“Dance is Not only Recreation, It is A Form of Meditation”
ನೃತ್ಯದ ಶಕ್ತಿ ಎಷ್ಟು ಎನ್ನುವುದನ್ನು ಇದೊಂದು ಸಾಲು ಹೇಳಬಲ್ಲದು. ನೃತ್ಯ ಕೇವಲ ಮನರಂಜನೆಗಾಗಿ ಎಂದು ಭಾವಿಸುವವರಿದ್ದಾರೆ. ಆದರೆ, ನೃತ್ಯ ಧ್ಯಾನದ ಪ್ರತಿರೂಪ ಎನ್ನುವ ಸತ್ಯವನ್ನು ಅರಿಯಬೇಕಿದೆ. ಭಾರತೀಯ ಸಾಂಪ್ರದಾಯಿಕ ಯಾವುದೇ ನೃತ್ಯ ಪ್ರಕಾರವೂ ಮನುಷ್ಯನನ್ನು ಧ್ಯಾನಸ್ಥನಾಗಿಸುವ ಪ್ರಭಾವಶಾಲಿ ಗುಣಗಳನ್ನು ಒಳಗೊಂಡಿವೆ. ಆಧುನೀಕರಣದ ನಡುವೆಯೂ ಈ ಪ್ರಭೆ ಹಾಗೇ ಉಳಿದುಕೊಂಡಿದ್ದರೆ ಅದಕ್ಕೆ ಮೂಲ ಕಾರಣ ಗುರು-ಶಿಷ್ಯ ಪರಂಪರೆ!
ಡಿಸೆಂಬರ್ 8, 2022 ಗುರುವಾರ ಮಲ್ಲೇಶ್ವರಂನಲ್ಲಿರುವ ಸೇವಾಸದನ ಸಭಾಂಗಣದಲ್ಲಿ ಖ್ಯಾತ ಭರತನಾಟ್ಯ, ಕುಚಿಪುಡಿ ಕಲಾವಿದೆ ಗುರು ಶ್ರೀಮತಿ ಸಂಧ್ಯಾ ಉಡುಪ ಅವರು ಏಕವ್ಯಕ್ತಿ ಪ್ರದರ್ಶನದ ಮೂಲಕ ರಂಜಿಸಿದರು. ಅಕ್ಷರಶಃ ಇದೊಂದು ಅತ್ಯುತ್ತಮ ಪ್ರದರ್ಶನವಾಗಿತ್ತು. ಖ್ಯಾತ ಕಲಾವಿದೆ, ಗುರು ಇಂದಿರಾ ಕಡಂಬಿ ಹಾಗೂ ಖ್ಯಾತ ಗಾಯಕರಾದ ಟಿ.ವಿ.ರಾಮಪ್ರಸಾದ್ ಅವರ ಉಪಸ್ಥಿತಿಯಲ್ಲಿ ಪ್ರದರ್ಶನ ಇನ್ನಷ್ಟು ಕಳೆಕಟ್ಟಿಕೊಂಡಿತ್ತು.
ಸಂಧ್ಯಾ ಉಡುಪ ಅವರ ಒಂದಿಷ್ಟು ಪ್ರದರ್ಶನಗಳ ವಿಡಿಯೋ ತುಣುಕುಗಳನ್ನು ಜಾಲತಾಣಗಳಲ್ಲಿ ನೋಡಿದ್ದೆ. ನೇರವಾಗಿ ಕುಳಿತು ನೋಡುವ ಅವಕಾಶ ಒದಗಿ ಬಂದಿರಲಿಲ್ಲ. ಕಡೆಗೂ ಒಂದು ಉತ್ತಮ ಪ್ರದರ್ಶನವನ್ನು ನೇರವಾಗಿ ನೋಡಿ ಆನಂದಿಸುವ ಅವಕಾಶ ಕಳೆದವಾರ ಒದಗಿಬಂತು. ನೃತ್ಯ ಸವಿಯುವ ಮೂಲಕ ಧ್ಯಾನಸ್ಥರಾಗುವ ಅಥವಾ ಮೈಮರೆತು ಆಸ್ವಾದಿಸಿದೆ. ಇದೊಂದು ಮರೆಯಲಾಗದ ಅನುಭವವಾಯಿತು.
