• ‘ಆರ್ಟಿಸೆರಾ’ದಲ್ಲಿ ಮುದ್ರಣ ಕಲಾಕೃತಿಗಳ ಪ್ರದರ್ಶನ
“Printmaking is drawing multiplied.”
ಖ್ಯಾತ ವರ್ಣಚಿತ್ರ ಕಲಾವಿದ, ದಿವಂಗತ ಡೇವಿಡ್ ಹಾಕ್ನಿ (David Hockney) ಅವರ ಮಾತು ಇದು. ಮುದ್ರಣ ಕಲೆಗೆ ಸಂಬಂಧಿಸಿ ಪೇಂಟರ್ ಹೀಗೊಂದು ಹೇಳಿಕೆ ದಾಖಲಿಸುವಾಗ ಬಹಳ ಮಂದಿ ಮೂಗು ಮುರಿದಿರಬಹುದು. ಆದರೆ, ಅದನ್ನು ಮೆಚ್ಚಿಕೊಂಡವರು ಹಲವರಿದ್ದಾರೆ. 20 ಮತ್ತು 21ನೇ ಶತಮಾನದ ಪ್ರಭಾವಿ ಕಲಾವಿದ ಹಾಕ್ನಿ. ಅದರಲ್ಲೂ ಪಾಪ್ ಆರ್ಟ್ ಪ್ರಕಾರಕ್ಕೆ ದೊಡ್ಡದಾದ ಕೊಡುಗೆ ನೀಡಿರುವ ಕಲಾವಿದ.
ಡೇವಿಡ್ ಹಾಕ್ನಿ ಅವರ ಮಾತಿನಂತೆ ಮುದ್ರಣ ಕಲಾಕೃತಿಗಳಲ್ಲಿ ಗುಣಿಸಲ್ಪಟ್ಟ ರೇಖೆಗಳನ್ನು ಕಾಣಲು ಸಾಧ್ಯ. ಅಂತಹ ಕಲಾಕೃತಿಗಳಲ್ಲಿನ ರೇಖೆಗಳ ಹರಿವು ವಿಶೇಷ. ರಚನಾ ವಿಧಾನ, ಪ್ರಕ್ರಿಯೆಯೇ ಕೌತುಕ. ಅನ್ವೇಷಣೆ, ಶೋಧನಾ ಮನೋಭಾವ ಇರುವವರಿಗೆ ಹೊಸದೊಂದು ಜಗತ್ತನ್ನೇ ಸೃಷ್ಟಿಸಿಕೊಡುವ ಕಲಾಪ್ರಕಾರ. ಅರಿತುಕೊಂಡಷ್ಟು ಆಳಕ್ಕೆ ಕರೆದೊಯ್ಯಬಲ್ಲ ಕಲಾ ಪದ್ಧತಿ.
ಮುದ್ರಣ ಕಲಾಕೃತಿಗಳ ಕುರಿತು ಒಂದು ಸಮಗ್ರ ನೋಟ ಕಟ್ಟಿಕೊಡುವ, ಅಪರೂಪದ ಕಲಾಪ್ರದರ್ಶನ ‘The Mark of the Matrix : Impressions from Contemporary Indian Printmaking’ ಬೆಂಗಳೂರಿನ ಆರ್ಟಿಸೆರಾ (Artisera) ಗ್ಯಾಲರಿಯಲ್ಲಿ ನಡೆಯುತ್ತಿದೆ. ಮುದ್ರಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅನುಭವಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಬಹಳ ಅಚ್ಚುಕಟ್ಟಾಗಿ ಕ್ಯುರೇಟ್ ಮಾಡಲಾದ ಕಲಾಪ್ರದರ್ಶನ.
