‘ನೃತ್ಯ ಸಮಾಗಮ’ದಲ್ಲಿ ನೃತ್ಯೋಲ್ಲಾಸ

Share This

  • ಸಾಧನ ಸಂಗಮದ 39ನೇ ವಾರ್ಷಿಕೋತ್ಸವ
  • ಕಾಸಿಯಾ ರಂಗಮಂದಿರದಲ್ಲಿ ಸಂಭ್ರಮ

‘ಶ್ರೀಕೃಷ್ಣ’! ವ್ಯಕ್ತಿತ್ವವೇ ಒಂದು ಅಚ್ಚರಿ. ಅದರಲ್ಲೂ ಕೃಷ್ಣನ ಜೀವನವನ್ನು ಕಥಾನಕವಾಗಿ ಹೆಣೆದ ರೀತಿ ಅದ್ಭುತವಾಗಿಯೇ ಕಾಣಿಸುತ್ತದೆ. ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಬಂದು ಸೇರಿದ ಬಳಿಕ ಅಲ್ಲಿ ನಡೆಯುವ ಪವಾಡಗಳು, ತುಂಟಾಟ, ಸಮಾಜಮುಖಿ ಸಂದೇಶ ಇವೆಲ್ಲವೂ ಎಷ್ಟು ಬಾರಿ ಕೇಳಿಸಿಕೊಂಡರೂ ಮತ್ತೆ ಮತ್ತೆ ಕೇಳಿಸಿಕೊಳ್ಳೋಣ, ಓದೋಣ ಅನಿಸುತ್ತಿರುತ್ತವೆ. ಇಂತಹದ್ದೊಂದು ಅನುಭವ ಇತ್ತೀಚಿಗೆ ಮತ್ತೊಮ್ಮೆ ಸಿಕ್ಕಿತು. ಗುರುಕುಲದಲ್ಲಿ ಸೋದರ ಬಲರಾಮ ಮತ್ತು ಆಪ್ತ ಸ್ನೇಹಿತ ಸುಧಾಮನ ಜೊತೆಗೂಡಿ ಕಳೆದ ದಿನಗಳ ವರ್ಣನೆಯ ನೃತ್ಯ ರೂಪಕ ಆ ದಿನಗಳನ್ನು ಕಲ್ಪಿಸಿಕೊಳ್ಳುವಂತೆ ಮಾಡಿತು.

ಕರ್ನಾಟಕದ ಪ್ರತಿಷ್ಠಿತ ನೃತ್ಯ ಶಾಲೆ ಸಾಧನ ಸಂಗಮ ನೃತ್ಯ ಕೇಂದ್ರದ 39ನೇ ವಾರ್ಷಿಕೋತ್ಸವ ‘ನೃತ್ಯ ಸಮಾಗಮ-2025’ ಜುಲೈ 20, ಭಾನುವಾರ ಸಂಜೆ ಬೆಂಗಳೂರಿನ ವಿಜಯನಗರದ ಕಾಸಿಯಾ ರಂಗಮಂದಿರದಲ್ಲಿ ನಡೆಯಿತು. ಸಾಧನ ಸಂಗಮದ ಹಿರಿಯ ವಿದ್ಯಾರ್ಥಿಗಳ ನೃತ್ಯ ನಿಪುಣ ತಂಡ ಅಪರೂಪದ ರೂಪಕ ‘ಗುರುಕುಲದಲ್ಲಿ ಶ್ರೀಕೃಷ್ಣ’ ಪ್ರದರ್ಶಿಸಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಗುರು ಸಾಧನಶ್ರೀ ಅವರು ಸುಲಲಿತವಾಗಿ ಶ್ರೀಕೃಷ್ಣನ ಪಾತ್ರ ನಿಭಾಯಿಸಿದರು. ನೃತ್ತ, ಅಭಿನಯ ಮತ್ತು ಪ್ರಸ್ತುತಿಯ ಸಂದೇಶ ಹೇಳುವ ಮಹತ್ವವನ್ನು ಅತ್ಯಂತ ಸಮತೋಲನದಿಂದ ಸಂಯೋಜಿಸಲಾದ ‘ಗುರುಕುಲದಲ್ಲಿ ಶ್ರೀಕೃಷ್ಣ’ ಆರಂಭದಲ್ಲಿ ನೃತ್ಯ ಮುಖೇನ ಸಾಗುವ ಬಗೆ ಹೇಗೆ ಅನಿಸದಿರದು. ಆದರೆ, ಖ್ಯಾತ ವಿದ್ವಾಂಸರಾದ ಶತಾವಧಾನಿ ಆರ್.ಗಣೇಶ್ ಅವರ ಸಾಹಿತ್ಯ, ರಾಜ್ಯೋತ್ಸವ ಪುರಸ್ಕೃತೆ, ಕರ್ನಾಟಕ ಕಲಾಶ್ರೀ ಗುರು ಜ್ಯೋತಿ ಪಟ್ಟಾಭಿರಾಮ್ ಅವರ ನೃತ್ಯ ಸಂಯೋಜನೆ ಹಾಗೂ ವಿದ್ವಾನ್ ಜಿ. ಗುರುಮೂರ್ತಿ ಮತ್ತು ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ಸಂಗೀತ ಸಂಯೋಜನೆ ರಸಿಕರನ್ನು ಆಪ್ತವಾಗಿಸಿಕೊಳ್ಳುತ್ತಾ ಸಾಗುವುದೇ ವಿಶೇಷ. ಬಹಳ ಸೊಗಸಾದ ಪ್ರಸ್ತುತಿಯಲ್ಲಿ ಸರ್ವಕಾಲಿಕ ಆದರ್ಶವೆನಿಸುವ ಅನೇಕ ಸನ್ನಿವೇಶಗಳು ರಸಿಕರನ್ನು ಇನ್ನಷ್ಟು ಹತ್ತಿರಕ್ಕೆ ತಂದು ನಿಲ್ಲಿಸಿಕೊಳ್ಳುತ್ತವೆ.

