• ರಾವ್ & ರಿಜ್ವಾನ್ ಕಲಾಕೃತಿಗಳ ಪ್ರದರ್ಶನ
ಬಣ್ಣಗಳ ತೆಳುವಾದ ಹರಿವು ಮತ್ತು ಮಿತ ಬಳಕೆ, ಬೆಳಕಿಗೆ ಕೊಂಚ ಹೆಚ್ಚಿನ ಪ್ರಾಶಸ್ತ್ಯ, ಕತ್ತಲೆ ಸೂಚಿಸುವ ಅಥವಾ ನೆರಳೆನ್ನುವ ಕಾರಣಕ್ಕೆ ತುಸು ಜಾಸ್ತಿ ಕಪ್ಪು!
ಹೀಗೆ ಕೆನಡಾದ ಪ್ರಕೃತಿಯೊಡಲಿನ ಸೌಂದರ್ಯವನ್ನು ವಿಭಿನ್ನ ಬೀಸಿನಲ್ಲಿ (stroke) ಸೆರೆಹಿಡಿದ ರಾಘವೇಂದ್ರ ರಾವ್ ಕೆ.ವಿ. ಮತ್ತು ಮೊಹಮ್ಮದ್ ರಿಜ್ವಾನ್ ಅವರ ಕಲಾಕೃತಿಗಳು ಬೆಂಗಳೂರಿನ 1ಶಾಂತಿರೋಡ್ ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಅನ್ನೆ ಮರ್ಫಿ (Anne Murphy) ಈ ಕಲಾಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ.
‘ Disability and Healing Landscapes ‘ ಕಲಾಪ್ರದರ್ಶನದಲ್ಲಿ ಹೆಚ್ಚೇನೂ ಕಲಾಕೃತಿಗಳು ಇಲ್ಲದಿದ್ದರೂ, ಪ್ರದರ್ಶಿತ ಬೆರಳೆಣಿಕೆಯಷ್ಟು ಕಲಾಕೃತಿಗಳು ಹೃದಯಸ್ಪರ್ಶಿ. ರಿಜ್ವಾನ್ ಅವರ ಈ ಹಿಂದಿನ ಕಲಾಕೃತಿಗಳಿಗೂ ಮತ್ತು ಪ್ರದರ್ಶಿತ ನಿಸರ್ಗ ಚಿತ್ರಗಳು ಬೇರೆ ಬೇರೆ ಅನಿಸುತ್ತವೆ. ಏಕ ವರ್ಣ ಪ್ರಯೋಗ ಅವರ ಕಲಾಕೃತಿಗಳಲ್ಲಿ ಕಾಣಬಹುದಾದ ವಿಶೇಷ. ಬಣ್ಣ ಬಳಕೆಯಲ್ಲಿ ಪಾಯಿಂಟಲಿಸಮ್ (pointillism) ಪ್ರಭಾವ ಕಾಣಿಸುತ್ತವೆ. ರಿಜ್ವಾನ್ ಈ ಸರಣಿಯ ಮುಂದಿನ ಕಲಾಕೃತಿಗಳ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.
ರಾಘವೇಂದ್ರ ರಾವ್ ಅವರ ಭೂಕಂಪನ ಸರಣಿ ಕಲಾಕೃತಿಗಳು ಅಚ್ಚುಮೆಚ್ಚು. ಜಲವರ್ಣವನ್ನು ಹಿತ-ಮಿತವಾಗಿ ದುಡಿಸಿಕೊಂಡಿದ್ದಾರೆ. ವಿರಳವಲ್ಲದ, ಸಾಮಾನ್ಯವೆನಿಸುವ ಅಂಶಗಳನ್ನೇ ಈ ಕಲಾಕೃತಿಗಳಲ್ಲಿ ಮಿತವಾಗಿ ಬಳಸಿದ್ದಾರೆ. ಗಾಢ ವರ್ಣಗಳಿಂದ ದೂರವಿರುವವರು ಈ ಕಲಾಕೃತಿಗಳಿಗೆ ಹತ್ತಿರವಾಗುತ್ತಾರೆ. ಹಾಗೆ, ಕ್ಯಾನ್ವಾಸ್ ಮೇಲಿನ ಅಕ್ರಲಿಕ್ ಬಣ್ಣದ ಬಳಕೆಯನ್ನೂ ಜಲವರ್ಣದಂತೆ ಬಳಸಿರುವ ಕಲಾಕೃತಿಯೂ ಈ ಪ್ರದರ್ಶನದಲ್ಲಿದೆ. ರಾಘವೇಂದ್ರ ರಾವ್ ಇಲ್ಲಿಯೂ ಅಪೂರ್ಣ ಭಾವ ಮೂಡಿಸಿ ವಿಭಿನ್ನರೆನಿಸುತ್ತಾರೆ.
ಇಬ್ಬರೂ ಕಲಾವಿದರು ಪ್ರಕೃತಿಯ ಸೌಂದರ್ಯಕ್ಕೆ ಶರಣಾಗಿದ್ದಾರೆ. ಹಸಿರ ಒಡಲೊಳಗಿನ ತಳಮಳವನ್ನು, ನೆರಳು-ಬೆಳಕಿನ ಆಟವನ್ನು ಸೊಗಸಾಗಿ ಸೆರೆಯಾಗಿಸಿದ್ದಾರೆ. ಮಿತ ವರ್ಣದ ಕಾರಣಕ್ಕಾಗಿ ಇಡೀ ಪ್ರದರ್ಶನ ಆಪ್ತವೆನಿಸುತ್ತದೆ.
ಸ್ನೇಹಿತರೆ ಮಾರ್ಚ್ 21ರಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
ಇಬ್ಬರು ಕಲಾವಿದರಿಗೆ ಅಭಿನಂದನೆಗಳು 
.









