• ಅತಿವಾಸ್ತವ ಪ್ರತಿಬಿಂಬಿತ ಸಮಕಾಲೀನ ಅಭಿವ್ಯಕ್ತಿ
ಚಿಕಣಿ ಚಿತ್ರಕಲೆಯಿಂದ ಪ್ರಭಾವಿತರಾಗಿ, ಅತಿವಾಸ್ತವಿಕವಾದಿಗಳ (surrealistic) ಜಾಡು ಹಿಡಿದು ನಿಸರ್ಗದ ಪ್ರೇರಣೆಯಿಂದ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಳ್ಳುವ ಕಲಾವಿದೆ ಲಕ್ಷ್ಮೀಪ್ರಿಯಾ ಪಣಿಗ್ರಾಹಿ (Laxmipriya Panigrahi) ಅವರ ಕಲಾಪ್ರದರ್ಶನ ನವದೆಹಲಿಯ ಬಿಕಾನೆರ್ ಹೌಸ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ಅನಂತ್ ಆರ್ಟ್ ಫೌಂಡೇಷನ್ ಈ ಕಲಾಪ್ರದರ್ಶನವನ್ನು ಆಯೋಜಿಸಿದೆ. ಅಂದಹಾಗೆ ಇವರ ಕಲಾಕೃತಿಗಳು ಇಂಡಿಯಾ ಆರ್ಟ್ ಫೇರ್ ನಲ್ಲೂ ಪ್ರದರ್ಶಿಸಲ್ಪಟ್ಟಿವೆ.
ನಿಸರ್ಗವನ್ನು ತಮ್ಮದೇ ದೃಷ್ಟಿಕೋನದಲ್ಲಿ ಗ್ರಹಿಸುವ ಅತ್ಯಂತ ವಿಭಿನ್ನ ಪ್ರಯತ್ನ. ಭಾರತೀಯ ಪ್ರಾಚೀನ ಕಲಾಶೈಲಿಗಳಲ್ಲಿ ಒಂದಾದ ಚಿಕಣಿ ಚಿತ್ರಕಲೆಯ ಶೈಲಿಯಲ್ಲಿ ಸಮಕಾಲೀನ ಸಂಗತಿಗಳ ಅನಾವರಣ, ಪೌರಾಣಿಕ ಒಳನೋಟವನ್ನು ಇವರ ಕಲಾಕೃತಿಗಳಲ್ಲಿ ಕಾಣಬಹುದು. ಶಿಸ್ತುಬದ್ಧವಾದ ರೇಖಾ ಲಾಲಿತ್ಯ, ವರ್ಣ ಸಂಯೋಜನೆ ಆಪ್ತವೆನಿಸುತ್ತವೆ. ಯಾವುದೋ ಹಸಿರುಹಾಸಿನ ಮಧ್ಯೆ ಇರುವ ಊರೊಂದಕ್ಕೆ ಭೇಟಿ ನೀಡಿರುವ ನೆನಪುಗಳನ್ನು ತೆರೆದಿಡುವಂತೆ ಮಾಡುತ್ತವೆ.
ಪ್ರದರ್ಶಿತ ಕಲಾಕೃತಿಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದದ್ದು ಅವರ ಕೌಶಲ್ಯತೆ. ಅತಿ ತೆಳುವಾದ ರೇಖೆಗಳು ಕ್ಷಣಕಾಲ ಹಿಡಿದು ನಿಲ್ಲಿಸುತ್ತವೆ. ಪ್ರಾಥಮಿಕವಲ್ಲದ ವರ್ಣ ಸಂಯೋಜನೆಗೆ ಒತ್ತು ಕೊಟ್ಟರೆ ಬಹುಶಃ ಕಲಾಕೃತಿಗಳು ಇನ್ನಷ್ಟು ಆಕರ್ಷಕ ಅನಿಸಬಹುದು.
ಕಲಾಕೃತಿಗಳ ಮೂಲಕ ಗಮನ ಸೆಳೆಯುವ ಲಕ್ಷ್ಮೀಪ್ರಿಯಾ ಅವರಿಗೆ ಅಭಿನಂದನೆಗಳು 
