ಜೀವನ ಮೌಲ್ಯ ಎತ್ತಿಹಿಡಿದ ‘ನೃತ್ಯ ಸಮಾಗಮ’

Share This

• ಗಮನ ಸೆಳೆದ ಸಾಧನ ಸಂಗಮ ವಾರ್ಷಿಕೋತ್ಸವ

• ಮನಸೋಲ್ಲಾಸಕ್ಕೆ ಸಾಕ್ಷಿಯಾದ ನೃತ್ಯ ಪ್ರದರ್ಶನ

ಧರ್ಮ್ಯಂ ಯಶಸ್ಸಮಾಯುಷ್ಯಂ ಹಿತಂ ಬುದ್ದಿವಿವರ್ಧನಂ|
ಲೋಕೋಪದೇಶ ಜನನಂ ನಾಟ್ಯಮೇತದ್ಭವಿಷ್ಯತಿ||
ಈ ಎರಡೇ ಎರಡು ಸಾಲುಗಳು ಎಷ್ಟು ವಿಚಾರವನ್ನು ಹೇಳುತ್ತಿವೆ. ನಾಟ್ಯ ಅಂದರೆ ನೃತ್ಯವು ಧರ್ಮ, ಯಶಸ್ಸು ಮತ್ತು ಆಯುಸ್ಸು ವೃದ್ಧಿಸುತ್ತೆ. ಅಷ್ಟೇ ಅಲ್ಲ ಅತ್ಯಂತ ಹಿತಕಾರಿಯೂ ಹೌದು. ಬುದ್ಧಿ ವಿಕಾಸವೂ ಸಾಧ್ಯ. ನಾಟ್ಯವು ಲೋಕಕ್ಕೆ ಉಪದೇಶಪ್ರದವಾದುದು ಎನ್ನುತ್ತಾರೆ ಭರತಮುನಿ. ನಾಟ್ಯ ಮತ್ತು ಜೀವನದ ಕುರಿತಾಗಿ ಬಲು ಸೊಗಸಾಗಿ ಬರೆದಿದ್ದಾರೆ.
ಜೀವನಕ್ಕೆ ಅಗತ್ಯವಾಗಿ ಬೇಕಾದ ಸಂಸ್ಕಾರ ಪಾಠ ನಾಟ್ಯದಿಂದ ಸಾಧ್ಯ. ನಾಟ್ಯವೆನ್ನುವುದೇ ಜೀವನ. ಜೀವನಕ್ಕೆ ಬೇಕಾದ ಎಲ್ಲವೂ ನಾಟ್ಯ ಒಳಗೊಂಡಿದೆ ಎನ್ನುವುದನ್ನು ಭರತಮುನಿಯೂ ಸೇರಿ ಅನೇಕ ವಿದ್ವಾಂಸರು, ಕಲಾವಿದರು ವಿಶ್ಲೇಷಿಸಿದ್ದಾರೆ.
ಮೊನ್ನೆ ಭಾನುವಾರ ಕಾಸ್ಸಿಯಾ ರಂಗಮಂದಿರದಲ್ಲಿ ನಡೆದ ಸಾಧನ ಸಂಗಮ ನೃತ್ಯ ಕೇಂದ್ರದ 38ನೇ ವಾರ್ಷಿಕೋತ್ಸವ “ನೃತ್ಯ ಸಮಾಗಮ” ನಾಟ್ಯ, ಜೀವನ ಮತ್ತು ಸಂಸ್ಕಾರಕ್ಕೊಂದು ಕನ್ನಡಿ ಹಿಡಿದಂತೆ ಇತ್ತು. ಹಲವರಿಗೆ ಇದು ಸುಮ್ಮನೆ ಹೊಗಳಿಕೆ ಮಾತುಗಳು ಅನಿಸಬಹುದು. ಆದರೆ ವಾಸ್ತವ ಅರಿಯಬೇಕಿದೆ. ಸಂಸ್ಕಾರವಿಲ್ಲದ ಮಕ್ಕಳ ಚಟುವಟಿಕೆ, ನಡವಳಿಕೆಯು ಹೇಗೆನ್ನುವುದು ಅವರವರ ಸುತ್ತಮುತ್ತ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ನಾಟ್ಯಾಭ್ಯಾಸ ಮಕ್ಕಳಲ್ಲಿ ಏನೇನು ಬದಲಾವಣೆ ತರಲು ಸಾಧ್ಯ? ನಾಟ್ಯಾಭ್ಯಾಸದಲ್ಲಿ ತೊಡಗಿರುವ ಮಕ್ಕಳು ಯಾವ್ಯಾವ ಸಂದರ್ಭಗಳಲ್ಲಿ ಹೇಗೇಗೆ ಸ್ಪಂದಿಸಬಲ್ಲರು ಎನ್ನುವ ಸೂಕ್ಷ್ಮ ಗಮನಿಸಬೇಕಿದೆ. ಅವರಲ್ಲಿರುವ ಮನೋಬಲ, ದೈಹಿಕ ಸಾಮರ್ಥ್ಯಕ್ಕೆ ನಾಟ್ಯ ಕಾರಣ ಎನ್ನುವ ಸತ್ಯ ತಿಳಿಯಬೇಕಿದೆ. ಈ ಕಾರಣಕ್ಕಾಗಿ ಸಾಧನ ಸಂಗಮ ಪ್ರಶಂಸನೀಯ ಸಂಸ್ಥೆಯ ಸಾಲಿನಲ್ಲಿ ನಿಲ್ಲುತ್ತದೆ ಎನ್ನುವುದನ್ನು “ನೃತ್ಯ ಸಮಾಗಮ” ಮಗದೊಮ್ಮೆ ಸಾಬೀತುಪಡಿಸಿತು. ಯೋಗ ಗುರು ಪಟ್ಟಾಭಿರಾಮ್ ಮತ್ತು ಗುರು ಜ್ಯೋತಿ ಪಟ್ಟಾಭಿರಾಮ್ ಅವರಿಂದ ಸಂಸ್ಥಾಪಿಸಲ್ಪಟ್ಟ ಸಾಧನ ಸಂಗಮ ಸಂಸ್ಥೆ ಸುದೀರ್ಘ ಪ್ರಯಾಣದ ಬಳಿಕ ಇದೀಗ ಮಗಳು, ನೃತ್ಯ ಗುರು ಡಾ.ಸಾಧನಶ್ರೀ ಪಿ. ಅವರ ಮುಂದಾಳತ್ವದಲ್ಲಿ ಮುನ್ನಡೆದಿದೆ.
| ಗಮನ ಸೆಳೆದ ಬೊಂಬೆ-ಜೀವ-ಭಾವ! |
ಸಾಧನ ನೃತ್ಯ ಕೇಂದ್ರದ ಹಿರಿಯ ಮತ್ತು ಕಿರಿಯ ನೂರಾರು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನನೀಡಿ ರಂಜಿಸಿದರು. ಇಷ್ಟು ದಿನಗಳ ಕಾಲ ತಾವು ಕಲಿತಿರುವುದನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.
ಹಿರಿಯ ವಿದ್ಯಾರ್ಥಿಗಳ ‘ಸೂರ್ಯಾಂಜಲಿ’ ನೃತ್ಯ ಪ್ರದರ್ಶನ ಮೈನವಿರೇಳಿಸುವಂತಿತ್ತು. ಶಿಸ್ತುಬದ್ಧ, ಮನೋಹರ ನೃತ್ಯ ಸಂಯೋಜನೆಗೆ ಶಹಬ್ಬಾಸ್ ಎನ್ನುವುದೊಂದೆ ಪ್ರತಿಕ್ರಿಯೆಯಾಗಿತ್ತು.
