• ರಿಯಲಿಸಂ ಸಿದ್ಧಾಂತದ ಹತ್ತಿರದ ಹೆಜ್ಜೆ
• ಚಿತ್ರದುರ್ಗದ ಕಲಾವಿದನ ಕಲಾ’ಸ್ವರ್ಗ’
ಕಲಾ ಸಿದ್ಧಾಂತಗಳ ಪುಟಗಳನ್ನು ತೆರೆಯುತ್ತಾ ಹೋದಾಗಲೆಲ್ಲ ಅದೆಷ್ಟೋ ವಿಚಾರಗಳು ಅತಿರೇಕವಾಗಿಯೂ, ಇನ್ನೆಷ್ಟೋ ವಿಚಾರಗಳು ಸರಿಯಾದುದೇ, ತಪ್ಪೇನು ಅನಿಸುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ ಸ್ವಾರ್ಥವೇ ಸಮರ್ಥನೆಯಾಗಿಯೂ ಕಾಣಿಸುವುದುಂಟು. ಎಲ್ಲವೂ ಆಯಾ ಕಾಲಘಟ್ಟದ ರಾಜಕೀಯ, ಸಾಮಾಜಿಕ ಅಸ್ಥಿತ್ವಕ್ಕೆ ಅನುಗುಣವಾಗಿ ಘಟಿಸಿವೆ. ಒಂದು ಪಂಗಡದ ವಾದಕ್ಕೆ ಪ್ರತಿವಾದವಾಗಿಯೂ, ನಡೆ-ನುಡಿ, ಧೋರಣೆ ವಿರೋಧಿಸಲಿಕ್ಕಾಗಿಯೂ ಅಥವಾ ಟೀಕಿಸಿ ಸಂಘರ್ಷಕ್ಕಿಳಿಯಲೆಂದೇ ಆರಂಭವಾಯಿತೇನೊ ಎನ್ನುವಂತಿವೆ. ಕೆಲವೊಮ್ಮೆ ಸ್ಪಷ್ಟತೆ ಇಲ್ಲದ ಚಳವಳಿ ಅನಿಸುವುದೂ ಉಂಟು. ಕಲೆಯ ಸಂದರ್ಭದ ಅನೇಕ ಸಿದ್ಧಾಂತಗಳೆಲ್ಲವೂ ಈಗ ಇತಿಹಾಸ.
ವಾಸ್ತವಿಕವಾದವೂ (realism) ಕಲಾಸಿದ್ಧಾಂತದ ಒಂದು ಪ್ರಬಲ ಚಳವಳಿ. ರೊಮ್ಯಾಂಟಿಸಿಸಂ (romanticism)ಗೆ ಸವಾಲೆಸೆಯಲೆಂದೇ ಆರಂಭವಾದ ಕಲಾ ಸಿದ್ಧಾಂತವಿದು. ನೈಜವಾಗಿ ಚಿತ್ರಿಸುವುದು ಈ ಸಿದ್ದಾಂತದಲ್ಲಿ ನೋಡಬಹುದಾದ ವಿಶೇಷತೆ. ಕೃತಕತೆಯಿಂದ ದೂರ ಉಳಿಯಬೇಕು, ವಿಲಕ್ಷಣ, ಅಲೌಕಿಕ ಸಂಗತಿಗಳನ್ನು ದೂರ ಇರಿಸಬೇಕೆನ್ನುವುದೇ ಸಿದ್ದಾಂತ. ೧೯ನೇ ಶತಮಾನದ ಮಧ್ಯಭಾಗದಲ್ಲಿ ಪ್ರಮುಖ್ಯತೆ ಪಡೆದುಕೊಳ್ಳುವ ಈ ಸಿದ್ಧಾಂತದಲ್ಲಿ ಸತ್ಯದ ಪರವಾದ ಧ್ವನಿ ಎನ್ನುವಂತೆ ಪ್ರಚೋದಿಸಲಾಗುತ್ತದೆ. ಅದರರ್ಥ ಇದ್ದುದನ್ನು ಇದ್ದಂತೆ ಚಿತ್ರಿಸುವುದೇ ಈ ಸಿದ್ಧಾಂತವೆಂದು ಬಿಂಬಿಸಲಾಗಿದೆ. ತಮ್ಮ ಸುತ್ತಲಿನ ಜನಜೀವನ, ಗ್ರಾಮೀಣ ಜೀವನ ಮತ್ತು ಭೂದೃಶ್ಯಗಳನ್ನು ಕಲಾಕೃತಿಗಳ ರಚನೆಗೆ ವಸ್ತುವಾಗಿಸಿಕೊಂಡರು. ನೈಜತೆಯ ತತ್ವ ಅಳವಡಿಸಿಕೊಂಡು ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಈ ಸಿದ್ಧಾಂತದ ಕಲಾವಿದರು ಕೇವಲ ಪಾಶ್ಚಿಮಾತ್ಯ ಕಲಾ ವಳವಳಿಯಲ್ಲಷ್ಟೇ ಕಾಣಿಸಿಕೊಂಡವರಲ್ಲ. ಭಾರತೀಯ ಕಲಾ ಇತಿಹಾಸದಲ್ಲಿಯೂ ಅನೇಕರು ಜನಮನ್ನಣೆ ಪಡೆದುಕೊಂಡಿರುವುದನ್ನು ಗುರುತಿಸಬಹುದಾಗಿದೆ. ವಾಸ್ತವಿಕವಾದದ ಧೋರಣೆ ಭಾರತೀಯ ಕಲಾಕ್ಷೇತ್ರದಲ್ಲಿ ಇಂದಿಗೂ ಉಳಿದುಕೊಂಡಿದೆ. ಅನೇಕ ಕಲಾವಿದರು ಮುಂದುವರಿಸಿಕೊಂಡು ಬಂದಿದ್ದಾರೆ.
