- 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಗುಜರಾತ್ ಮೂಲದ ಕಲಾವಿದ
“ I am not creating, it is my hands that are creating, for when they have clay beneath them, ‘I’ am lost. Next day when I look at the creation, I wonder whether it was really I that had done it, for I had been totally lost as my hands had been shaping the clay.”
ಸಂದರ್ಶಕರೊಬ್ಬರ ಪ್ರಶ್ನೆಗೆ ಹೀಗೆಂದು ಉತ್ತರಿಸಿದ್ದು ದೇಶದ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಗುಜರಾತ್ ಮೂಲದ ಹಿಮ್ಮತ್ ಷಾ. ಇವರಿಂದು (2025, ಫೆ.28, ಭಾನುವಾರ) ನಮ್ಮನಗಲಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಭಾರತೀಯ ಕಲಾಕ್ಷೇತ್ರದ ಖ್ಯಾತನಾಮರೊಬ್ಬರು ಇಹಲೋಕ ತ್ಯಜಿಸಿದ್ದು ದೃಶ್ಯಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಸಮಕಾಲೀನ ಮತ್ತು ಹಿರಿಯ ಕಲಾವಿದರನೇಕರು, ಅನೇಕ ಕಲಾ ಸಂಸ್ಥೆಗಳು, ಕಲಾ ಪೋಷಕರು ಕಂಬನಿ ಮಿಡಿದಿದ್ದಾರೆ.
ಕಲಾಕ್ಷೇತ್ರಕ್ಕೆ ಹಿಮ್ಮತ್ ಷಾ ಅವರು ನೀಡಿರುವ ಕೊಡುಗೆಯನ್ನು ನೆನಪಿಸಿಕೊಳ್ಳುವಂತದ್ದು. ಅನೇಕ ಒಡನಾಡಿಗಳ ಬಾಯಲ್ಲಿಂದು ಅವರ ವ್ಯಕ್ತಿತ್ವದ ಗುಣಗಾನವಾಗುತ್ತಿದೆ. ಸಹಜ, ಎಲ್ಲರ ಜೊತೆ ನಗು ನಗುತ್ತಾ, ನಗಿಸುತ್ತಾ ಇರುತ್ತಿದ್ದ ಹಿರಿಯ ಕಲಾವಿದರ ನಿಧನ ಒಡನಾಡಿಗಳಲ್ಲಿ ನೋವನ್ನುಂಟು ಮಾಡಿದೆ. ಇದೇ ಸಮಯದಲ್ಲಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಿಮ್ಮತ್ ಷಾ ಅವರು ಮೂಲತಃ ಗುಜರಾತಿನವರು. ಹರಪ್ಪ ನಾಗರಿಕತೆಯ ಪ್ರಮುಖ ಸ್ಥಳಗಳಲ್ಲಿ ಒಂದಾದ ಲೋಥಾನ್‌ನಲ್ಲಿ ಜನಿಸಿದ ಇವರು, ಶ್ರೇಷ್ಠ ಕಲಾವಿದರಾಗಿ ಬೆಳೆದುಬಂದ ಬಗೆ ಅಚ್ಚರಿ ಮೂಡಿಸುವಂತದ್ದು. ವಿಶೇಷವಾಗಿ ಹಿಮ್ಮತ್ ಷಾ ಅವರ ನೆನಪಾದಾಗ ಅವರೊಬ್ಬ ಶಿಲ್ಪಿಯಾಗಿ ನೆನಪಿಸಿಕೊಳ್ಳಲೇ ಬೇಕಾದವರು. ಜೊತೆಗೆ ಟೆರಕೋಟಾ ಮಾಧ್ಯಮದ ಮೂಲಕ ಹೆಚ್ಚೆಚ್ಚು ಚಿರಪರಿಚಿತರಾಗಿರುವುದನ್ನು ಸ್ಮರಿಸಬಹುದು.