ದುರ್ಗಾದಾಸ್ ಗರೈ (Durgadas Garai), ದುಶ್ಯಂತ್ ಪಾಟೇಲ್ (Dushyant Patel), ಜಯಸಿಂಹ ಚಂದ್ರಶೇಖರ್ (Jayasimha Chandrashekar), ಲೆಟಿಸಿಯಾ ಅಲ್ವರೆಸ್ (Leticia Alvares), ನಿಶಾ ಧಿನ್ವಾ (Nisha Dhinwa), ಪ್ರಿಯೋಮ್ ತಾಲೂಕ್ದಾರ್ (Priyoum Talukdar), ಸ್ವಪ್ನೇಶ್ ವೈಗನ್ಕರ್ (Swapnesh Vaigankar), ಟಿಸೆರಿಂಗ್ ನೇಗಿ (Tsering Negi), ವೇಣುಗೋಪಾಲ ವಿ ಜಿ (Venugopal V G), ವಿಜಯ್ ಬಾಗೋಡಿ (Vijay Bagodi) ಮತ್ತು ವಿಶಾಖಾ ಆಪ್ಟೆ Vishakha Apte ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಮುದ್ರಣ ಕಲೆಯ ವಿವಿಧ ರಚನಾ ವಿಧಾನಗಳಿಂದ ಮೂಡಿಬಂದಿರುವ ಕಲಾಕೃತಿಗಳು, ವಿಭಿನ್ನ ಆಲೋಚನಾ ಲಹರಿ, ತಂತ್ರಗಾರಿಕೆ, ಬಣ್ಣಗಳ ಬಳಕೆ, ಸಂಯೋಜನೆ ಸೇರಿದಂತೆ ಅನೇಕ ಆಯಾಮಗಳಿಂದ ಮುದ್ರಣ ಕಲೆಯ ಪರಿಚಯ ಈ ಪ್ರದರ್ಶನ ಮುಖೇನ ಆಗಲಿದೆ. ಭಾವ, ರೇಖೆಗಳ ಸಮಾಗಮ ಆಗಿರುವುದು ಈ ಪ್ರದರ್ಶನದ ಇನ್ನೊಂದು ವಿಶೇಷ. ಪ್ರತಿಯೊಂದು ಕಲಾಕೃತಿಗಳಲ್ಲಿ ಬೇರೆ ಬೇರೆಯದೇ ಆದ ಭಾವ ಮೇಳೈಸಿದೆ. ಒಂದಿಷ್ಟು ಕಲಾಕೃತಿಗಳಲ್ಲಿ ರೇಖೆ ಪ್ರಧಾನವೆನಿಸಿದರೆ, ಇನ್ನೊಂದಿಷ್ಟು ಕಲಾಕೃತಿಗಳಲ್ಲಿ ತಂತ್ರಗಾರಿಕೆ (technique) ಪ್ರಧಾನವಾಗಿವೆ. ಕೆಲವು ಕಲಾಕೃತಿಗಳು ಸಮತೋಲಿತ ಸಂಯೋಜನಾತ್ಮಕ ನೆಲೆಯಲ್ಲಿ ಗಮನಸೆಳೆಯುತ್ತವೆ. ಬಹುತೇಕ ಕಲಾಕೃತಿಗಳು ನೋಡುಗನ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿವೆ. ಕಲಾ ವಿದ್ಯಾರ್ಥಿಗಳು ನೋಡಲೇಬೇಕಾದ ಕಲಾಪ್ರದರ್ಶನ ಇದಾಗಿದೆ.
ಇದೇ ಮೊದಲಬಾರಿಗೆ ಆರ್ಟಿಸೆರಾ ಮುದ್ರಣ ಕಲಾಕೃತಿಗಳ ಸಮೂಹ ಪ್ರದರ್ಶನ ಆಯೋಜಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ತೆರೆದುಕೊಂಡಿರುವುದು ಶ್ಲಾಘನೀಯ. ವರ್ಷದಲ್ಲೊಂದು ಕಲಾಪ್ರದರ್ಶನ ಮುದ್ರಣ ಕಲೆಗೆ ಮೀಸಲಿಡುವ ಪ್ರಯತ್ನ ಆಗಲಿ.
ಸ್ನೇಹಿತರೆ, ಈ ಪ್ರದರ್ಶನವು ಸೆಪ್ಟೆಂಬರ್ 5ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.