ಸಾಧನ ಸಂಗಮದ ನೃತ್ಯ ನಿಪುಣ ತಂಡದ ಎಲ್ಲಾ ಕಲಾವಿದರು ಪ್ರತಿಯೊಂದು ಪಾತ್ರವನ್ನು ಬಹಳ ಚೆನ್ನಾಗಿಯೆ ನಿಭಾಯಿಸಿದರು. ಗುರು ಸಾಂದೀಪನಿಯ ಶಿಷ್ಯನಾಗಿ ವಿದ್ಯಾಭ್ಯಾಸ ಮಾಡುವ ಸನ್ನಿವೇಶದಲ್ಲಿ ಗುರುಕುಲ ಪದ್ಧತಿಯ ಅನೇಕ ಆದರ್ಶಗಳನ್ನು ಭಾವಪೂರ್ಣ ನೃತ್ಯ ಮುಖೇನ ಸಂಯೋಜಿಸಿರುವ ರೀತಿ ಗಮನ ಸೆಳೆಯಿತು. ನಾಲ್ಕು ದಶಕಗಳಿಂದ ನೃತ್ಯ ಪರಂಪರೆ ಉಳಿಸಿ, ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸಾಧನ ಸಂಗಮದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಸಮಾಗಮದಲ್ಲಿ ನೃತ್ಯ ಪ್ರದರ್ಶಿಸಿದರು.

ಸಾಧನ ಸಂಗಮದ ಬೇರೆ ಬೇರೆ ವಿಭಾಗಗಳ ಜವಾಬ್ದಾರಿ ವಹಿಸಿಕೊಂಡು, ಕಿರಿಯ ವಿದ್ಯಾರ್ಥಿಗಳಿಗೆ ನೃತ್ಯ ಪಾಠವನ್ನೂ ಮಾಡಿಕೊಂಡು ತಾವೂ ನೃತ್ಯ ಕಲಿಕೆ ಮುಂದುವರಿಸುತ್ತಾ ಬದ್ಧತೆ ಉಳಿಸಿಕೊಂಡಿರುವ ನೃತ್ಯ ನಿಪುಣ ತಂಡದ ಕಲಾವಿದೆಯರು ಡಿ.ವಿ.ಗುಂಡಪ್ಪ ಅವರ ‘ನೃತ್ತದ ರಭಸವಿದೇನೇ ಎಲೆ ಮತ್ತೇರಿ ಮಯ್ಯ ನೀ ಮರೆತಿಹೆಯೇನೆ||’ ಎಂದು ಸಾಗುವ ಅಂತಃಪುರ ಗೀತೆಯನ್ನು ಸಾದರಪಡಿಸಿದರು. ನೃತ್ಯ ಸಂಯೋಜನೆ ವಿಶೇಷವೆನಿಸಿತು. ಅನುಭವ ಸಾಬೀತುಪಡಿಸುವಂತೆ ಪ್ರತಿಯೊಬ್ಬ ನರ್ತಕಿಯರು ನೃತ್ತ ಪ್ರದರ್ಶಿಸಿದರು. ಅನೇಕ ಅಪರೂಪದ ಸಂಯೋಜನೆಗಳಿಗೆ ನೃತ್ಯ ಸಮಾಗಮ ಸಾಕ್ಷಿಯಾಯಿತು. ಒಂದೊಳ್ಳೆಯ ನೃತ್ಯ ಸಂಜೆ ಅದಾಗಿತ್ತು.

ಸಾಧನ ಕಲಾತ್ಮಿಕ’ ಪ್ರಶಸ್ತಿ ಪ್ರದಾನ

ನೃತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವುದನ್ನು ಗುರುತಿಸಿ ಪ್ರತಿವರ್ಷ ನೀಡುವ ‘ಸಾಧನ ಕಲಾತ್ಮಿಕ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ, ಗುರು ನೃತ್ಯ ಸರಸ್ವತಿ ಶ್ರೀಮತಿ ಶುಭಾ ಧನಂಜಯ್ ಅವರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಾಧನ ಸಂಗಮದ ಮುಖ್ಯಸ್ಥರೆಲ್ಲರ ಉಪಸ್ಥಿತಿಯಲ್ಲಿ ಸನ್ಮಾನಿಸಿ ‘ಸಾಧನ ಕಲಾತ್ಮಿಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

 

 

 

 

 

 

 


Share This

Leave a Reply

Your email address will not be published. Required fields are marked *