ಸಂಧ್ಯಾ ಉಡುಪ ಅವರು ಬಹುಮುಖ ಪ್ರತಿಭೆ. ಭರತನಾಟ್ಯ, ಕುಚಿಪುಡಿ, ಯಕ್ಷಗಾನ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಜತೆ ಜೊತೆಯಾಗಿ ಅಭ್ಯಸಿಸುತ್ತಾ ಬಂದಿದ್ದಾರೆ. ಈ ಮೂರೂ ಕಲಾಪ್ರಕಾರದಲ್ಲಿ ಹಿಡಿತ ಸಾಧಿಸಿದ್ದಾರೆ.
ಸಂಧ್ಯಾ ಉಡುಪ ಅವರ ಭರತನಾಟ್ಯ ನೃತ್ಯ ಪ್ರದರ್ಶನ ಪ್ರಮುಖವಾಗಿ ಈ ಮೂರು ಅಂಶಗಳನ್ನು ಕಾಡುವಂತೆ ಮಾಡಿತು. ‘ನೃತ್ಯವೆನ್ನುವುದು ಕೇವಲ ಮನರಂeನೆ ಅಲ್ಲ, ಧ್ಯಾನದ ಪ್ರತಿರೂಪ’. ಇನ್ನೊಂದು ಗಮನಾರ್ಹ ಅಂಶವೇನೆಂದರೆ ನೃತ್ಯ ಒಂದು ದಿವ್ಯ ಔಷಧ(medicine). ನೃತ್ಯ ಸೌಂದರ್ಯ ವರ್ಧಕ. ಹೌದು, ನೃತ್ಯ ಪ್ರಭಾವಶಾಲಿ ಕಲೆ. ಇಂತಹ ಅನೇಕ ಕಾರಣಗಳಿಂದಾಗಿ ನೃತ್ಯ ನಮ್ಮನ್ನು ಸೆಳೆದು ನಿಲ್ಲಿಸುವಂತೆ ಮಾಡುತ್ತದೆ. ಆಧ್ಯಾತ್ಮಿಕತೆಯಿಂದ ಹೊರ ಹೊಮ್ಮುವ ಅನುಭಾವ ನಾಟ್ಯಗಾತಿ ಸಂಧ್ಯಾ ಅವರ ನೃತ್ಯ ಪ್ರದರ್ಶನದಿಂದ ದೊರಕಿತು. ಕಲೆ ಆಸ್ವಾದಿಸುವ ಹಂತದಲ್ಲಿ ಕಲೆಯಿಂದ ಸಿಗುವ ಈ ಹಿತ ತೃಪ್ತಿ ಬಹುಶಃ ಬೇರಿನ್ನಾವುದೇ ಕ್ಷೇತ್ರದಲ್ಲಿ ಕಾಣಲು ಸಾಧ್ಯವಿಲ್ಲವೇನೋ. ಸಂಧ್ಯಾ ಅವರು ಮನಮುಟ್ಟುವ ರೀತಿಯಲ್ಲಿ ಈ ಸಂಗತಿಯನ್ನೂ ಬಹಳ ಸೊಗಸಾಗಿ ನೋಡುಗರನ್ನು ತಲುಪಿಸಿದರು. ಲೌಕಿಕವಾಗಿ ಸಿಗುವ ಅನುಭವಕ್ಕಿಂತ ಆಧ್ಯಾತ್ಮಿಕವಾಗಿ ಸಂಪಾದಿಸುವ ಅನುಭಾವ ಜೀವನಕ್ಕೆ ರಹದಾರಿ ಎನ್ನುವುದನ್ನು ಮಾರ್ಮಿಕವಾಗಿಯೇ ಪ್ರಚುರಪಡಿಸಿದರು. ಭಕ್ತಿ ರಸಗಳನ್ನೇ ಭಾವ ಎಂದು ಶಾಸ್ತ್ರೀಯ ನೃತ್ಯದಲ್ಲೂ ಉಲ್ಲೇಖಿಸಲಾಗುತ್ತದೆ. ಈ ಭಕ್ತಿ ಸಾಧನೆಯೇ ಅನುಭಾವವಾಗಿ ಹೊರಹೊಮ್ಮುವುದು. ಈ ಅಪರೂಪದ ದಿವ್ಯಶಕ್ತಿ ಸಂಧ್ಯಾ ಉಡುಪ ಅವರ ನೃತ್ಯ ಪ್ರದರ್ಶನದ ವೇಳೆ ಸೃಷ್ಟಿಯಾಗಿತ್ತು.
