ಅರಾ ಗುಲರ್ ಕಣ್ಣಿನ ಬಿಂಬ ಸೆರೆಹಿಡಿದ ಧನೇಶ್ ಮಾಂಬಾ

Share This

  • ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಜಲವರ್ಣ ಕಲಾಕೃತಿಗಳ ಪ್ರದರ್ಶನ

ತಂತ್ರಜ್ಞಾನ ಬೆಳೆದಂತೆ ಕ್ಯಾಮರಾ ಉದ್ಯಮದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗಿದೆ. ಇತ್ತೀಚಿನ ದಿನಗಳಲ್ಲಂತೂ ಬಗೆ ಬಗೆಯ ಕ್ಯಾಮರಾಗಳು ಮೊಬೈಲ್ ಫೋನ್‌ಗಳಲ್ಲೇ ಲಭ್ಯ. ವೃತ್ತಿಪರರು ಬಳಸುವಂತಹ ಕ್ಯಾಮರಾಗಳೂ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿವೆ. ಹೀಗಾಗಿ ಇಂದು ವ್ಯತ್ತಿಪರ ಕ್ಯಾಮರಾಗಳ ಬಳಕೆಯನ್ನು ಇಂದಿನ ಯುವಕರು ಬಲುಬೇಗ ಕಲಿತುಕೊಳ್ಳಬಲ್ಲರು. ಆದರೆ, ಕ್ಯಾಮರಾ ಎಷ್ಟೇ ಅಭಿವೃದ್ಧಿ ಕಂಡರೂ ಒಂದೊಳ್ಳೆಯ ಫೋಟೋ ಕ್ಲಿಕ್ಕಿಸುವುದು ಸುಲಭದ ಮಾತಲ್ಲ. ಪ್ರತಿ ಕ್ಷಣವನ್ನೂ ಕ್ಯಾಮರಾ ಸೆರೆ ಹಿಡಿಯುತ್ತದೆಯಾದರೂ ಆ ಕ್ಷಣವನ್ನು ನಿರ್ಧರಿಸುವುದು ಕ್ಯಾಮರಾಮನ್. ಏನನ್ನು ಸೆರೆ ಹಿಡಿಯಬೇಕು, ಅದೇಕೆ ಮುಖ್ಯವಾಗಬಲ್ಲದು, ಫ್ರೇಮ್‌ನಲ್ಲಿ ಎಷ್ಟಿದ್ದರೆ ಸಾಕು, ನೆರಳು-ಬೆಳಕು ಹೇಗಿರಬೇಕು ಎಂದೆಲ್ಲಾ ನಿರ್ಧರಿಸಿ ಕ್ಲಿಕ್ಕಿಸುವ ಪ್ರಕ್ರಿಯೆಗೆ ಕೌಶಲ್ಯ ಇರಬೇಕು. ಕ್ರಿಯಾಶೀಲ ಚಿಂತನೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚುರುಕುತನ ಇರಬೇಕು. ಇವೆಲ್ಲವೂ ಇದ್ದಾಗಲೇ ಒಂದೊಳ್ಳೆಯ ಛಾಯಾಚಿತ್ರ ಹೊರಬರಲು ಸಾಧ್ಯವಾಗುತ್ತದೆ. ಪ್ರತಿಕ್ಷಣವೂ ಜೀವನೋತ್ಸಾಹ ಕಾಪಾಡಿಕೊಂಡಿರಬೇಕು.

ಅನೇಕ ಸಂದರ್ಭದಲ್ಲಿ ಫೋಟೋ ಜರ್ನಲಿಸ್ಟ್ ಹರಸಾಹಸಗಳು ಕಣ್ಣಿಗೆ ಬಿದ್ದಾಗ ಆ ವೃತ್ತಿಯಲ್ಲಿ ಖ್ಯಾತರೆನಿಸಿಕೊಂಡಿರುವವರು ಮತ್ತು ಅವರು ಸೆರೆಹಿಡಿದಿರುವ ಛಾಯಾಚಿತ್ರಗಳು ನೆನಪಿಗೆ ಬರುತ್ತವೆ. ಅವೆಷ್ಟೋ ಛಾಯಾಚಿತ್ರಗಳಲ್ಲಿನ ಕ್ಲಿಕ್ಕಿಸಿದ ಕ್ಷಣ ನಮ್ಮನ್ನು ಅಚ್ಚರಿಗೊಳಿಸುವುದೂ ಉಂಟು. ಇಂತಹ ಛಾಯಾಚಿತ್ರ ಅನೇಕರನ್ನು ಪ್ರೇರೇಪಿಸಿದ್ದೂ ಉಂಟು. ಇದಕ್ಕೊಂದು ಉದಾಹರಣೆ ಎನ್ನುವಂತೆ, ದೃಶ್ಯ ಕಲಾವಿದರೊಬ್ಬರು ಛಾಯಾಚಿತ್ರಗಳಿಂದ ಪ್ರೇರಣೆ ಪಡೆದು ಛಾಯಾಚಿತ್ರದಲ್ಲಿನ ಸನ್ನಿವೇಶಗಳನ್ನೇ ತಮ್ಮ ಕಲಾಕೃತಿಗೆ ವಸ್ತುವಾಗಿಸಿಕೊಂಡಿದ್ದಾರೆ. ಆ ಕಲಾಕೃತಿಗಳು ‘The Eye of Istanbul’ ಶೀರ್ಷಿಕೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 4ರಲ್ಲಿ ಪ್ರದರ್ಶಿಸಲ್ಪಟ್ಟಿವೆ.

