ್ಲೇ ತಾಯಿ ಶಾಂತಾ ಅವರನ್ನು ನೋಡಬಹುದಾದ ರೀತಿಯಲ್ಲಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಗೋಕರ್ಣ ನೋಡದವರೂ ಈ ಬರಹ ಓದಿ ಗಲಗಲ್ಲಿ ಸುತ್ತಿ ಬರುವ ಮನಸ್ಸು ಮಾಡದಿರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಮನದಾಳ ಮೀಟಿಸುವ ಬರಹ ಇದು.
ಹಾಗೆಯೇ, 2ನೇ ಭಾಗದ ಮುಕ್ತ ಹಾಜರಿ: ಮುಕುಂದ ಜೋಷಿ, ಜೀವನ ಸೌಂದರ್ಯದ ಉಪಾಸಕ: ಶಾ ಬಾಲೂರಾವ್, ಗೋಕರ್ಣದ ಕೋಣೆ ಅಣ್ಣ : ವೇದೇಶ್ವರ, ಶಾಂತಾ ಸಮ್ಮಿತ, ಒಂದು ಖಾಸಾ ದೋಸ್ತಿ : ಪಿ.ವಿ.ಶಾಸ್ತ್ರಿ ಕಿಬ್ಬಳ್ಳಿ, ಮೌನದ ಸಮುದ್ರ ಇರ್ಫಾನ್ ಖಾನ್, ಕಿನಾರೆ ಗಾಳಿಯಲ್ಲಿ ವಿದ್ವತ್ ಸ್ಪರ್ಶ, ಗಾಳಿ ಮರಗಳ ನಡುವೆ ಪ್ರೊ.ಜಿ.ವಿ.ಭಟ್, ಜೀಯು ಜೊತೆ ಬನ್ಸ್ ಭಾಜಿ, ನಾಗೇಶ ಹೆಗಡೆರಿಗೆ ನಮಸ್ಕಾರ ಅಂದಿ… ಇವೆಲ್ಲವೂ ಹೃದಯಸ್ಪರ್ಶಿ. ನನ್ನದೇ ಅನುಭವಗಳು ಎನ್ನುವಷ್ಟು ಪ್ರೀತಿ ಉಕ್ಕಿಸಿತು.
ನಾಗೇಶ ಹೆಗಡೆರಿಗೆ ನಮಸ್ಕಾರ ಅಂದಿ..‌. ಊರಲ್ಲೇ ಇದ್ದಹಾಗೆ, ಅಚೀಚೆ ಮನೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇನೇನೊ ಎನ್ನುವ ಅನುಭವ ನೀಡಿತು. ಬರಹದ ಶೈಲಿಯಲ್ಲಿ ಆ ನೆಲದ ಸೊಗಡು ಕಾಣಿಸಿತು.
ಭಾಗ 3:
ಬಾಳೆ ಹೂವಿನ ಚಟ್ನಿ : ಪ್ರಮೀಳಾ ಸ್ವಾಮಿ, ನಿಡುಗಾಲದ ನಿಲುವುಗನ್ನಡಿ: ಸಂಯುಕ್ತ ಕರ್ನಾಟಕ, ಪಾತಿ ದೋಣಿಗಳಂಥ ಕಥೆಗಳು, ಪಾರದರ್ಶಕ ವಿಚಾರಶಾಲೆ: ಪ್ರಜಾವಾಣಿ ಸರಾಗವಾಗಿ ಓದಿಸಿಕೊಂಡು ತಾರಿದಂಡೆಯ ದಡ ಸೇರಿಸುವ ಬರಹಗಳು.
“ತಾರಿ ದಂಡೆ” ಕೇವಲ ಬಿಡಿ ಬರಹಗಳ ಪುಸ್ತಕವಲ್ಲ. ನೂರಾರು ಸಣ್ಣ ಕಥೆಗಳ ಹಂದರ, ಅತಿ ಸುಂದರ, ನೆನಪುಗಳು ಮಧುರ. ವಾಸ್ತವಾಂಶಗಳ ನಿರೂಪಣೆಯೇ ಈ ಪುಸ್ತಕದೊಳಗಿನ ಭೋಜನ. ಒಂದೊಂದು ಬರಹವನ್ನೂ ಅಘನಾಶಿನಿ, ಗಂಗಾವಳಿ ದಡದ ನೆರಳಲ್ಲಿ ಕುಳಿತು ಓದಿದರೇನೆ ಚೆಂದ ಅನ್ನಿಸುವಷ್ಟು, ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಪುಸ್ತಕ.
ಅಭಿನಂದನೆಗಳು 💐 ಮಗದೊಂದು ಒಳ್ಳೆಯ ಪುಸ್ತಕ ಕೊಟ್ಟಿದ್ದಕ್ಕೆ ಧನ್ಯವಾದಗಳು.

Share This

Leave a Reply

Your email address will not be published. Required fields are marked *