ದಂಪತಿಗಳ ಭಾವಾಭಿವ್ಯಕ್ತಿ Arthouz ಪರಿಕಲ್ಪನೆ

Share This

• ಅಕ್ಟೋಬರ್ 10ರಂದು ಸಂಪನ್ನ; ಹೋಗಿ ಬನ್ನಿ
‘ದಾಂಪತ್ಯ’ ವರ್ಣನೆ ಸಾಹಿತ್ಯದಲ್ಲಿ ಮೊಗೆದಷ್ಟು ಸಿಗುತ್ತವೆ. ಒಬ್ಬರಲ್ಲ ಇಬ್ಬರಲ್ಲ ಅನೇಕ ಸಾಹಿತಿಗಳು ತಮ್ಮದೆ ಧಾಟಿಯಲ್ಲಿ ವರ್ಣಿಸಿದ್ದಾರೆ, ತಮ್ಮದೆ ಧ್ವನಿಯಲ್ಲಿ ಹೇಳಿದ್ದಾರೆ, ತಮ್ಮದೆ ದೃಷ್ಟಿಕೋನದಿಂದ ನೋಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ವರಸೆ. ಎಲ್ಲವೂ ಭಿನ್ನ-ವಿಭಿನ್ನ.
“ಎರಡು ಹೆಸರು, ಒಂದೆ ಉಸಿರು
ನಾನು ಪತಿ, ನೀನು ಸತಿ
ಒಂದೆ ದಂಪತಿ”
ರಾಷ್ಟ್ರಕವಿ ಕವಿ ಕುವೆಂಪು ಅವರ ಸಾಲುಗಳಿವು. ದಾಂಪತ್ಯಕ್ಕೆ ಸಂಬಂಧಿಸಿ ಲೆಕ್ಕವಿಲ್ಲದಷ್ಟು ಸಾಲುಗಳನ್ನು ಕನ್ನಡ ಸಾಹಿತ್ಯ ನೀಡಿದೆ. ಕುವೆಂಪು, ಬೇಂದ್ರೆ ಸೇರಿದಂತೆ ಬಹುತೇಕ ಶ್ರೇಷ್ಠ ಸಾಹಿತಿಗಳೆಲ್ಲರೂ ಸುಂದರ ಸಾಲುಗಳನ್ನು ಪೋಣಿಸಿ ಕೊಟ್ಟಿದ್ದಾರೆ. ಬೆಳಕಾಗಿ ಪ್ರಜ್ವಲಿಸಿದ್ದಾರೆ. ಯಾಕೀಗ ದಾಂಪತ್ಯ ಟಿಪ್ಪಣಿ ಅಂದು ಕೊಂಡಿದ್ದರೆ, ಇಲ್ಲಿದೆ ಉತ್ತರ.
ಬೆಂಗಳೂರಿನ ಪ್ರಮುಖ ಗ್ಯಾಲರಿಗಳಲ್ಲಿ ಒಂದಾದ ಆರ್ಟ್ ಹೌಸ್ (Arthouz) ಆಯೋಜಿಸಿದ ‘Reflections-A Journey in two Perspectives’ ಕಲಾಪ್ರದರ್ಶನ ಕುವೆಂಪು ಅವರ ದಾಂಪತ್ಯ ಕುರಿತ ಈ ಮೇಲಿನ ಸಾಲುಗಳನ್ನು ನೆನಪಿಸಿತು. ಹೌದು, ಇದು ದಂಪತಿಗಳ ಸಮೂಹ ಕಲಾಪ್ರದರ್ಶನ. ದೃಶ್ಯಕಲೆಯನ್ನು ಉಸಿರಾಗಿಸಿಕೊಂಡಿರುವ ದಂಪತಿಗಳ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
Arthouz ಗ್ಯಾಲರಿಯ 10ನೇ ವರ್ಷ ಸಂಭ್ರಮಾಚರಣೆಯ ಭಾಗವಾಗಿ ಆಯೋಜಿಸಲಾದ ಈ ಕಲಾಪ್ರದರ್ಶನ ಹೊಸ ಪರಿಕಲ್ಪನೆ. ಹಾಗೆ, ವಿಭಿನ್ನ ಕಲಾಕೃತಿಗಳಿಂದ ಕೂಡಿದೆ.
