- ರಂಜಿಸಿದ ಸಾಧನ ಸಂಗಮ ವಿದ್ಯಾರ್ಥಿನಿಯರ ನೃತ್ಯ ಕಾರ್ಯಕ್ರಮ
“Refinement is the essence of Bharatanatyam” ಎನ್ನುವ ಮಾತಿದೆ. ಗುರುವಾದವರು ಶಿಷ್ಯಂದಿರನ್ನು ತಿದ್ದಿ, ತಿದ್ದಿ ಒಳ್ಳೆಯ ನರ್ತಕನನ್ನೊ, ನರ್ತಕಿಯನ್ನೊ ಮಾಡುವ ಪ್ರಕ್ರಿಯೆ ಅಷ್ಟು ಸುಲಭವಾದುದಲ್ಲ. ಸರಳವೆಂದು ಭಾವಿಸುವಂತಿಲ್ಲ. ಅದರಲ್ಲೂ ಶಾಸ್ತ್ರೀಯ ನೃತ್ಯ ಬಲು ಕಷ್ಟ. ಹಲವು ವರ್ಷಗಳ ಶ್ರಮವಿರಬೇಕು. ತಾಳ್ಮೆ, ಛಲ, ಶ್ರದ್ಧೆ ಶಿಷ್ಯರಿಗೆ ಮತ್ತು ಗುರುವಿನಲ್ಲೂ ಇರಬೇಕಾಗಿರುತ್ತದೆ. ಶಿಷ್ಯರನ್ನು ತಿದ್ದಬೇಕಾದ ಎಲ್ಲಾ ಹಂತಗಳನ್ನು ದಾಟಿಸಿ ದಡಕ್ಕೆ ತಂದು ಬಿಟ್ಟಾಗಲೆ ಒಬ್ಬ ಉತ್ತಮ ನರ್ತಕಿಯಾಗಿ ಅಥವಾ ನರ್ತಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಭರತನಾಟ್ಯದ ಸುದೀರ್ಘ ಕಲಿಕಾ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲಿ ‘ಗೆಜ್ಜೆಪೂಜೆ’ ಕೂಡ ಒಂದು. ಶಿಷ್ಯರಾದವರು ಅಧಿಕೃತವಾಗಿ ಗೆಜ್ಜೆ ಕಟ್ಟಿ ರಂಗದ ಮೇಲೆ ಸಲೀಸಾಗಿ ನೃತ್ತದ ಮೂಲ ಪಾಠವನ್ನು ನಿಭಾಯಿಸಬಲ್ಲರು ಎನ್ನುವ ಭರವಸೆ ಮೂಡಿದಾಗ ಗುರು ಒಂದಿಷ್ಟು ತಾಲೀಮು ನಡೆಸಿ ಮುಂದಿನ ಅಭ್ಯಾಸಕ್ಕೆ ಹಸಿರು ನಿಶಾನೆ ತೋರುವ ಒಂದು ಸುಂದರವಾದ ಕ್ರಮ ಇದು. ಇತ್ತೀಚಿನ ದಿನಗಳಲ್ಲಿ ಬಹಳ ಗುರುಗಳು ಶಿಷ್ಯರಿಗೆ ಈ ಮೂಲದ ಬೇರನ್ನೆ ತಪ್ಪಿಸಿಬಿಡುತ್ತಾರೆ. ರಂಗವನ್ನು ನಿಭಾಯಿಸುವ ಆತ್ಮವಿಶ್ವಾಸ ಮೂಡಲು ಒಂದು ಉತ್ತಮ ಅವಕಾಶದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇನ್ನು ಕೆಲ ಗುರುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ನಡೆಸುವವರೂ ಇದ್ದಾರೆ. ಆದರೆ ಈ ಪ್ರಕ್ರಿಯೆಯ ಜಾಡಿನಲ್ಲಿಯೆ ಸಾಗುವ ಗುರುಗಳು ವಿರಳ.
