ಸಾಹಿತ್ಯ ಭಾವಾಕೃತಿ; ಕ್ಯಾಲಿಗ್ರಫಿ ಕಲಾಕೃತಿ!

Share This

  • ಚೌಕಟ್ಟಿನೊಳಗಿನ ಅಕ್ಷರಗಳ ಕಲಾಪ್ರದರ್ಶನ

ಲಿಪಿ ಅಥವಾ ಅಕ್ಷರಗಳನ್ನು ವರ್ಣಚಿತ್ರ ಅಥವಾ ಶಿಲ್ಪಗಳಲ್ಲಿ ಬಳಸಿಕೊಂಡಿರುವ ಉದಾಹರಣೆ ನಿನ್ನೆ ಮೊನ್ನೆಯದಲ್ಲ. ನೂರಾರು ವರ್ಷಗಳ ಹಿಂದೆಯೂ ಬಳಕೆ ಆಗಿರುವ ಬಗ್ಗೆ ಅನೇಕ ಸಾಕ್ಷಿಗಳು ಸಿಗುತ್ತವೆ. ಬಹಳ ಆಸಕ್ತಿದಾಯಕ ಇತಿಹಾಸವಿದೆ. ಅನೇಕ ಭಾರತೀಯ ಭಾಷೆಗಳ ಲಿಪಿ ವಿನ್ಯಾಸಗಳೂ ವರ್ಣಚಿತ್ರ ಮತ್ತು ಶಿಲ್ಪಗಳ ರಚನೆಯಲ್ಲಿ ಬಳಕೆಯಾಗಿವೆ. ಇಂದು ನಮಗೆ ಲಭ್ಯವಾಗುತ್ತಿರುವ ಸಾವಿರಾರು ವರ್ಷಗಳ ಹಿಂದಿನ ಶಾಸನಗಳನ್ನು ಗಮನಿಸಿದಾಗ ಲಿಪಿ ಹೇಗೆ ದೃಶ್ಯಕ್ಕೆ ಅಗತ್ಯ ವಿಷಯವಾಗಿ (subject), ಅಂಶವಾಗಿ (eliment) ಬಳಕೆಯಾಗಿವೆ ಎನ್ನುವುದು ಗೋಚರಿಸುತ್ತವೆ. ಅಂದಿನಿಂದ ಇಂದಿನವರೆಗೂ ಲಿಪಿ ವರ್ಣಚಿತ್ರ ಮತ್ತು ಶಿಲ್ಪಗಳಲ್ಲಿ ಒಂದು ಎಲಿಮೆಂಟ್ ಆಗಿಯೇ ಬಳಕೆಯಾಗಿವೆ. ಸಮಕಾಲೀನ ಸಂದರ್ಭದಲ್ಲಿಯೂ ವಿಭಿನ್ನ ಶೈಲಿಗಳಲ್ಲಿ ಬಳಕೆಯಾಗುತ್ತಿವೆ. ಕಲಾವಿದರ ಹೊಸ ಹೊಸ ಅನ್ವೇಷಣೆಗಳಿಗೆ ಲಿಪಿ ಒಂದು ಗಂಭೀರ ಅಂಶವಾಗಿ ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ಕ್ಯಾಲಿಗ್ರಫಿ ಹೆಸರಲ್ಲಿ ಈ ಎಲ್ಲಾ ಪ್ರಯತ್ನಗಳು ನಡೆದಿವೆ. ದೃಶ್ಯಕಲೆಯ ಭಾಗವಾಗಿಯೇ ಬೆಳೆದುಬಂದಿದೆ.

ಇಂತಹದ್ದೊಂದು ಪ್ರಯತ್ನದ ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1,2,3 ಮತ್ತು 4ರಲ್ಲಿ ನಡೆಯುತ್ತಿದೆ. ‘ಅಕ್ಷರ ಸಿಂಗಾರೋತ್ಸವ’ ಶೀರ್ಷಿಕೆಯ ಈ ಸಮೂಹ ಪ್ರದರ್ಶನದಲ್ಲಿ ಅನಿಮಿಷ ನಾಗನೂರು, ಟಿ.ಬಿ.ಕೋಡಿಹಳ್ಳಿ, ಟಿ.ಡಿ.ಸುರೇಶ್ ತರೀಕೆರೆ, ಜಿ.ಹರಿಕುಮಾರ್, ಮೋಹನ್ ಕುಮಾರ್ ಈರಪ್ಪ ಮತ್ತು ಸುರೇಶ್ ಎಸ್. ವಾಘ್ಮೋರೆ ಅವರ ಕೈಚಳಕವಿದೆ.