| ‘ರಾಜೀವ’ ಸೌಂದರ್ಯ ಲಹರಿ |
ವಾಸ್ತವಿಕತೆ ತಳಹದಿಯ ಮೇಲೆ ಅಪಾರ ನಂಬಿಕೆ ಇಟ್ಟು, ಆಧುನಿಕ ಅಥವಾ ಸಮಕಾಲೀನ ಕಲಾ ಚಳವಳಿ, ಪ್ರಭಾವದ ನಡುವೆ ಕಲಾಕೃತಿ ರಚಿಸಿಕೊಂಡು ಬಂದಿರುವ ಯುವ ಕಲಾವಿದರೂ ನಮ್ಮ ಸುತ್ತ ಅನೇಕರಿದ್ದಾರೆ. ಚಿತ್ರದುರ್ಗದ ಡಾ.ರಾಜೀವ ಎಂ.ವೈ. ಕೂಡ ಒಬ್ಬರು. ರಾಜೀವ್ ಅವರ ಕಲಾಕೃತಿಗಳ “ವ್ಯಾಸವರ್ಣ” ಏಕವ್ಯಕ್ತಿ ಕಲಾ ಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ನಾಟ್ಯದ ನವರಸಗಳ ವಿಭಿನ್ನ ಭಂಗಿಗಳನ್ನು ಮುಖ್ಯ ವಸ್ತು ವಿಷಯವಾಗಿಸಿಕೊಂಡು ರಚಿಸಲಾದ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ತೈಲವರ್ಣವನ್ನು ಸಲೀಸಾಗಿ ಬಳಸಿಕೊಳ್ಳುವ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಅವರ ಬಹುತೇಕ ಎಲ್ಲಾ ಕಲಾಕೃತಿಗಳಲ್ಲಿಯೂ ಪ್ರಾಚೀನ ದೇವಾಲಯಗಳ ಸಂಸ್ಕೃತಿ ಪ್ರತಿಬಿಂಬಿಸಿವೆ. ಸೌಂದರ್ಯ ಉಪಾಸನೆಯ ಪ್ರಭಾವವಿದೆ.
ಭರತನಾಟ್ಯ, ಕುಚಿಪುಡಿಯಂತಹ ಶಾಸ್ತ್ರೀಯ ನೃತ್ಯಗಳ ಪ್ರಭಾವ ಹೆಚ್ಚಿರುವುದನ್ನು ಗಮನಿಸಬಹುದಾಗಿದೆ. ಇದಲ್ಲದೇ ಬೆರಳೆಣಿಕೆಯ ಕಲಾಕೃತಿಗಳಲ್ಲಿ ಈ ಹಿಂದೆ ಮಹಾರಾಷ್ಟ್ರ ಭಾಗದ ಕಲಾವಿದರಲ್ಲಿ ಕಾಣಬಹುದಾಗಿದ್ದ ಕ್ಯಾಲೆಂಡರ್ ಶೈಲಿ ಕಂಡುಬರುತ್ತದೆ. ಮುಖ್ಯ ವಿಷಯಕ್ಕೆ ಪೂರಕವಾಗಿ ದೇವಾಲಯಗಳಲ್ಲಿನ ಶಿಲ್ಪಗಳನ್ನು ಅಸ್ಪಷ್ಟವೆನಿಸುವಂತೆ ದುಡಿಸಿಕೊಂಡಿದ್ದಾರೆ. ನರ್ತಕಿಯರ ಹೊಳಪಿನ ಅಥವಾ ಮಿರುಗುವ ಉಡುಪುಗಳನ್ನು, ಒಡವೆಗಳನ್ನು ಬಹಳ ನೈಜವಾಗಿ ಚಿತ್ರಿಸುವ ಪ್ರಯತ್ನ ನಡೆಸಿದ್ದಾರೆ. ಸಹಜವಾಗಿಯೇ ರಿಯಲಿಸ್ಟ್ ಕಲಾವಿದರು ಪ್ರಮುಖ್ಯತೆ ನೀಡುವ ತಾಂತ್ರಿಕ ಕೌಶಲ್ಯವನ್ನು ರಾಜೀವ್ ಕಲಾಕೃತಿಗಳಲ್ಲಿಯೂ ನೋಡಲು ಸಾಧ್ಯವಿದೆ. ರಿಯಲಿಸ್ಟ್ ಕಲಾಕೃತಿಗಳನ್ನು ಇಷ್ಟಪಡುವ ಕಲಾಸಕ್ತರಿಗೆ ಖಂಡಿತವಾಗಿ ಈ ಕಲಾಪ್ರದರ್ಶನ ಆಪ್ತವೆನಿಸಬಹುದು.
ಫ್ರೆಂಡ್ಸ್, ಈ ಕಲಾಪ್ರದರ್ಶನ ಆಗಸ್ಟ್ 11ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ವೀಕ್ಷಿಸಿ ಬನ್ನಿ.