‘ಷಾ’ ಅಂದಾಗ ಸಹಜವಾಗಿ ಎಲ್ಲರೂ ಅವರೊಬ್ಬ ವ್ಯಾಪಾರಿಯಾಗಿ ಬೆಳೆದಿರಬೇಕಿತ್ತಲ್ಲ ಎಂದು ಹುಬ್ಬೇರಿಸಬಹುದು. ಆದರೆ, ಹಿಮ್ಮತ್ ಷಾ ಅವರು ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟವರು, ವ್ಯಾಪಾರ ಮನೋಭಾವಕ್ಕೆ ತದ್ವಿರುದ್ಧವಾದ ಮನಸ್ಥಿತಿ ಬೆಳೆಸಿಕೊಂಡು ದೃಶ್ಯಕಲೆಯ ಕಡೆ ಮುಖಮಾಡಿದವರು. ಗುಜರಾತ್‌ನ ರಾಷ್ಟ್ರೀಯತಾವಾದ ಪುನರುಜ್ಜೀವನಕ್ಕೆ ಹೆಸರಾದ ಭಾವಾನಗರದ ಘರ್ಶಾಲಾ ವಿದ್ಯಾರ್ಥಿಯಾದ ಹಿಮ್ಮತ್ ಷಾ ಅವರು ಕಲಾವಿದ ಜಗುಭಾಯಿ ಷಾ ಅವರಿಂದ ಪ್ರೇರೇಪಿತರಾಗಿ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ನಂತರದ ದಿನಗಳಲ್ಲಿ ಮುಂಬೈಗೆ ಬಂದು ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ನಲ್ಲಿ ಕಲಾ ವ್ಯಾಸಂಗ ಮಾಡಿದರು. ನಂತರ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡರು. 1967ರಲ್ಲಿ ಫ್ರೆಂಚ್ ಸರ್ಕಾರಿ ವಿದ್ಯಾರ್ಥಿವೇತನ ಪಡೆದುಕೊಂಡ ಹಿಮ್ಮತ್ ಷಾ ಅವರು ಎರಡು ವರ್ಷಗಳ ಕಾಲ ಪ್ಯಾರಿಸ್‌ನಲ್ಲಿದ್ದರು. Atelier 17ನ ಮುದ್ರಣ ಕಾರ್ಯಾಗಾರದಲ್ಲಿ ಸ್ಟಾನ್ಲಿ ವಿಲಿಯಂ ಹೇಟರ್ ಮತ್ತು ಭಾರತದವರೇ ಆದ ಕೃಷ್ಣಾ ರೆಡ್ಡಿ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಾರೆ. ಈ ಪ್ರವಾಸ ಹಿಮ್ಮತ್ ಷಾ ಅವರ ಕಲಾ ಜೀವನಕ್ಕೊಂದು ತಿರುವು ನೀಡಿತೆನ್ನಬಹುದು. ಯುರೋಪಿಯನ್ ಆಧುನಿಕ ಕಲೆಯೊಂದಿಗಿನ ನಂಟಿಗೆ ಪ್ರಮುಖ ಕಾರಣವಾಯಿತು. ತದನಂತರದ ದಿನಗಳಲ್ಲಿ ಹಿಮ್ಮತ್ ಷಾ ವಿಭಿನ್ನ ಮಾಧ್ಯಮಗಳ ಮೂಲಕ ಕಲಾಕೃತಿಗಳನ್ನು ರಚಿಸಿ ಪ್ರಸಿದ್ಧರಾದರು. ಯುರೋಪ್‌ನಿಂದ ಹಿಂದಿರುಗಿದ ಬಳಿಕ ತಮ್ಮ ಕಲಾಕೃತಿಗಳಲ್ಲಿ ಸಾಕಷ್ಟು ವಿಭಿನ್ನಯೆಯನ್ನು ಅಳವಡಿಸಿಕೊಂಡಿದ್ದರು.
ಭಿನ್ನ ನೆಲೆಯಲ್ಲಿ ಯೋಚಿಸಿ ಹೊಸತನದೊಂದಿಗೆ ಕಲಾಕೃತಿ ರಚಿಸುವುದನ್ನು ರೂಢಿಸಿಕೊಂಡಿದ್ದ ಹಿಮ್ಮತ್ ಷಾ ಅವರು ಸುಟ್ಟ ಕಾಗದದ ಮೂಲಕ ಕೊಲಾಜ್ ರಚನೆ, ಭಿತ್ತಿಚಿತ್ರ, ರೇಖಾ ಚಿತ್ರಗಳ ಮೂಲಕವೂ ಗಮನ ಸೆಳೆದಿದ್ದರು. ಟೆರಾಕೋಟಾ ಮತ್ತು ಕಂಚಿನ ಶಿಲ್ಪಗಳ ರಚನೆಯಲ್ಲಿ ವಿಶೇಷ ಜ್ಞಾನ ಸಂಪಾದಿಸಿಕೊಂಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಹಿಮ್ಮತ್ ಷಾ ಅವರು ಅನೇಕ ಮಾಧ್ಯಮಗಳಲ್ಲಿ ಶಿಲ್ಪಗಳನ್ನು ರಚಿಸಿದ್ದಾರೆ. ಹೊಸತನದ ತಂತ್ರಗಳನ್ನು ಅಳವಡಿಸಿಕೊಳ್ಳಲು ಸದಾ ಸಿದ್ಧರಾಗಿರುತ್ತಿದ್ದರು ಎನ್ನುವುದು ಅನೇಕ ಒಡನಾಡಿಗಳ ಅಂಬೋಣ.
