“𝑻𝙝𝒆 𝑴𝙖𝒄𝙝𝒊𝙣𝒆 ” ಕಲಾಪ್ರದರ್ಶನ

Share This

𝑬𝙡𝒊𝙖𝒔 𝑯𝙤𝒘𝙚 𝙅𝒓. ನೆನಪಿಸಿದ “𝑻𝙝𝒆 𝑴𝙖𝒄𝙝𝒊𝙣𝒆 ” ಕಲಾಪ್ರದರ್ಶನ!
ಬಾಲ್ಯದಲ್ಲಿ ” ಹೊಲಿಗೆ ಯಂತ್ರ ” ನೋಡಿ ಆಕರ್ಷಣೆಗೆ ಒಳಗಾಗಿ ಕೈಬೆರಳಿಗೆ ಸೂಜಿ ಚುಚ್ಚಿಸಿಕೊಂಡವರು ಹಲವರು. ಅದೇನೋ ಗೊತ್ತಿಲ್ಲ ಈ ಯಂತ್ರದ ಬಗ್ಗೆ ಭಾರಿ ಆಕರ್ಷಣೆ. ಸೂಜಿಗಿರುವ ದಾರ ಬಟ್ಟೆಗೆ ಹೇಗೆ ಸೇರಿಕೊಳ್ಳುತ್ತೆ ಅನ್ನೋದೇ ಒಂದು ಸೋಜಿಗ. ಅದರಲ್ಲೂ ಹುಡುಗರಿಗೆ ‘ರಿಪೇರಿ’ ಮಾಡಿಟ್ಟು ಬೈಗುಳ ಕೇಳಿಸಿಕೊಂಡರೇನೆ, ಒಂದೇಟು ತಿಂದರೇನೇ ಸಮಾಧಾನ ಎನ್ನುವಷ್ಟರ ಮಟ್ಟಿಗೆ ಆಕರ್ಷಣೆ!!
1819ರ ಸಂದರ್ಭ. ಹೊಲವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ 16ರ ಹರೆಯದ ಚಿಗುರು ಮೀಸೆ ಯುವಕ. ಆರ್ಥಿಕ ಮುಗ್ಗಟ್ಟಿನ ಕಾರಣ ಇದ್ದಕ್ಕಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡಿ, ಬೇರೆ ಉದ್ಯೋಗ ಅರಸಿ ಹುಟ್ಟೂರು ಮ್ಯಾಸಚೂಸೆಟ್ಸ್ ಸ್ಪೆನ್ಸರ್ ನಿಂದ ಕೇಂಬ್ರಿಡ್ಜ್ ಗೆ ಹೋಗಿ ಅಲ್ಲೊಂದು ಗಾರ್ಮೆಂಟ್ಸ್ ಕಂಪನಿಗೆ ಮೆಕ್ಯಾನಿಕ್ ಆಗಿ ಸೇರಿಕೊಳ್ಳುತ್ತಾನೆ. ಆಸಕ್ತಿ ಇರುವ ಕ್ಷೇತ್ರವೇ ಅದಾಗಿದ್ದರಿಂದ ಆ್ಯರಿ ಡೇವಿಸ್ ಎಂಬ ಮಾಸ್ಟರ್ ಮೆಕ್ಯಾನಿಕ್ ಒಬ್ಬರಿಂದ ಒಳ್ಳೆಯ ತರಬೇತಿ ಪಡೆಯುತ್ತಾನೆ. ಮುಂದೊಂದು ದಿನ ಆಧುನಿಕ ಹೊಲಿಗೆ ಯಂತ್ರದ ಆವಿಷ್ಕಾರಕ್ಕೆ ಕಾರಣವಾಗುತ್ತಾನೆ. ಅದಕ್ಕೊಂದು ಪೇಟೆಂಟ್ ಪಡೆದು, ಜಗತ್ತಿನಾದ್ಯಂತ ಖ್ಯಾತಿಗೆ ಪಾತ್ರರಾಗುತ್ತಾನೆ.
ಆ ಯುವಕ ಮತ್ಯಾರೂ ಅಲ್ಲ, ಎಲಿಯಾಸ್ ಹೋವೆ ಜೂನಿಯರ್(Elias Howe Jr.). ಆದುನಿಕ ಲಾಕ್ ಸ್ಟಿಚ್ ಹೊಲಿಗೆ ಯಂತ್ರ (modern lockstitch sewing machine) ಕೈಗಿತ್ತ ಅಮೆರಿಕ ಸಂಶೋಧಕ. ಹೋವೆ ಅವರ ಆ ಒಂದು ನಿರ್ಧಾರ ಅವರನ್ನು ಬಲು ಎತ್ತರಕ್ಕೆ ಬೆಳೆಸಿಬಿಡುತ್ತೆ. ಅವರಲ್ಲಿರುವ ಸಂಶೋದಕ ಅನಾವರಣಗೊಳ್ಳುತ್ತಾನೆ.
” Once all struggle is grasped, miracles are possible ” ಎನ್ನುವಂತೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಫಲಿತಾಂಶ ಕೈಸೇರಿಬಿಡುತ್ತದೆ. ಯಾರಿಂದಲೂ ಊಹಿಸಲಿಕ್ಕೂ ಸಾಧ್ಯವಾಗಿರುವುದಿಲ್ಲ.