ಕೇರಳದ ದೃಶ್ಯ ಕಲಾವಿದ ಧನೇಶ್ ಮಾಂಬಾ (Dhanesh Mamba) ಅವರು ಟರ್ಕಿಯ ಖ್ಯಾತ ಫೋಟೋ ಜರ್ನಲಿಸ್ಟ್, ಛಾಯಾಗ್ರಾಹಕ ಅರಾ ಗುಲರ್ (Ara Guler) ಅವರ ಕ್ಯಾಮರಾ ಕಣ್ಣಲ್ಲಿ ಸೆರೆಸಿಕ್ಕ ದೃಶ್ಯಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಗುಲರ್ ಅವರ ಛಾಯಾಚಿತ್ರದ ದೃಶ್ಯಗಳನ್ನು ಯತಾವತ್ ಬಳಸಿಕೊಂಡಿದ್ದಾರೆ. ಜಲವರ್ಣದಲ್ಲಿ ಮೂಡಿಬಂದಿರುವ ಕಲಾಕೃತಿಗಳಲ್ಲಿ ಮಾಂಬಾ ಎಲ್ಲಿಯೂ ಅಕಾಡೆಮಿಕ್ ಅಧ್ಯಯನದ ಅಲಿಖಿತ ನಿಯಮಗಳನ್ನು ಮೀರದಿರುವುದು ಗಮನ ಸೆಳೆಯಿತು. ಛಾಯಾಚಿತ್ರಗಳಲ್ಲಿನ ನೆರಳು-ಬೆಳಕನ್ನು ಉಳಿಸಿಕೊಂಡು, ಜಲವರ್ಣದ ಲಕ್ಷಣಗಳಿಗೂ ಧಕ್ಕೆಯಾಗದಂತೆ ಚಿತ್ರಿಸಿರುವುದು ವಿಶೇಷವೆನಿಸಿತು.

ಟರ್ಕಿಯ ಇತಿಹಾಸದ ಪುಟದಲ್ಲಿ ಅರಾ ಗುಲರ್ ವಿಶೇಷ ಸ್ಥಾನ ಪಡೆದವರು. ಇಸ್ತಾನ್‌ಬುಲ್‌ನ ಕಣ್ಣಿದ್ದಂತೆ ಎಂದು ಗುಲರ್ ಅವರನ್ನು ಗುಣಗಾನ ಮಾಡಲಾಗುತ್ತದೆ. ಔಷಧ ಅಂಗಡಿ ಮಾಲೀಕರೊಬ್ಬರ ಮಗನಾಗಿ ಜನಿಸಿ, ಬಾಲಕನಾಗಿದ್ದಾಗಲೆ ಸಿನಿಮಾ, ರಂಗಭೂಮಿ ಕ್ಷೇತ್ರಗಳ ಪರಿಚಯ ಮಾಡಿಕೊಂಡು ಬೆಳೆದ ಅರಾ ಗುಲರ್ ಬಳಿಕ ಪತ್ರಿಕೋದ್ಯಮದಿಂದ ಆಕರ್ಷಿತರಾಗುತ್ತಾರೆ. ತಮ್ಮ ಛಾಯಾಚಿತ್ರಗಳ ಮೂಲಕವೇ ವಿಶ್ವ ವಿಖ್ಯಾತರಾಗಿದ್ದಾರೆ. ಇಂತಹ ಖ್ಯಾತನಾಮ ಛಾಯಾಗ್ರಾಹಕರನ್ನು ಭೇಟಿ ಮಾಡಿದ, ಅವರ ಛಾಯಾಚಿತ್ರಗಳಿಂದ ಪ್ರೇರಣೆ ಪಡೆದುಕೊಂಡಿರುವ ಧನೇಶ್ ಮಾಂಬಾ ಅವರ ಈ ಪ್ರಯತ್ನ ಶ್ಲಾಘನೀಯ. ಬಹಳ ಅಚ್ಚುಕಟ್ಟಾದ ಜಲವರ್ಣ ಬಳಕೆ ಕೇರಳದ ಕಲಾ ಸಂಸ್ಕೃತಿ, ಸಂಸ್ಕಾರವನ್ನೂ ತೆರೆದಿಡುತ್ತಿದೆ.

ಸ್ನೇಹಿತರೆ, ಮಾಂಬಾ ಅವರ ಕಲಾಕೃತಿಗಳ ಪ್ರದರ್ಶನ ಜುಲೈ 20, ಭಾನುವಾರ ಇಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 

 

 

 


Share This

Leave a Reply

Your email address will not be published. Required fields are marked *