” INKESTHETICS ” ಬಿದರೆ ರೇಖೆ ಬಿಂದಾಸ್

Share This

” Nature itself is a feel-good space deeply rooted in human consciousness. It is a source of inspiration for shape and color, a stimulus for our imagination, and an inexhaustible source of ideas for the visual translation of human sensibilities. The subject of Nature intensifies the perception of elemental forces, of depth and expanse, of light and air. Pictures, objects and spaces that take up natural elements gain in emotional range, poetry and humanity. “
ಜರ್ಮನಿಯ ಹ್ಯಾಮ್ ಬರ್ಗ್ ಮೂಲದ ಅನುಭವಿ ಕಲಾವಿದ ಟಾಮ್ ಲೀಫರ್ (Tom Leifer) ಅವರ ಬಹಳ ಅರ್ಥಪೂರ್ಣವೆನಿಸುವ ಹೇಳಿಕೆ ಇದು.
ಮನುಷ್ಯನ ಪರಿವೆಯಲ್ಲೇ ಪ್ರಕೃತಿ ಬೇರೂರಿಕೊಂಡಿರುತ್ತದೆ. ಭಾವನೆಗಳನ್ನು ವ್ಯಕ್ತಪಡಿಸಲು ಪ್ರಕೃತಿಯೇ ಸೂಕ್ತ ತಾಣ. ಆಕಾರ ಮತ್ತು ಬಣ್ಣಗಳಿಗೆ ಸ್ಫೂರ್ತಿಯ ಸೆಲೆ ಪ್ರಕೃತಿ. ಮಾನವ ಕಲ್ಪನೆಗಳಿಗೆ ಉತ್ತೇಜಕವೂ ಹೌದು. ಸಂವೇದನೆಯ ದೃಶ್ಯಾನುವಾದಕ್ಕೆ ಅಕ್ಷಯ ಪಾತ್ರೆಯಂತಿದೆ ಈ ಪ್ರಕೃತಿ. ಧಾತುರೂಪದ ಶಕ್ತಿಗಳು, ಆಳ ಮತ್ತು ವಿಸ್ತಾರತೆ, ಗಾಳಿ-ಬೆಳಕು ಗ್ರಹಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ ಎನ್ನುತ್ತಾರೆ.
ಟಾಮ್ ಲೀಫರ್ ಹೇಳಿಕೆ ನೆನಪಿಸಿಕೊಳ್ಳುವಂತೆ ಮಾಡಿದ್ದು ಕಲಾವಿದ ಶ್ರೀನಾಥ್ ಬಿದರೆ ಅವರ ” INKESTHETICS – Stoicism of life in monochrome ” ಕಲಾಪ್ರದರ್ಶನ. ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (Indian Institute of World Culture) ಗ್ಯಾಲರಿಯಲ್ಲಿ 100ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಪ್ರದರ್ಶಿತ ಎಲ್ಲಾ ಕಲಾಕೃತಿಗಳು ಏಕವರ್ಣ ರೇಖಾಚಿತ್ರಗಳು. ತಮ್ಮ ಸುತ್ತಲಿನ ಆಗು-ಹೋಗುಗಳನ್ನು ಸೂಕ್ಷ್ಮವಾಗಿ, ಅಮೂರ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಕೆಲವು ಕಲಾಕೃತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಅಮೂರ್ತ ನೆಲೆಯಲ್ಲಿವೆ. ಬಾಹ್ಯನೋಟಕ್ಕೆ ಏಕತಾನತೆ ಎದುರಾಗುತ್ತಿದೆಯೆನೋ ಅನಿಸಿದರೂ, ಪ್ರತಿಯೊಂದು ಕಲಾಕೃತಿಯಲ್ಲಿ ಆಯ್ದುಕೊಂಡಿರುವ ವಸ್ತು ವಿಷಯ ನೋಡುಗನ ಸೆಳೆತಕ್ಕೆ ಕಾರಣವಾಗಬಲ್ಲವು. ಭಾವಾಭಿವ್ಯಕ್ತಿಯೂ ಒಂದರಿಂದೊಂದರಲ್ಲಿ ಭಿನ್ನ ವಿಭಿನ್ನ. ನೈಸರ್ಗಿಕ ಅಂಶಗಳನ್ನು (elements) ತಮ್ಮ ಶೈಲಿಗೆ ಹೊಂದುವಂತೆ ಜಾಣತನದಿಂದ ದುಡಿಸಿಕೊಂಡಿದ್ದಾರೆ. ರೇಖೆಗಳಲ್ಲಿನ ತೀವ್ರತೆ (force), ಲಯ (ridam) ಕಲಾಕೃತಿಗೆ ಶಕ್ತಿಯಾಗಿದೆ. ಸಂಯೋಜನೆಯ(composition) ದೃಷ್ಟಿಯಿಂದಲೂ ಅಳೆದು ತೂಗಿ ರೇಖೆಗಳನ್ನು ನಿಯಂತ್ರಿಸಿದ್ದು ಕಂಡುಬರುತ್ತದೆ. ಕೆಲವೇ ಕೆಲವು ಕಲಾಕೃತಿಗಳಲ್ಲಿ ತಾವೇ ತಮಗೆ ಹಾಕಿಕೊಳ್ಳುವ ಚೌಕಟ್ಟಿನಾಚೆ ಹೋಗುವ ಪ್ರಯತ್ನವನ್ನೂ ಮಾಡಿದ್ದಾರೆ ಅನಿಸುವಂತಿದೆ.
    