ಗ್ರೂಪ್ 1890 ಸ್ಥಾಪಕ ಸದಸ್ಯರಾದ ಹಿಮ್ಮತ್ ಷಾ ಭಾರತೀಯ ನವ್ಯ ಕಲಾ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಅದೆಷ್ಟೋ ಯುವ ಕಲಾವಿದರಿಗೆ ಹಿಮ್ಮತ್ ಷಾ ಅವರ ಕಲಾಕೃತಿಗಳು ಪ್ರೇರಣೆಯಾಗಿದ್ದವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1967ರಿಂದ 1971ರ ಅವಧಿಯಲ್ಲಿ ಹಿಮ್ಮತ್ ಷಾ ಅವರು ಮಣ್ಣಿನ ಇಟ್ಟಿಗೆ ಮತ್ತು ಸಿಮೆಂಟ್‌ನಲ್ಲಿ ಸಾಕಷ್ಟು ಮ್ಯೂರಲ್‌ಗಳನ್ನು ರಚಿಸಿರುವುದು ಕಂಡುಬರುತ್ತದೆ. ಇದೇ ಅವಧಿಯಲ್ಲಿ ದೆಹಲಿಯ Garhi ಸ್ಟುಡಿಯೋದಲ್ಲಿದ್ದು, ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದರು. ವಿಶೇಷವಾಗಿ ಟೆರಕೋಟಾ ಕಲಾಕೃತಿಗಳ ರಚನೆಯಲ್ಲಿ ಸಾಕಷ್ಟು ಹೊಸತನದ ಅನ್ವೇಷಣೆಗಳನ್ನು ಮಾಡಿರುವುದು ಅವರ ಕಲಾಜೀವನ ಕುರಿತ ಪುಸ್ತಕ, ಲೇಖನಗಳಲ್ಲಿ ದಾಖಲಾಗಿದೆ. 2004-05ರ ಬಳಿಕ ಕಂಚಿನ ಶಿಲ್ಪಗಳ ರಚನೆಯಲ್ಲಿ ವಿಶೇಷ ಆಸಕ್ತಿ ತೋರಿದರು. ಟೆರಕೋಟಾಗಳಲ್ಲಿದ್ದ ಮನುಷ್ಯನ ತಲೆಯ ಕಲಾಕೃತಿಗಳು ಕಂಚಿನಲ್ಲಿಯೂ ಮೂಡಿಬಂದವು. 2000ನೇ ಇಸ್ವಿಯಲ್ಲಿಯೇ ಹಿಮ್ಮತ್ ಷಾ ಅವರು ಜೈಪುರದಲ್ಲಿ ತಮ್ಮದೆ ಸ್ಟುಡಿಯೊ ನಿರ್ಮಿಸಿಕೊಂಡಿದ್ದರು. ತದನಂತರದ ದಿನಗಳಲ್ಲಿ ಅಲ್ಲಿಯೇ ತಂಗಿದ್ದರು. ತಮ್ಮ ಕಡೆಯ ದಿನದವರೆಗೂ ಅವರು ಕಲೆಯನ್ನೇ ಉಸಿರಾಗಿಸಿಕೊಂಡಿದ್ದರು.
ಹಿಮ್ಮತ್ ಷಾ ಅವರ ಕಲಾ ಸಾಧನೆಗೆ 1988ರಲ್ಲಿ ನವದೆಹಲಿಯ ಸಾಹಿತ್ಯ ಕಲಾ ಪರಿಷತ್ ಪ್ರಶಸ್ತಿ, 1996ರಲ್ಲಿ ಆಲ್ ಇಂಡಿಯಾ ಫೈನ್ ಆರ್ಟ್ಸ್ ಮತ್ತು ಕ್ರಾಫ್ಟ್ ಸೊಸೈಟಿ ಪ್ರಶಸ್ತಿ, 2003ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ್ ಪುರಸ್ಕಾರ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಭಾರತದ ಪ್ರಮುಖ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದ ಹಿಮ್ಮತ್ ಷಾ ಇನ್ನು ನೆನಪು ಮಾತ್ರ.
‘Freedom and courage are crucial for creativity’ -Himmat Shah