ರಾಜ್ಯದ ಹಿರಿಯ ಕಲಾವಿದರಾದ ಉಡುಪಿಯ ಕೆಮ್ಮಣ್ಣು ಲಕ್ಷ್ಮಣ್ ಭಟ್ (ಕೆ.ಎಲ್. ಭಟ್) ಅವರು ನಿಧನರಾಗಿದ್ದಾರೆ.
ಕೆ.ಎಲ್. ಭಟ್ ಅವರು ಮುಂಬೈನ ಜೆ.ಜೆ.ಸ್ಕೂಲ್ ಆಫ್ ಆರ್ಟ್ ನ ಪದವಿಧರರು. ತಮ್ಮ ಕಾಲೇಜು ಶಿಕ್ಷಣದ ಬಳಿಕ ಮುಂಬೈನ ಕಲಾನಿಕೇತನ ಆರ್ಟ್ ಇನ್ಸ್ಟಿಟ್ಯೂಟ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಉಡುಪಿಯ ಚಿತ್ರಕಲಾ ಮಂದಿರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 1999ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಭಟ್ ಅವರು ಇನ್ನೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಭಟ್ ಅವರ ಅಂತಿಮ ಸಂಸ್ಕಾರ ಗುರುವಾರ ಬೆಳಗ್ಗೆ ಗುಜ್ಜರ್ ಬೆಟ್ಟು ಅಮ್ಮನೂರ್ ಮಠದ ಸಮೀಪವಿರುವ ಸ್ವಗೃಹದಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಕೆ.ಎಲ್. ಭಟ್ ಅವರ ನಿಧನಕ್ಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಅವರು ಕಂಬನಿ ಮಿಡಿದಿದ್ದಾರೆ.
ಮಹಾಭಾರತ ನೋಡುತ್ತಿದ್ದರು!
ಕೊರೋನಾ ವೈರೆಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಕಳೆದ ಕೆಲವು ದಿನಗಳಿಂದಲೂ ರಾಮಾಯಣ, ಮಹಾಭಾರತ ಪ್ರಸಾರವಾಗುತ್ತಿದ್ದು, ಭಟ್ ಅವರು ಮಧ್ಯಾಹ್ನ ಅರಾಮವಾಗಿ ಮಹಾಭಾರತ ವೀಕ್ಷಿಸಿದ್ದಾರೆ. ಅದಾಗಿ ಕೆಲ ಹೊತ್ತಿನಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತರೊಬ್ಬರು ಹೇಳಿಕೊಂಡು ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.
‘ನಾಡಿನ ಕಲಾಕ್ಷೇತ್ರ ಬಡವಾಗಿದೆ‘
ಕೆ. ಎಲ್. ಭಟ್ ಅವರ ನಿಧನದಿಂದ ಕಲಾಕ್ಷೇತ್ರ ಬಡವಾಗಿದೆ. ಉಡುಪಿ ಕಲಾ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅವರು ದೊಡ್ಡ ಶಿಷ್ಯವೃಂದ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರನ್ನು ಕಳೆದುಕೊಂಡ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೂ, ಆಪ್ತರಿಗೂ, ಸ್ನೇಹಿತರಿಗೂ ಆ ದೇವರು ದಯಪಾಲಿಸಲಿ.
- ಮಹೇಂದ್ರ
ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು
‘ಸ್ನೇಹ ಜೀವಿ, ಮರೆಯಲಾಗದ ವ್ಯಕ್ತಿತ್ವ’
ಯಾವುದೇ ಜಾತಿ ಧರ್ಮವಿಲ್ಲದೇ ಎಲ್ಲರನ್ನು ಪ್ರೀತಿಸುವ ವ್ಯಕ್ತಿತ್ವ ಭಟ್ ಸರ್ ಅವರದ್ದಾಗಿತ್ತು. “ನನಗೆ ಹಣ ಮಾಡಬೇಕಿಲ್ಲ. ಕಲೆಯ ಜೊತೆ ಬದುಕು ಸಾಗಿಸುವಷ್ಟು ಇದ್ದರೆ ಸಾಕು‘ ಎಂದು ಹೇಳುವ ಭಟ್ ಸರ್ ಮಾತು ಅವರೆಷ್ಟು ಪರಿಶುದ್ಧ ಅನ್ನೋದನ್ನು ತೋರಿಸುತ್ತೆ. ನಾನು ಅವರ ವಿಧ್ಯಾರ್ಥಿಯಾಗಿಯೂ, ಅವರೊಂದಿಗೆ ಕಲಾಶಾಲೆಯ ಪ್ರಾಧ್ಯಾಪಕನಾಗಿಯೂ ಇದ್ದು ಅವರ ಪ್ರೀತಿಪಾತ್ರನಾಗಿದ್ದೇನೆ. ಹೀಗಾಗಿ ಅವರು ನನ್ನ ಮನಸ್ಸಿಂದ ಅಳಿಸಲಾಗದ ವ್ಯಕ್ತಿತ್ವ. ಬಿ.ಪಿ.ಬಾಯಾರಿ, ಜಿ. ಎಸ್. ಶೆಣೈ ಅವರನಂತಹ ಮೇರು ಕಲಾವಿದರ ಜೊತೆ ಒಡನಾಟವಿಟ್ಟುಕೊಂಡು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿದ, ಆಪ್ತವಾಗಿ ಕಂಡ ಗುರುಗಳು ಹಾಗೂ ಒಬ್ಬ ಒಳ್ಳೆಯ ಹಿರಿಯ ಸ್ನೇಹಿತರಾಗಿದ್ದರು. ಮೊನ್ನೆ ಮೊನ್ನೆಯ ತನಕ ಬ್ರಷ್ ಹಿಡಿದು ಕಲಾಕೃತಿ ರಚಿಸಿದ್ದಾರೆ. ಅನಾರೋಗ್ಯದ ನಡುವೆಯೂ ಅವರ ಉತ್ಸಾಹ ನಿಜಕ್ಕೂ ಸೋಜಿಗ ಅನಿಸುದ್ದುಂಟು. ಕೆ.ಕೆ.ಹೆಬ್ಬಾರ್ ಅವರಂತೆ ರೇಖಾ ಚಿತ್ರ ರಚಿಸುವ ಅವರು ಅನೇಕ ಸಂದರ್ಭದಲ್ಲಿ ಕಲಾಕೃತಿ ರಚನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಗುರುವಾಗಿಯೂ, ಒಡನಾಟಿಯಾಗಿಯೂ ಅವರನ್ನು ಪಡೆದ ನಾನು ಹಾಗೂ ನನ್ನತಹ ಇನ್ನು ಅನೇಕರು ಭಾಗ್ಯವಂತರು. ಅವರ ಮರಣದಿಂದ ದುಃವಾಗಿದೆ.
- ರಾಘವೇಂದ್ರ.ಕೆ.ಅಮೀನ್
ಕಲಾವಿದರು, ಪ್ರಾಧ್ಯಾಪಕರು