     
ರೇಖಾ ಪ್ರಧಾನ ಕಲಾಕೃತಿಗಳ ರಚನಾ ಪ್ರಕ್ರಿಯೆ ವಿಸ್ತರಿಸುವ ವೇಗದಲ್ಲಿ ಕಲಾವಿದ ಕೂದಲೆಳೆಯಲ್ಲಿ ರೇಖೆಗಳ ಮೇಲಿನ ಸ್ಥಿಮಿತ ಛೇದಿಸುವ ಪ್ರಯತ್ನಕ್ಕೆ ಇಳಿದ ಉದಾಹರಣೆಗಳು ಕಲಾಕ್ಷೇತ್ರದಲ್ಲಿ ಸಾಕಷ್ಟು ಸಿಗುತ್ತವೆ. ಅದು ಪ್ರಾಯೋಗಿಕ ಪ್ರಕ್ರಿಯೆಯೂ ಆಗಿರಬಹುದು ಅಥವಾ ಅರಿವಿಗೆ ಬಾರದೇ ಆದ ಬದಲಾವಣೆಯೂ ಆಗಿರಬಹುದು.
ಶ್ರೀನಾಥ್ ಬಿದರೆ ಅವರ ಕೆಲವು ಕಲಾಕೃತಿಗಳು ಇಂತಹದ್ದೊಂದು ಸಂದೇಹವನ್ನು ಹುಟ್ಟುಹಾಕುತ್ತವೆ. ಉದ್ದೇಶಪೂರ್ವಕ ಪ್ರಯತ್ನವಾಗಿರಲಿ ಅಥವಾ ಪ್ರಯೋಗಾತ್ಮಕ(experimental)ವಾಗಿರಲಿ, ಆ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೊ. ಹಾಗಂತ, ಪ್ರದರ್ಶಿಸುವುದೇ ತಪ್ಪೆನ್ನುವ ಅರ್ಥವಲ್ಲ. ಇದರ ಪರಿಣಾಮ ಒಟ್ಟಾರೆ ಪ್ರದರ್ಶನದ ಮೇಲಾಗಿರುತ್ತದೆ ಎಂಬ ಕಳಕಳಿಯಷ್ಟೆ. ಮೌಲ್ಯಾಧಾರಿತ, ಗುಣಮಟ್ಟದ ಕಲಾಕೃತಿಗಳು ಕಳೆದುಹೋಗಬಹುದಾದ ಅಪಾಯವಿರುತ್ತದೆ. ಈ ವಿಚಾರದಲ್ಲಿ ನೋಡುಗನ ದೃಷ್ಟಿಕೋನವೂ ಬೇರೆಯದೇ ಆಗಿರುತ್ತದೆ ಎನ್ನುವುದನ್ನೂ ಒಪ್ಪಿಯೇ ದಾಖಲಿಸಬೇಕೆನಿಸಿತು.
ಇಡೀ ಪ್ರದರ್ಶನದ ಕುರಿತು ಹೇಳಬಹುದಾದರೆ ಒಂದೊಳ್ಳೆಯ ಕಲಾಪ್ರದರ್ಶನ. ಜನವರಿ 19ರಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

Share This

Leave a Reply

Your email address will not be published. Required fields are marked *