– BSVAE ವಾರ್ಷಿಕ ಕಲಾಪ್ರದರ್ಶನ ಗಮನಾರ್ಹ
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆಯುತ್ತಿರುವ ‘CATALYSIS‘ ಸಮೂಹ ಕಲಾಪ್ರದರ್ಶನ ಒಂದಿಷ್ಟು ಉತ್ತಮ ಕಲಾಕೃತಿಗಳಿಂದ ಗಮನ ಸೆಳೆದರೆ, ಕೆಲವೊಂದಿಷ್ಟು ಅಜಾರುಕತೆಗಳಿಂದಲೊ, ಒತ್ತಡದಿಂದಲೊ ಅಥವಾ ಗೊಂದಲದಿಂದಾಗಿಯೊ ಸಹಜವಾಗಿಯೆ ಪ್ರಶ್ನಾರ್ಹವೆನಿಸುತ್ತವೆ. ಬೆಂಗಳೂರು ಸ್ಕೂಲ್ ಆಫ್ ವಿಷ್ಯುವಲ್ ಆರ್ಟ್ಸ್ (BSVAE) ವಿದ್ಯಾರ್ಥಿಗಳ ವಾರ್ಷಿಕ ಕಲಾಪ್ರದರ್ಶನ ಇದಾಗಿದ್ದರಿಂದ ತುಸು ಮಹತ್ವದಿಂದ ನೋಡಬೇಕೆನಿಸಿತು. ಭವಿಷ್ಯದ ಕಲಾವಿದರಾಗಿದ್ದರಿಂದ ಅವರ ಈ ಹಂತದ ಕಲಾಕೃತಿಗಳು ಮಹತ್ವ ಪಡೆದುಕೊಳ್ಳುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ಕಲಾಶಿಕ್ಷಣದ ಒಂದಿಷ್ಟು ಸವಾಲುಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ವೀಕ್ಷಿಸುವಾಗ ಈ ಕಾಲಘಟ್ಟದಲ್ಲಿ ಹಿರಿಯ ವಿದ್ಯಾರ್ಥಿಗಳು ದೃಶ್ಯ ಕಲೆಯ ಕುರಿತಾಗಿ ಯಾವ ಅಭಿಪ್ರಾಯ ಹೊಂದಿದ್ದಾರೆ, ಯಾವ ಪ್ರಯತ್ನದಲ್ಲಿದ್ದಾರೆ, ಯಾವ ಕಲಾಪ್ರಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಆಸಕ್ತಿದಾಯಕ ವಿಚಾರ ಕೂಡ. ವೃತ್ತಿಪರ ಕಲಾವಿದರಾಗಿ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಳ್ಳಲು ಈ ಪ್ರದರ್ಶನ ಪ್ರತಿಯೊಬ್ಬ ವಿದ್ಯಾರ್ಥಿಗೆ ದಿಕ್ಸೂಚಿಯಾಗಲಿದೆ. ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದ್ದರಿಂದ ವಿದ್ಯಾರ್ಥಿಗಳು ಪ್ರಮುಖ ವೇದಿಕೆಯಾಗಿಯೇ ಪರಿಗಣಿಸಬೇಕಾಗುತ್ತದೆ.
ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಪ್ರತಿಷ್ಠಾಪನಾ (Installation) ಮತ್ತು ಪರಿಕಲ್ಪನಾ (Conceptual) ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಇಂತಹ ಆಲೋಚನಾ ಪ್ರಕ್ರಿಯೆ (ಣhoughಣ ಠಿಡಿoಛಿess) ಈ ಹಂತದಲ್ಲಿಯೇ ಬೆಳೆಯಲು ಸಾಧ್ಯವಾಗುತ್ತಿರುವ ಈ ಸಂದರ್ಭದಲ್ಲಿ ಭವಿಷ್ಯದ ಕಲಾವಿದರನ್ನು ಈಗಲೇ ಶಿಸ್ತಿನ ಪ್ರಸ್ತುತಿಗೆ (presentation) ಅಣಿಗೊಳಿಸುವುದು ಮುಖ್ಯವಾಗುತ್ತದೆ. ಶಿಸ್ತಿನಿಂದ ಕೂಡಿದ ಪ್ರಸ್ತುತಿಯೂ ಅಷ್ಟೇ ಮುಖ್ಯವಾಗುತ್ತದೆ.
‘Art is a line around your thoughts’ ಎನ್ನುತ್ತಾರೆ ವಿಯೆನ್ನಾದ ಖ್ಯಾತ ಕಲಾವಿದ ಗುಸ್ತಾವ್ ಕ್ಲಿಮ್ಟ್ (Gustav Klimt). ಅಂದರೆ ಕಲಾಕೃತಿ, ರೇಖೆ ಮತ್ತು ಆಲೋಚನೆಗಳು ಎಷ್ಟು ಮುಖ್ಯವಾಗುತ್ತವೆ ಎನ್ನುವುದನ್ನು ಕ್ಲಿಮ್ಟ್ ಅವರ ಈ ಮಾತಿನಿಂದ ಅರಿಯಬೇಕಿದೆ. ಈ ಇಡೀ ಪ್ರದರ್ಶನದಲ್ಲಿ ಸಾಕಷ್ಟು ಉತ್ತಮ ಕಲಾಕೃತಿಗಳಿವೆ. ಆದರೆ, ಒಂದು ಕಲಾಕೃತಿಯಿಂದ ಇನ್ನೊಂದು ಕಲಾಕೃತಿಯನ್ನು ನೋಡುವಾಗ ಇರಬೇಕಾದ breathing space ಬಗ್ಗೆ ಹೆಚ್ಚಿನ ಗಮನ ಕೊಡಬಹುದಿತ್ತು. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳೂ ಇತ್ತು. ಇದು ಸಾಧ್ಯವಾದಾಗ ಉತ್ತಮ ಕಲಾಕೃತಿಗಳಿಗೆ ಸಿಗಬೇಕಾದ ನ್ಯಾಯವೂ ಸಿಗಲಿದೆ. ಕಲಾಪ್ರದರ್ಶನದ ಮೌಲ್ಯವೂ ಹೆಚ್ಚಲಿದೆ.
‘CATALYSIS’ ಕಲಾಪ್ರದರ್ಶನ ಅಕ್ಟೋಬರ್ 12ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.