ಗುಜರಾತ್ ಮೂಲದ ಬೆಂಗಳೂರು ನಿವಾಸಿ, ಖ್ಯಾತ ಕಲಾವಿದರಾದ ಜಸು ರಾವಲ್ ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಜಸು ರಾವಲ್ ಅವರ ನಿಧನಕ್ಕೆ ಇಡೀ ಕಲಾ ಸಮುದಾಯ ಕಂಬನಿ ಮಿಡಿದಿದೆ.
ಜಸು ರಾವಲ್ ಅವರು ಬರೋಡಾದ ಎಂ.ಎಸ್.ಯುನಿವರ್ಸಿಟಿಯಿಂದ ಎಂಎಫ್‌ಎ ಪದವಿ ಪಡೆದುಕೊಂಡಿದ್ದರು. 1960 ರಿಂದ 1980ರ ಅವಧಿಯಲ್ಲಿ ಅವರು 4 ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು.ದೇಶ, ವಿದೇಶಗಳಲ್ಲಿ ನೂರಾರು ಕಲಾಪ್ರದರ್ಶನಗಳನ್ನು ಆಯೋಜಿಸಿ, ಅಪಾರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದರು.
ಅತ್ಯಂತ ಸರಳ ರೇಖೆ, ಆಕೃತಿಗಳ ಸಂಯೋಜನೆ ಅವರ ಕಲಾಕೃತಿಗಳಲ್ಲಿ ಕಾಣಬಹುದಾಗಿತ್ತು. ಗ್ರಾಮೀಣ ಭಾಗದ ಸಂಸ್ಕೃತಿಯಿಂದ ಪ್ರಭಾವಿತರಾದ ಜಸು ರಾವಲ್ ಅವರು ತಮ್ಮ ಕಲಾಕೃತಿಗಳಲ್ಲಿ ಈ ವಿಚಾರಗಳನ್ನು ತರುವ ಪ್ರಯತ್ನ ಮಾಡುತ್ತಿದ್ದರು. ಜಾಮಿತಿ ಆಕೃತಿಗಳನ್ನು ಬಳಸಿಕೊಳ್ಳುವ ಮತ್ತು ಬಣ್ಣಗಳನ್ನು ದುಡಿಸಿಕೊಳ್ಳುವ ರೀತಿ ಆಕರ್ಷಣೀಯ. ಕರ್ನಾಟಕದ ನೇಕಾರರ ಸೇವಾ ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದಾರೆ.