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1ರಲ್ಲಿ ಯುವ ಕಲಾವಿದ ಆದಿತ್ಯ ಸದಾಶಿವ್(Adhityaa Sadashiv) ಅವರ ಇತ್ತೀಚಿನ ಕಲಾಕೃತಿಗಳ
“The Machine ” ಏಕವ್ಯಕ್ತಿ ಕಲಾಪ್ರದರ್ಶನ ನಡೆಯುತ್ತಿದೆ.
ಆದಿತ್ಯ ಅವರು ಈಗಾಗಲೇ ಕಣ್ಮರೆಯಾದ, ಕಣ್ಮರೆ ಆಗುತ್ತಿರುವ ಹೊಲಿಗೆ ಯಂತ್ರಗಳನ್ನೇ ತಮ್ಮ ಅಭಿವ್ಯಕ್ತಿಗೆ ವಸ್ತುವಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಭಿನ್ನವಾಗಿ ದುಡಿಸಿಕೊಂಡಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಬದಲಾವಣೆ ಕಂಡಿರುವ ಯಂತ್ರಗಳ ವಿನ್ಯಾಸವನ್ನು ಬಲು ಸೊಗಸಾದ ರೀತಿಯಲ್ಲಿ ದುಡಿಸಿಕೊಂಡಿದ್ದಾರೆ. ಜ್ಯಾಮಿತಿಯ(geomagnetic) ಹೋಲಿಕೆಯ ಜೊತೆಗೆ ಅಮೂರ್ತ ಸ್ವರೂಪ ಈ ಸರಣಿ ಚಿತ್ರಗಳಲ್ಲಿ ನೋಡಬಹುದಾಗಿದೆ. ಉಳಿದಂತೆ ಶಿಸ್ತುಬದ್ಧ ಸಂಯೋಜನೆ ಗಮನಾರ್ಹ.
ಬಹಳ ಮುಖ್ಯವಾಗಿ ಗಮನಕ್ಕೆ ಬರುವ ಅಂಶ ಅವರ ಬಣ್ಣಗಳ ಬಳಕೆ ಕ್ರಮ. ಅತೀ ಕಡಿಮೆ ಮತ್ತು ಶಾಂತ ವರ್ಣಗಳನ್ನು (sober colors) ಬಳಸಿ ಸಮತೋಲನ ಕಾಪಾಡಿಕೊಳ್ಳುತ್ತಾರೆ. ಎಲ್ಲಿಯೂ ಗಾಢ ವರ್ಣಕ್ಕೆ ಹೊರಳಿಕೊಳ್ಳಲು ಬಿಡುವುದಿಲ್ಲ. ಎಲ್ಲಿಯೂ ಅತಿರಂಜಿತ ಅನಿಸಿಕೊಳ್ಳದ ಹಾಗೆ ಜಾಗರೂಕತೆ ತೋರುತ್ತಾರೆ.
ಆದಿತ್ಯ ಅವರ ಈ ಹಿಂದಿನ ಸರಣಿ ಕಲಾಕೃತಿಗಳು ಬೇರೆ ಬೇರೆ ವಸ್ತು ವಿಷಯಗಳಿಂದ ಕೂಡಿದ್ದರೂ ಬಣ್ಣ ಬಳಕೆಯಲ್ಲಿ, ನೈಜ ಮೈವಳಿಕೆ ಕಾಪಾಡಿಕೊಳ್ಳುವ ಧೋರಣೆಯಲ್ಲಿ ಮೈಮರೆಯುವುದಿಲ್ಲ. ಈ ಹಿಂದಿನ ಕೆಲ ಸರಣಿ ಕಲಾಕೃತಿಗಳ ವಸ್ತು ವಿಷಯವನ್ನೂ ಆಧರಿಸಿ ಹೇಳುವುದಾದರೆ ಆದಿತ್ಯ ಅವರ ಆಯ್ಕೆಯೇ ವಿಭಿನ್ನ. ಕೆಲವೊಂದಿಷ್ಟು ಅಂಶಗಳಿಂದ ಆದಿತ್ಯ ಅವರ ಕಲಾಕೃತಿಗಳಲ್ಲಿ ಭಾರತೀಯ ಜಲವರ್ಣ ತೆಳುಬಳಕೆ ವಿಧಾನದ(wash methed) ಪ್ರಭಾವ ಇದ್ದು, ಅದನ್ನು ಬಹಳ ಲೀಲಾಜಾಲವಾಗಿ ನಿರ್ವಹಿಸುವ ತಂತ್ರ ಕರಗತ ಮಾಡಿಕೊಂಡಿದ್ದಾರೆ. ಬಹುಶಃ ಇಲ್ಲಿ ಹಿರಿಯ ಕಲಾವಿದರಾದ ಎಂ.ಎಸ್.ಮೂರ್ತಿ ಅವರ ಪ್ರಭಾವ ಕೂಡ ಇದ್ದಿರಬಹುದು.
ಆದಿತ್ಯ ಸದಾಶಿವ್ ಅವರು ಈ ತಲೆಮಾರಿನ ಭರವಸೆಯ ಕಲಾವಿದರಲ್ಲಿ ಒಬ್ಬರು ಅನ್ನೋದನ್ನು ನಿಸ್ಸಂಕೋಚವಾಗಿ ಹೇಳಬಹುದು. ಅವರಿಗೆ ಅಭಿನಂದನೆಗಳು 💐.
     

Share This

Leave a Reply

Your email address will not be published. Required fields are marked *