ಗ್ಯಾಲರಿ 1ರಲ್ಲಿ ಪ್ರದರ್ಶಿಸಲ್ಪಟ್ಟ ಕಲಾವಿದ ಸುರೇಶ್ ತರೀಕೆರೆ ಅವರ ಗ್ರಾಫೈಟ್ ಭಾವಚಿತ್ರಗಳು ಗಮನ ಸೆಳೆಯುತ್ತವೆ. ತುಸು ಕಮರ್ಷಿಯಲ್ ಟಚ್, ತುಸು ಅಕಾಡೆಮಿಕ್ ಅಭ್ಯಾಸದ ಸಮ್ಮಿಲನ ಈ ಕಲಾಕೃತಿಗಳಲ್ಲಿವೆ. ಜ್ಞಾನಪೀಠ ಪುರಸ್ಕೃತರನ್ನು ವಿಭಿನ್ನ ಪ್ರಸ್ತುತಿಯೊಂದಿಗೆ ಕನ್ನಡಿಗ ಕಲಾಭಿಮಾನಿಗಳ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಎಲ್ಲಾ ಕಲಾಕೃತಿಗಳಲ್ಲಿ ಕ್ಯಾಲಿಗ್ರಫಿಯ ಬಹುಮುಖಗಳನ್ನು ಕಾಣಬಹುದು. ಮೂರ್ತವಾಗಿಯೂ, ಅಮೂರ್ತವಾಗಿಯೂ ಅಕ್ಷರಗಳು ಹರಿದಾಡಿವೆ. ಲಯಬದ್ಧವಾದ ಓಟವಿದೆ. ರೇಖೆಯ ಬಲವಿದೆ. ಬಲಹೀನ ವಕ್ರ ರೇಖೆಗಳೂ ಇವೆ. ಆದರೆ, ಎಲ್ಲಿಯೂ ನೋಟಕ್ಕೆ ಬಾಧಿಸದ ರೀತಿಯಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಿದ್ದಾರೆ. ಕೆಲವು ಪ್ರಯೋಗಾತ್ಮಕ ಪ್ರಯತ್ನಗಳು ನುಡಿಮುತ್ತಿಗಾಗಿಯೇ ಎನ್ನುವಂತಿವೆ. ಬಹುಶಃ ಅವು ಪ್ರದರ್ಶನದ ಒಳಪ್ರವೇಶಿಸದೇ ಇದ್ದಿದ್ದರೆ ಇನ್ನಷ್ಟು ಪ್ರಭಾವಶಾಲಿ ಅನಿಸುತ್ತಿದ್ದವೇನೊ.

ಲಿಪಿ ಅಥವಾ ವರ್ಣಮಾಲೆಯ ಅಕ್ಷರಗಳು ಕಲಾಕೃತಿಯಾಗಿಯೂ, ಕಲಾಕೃತಿಗಳ ಒಳಗೆ ಅಕ್ಷರಗಳ ಜೋಡಣೆ ಒಟ್ಟಾರೆ ಪ್ರದರ್ಶನದ ವಿಶೇಷ. ಅಕ್ಷರಗಳು ಒಂದೇ ಆದರೂ ಕಲಾವಿದರು ವಿಭಿನ್ನವಾಗಿ ಬಳಸಿಕೊಂಡಿದ್ದಾರೆ. ಈ ಪ್ರಯತ್ನ ಇನ್ನಷ್ಟು ಹೊಸತುಗಳೊಂದಿಗೆ, ಮಗದಷ್ಟು ಸಾಧ್ಯತೆಗಳೊಂದಿಗೆ ಮುಂದುವರಿಯಲಿ. ಶುಭವಾಗಲಿ.

ಸ್ನೇಹಿತರೆ, ಕಲಾಪ್ರದರ್ಶನ ನವೆಂಬರ್ 5ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಭೇಟಿ ನೀಡಿ. ಕಲಾವಿದ ಮಿತ್ರರಿಗೆ ಅಭಿನಂದನೆಗಳು 💐.

 

 

 


Share This

Leave a Reply

Your email address will not be published. Required fields are marked *