ಶಿಲ್ಪಿ ಎಚ್.ಎನ್.ಕೃಷ್ಣಮೂರ್ತಿ ಅಜರಾಮರ, ಮತ್ತೆ ಹುಟ್ಟಿ ಬನ್ನಿ…

Share This

ನಾಡಿನ ಖ್ಯಾತ ಶಿಲ್ಪಿ ಎಚ್.ಎನ್.ಕೃಷ್ಣಮೂರ್ತಿ ಇನ್ನು ನೆನಪು ಮಾತ್ರ. ಹೌದು, ಕೃಷ್ಣಮೂರ್ತಿ ಇಹಲೋಕ ತ್ಯಜಿಸಿದ್ಧಾರೆ. ಇದು ರಾಜ್ಯಕ್ಕಾದ ದೊಡ್ಡ ನಷ್ಟ. ಅವರ ಕಲಾ ಸೇವೆ, ಆರಾಧನೆಯನ್ನು ಎಂದು ಮರೆಯಲು ಸಾಧ್ಯವಿಲ್ಲ.

ಕೃಷ್ಣಮೂರ್ತಿ ಅವರು ಅಜರಾಮರ. ಶ್ರೇಷ್ಠ ಮಟ್ಟದ ಕಲಾಸೇವೆ ಮಾಡಿದವರು ಹೇಗೆ ನಮ್ಮನ್ನೆಲ್ಲ ಬಿಟ್ಟು ಹೋಗಲು ಸಾಧ್ಯ? ನಾಡಿನ ಅನೇಕ ಕಡೆ ಕೃಷ್ಣಮೂರ್ತಿ ಅವರು ರಚಿಸಿದ ಶಿಲ್ಪಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ಅವು ನಮ್ಮ ಕಣ್ಣ ಮುಂದೆ ಬಂದಾಗ ಸಹಜವಾಗಿ ಕೃಷ್ಣಮೂರ್ತಿ ಅವರ ಆ ವ್ಯಕ್ತಿತ್ವವೂ ನಮ್ಮೆದುರು ಬಂದು ನಿಲ್ಲುತ್ತವೆ. ಕಲಾವಿದನ ಬದುಕು ಸಾರ್ತಕವೆನಿಸಿಕೊಳ್ಳುವುದು ಹೀಗೆ ಅಲ್ಲವೇ? ಅದಕ್ಕೇ ಕೃಷ್ಣಮೂರ್ತಿ ಅವರು ಅಜರಾಮರ.

ಕೃಷ್ಣಮೂರ್ತಿ ಅವರು 1947ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯ ಕಟ್ಟೀಹಕ್ಕಲು ಎಂಬ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಚಿತ್ರಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಕೃಷ್ಣಮೂರ್ತಿ ಅವರು ಕೋಲ್ಕತಾದ ಪ್ರತಿಷ್ಠಿತ ಕಲಾ ಶಾಲೆ ಶಾಂತಿನಿಕೇತನದಲ್ಲಿ 5ವರ್ಷಗಳ ಕಾಲ ಕಲಾ ಶಿಕ್ಷಣ ಪಡೆದುಕೊಂಡರು. ದೇಶದ ಶ್ರೇಷ್ಠ ಕಲಾವಿದ ರಾಮ್ ಕಿಂಕರ್ ಬೈಜ್ ಅವರ ಗರಡಿಯಲ್ಲಿ ಅಧ್ಯಯನ ನಡೆಸಿದ ರಾಜ್ಯದ ಕೆಲವೇ ಕೆಲವು ಮಂದಿಯಲ್ಲಿ ಕೃಷ್ಣಮೂರ್ತಿ ಅವರೂ ಒಬ್ಬರಾಗಿದ್ದಾರೆ.

ಇಂಥ ಮಾಲ್ಯಯುತ ಕಲಾ ಶಿಕ್ಷಣ ಪಡೆದು ಬಂದ ಕೃಷ್ಣಮೂರ್ತಿ ಅವರು 5ವರ್ಷಗಳ ಕಾಲ ದಾವಣಗೆರೆಯ ಕರಕುಶಲ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅವರು ರಚಿಸಿದ ಕಲಾಕೃತಿಗಳು ದೇಶದ ಅನೇಕ ಕಡೆಗಳಲ್ಲಿ ಪ್ರದರ್ಶನಗೊಂಡವು. ಮೆಚ್ಚುಗೆಯನ್ನೂ ಗಳಿಸಿದವು.

ಮಲೆನಾಡಿನವರಾದ ಕಾರಣ ಸಹಜವಾಗಿ ಕೃಷಿಯಲ್ಲೂ ಆಸಕ್ತಿ ಬೆಳೆಸಿಕೊಂಡು ವ್ಯವಸಾಯವನ್ನು ರೂಢಿಸಿಕೊಂಡಿದ್ದರು. ಕೃಷಿಕರಾಗಿಯೂ ಅಪಾರ ಯಶಸ್ಸನ್ನು ಗಳಿಸಿದ್ದರು.

ಕೃಷ್ಣಮೂರ್ತಿ ಅವರು 2002ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, 2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಜಕಣಾಚಾರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

2014 ರಿಂದ 2017ರವರೆಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷ್ಣಮೂರ್ತಿ ಅವರು 09-09-2020ರಂದು ನಮ್ಮನ್ನಗಲಿದ್ದಾರೆ. ಇವರ ಅತ್ಮಕ್ಕೆ ಶಾಂತಿ ಸಿಗಲಿ.

ಅಕಾಡೆಮಿ ಸಂತಾಪ:
ಕೃಷ್ಣಮೂರ್ತಿ ಅವರ ನಿಧಾನಕ್ಕೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂತಾಪ ಸೂಚಿಸಿದೆ.
ಅಕಾಡೆಮಿ ಅಧ್ಯಕ್ಷರಾದ ಶ್ರೀ ವೀರಣ್ಣ ಅರ್ಕಸಾಲಿ, ರಿಜಿಸ್ಟ್ರಾರ್, ಅಕಾಡೆಮಿಯ ಸರ್ವ ಸದಸ್ಯರ ಹಾಗೂ ಎಲ್ಲಾ ಶಿಲ್ಪಕಲಾವಿದರ ಪರವಾಗಿ ಸಂತಾಪ ಸೂಚಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಡಲಿಟಸ್ ಕಲಾ ಪ್ರದರ್ಶನ “ಮಲೆನಾಡಿನ ಮುಖಗಳು”

ಬೆಂಗಳೂರಿನ ಪ್ರತಿಷ್ಠಿತ ಫೆಡಲಿಟಸ್ ಕಲಾ ಗ್ಯಾಲರಿ ಇತ್ತೀಚಿಗೆ ಕೃಷ್ಣಮೂರ್ತಿ ಅವರ ಕಲಾಕೃತಿಗಳ ಮಲೆನಾಡಿನ ಮುಖಗಳು ಪ್ರದರ್ಶನ ಆಯೋಜಿಸಿತ್ತು. ಪ್ರದರ್ಶನಕ್ಕೆ ಕಲಾವಿದರು, ಕಲಾ ಪ್ರೇಮಿಗಳು ಮತ್ತು ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಮಲೆನಾಡಿನ ಮುಖಗಳು ಪ್ರದರ್ಶನದ ಒಂದು ಝಲಕ್

Share This

Leave a Reply

Your email address will not be published. Required fields are marked *