ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ‘ಅನನ್ಯ’ ಆಯೋಜನೆಯ “ನೃತ್ಯ ನೀರಾಜನ” ನನ್ಯೋತ್ಸವ ಇಂದಿನಿಂದ (ಡಿಸೆಂಬರ್ ೧೩ರಿಂದ) ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ನೃತ್ಯೋತ್ಸವದಲ್ಲಿ ಖ್ಯಾತ ನರ್ತಕ/ನರ್ತಕಿಯರು ಪ್ರದರ್ಶನ ನೀಡಲಿದ್ದಾರೆ. ಮಲ್ಲೇಶ್ವರಂ ಸೇವಾಸದನ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಡಿಸೆಂಬರ್ 13, ಶುಕ್ರವಾರ ಸಂಜೆ ನಾದಂ ಸಮೂಹ ವೃತ್ತಿಪರ ಕಲಾವಿದರಿಂದ ಕಥಕ್ ಪ್ರದರ್ಶನ ನಡೆಯಲಿದೆ. ಬಳಿಕ ಶಿವಮೋಹನಂ ಸಮೂಹ ಕಲಾವಿದರಿಂದ ಕೂಚಿಪುಡಿ ನೃತ್ಯ ಪ್ರದರ್ಶನ ನಡೆಯಲಿದೆ. ನೃತ್ಯ ಚೂಡಾಮಣಿ ಗುರು ವೈಜಯಂತಿ ಕಾಶಿ, ನೃತ್ಯ ಇತಿಹಾಸ ತಜ್ಞ ಆಶಿಶ್ ಮೋಹನ್ ಖಾಕರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 14, ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಬಳಿಕ ಭರತನಾಟ್ಯ ಯುಗಳ ಗೀತಾ ಪ್ರದರ್ಶನ ನಡೆಯಲಿದೆ. ರಸಿಕಾ ಆರ್ಟ್ಸ್ ಫೌಂಡೇಶನ್ನ ನೃತ್ಯ ಗುರುಗಳಾದ ಕಿರಣ್ ಸುಬ್ರಹ್ಮಣ್ಯಂ ಮತ್ತು ಸಂಧ್ಯಾ ಕಿರಣ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 15, ಭಾನುವಾರ ಖ್ಯಾತ ನರ್ತಕಿ ಗುರು ಡಾ. ಅರುಣಾ ಮೊಹಂತಿ ಒಡಿಶಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ತದನಂತರ ಖ್ಯಾತ ನರ್ತಕ ಗುರು ಶಂಕರ ಕಂಡಸ್ವಾಮಿ ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ನಟ್ಟುವಾಂಗದಲ್ಲಿ ವಿದುಷಿ ಅನನ್ಯಾ ಎಂ., ಗಾಯನದಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್, ಮೃದಂಗ ವಾದನದಲ್ಲಿ ವಿದ್ವಾನ್ ಧರ್ಮನ್ ಕೃಷ್ಣನ್, ವೇಣುವಾದನದಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ಡಾ.ಅರುಣಾ ಮೊಹಂತಿ ಮತ್ತು ವಿದ್ವಾನ್ ಕಲಾಯೋಗಿ ಎನ್. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತಿದೆ. ಯುನೆಸ್ಕೊದ ಮಾಜಿ ರಾಯಭಾರಿ ಚಿರಂಜೀವಿ ಸಿಂಗ್, ನೃತ್ಯ ಇತಿಹಾಸ ತಜ್ಞ ಆಶಿಶ್ ಖಾಕರ್, ಅನನ್ಯ ಸಂಸ್ಥೆಯ ಅಧ್ಯಕ್ಷ ಎಚ್.ಎನ್.ಸುರೇಶ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.