ಬೆಂಗಳೂರಿನ ಬಸವೇಶ್ವರ ನಗರದ ಸಾಧನ ಸಂಗಮ ನೃತ್ಯ ಕೇಂದ್ರದ ಕೆಲವು ಕಳಕಳಿಯ ಪ್ರಯತ್ನಗಳು ಅಚ್ಚುಮೆಚ್ಚು. 2024 ಅಕ್ಟೋಬರ್ 27, ಭಾನುವಾರ ಸಾಧನ ನೃತ್ಯ ಕೇಂದ್ರದ ರಂಗೋಪನಿಷತ್ ರಂಗಮಂದಿರದಲ್ಲಿ ಗೆಜ್ಜೆಪೂಜೆ ನೃತ್ಯ ಕಾರ್ಯಕ್ರಮವೊಂದು ನೆರವೇರಿತು. ಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾಶ್ರೀ ಅವರ ಶಿಷ್ಯೆಯರಾದ ಕುಮಾರಿ ಶುಭಾಂಗಿಣಿ ದೇವದಾಸ್ ಮತ್ತು ಕುಮಾರಿ ಮೇಘನಾ ಗಂಗಸ್ವಾಮಿ ಅವರು ಗುರುವಿನ ಸಮ್ಮುಖದಲ್ಲಿ ನೃತ್ಯ ಕಾರ್ಯಕ್ರಮ ನೀಡಿದರು. ಬಹಳ ಅಚ್ಚುಕಟ್ಟಾದ ಕಾರ್ಯಕ್ರಮ ಇದಾಗಿತ್ತು. ಇಬ್ಬರೂ ನರ್ತಕಿಯರು ಗುರುವಿನ ಮಾರ್ಗದರ್ಶನದಂತೆ ಅಧಿಕೃತವಾಗಿ ಗೆಜ್ಜೆ ಕಟ್ಟಿಕೊಂಡು, ಯಾವುದೇ ಲೋಪಗಳು ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಪ್ರದರ್ಶನ ನೀಡಿದರು. ಈ ಮೂಲಕ ವರ್ಣಂ, ಪದಂ, ಜಾವಳಿಗಳಂತಹ ಕ್ಲಿಷ್ಟಕರ ಸಂಯೋಜನೆಗಳಿಗೆ ನರ್ತಿಸುವ ಮುಂದಿನ ಕಲಿಕೆಗೆ ಹಸಿರು ನಿಶಾನೆ ಪಡೆದುಕೊಂಡರು.
ವಿಘ್ನನಿವಾರಕ ವಿಘ್ನೇಶನ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಾಯಕಿ ವಿದುಷಿ ಹರ್ಷಿತಾ ವಿದ್ಯಾ ಅವರು ತಮ್ಮ ಕಂಠ ಸಿರಿಯಿಂದ ನಿರೀಕ್ಷೆಯನ್ನು ದ್ವಿಗುಣಗೊಳಿಸಿದರು. ಮಿಶ್ರಛಾಪು ತಾಳದಲ್ಲಿ ನಿಬಂಧಿತ ಅಲರಿಪು ಪ್ರದರ್ಶಿಸಿದ ನರ್ತಕಿಯರ ನಂತರದ ಆಯ್ಕೆ ರಾಗಮಾಲಿಕಾ, ಖಂಡಛಾಪುವಿನಲ್ಲಿ ನಿಬಂಧಿತ ನರಸಿಂಹ ಕೌತ್ವಂ ಆಗಿತ್ತು. ಸುಶ್ರಾವ್ಯ ಸಂಗೀತಕ್ಕೆ ನರ್ತಕಿಯರೂ ಬಹಳ ಸೊಗಸಾದ ಅಭಿನಯ, ನೃತ್ತ ಪ್ರದರ್ಶಿಸುವ ಪ್ರಯತ್ನ ಮಾಡಿದರು. ಇನ್ನಷ್ಟು ಅಂಗ ಶುದ್ಧಿ, ಭಾವನಾತ್ಮಕವಾದ ಅಭಿನಯ ಇದ್ದಿದ್ದರೆ ವೃತ್ತಿಪರರನ್ನೂ ನಾಚಿಸುವ ರೀತಿಯ ಪ್ರದರ್ಶನ ಇದಾಗಿತ್ತು ಎಂದರೆ ಅತಿಶಯೋಕ್ತಿಯಾಗದು. ಮಹಾವಿಷ್ಣುವಿನ 10 ಅವತಾರಗಳಲ್ಲಿ ಒಂದಾದ ನರಸಿಂಹನ ಭಾವಪೂರ್ಣ ಅಭಿನಯ ಅಷ್ಟು ಸುಲಭವಲ್ಲ. ದೈಹಿಕ ಸಾಮರ್ಥ್ಯದ ಜೊತೆಗೆ ಭಾವಾಭಿನಯ ಬಹಳ ಮುಖ್ಯವಾಗಿರುತ್ತದೆ. ಶುಭಾಂಗಿಣಿ ಮತ್ತು ಮೇಘನಾ ಬಹಳ ಜಾಣತನದಿಂದ ನರ್ತಿಸಿ ಮೆಚ್ಚುಗೆ ಪಡೆದುಕೊಂಡರು.
