- ಗಮನ ಸೆಳೆದ When Knowing Bends ಕಲಾಪ್ರದರ್ಶನ
ಮೌನ ಕಲಾಕೃತಿಗಳ ನಡುವೆ ಮಣ್ಣಿನಲ್ಲಿ ಅತಿ ವೇಗದಲ್ಲಿ ತಿರುಗಬಲ್ಲ ಚಕ್ರಗಳು ಸದ್ದು ಮಾಡುತ್ತಿದೆ. ಟಯರ್ ಬಣ್ಣಗಳು ಬದಲಾಗಿವೆ. ರಭಸಕ್ಕೆ ಮಣ್ಣು ಸಿಡಿದಿದೆ. ದಂಡ ಹಿಡಿದ ವ್ಯಕ್ತಿ ಮೌನವಾಗಿ ಕುಗ್ಗುತ್ತಿದ್ದಾನೆ. ಕಲುಷಿತ ಜಗತ್ತನ್ನು ನೋಡಲಾರೆ ಎನ್ನುತ್ತಿದ್ದಾನೆ. ವಮನ ಅಧೋಮುಖಿಯಾಗಿದ್ದಾನೆ… ಹೀಗೆ ಬಹಳ ಮಾರ್ಮಿಕ ಅನಿಸುವ ಸಂವೇದನಾತ್ಮಕ ಅಭಿವ್ಯಕ್ತಿ ಅವು!
ಹೌದು, ವಿಭಿನ್ನ ಆಯಾಮದಲ್ಲಿ ನೋಡಬೇಕೆನ್ನುವ ತುಡಿತ ನೋಡುಗನನ್ನು ಆವರಿಸಿಕೊಳ್ಳುವುದರಲ್ಲಿ ಯಾವ ಸಂದೇಹವಿಲ್ಲ. ಗುಹೆಯೊಳಗಿನ ಮಂದ ಬೆಳಕು ಕಲಾಕೃತಿಗಳನ್ನು ಬಿಟ್ಟು ಇನ್ನೇನನ್ನೂ ನೋಡಲು ಬಿಡುವುದಿಲ್ಲ. ಕಪ್ಪು ಇನ್ನಷ್ಟು ಕಪ್ಪಾಗಿಯೇ ಕಾಣಿಸುತ್ತವೆ. ಭಾವನೆಗಳ ಮೇಲೆ ಕರಿನೆರಳು ಎನ್ನುವಷ್ಟರ ಮಟ್ಟಿಗೆ ಮಾತ್ರ ಬೆಳಕು. ಹೊಸದೊಂದು ಅನುಭವದ ಆವರಣದಲ್ಲಿ ತೇಲಿಸುವ ಯಶಸ್ವಿ ಪ್ರಯತ್ನ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಬಿಡಬಹುದು. ಮೌನವಾಗಿಯೇ ನಿರ್ಗಮಿಸಬಹುದು. ಅನಂತದೆಡೆಗೆ ಜಾರಿಕೊಳ್ಳಲೂಬಹುದು…
ಬೆಂಗಳೂರಿನ ಕಾಶ್ ಗ್ಯಾಲರಿಯಲ್ಲಿ ನಡೆಯುತ್ತಿರುವ When Knowing Bends ಕಲಾಪ್ರದರ್ಶನ ಗಮನ ಸೆಳೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದ ಎಲ್.ಎನ್. ತಲ್ಲೂರ್ ಅವರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ತಲ್ಲೂರ್ ಅವರು ತಮ್ಮ ಎಂದಿನ ಪ್ರಯೋಗಾತ್ಮಕ ರಚನಾ ಕ್ರಮವನ್ನು ಪ್ರದರ್ಶಿತ ಕಲಾಕೃತಿಗಳಲ್ಲಿಯೂ ಸಾಧ್ಯವಾಗಿಸಿದ್ದಾರೆ. ಆಲೋಚನೆಗಳ ಬಗೆಗಿನ ಕುತೂಹಲವನ್ನು ಕಾಪಿಟ್ಟುಕೊಳ್ಳುವಲ್ಲಿ ತಲ್ಲೂರ್ ಅವರು ಈ ಪ್ರದರ್ಶನದಲ್ಲೂ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಯಾವ ಸಂದೇಹ ಬೇಡ.
ಫೆಬ್ರುವರಿ 28ರಂದು ಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.