ಧ್ಯಾನ ಎಂಬ ಪದದಲ್ಲಿಯೇ ಒಂದು ಲಯಬದ್ಧವಾದ ಸಂಚಲಯನವಿದೆ. ಹಾಗೇ ನೃತ್ಯ ಕೂಡ ದೇಹವನ್ನು ಅದೇ ಮಾರ್ಗದಲ್ಲಿ ಕೊಂಡೊಯ್ಯಬಲ್ಲದು. ಇದರಿಂದ ದೇಹದಲ್ಲಿನ ಹಾರ್ಮೋನುಗಳ ಚಲನೆಗೆ ವೇಗ ಸಿಗಲಿದೆ. ಅಷ್ಟೇ ಅಲ್ಲ ನೃತ್ಯದಿಂದ ದೇಹದಲ್ಲಿನ ಪ್ರತಿ ಜೀವಕೋಶವು ಜೀವ ಪಡೆದು ಕ್ರಿಯಾಶೀಲವಾಗಲಿದೆ. ಪರಿಣಾಮ ಚೈತನ್ಯ ವೃದ್ಧಿ ಸಾಧ್ಯ. ಸಂಧ್ಯಾ ಉಡುಪ ಅವರ ನೃತ್ಯ ಪ್ರದರ್ಶನ ಈ ಸೂಕ್ಷ್ಮ ಪರಿಣಾಮಗಳನ್ನು ಪ್ರಚುರ ಪಡಿಸಿತು. ಲಯ ಹಿಡಿದು ಹೆಜ್ಜೆ ಇಡುವಾಗ ತೋರಿದ ಚುರುಕುತನ ಅರ್ಥಾತ್ ಪಾದರಸದಂತಹ ಚಲನೆ ನೃತ್ತದಲ್ಲಿನ ಸೌಂದರ್ಯ ಹೆಚ್ಚಿಸಿದರೆ, ಭಾವಪೂರ್ಣ ಅಭಿನಯ ಮತ್ತು ಆಂಗಿಕಾಭಿನಯ ಮೂಕವಿಸ್ಮಿತರನ್ನಾಗಿಸಿತು. ತೆಜೋಮಯ ಮುಖಚರ್ಯೆ, ಸಪ್ರಮಾಣ ಶರೀರ ಪ್ರದರ್ಶನದ ಗುಣಮಟ್ಟ ಹೆಚ್ಚಿಸಿತು.
ಭರತನಾಟ್ಯ ಪ್ರವೀಣರು ಸಹಜವಾಗಿ ಆಯ್ಕೆ ಮಾಡಿಕೊಳ್ಳುವ ಕ್ಲಿಷ್ಟಪೂರ್ಣ ಅಲರಿಪು, ವರ್ಣಂ, ಜಾವಲಿ, ದೇವರನಾಮ, ಪದಂ, ತಿಲ್ಲಾನಕ್ಕೆ ನೀಡಿದ ನೃತ್ಯ ಪ್ರಾಮುಖ್ಯತೆ ಎಲ್ಲಿಯೂ ಕಡಿಮೆ ಅನಿಸಲಿಲ್ಲ. ವಿದ್ವಾನ್ ರಘುರಾಮ್ ಅವರ ಗಾಯನ, ವಿನಯ್ ಮೃತ್ಯುಂಜಯ್ ಅವರ ಮೃದಂಗ, ಪ್ರದೇಶ್ ಆಚಾರ್ ಅವರ ವೈಯಲಿನ್, ನಿತೀಶ್ ಅಮ್ಮಣ್ಣಾಯ ಅವರ ಕೊಳಲುವಾದನವು ನೃತ್ಯದ ಪ್ರಭೆ ಹೆಚ್ಚಿಸಿತು. ವರ್ಣಂ, ಪದಂ ಮತ್ತು ತಿಲ್ಲಾನದ ಗಾಯನದ ಜೊತೆ ಪೂರಕವಾದ ಬೆಳಕು ನಿರ್ವಹಣೆ ಅಚ್ಚುಮೆಚ್ಚು. ಸಂಧ್ಯಾ ಉಡುಪ ಅವರ ಗುರುಗಳೇ ಆದ ಗುರು ಇಂದಿರಾ ಕಡಂಬಿ ಅವರೇ ನಟವಾಂಗ ನಿರ್ವಹಿಸಿದರು. ಅಭಿನಯದಿಂದಲೇ ಪ್ರಖ್ಯಾತಿ ಪಡೆದ ಇಂದಿರಾ ಕಡಂಬಿ ಅವರ ಶಿಷ್ಯೆ ಸಂಧ್ಯಾ ಅವರ ಅಭಿನಯ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಇತ್ತು.