ಯೋಗಾಚಾರ್ಯ ಪಟ್ಟಾಭಿರಾಮ್ ಮತ್ತು ಜ್ಯೋತಿ ಪಟ್ಟಾಭಿರಾಮ್ ಪರಿಕಲ್ಪನೆಯ ‘ ಬೊಂಬೆ – ಜೀವ – ಭಾವ ‘ ನೃತ್ಯ ರೂಪಕ ಗಮನ ಸೆಳೆಯಿತು. ಒಂದು ಸುಂದರ ಕಥಾನಕವನ್ನು ನೃತ್ಯಕ್ಕೆ ಅಳವಡಿಸಿ ಸಂಯೋಜನೆ ಮಾಡಲಾಗಿದೆ. ಹಿರಿಯ ಕಿರಿಯ ವಿದ್ಯಾರ್ಥಿಗಳು ಬಹಳ ಸುಂದರವಾಗಿ ಈ ರೂಪಕಕ್ಕೆ ಹೆಜ್ಜೆ ಹಾಕಿ ಶ್ಲಾಘನೆಗೆ ಪಾತ್ರರಾದರು. ಈಶ್ವರ – ಪಾರ್ವತಿಯ ಪ್ರವೇಶ, ಬಸ್ಮಾಸುರ ಮೋಹಿನಿ, ಕರಗಕುಣಿತ, ನಾಗನೃತ್ಯ, ನವಿಲು ಕುಣಿತ, ರ ಕುಣಿತಗಳು ನೃತ್ಯ ರೂಪಕದ ವಿಶೇಷಗಳು. ಕನ್ನಡ ನೆಲದ ಸಂಸ್ಕ್ರತಿಯನ್ನು ತೆರೆದಿಡುವ ಕನ್ನಡದಲ್ಲೇ ಸಂಯೋಜನೆಯಾದ ಅತ್ಯಂತ ಸುಂದರವಾಗಿ ಹೆಣೆಯಲಾದ ರೂಪಕವನ್ನು ಅಷ್ಟೇ ಅರ್ಥಪೂರ್ಣವಾಗಿ ಪ್ರದರ್ಶಿಸಿದರು. ಬೊಂಬೆಗಳೇ ಎದ್ದು ಬಂದು ನಮ್ಮೆದುರು ಕಥೆಹೇಳಿ ನರ್ತಿಸುತ್ತಿವೆಯೇನೋ ಎನ್ನುವಂತೆ ಭಾಸವಾಯಿತು.
| ಸಾಧನ ಕಲಾತ್ಮಿಕ ಪ್ರಶಸ್ತಿ ಪ್ರದಾನ |
ಇದೇ ವೇಳೆ ಮೈಸೂರಿನ ಹಿರಿಯ ನೃತ್ಯ ಗುರು, ನೃತ್ಯಗಿರಿ ಸಂಸ್ಥೆಯ ನಿರ್ದೇಶಕಿ ಡಾ. ಕೃಪಾ ಪಡ್ಕೆ ಅವರಿಗೆ ಈ ಸಾಲಿನ ‘ಸಾಧನ ಕಲಾತ್ಮಿಕ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಧನ ಸಂಗಮದ ಹಿರಿಯರಾದ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ನೃತ್ಯ ಗುರು ಡಾ.ಸಾಧನ ಶ್ರೀ ಪಿ. ಮತ್ತು ಸಂಕೇತ್ ನಾಯ್ಕ್ ಅವರು ಉಪಸ್ಥಿತರಿದ್ದರು. ಪುಟಾಣಿ ಮಹತಿಯ ಪುಟ್ಟ ಪುಟ್ಟ ಹೆಜ್ಜೆ, ತುಂಟಾಟವೂ ಗಮನ ಸೆಳೆಯಿತು.

Share This

Leave a Reply

Your email address will not be published. Required fields are marked *