ಅಮೃತಾ ಆರ್ ಮತ್ತು ದರ್ಶನ್ ಕುಮಾರ್ ವೈ.ಯು., ಸಂಗಮ್ ವಿ.ಬಿ. ಮತ್ತು ಬಸವರಾಜ್ ಎಂ., ಆರತಿ ಎಚ್.ಕೆ. ಮತ್ತು ಎಂ.ಜಿ.ಕುಲಕರ್ಣಿ, ಊರ್ಮಿಳಾ ವಿ.ಜಿ. ಮತ್ತು ವೇಣುಗೋಪಾಲ ವಿ.ಜಿ., ದೇವಿ ಪ್ರಿಯಾ ಮತ್ತು ಎಸ್.ಎ.ವಿಮಲನಾಥನ್ ಹಾಗೂ ಉಷಾ ಮಿಶ್ರಾ ಮತ್ತು ಡಾ.ಜ್ಞಾನೇಶ್ ಮಿಶ್ರಾ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕಲಾಕೃತಿಗಳು ಅವರವರ ಎಂದಿನ ಶೈಲಿ, ವಿಷಯಾಧಾರಿತವಾಗಿವೆ. ಕಲಾಕೃತಿಗಳ ರಚನೆಯ ವಿಧಾನದಲ್ಲಿ ದಂಪತಿಗಳ ನಡುವಿನ ವಿಭಿನ್ನ ಆಲೋಚನೆ ಮತ್ತು ಪ್ರಕ್ರಿಯೆಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು.
ಎಲ್ಲಾ ಕಲಾಕೃತಿಗಳು ದಾಂಪತ್ಯದ ಪರಿಧಿಯಲ್ಲೇ ಇದ್ದಿದ್ದರೆ (ದಾಂಪತ್ಯ ವಿಷಯಾಧಾರಿತ ಆಗಿದ್ದರೆ) ಬಹುಶಃ ಕಲಾಪ್ರದರ್ಶನಕ್ಕೆ ಇನ್ನೂ ಒಂದು ಆಯಾಮ ಸಿಗಬಹುದಿತ್ತೇನೊ. ಆದರೆ, ಈ ಪ್ರಕ್ರಿಯೆಗೆ ಸಮಯದ ಅಗತ್ಯವೂ ಬೇಕೆನ್ನುವುದು ಅಷ್ಟೇ ಸತ್ಯ.
ಊರ್ಮಿಳಾ, ದೇವಿ ಪ್ರಿಯಾ ಮತ್ತು ಆರತಿ ಎಚ್.ಕೆ. ಅವರ ಚಾರ್ಕೊಲ್ ಕಲಾಕೃತಿಗಳು ಹಾಗೂ ಸಂಗಮ್ ಬಿ.ವಿ. ಮತ್ತು ಬಸವರಾಜ್ ಎಂ. ಅವರ ಕಲಾಕೃತಿಗಳು ವಿಭಿನ್ನವೆನಿಸಿದವು. ರೇಖೆ ಮತ್ತು ಮಿತ ವರ್ಣಗಳ ಲಾಲಿತ್ಯ ಗಮನಾರ್ಹ. ವೇಣುಗೋಪಾಲ ವಿ.ಜಿ. ಅವರ ಬೆಟ್ಟದ ಮೇಲಿನ ಭೂದೃಶ್ಯ, ಹಿಮದ ರಾಶಿ ನೋಡುಗರಲ್ಲಿ ದೃಶ್ಯ ಕಾವ್ಯ ಸೃಷ್ಟಿಸಿಕೊಡುತ್ತವೆ. ಅವರ ಎಂದಿನ ಕಲಾಕೃತಿಗಳಿಗಿಂತಲೂ ವಿಭಿನ್ನವೆನಿಸುತ್ತವೆ. ಉಷಾ ಮಿಶ್ರಾ ಮತ್ತು ಜ್ಞಾನೇಶ್ ಮಿಶ್ರಾ ಅವರ ಕಲಾಕೃತಿಗಳು ಗಮನ ಸೆಳೆದವು. ಕೆಲ ಕಲಾಕೃತಿಗಳು ಭಾವಾತೀತ. ಭಾವನೆಗಳಿಗೆ ನಿಲುಕದ, ಅದರಾಚೆಗಿನ ಅಭಿವ್ಯಕ್ತಿ ಅನಿಸಿದವು.
Arthouz (Bengaluru) ಗ್ಯಾಲರಿಯನ್ನು ಬಹಳ ಸಮರ್ಥವಾಗಿ ಮುನ್ನಡೆಸುತ್ತಿರುವ ಜಯಂತಿ ಶೇಗಾರ್ ಅವರ ಈ ಪ್ರಯತ್ನ ಶ್ಲಾಘನೀಯ.
ಕಲಾಪ್ರದರ್ಶನ ಅಕ್ಟೋಬರ್ 10ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.
 

Share This

Leave a Reply

Your email address will not be published. Required fields are marked *