ನಂಬಲಿಕ್ಕೇ ಅಸಾದ್ಯ… ದುಪ್ ಎಂದು ನೀರಿಗೆ ಬಿದ್ದರೆ ನಾಲ್ಕಾರು ನಿಮಿಷ ಎದ್ದೆಳುವುದೇ ಇಲ್ಲ. ಹೊರ ಬರುವಾಗ ಯಾವುದೇ ಕಾರಣಕ್ಕೂ ಒಂದಲ್ಲಾ ಒಂದು ಮೀನು ಅದರ ಬಾಯಲ್ಲಿ ಇರಲೇ ಬೇಕು. ಅಜ್ಜಪ್ಪ ಎಂದರೂ ಬಿಡಲೋಪ್ಪದು. ಗಾತ್ರದಲ್ಲಿ ತನ್ನಿಂತ ದೊಡ್ಡ ಗಾತ್ರದ ಬಂಗಡೆ ಮೀನೇ ಇದ್ದರೂ ಅಸ್ಟು ಸುಲಭವಾಗಿ ಬಿಡುವ ಜಾಯಮಾನದ ಹಕ್ಕಿ ಇದಲ್ಲ.
ಅದೇನಾದರೂ ಹಕ್ಕಿಗಳಿಗೆ ಡೈವಿಂಗ್ ಸ್ಪರ್ಧೆ ಏರ್ಪಡಿಸಿದರೆ ಬಹುಷಃ ಈ ‘ಕಿರು ಮಿಂಚುಳ್ಳಿ’ (Small Blue Kingfisher) ಚಾಂಪಿಯನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿಮ್ಮ ಮನೆಯ ಪಕ್ಕದಲ್ಲೆಲ್ಲಾದರೂ ಕೆರೆ, ಹರಿಯುವ ನೀರಿರುವ ಪ್ರದೆಶಗಳಿದ್ದರೆ ಆ ಪ್ರದೇಶದಲ್ಲಿ ಈ ಹಕ್ಕಿ ಇದ್ದೇ ಇರುತ್ತದೆ. ದಿನದ ಒಂದು ಗಂಟೆ ಆ ಪ್ರದೇಶದಲ್ಲಿ ಸದ್ದಿಲ್ಲದೆ ಕುಳಿತಿದ್ದರೆ ನೀವೂ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾದ್ಯ.
ನೀಲಿ ಬಣ್ಣದ ಹಕ್ಕಿ ಇದು. ಕುತ್ತಿಗೆ ಮತ್ತು ಹೊಟ್ಟೆ ಭಾಗವೆಲ್ಲ ಹೊಂಬಣ್ಣದಿಂದಿರುತ್ತದೆ. ಕಿರು ಮಿಂಚುಳ್ಳಿಯ ಕೊಕ್ಕು ಬಲು ಬಲಿಷ್ಠ. ಆ ಚೋಟುದ್ದದ ಕಾಲುಗಳನ್ನು ಮಾತ್ರ ಕುಳಿತಿದ್ದಾಗ ಕಾಣಿಸುವುದೇ ಕಷ್ಟ. ಅದರಲ್ಲೂ ಸ್ವಲ್ಪ ವಯಸ್ಸಾಗಿರುವ ಹಕ್ಕಿಯಾದರಂತೂ ಗರಿಗಳು ಮುಚ್ಚಿಕೊಡಿರುತ್ತವೆ. ಪಾದಗಳು ಗುಂಡಾಗಿರುತ್ತವೆ. ಈ ಹಕ್ಕಿಯ ಹಾರಾಟ ಗಮಿನಿಸುವಾಗ ಒಮ್ಮೆ ಬೆಚ್ಚಿ ಬಿದ್ದರೂ ಅಚ್ಚರಿಯಿಲ್ಲ. ಅಸ್ಟೊಂದು ಚುರುಕುತನ ಈ ಹಕ್ಕಿಯಲ್ಲಿ ಕಾಣಬಹುದು.
ಚೀ ಚಿಕ್ ಎಂದು ಕೂಗುತ್ತಲೇ ಹಾರುವ ಈ ಕಿರು ಮಿಂಚುಳ್ಳಿ ಬಾಲ ಮತ್ತು ಕತ್ತನ್ನು ಆಗಾಗ ಮೇಲೆ-ಕೆಳಕ್ಕೆ ಮಾಡುತ್ತಲೇ ಇರುತ್ತದೆ. ನೀರು ಮತ್ತು ನೆಲದ ಮೇಲೆ ಒಂದೆರಡು ಅಡಿ ಅಂತರದಲ್ಲಿ ಎಲ್ಲಿಂದ ಎಲ್ಲಿಯ ವರೆಗೂ ಹಾರಾಡಬಲ್ಲ ಸಾಮರ್ಥ್ಯ ಈ ಹಕ್ಕಿಗಿದೆ.
ಈ ಹಕ್ಕಿಯ ಕೇಸರಿ ಮತ್ತು ನೀಲಿ ಬಣ್ಣ ಪ್ರಜ್ವಲಿಸುತ್ತದೆ. ಅದರಲ್ಲೂ ಸಂತಾನೋತ್ಪತ್ತಿಯ ವೇಳೆಯಲ್ಲಿ ಮಿರುಗುವಸ್ಟು ಪ್ರಜ್ವಲತೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ತಿಂಗಳಾವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಮರದ ಪೊಟರೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಮೀನು ಇದರ ಪ್ರಮುಖ ಆಹಾರ. ಭಾರತ, ಶ್ರೀಲಂಕಾ, ಬಾಂಗ್ಲಾದಲ್ಲಿ ಜಾಸ್ತಿ.