ಮುಂದಿನ ಆಯ್ಕೆಗಳಾದ ಜತಿಸ್ವರ, ಶಿವಸ್ತುತಿ ಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂತು. ಯದುಕುಲ ಕಾಂಬೋಜಿ ರಾಗ, ಆದಿ ತಾಳದಲ್ಲಿ ನಿಬಂಧಿತ ಜತಿಸ್ವರಕ್ಕೆ ಉತ್ಸಾಹದಿಂದ ಹೆಜ್ಜೆ ಇಟ್ಟರು. ಹಾಗೆ ದರ್ಬಾರಿ ಕಾನಡ, ಆದಿ ತಾಳದಲ್ಲಿ ನಿಬಂಧಿತ ಶಿವ ಸ್ತುತಿ ಕೂಡ ಮನೋಜ್ಞವಾಗಿತ್ತು. ವಿಭಿನ್ನವಾದ ನೃತ್ತ ಸಂಯೋಜನೆ ನರ್ತಕಿಯರ ದೇಹ ಬಾಷ್ಯೆಗೆ ಹೊಂದಿಕೊಳ್ಳುವಂತೆ ಇತ್ತು. ಇಂತಹ ಸಂಯೋಜನೆಗಳು ಬಹಳ ಅಪರೂಪ. ಗುರುವಾದವರು ಇದನ್ನು ಗಮನಿಸದೆ ಅಥವಾ ಸೂಕ್ಷ್ಮವರಿಯದೆ ತಾಲೀಮು ನಡೆಸಿದಾಗಲೂ ನರ್ತಕಿಯರ ಪ್ರದರ್ಶನ ರಂಜಿಸದಿರುವ ಸಾಧ್ಯತೆ ಇರುತ್ತದೆ. ಆದರೆ, ಶುಭಾಂಗಿಣಿ ಮತ್ತು ಮೇಘನಾ ಅವರನ್ನು ಈ ಪರಿಧಿಯಲ್ಲಿಟ್ಟು ನಿಭಾಯಿಸಿರುವ ವಿಧಾನ ಅತ್ಯಂತ ಗಮನಾರ್ಹವಾಗಿತ್ತು. ಬಹಳ ಸಮತೋಲನದಿಂದ ಕೂಡಿದ ನೃತ್ಯ ಇವಾಗಿದ್ದವು.
ಗುರು ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆಯರಾದ ಕಾವ್ಯಶ್ರೀ ಮತ್ತು ಸುಮನಾ ಎನ್. ಅವರು ಗುರು ಡಾ.ಸಾಧನಶ್ರೀ ಅವರೊಂದಿಗೆ ಕುಳಿತು ಇದೇ ಮೊದಲ ಬಾರಿಗೆ ಸಮರ್ಥವಾಗಿ ನಟ್ಟುವಾಂಗ ನಿಭಾಯಿಸಿದರು. ಗುರು ಶಿಷ್ಯ ಪರಂಪರೆಗೆ ಸ್ಪಷ್ಟ ಉದಾಹರಣೆ ಎನ್ನುವಂತಿತ್ತು. ಶಿಷ್ಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವರಿಗೂ ಇಡೀ ನೃತ್ಯ ಕಾರ್ಯಕ್ರಮ ನಿಭಾಯಿಸುವ ಗುಟ್ಟು ಹೇಳಿಕೊಡುವ ಸನ್ನಿವೇಶ ಸಿಗುವುದು ಅಪರೂಪ. ನೃತ್ಯ ಶಿಕ್ಷಣದಲ್ಲಿ ಈ ಜಾಗೃತೆ, ಸೂಕ್ಷ್ಮತೆಯೇ ಇಂದಿನ ಅಗತ್ಯತೆ. ಈ ಕ್ರಮ ಅಭಿನಂದನೀಯ. ವಿದ್ವಾನ್ ಪವನ್ ಮಾಧವ್ ಮಾಸೂರು ಅವರ ಮೃದಂಗ ವಾದನ, ವಿದ್ವಾನ್ ಶಶಾಂಕ್ ಜೋಡಿದಾರ್ ಅವರ ಕೊಳಲು ವಾದನ ಮತ್ತು ವಿದ್ವಾನ್ ಕೃಷ್ಣಾ ಕಶ್ಯಪ್ ಅವರ ಪಿಟೀಲು ವಾದನ ಇಂಪಾಗಿತ್ತು.
ಈ ಎಲ್ಲ ಕಲಾವಿದರ ಅತ್ಯುತ್ತಮ ಸಾಥ್‌ಗೆ ನಿರಾತಂಕವಾಗಿ ಹೆಜ್ಜೆ ಹಾಕಿದ ಶುಭಾಂಗಿಣಿ ಮತ್ತು ಮೇಘನಾ ಅವರು ಅಂತಿಮವಾಗಿ, ನಿರಂಜನಿ ರಾಗ ಆದಿ ತಾಳದಲ್ಲಿ ನಿಬಂಧಿತ ತಿಲ್ಲಾನ ಮತ್ತು ಸಿಂಧೂಭೈರವಿ ರಾಗ ಆದಿ ತಾಳದಲ್ಲಿ ನಿಬಂಧಿತ ಮಂಗಳದೊಂದಿಗೆ ಸಂಪನ್ನಗೊಳಿಸಿದರು. ರವಿಶಂಕರ್ ಅವರ
ಬೆಳಕು ನಿರ್ವಹಣೆ ಮತ್ತು ಕೆ.ಪಿ.ಸತೀಶ್ ಬಾಬು ಅವರ ಪ್ರಸಾದನ ಇಡೀ ಕಾರ್ಯಕ್ರಮವನ್ನು ಭವ್ಯಮಯವಾಗಿಸಿತು. ನೃತ್ಯ ಗುರು, ವಿದುಷಿ ಸುಮನಾ ಭಟ್ ಅವರು ಸರಳ ಕನ್ನಡದಲ್ಲಿ, ಎಲ್ಲರ ಮನಸ್ಸಿಗೆ ನಾಟುವಂತೆ ನಿರೂಪಣೆ ನಡೆಸಿಕೊಟ್ಟರು.