ಹಲವು ಮಂದಿ ನಾಲ್ಕು ಗೋಡೆಯಿಂದ ಆಚೆ ಬರಲು ಬಯಸುವುದಿಲ್ಲ. ಕೆಲವರು ಯಾವುದೋ ಅನಿವಾರ್ಯತೆಯಿಂದ ಒಳಸೇರಿಕೊಂಡಿದ್ದರೆ, ಇನ್ನೂ ಕೆಲವರು ಜನ ಸೇರಿದ್ದಾರೆಂದು ಕೋಣೆಯಿಂದ ಹೊರ ಬರುವದೇ ಇಲ್ಲ. ಅದೇನೋ ಒಂದು ರೀತಿಯ ಭಯ, ನಾಚಿಕೆ, ಹಿಂಜರಿಕೆ.
ಇಂಥ ಸ್ವಭಾವ ಕೇವಲ ಮನುಷ್ಯರಲ್ಲಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಲ್ಲಿಯೂ ಕಾಣಲು ಸಾದ್ಯ. ‘ಕಿರುರೆಕ್ಕೆ ಹಕ್ಕಿ’, ‘ಬಿಳಿಹೊಟ್ಟೆ ಹಕ್ಕಿ’, ‘ಬಿಳಿಹೊಟ್ಟೆ ಸಣ್ಣರೆಕ್ಕೆ’ ಅರ್ಥಾತ್ ( While Billed – Shortwing) ಕೂಡ ಇದೇ ಸ್ವಭಾವದ ಹಕ್ಕಿ. ಒಂಥರಾ ನಾಚಿಕೆ, ಭಯಪಡುವ ಸ್ವಭಾವ. ತನ್ನಿಂದ ದೊಡ್ಡ ಗಾತ್ರದ ಹಕ್ಕಿ, ಪ್ರಾಣಿ ಅಥವಾ ಮನುಷ್ಯರನ್ನು ಕಂಡಾಗಲೆಲ್ಲ ಪೊದೆಯೊಳಗೆ ಅಥವಾ ತನ್ನ ಗೂಡಿನೊಳಗೆ ಸೇರಿಕೊಳ್ಳುತ್ತದೆ. ನೀವೂ ಈ ಹಕ್ಕಿಯನ್ನೇ ಹಿಂಬಾಲಿಸಿದಿರಿ ಎಂದುಕೊಳ್ಳಿ. ಆಗ ನಿಮ್ಮ ಕಣ್ಣಿಗೇ ಕಾಣದಂತೆ ಎಲ್ಲೋ ಕಣ್ಮರೆಯಾಗುತ್ತದೆ. ಪೊದೆಯೊಳಗೇ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರುತ್ತ ನೂರಾರು ಮಾರು ದೂರಕ್ಕೆ ಸಾಗಿರುತ್ತದೆ.
ಹೌದು, ಈ ಪುಟ್ಟ ಹಕ್ಕಿ ಜಂಪ್ ಮಾಡುವುದರಲ್ಲಿ ಪ್ರವೀಣ. ಹೆಚ್ಚುಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರ ಇರುವ ಕಾರಣ ಸುಲಭವಾಗಿ ಜಂಪ್ ಮಾಡುತ್ತದೆ. ನೋಡಲು ನೋಡಲು ಚೆಂಡಿನಂತ ದೇಹ. ಬಹುತೇಕ ಭಾಗ ಕಪ್ಪು ಮಿಶ್ರಿತ ನೀಲಿಬಣ್ಣ. ಕೊಕ್ಕು ಮತ್ತು ಕಾಲುಗಳು ಕಪ್ಪು. ಇನ್ನು ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಹಳದಿ ಮಿಶ್ರಿತ ಬಿಳಿಬಣ್ಣ. ಚಿಕ್ಕದಾದ ಎರಡು ರೆಕ್ಕೆಗಳಿಂದಲೇ ಈ ಹಕ್ಕಿಯನ್ನು ಗುರುತಿಸಲು ಸಾಧ್ಯ.
ಭಾರತ ಸೇರಿದಂತೆ ನೆರೆಯ ಲಂಕಾ, ಬಾಂಗ್ಲ, ಪಾಕಿಸ್ತಾನಗಳಲ್ಲಿಯೂ ನೋಡಲು ಸಾಧ್ಯ. ಮಾರ್ಚ್ ನಿಂದ ಜೂನ್ ತಿಂಗಳಾವಧಿಯಲ್ಲಿ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಜಿಟಿಜಿಟಿ ಮಳೆ ಇದ್ದ ಸಂದರ್ಭದಲ್ಲಿ ಮೈ ಮುದುಡಿ ಕುಳಿತಿರುವಾಗ ಮುದ್ದು ಮುದ್ದಾಗಿರುತ್ತದೆ.
ಗಾಬರಿಯಾದಾಗ ಸಾಮಾನ್ಯವಾಗಿ ಚಿಕ್ ಚೀಕ್…ಎಂದು ಸದ್ದು ಮಾಡುತ್ತದೆ.
ಚಿತ್ರ: ಅಂತರ್ಜಾಲ.