ಹರಿವ ಬಣ್ಣದಲಿ ಅಮೂರ್ತ ಸಂಗಮದ ಹುಡುಕಾಟ!

Share This

• ಜಯರಾಮ ಭಟ್ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ
” ಮೇಲ್ನೋಟಕ್ಕೆ ಅಮೂರ್ತ. ಒಳ ಪ್ರವೇಶಿದರೆ ಮಲೆನಾಡಿನ ಪ್ರಾಕೃತಿಕ ವೈಭವ ತೆರೆದುಕೊಳ್ಳುತ್ತವೆ. ಕರಾವಳಿಯ ಅಲೆಗಳು ಅಬ್ಬರಿಸುತ್ತವೆ. ಪ್ರಕೃತಿಯ ವಿಸ್ಮಯಗಳ ಅನಾವರಣ ಆಗುತ್ತಿದೆಯೇನೊ ಎಂಬಂತೆ ಭಾಸವಾಗುತ್ತದೆ. ಬಣ್ಣಗಳ ಜೊತೆ ಮನಸ್ಸುಗಳು ಹರಿಯಲಾರಂಭಿಸುತ್ತವೆ “
ಇಂತಹದ್ದೊಂದು ಲೋಕ ಬಸವನಗುಡಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಗ್ಯಾಲರಿಯಲ್ಲಿ ಕಲಾವಿದ ಗಿಳಿಯಾಲ ಜಯರಾಮ ಭಟ್ ಸೃಷ್ಟಿಸಿದ್ದಾರೆ. ಇತ್ತೀಚಿನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ ಇವರ ಮಗಳು ಪಾರ್ವತಿ ಭಟ್ ‘ ರೂಪಾಂತರಿತ ನಿಸರ್ಗ / Transforming Earthscape ‘ ಏಕವ್ಯಕ್ತಿ ಕಲಾಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ. ಅಚ್ಚುಕಟ್ಟಾದ ಪ್ರಸ್ತುತಿ ಕಲಾಕೃತಿಗಳ ಸೌಂದರ್ಯವನ್ನು ಹೆಚ್ಚಿಸಿದೆ. ಕೆಲವು ಕಲಾಕೃತಿಗಳಲ್ಲಿ ಬಣ್ಣಗಳನ್ನು ದುಡಿಸಿಕೊಂಡಿರುವ ಪರಿ ಅನನ್ಯ. ಆದರೆ, ಇದೇ ಬಿರುಸು ಕೆಲವೊಂದು ಕಲಾಕೃತಿಗಳಲ್ಲಿ ಬದಲಾಗಿದೆ. ಪ್ರಯೋಗಾತ್ಮಕ ತಂತ್ರಗಾರಿಕೆ ಅವರೊಳಗಿನ ಗಂಭೀರವಾದ ಹುಡುಕಾಟ ಮತ್ತು ಹುಡುಗಾಟವನ್ನು ಕಾಣಿಸುತ್ತದೆ. ಕಲಾವಿದ ಕಲಾಕೃತಿಗಳ ರಚನಾ ಪ್ರಕ್ರಿಯೆಯಲ್ಲಿ ಈ ಪ್ರಯತ್ನಕ್ಕಿಳಿದಾಗ ಹೊಸತೊಂದರ ಸೃಷ್ಟಿಗೆ ನಾಂದಿಯಾಗುತ್ತದೆ. ಜಯರಾಮ ಭಟ್ ಈ ಪ್ರಯತ್ನದಲ್ಲಿ ನಿರಂತರವಾಗಿ ಸಾಗಿದ್ದಾರೆ, ಸಾಗುತ್ತಿದ್ದಾರೆ ಎನ್ನುವುದಕ್ಕೆ ಪ್ರದರ್ಶಿತ ಕಲಾಕೃತಿಗಳೇ ಸಾಕ್ಷಿಯಾಗಿವೆ.
ಕಲಾಕೃತಿಗಳ ರಚನೆಯ ಸಂದರ್ಭದ ಅನಪೇಕ್ಷಿತ ರೂಪಗಳನ್ನು, ಅಪೇಕ್ಷಿತ ರೂಪವನ್ನಾಗಿಸಿಕೊಳ್ಳುವ ಜಾಣ್ಮೆ ನೋಡುಗರನ್ನು ತುಸು ಆಕರ್ಷಿಸುತ್ತವೆ. ಜಯರಾಮ ಭಟ್ ಅವರ ಬಹುತೇಕ ಕಲಾಕೃತಿಗಳು ಈ ಚೌಕಟ್ಟಿನಲ್ಲಿವೆ. ಇದರಿಂದಾಚೆ ವ್ಯಾಪಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ.
ಅಮೂರ್ತತೆ ಅಷ್ಟು ಸುಲಭವಾಗಿ ಒಲಿಯುವ ಅಥವಾ ಅರ್ಥೈಸಿಕೊಳ್ಳಲು ಸಾಧ್ಯವಾಗುವ ಕಲಾಪ್ರಕಾರವಲ್ಲ. ತಪಸ್ಸಿನ ಪ್ರತಿಫಲ ಆಗಿರುತ್ತದೆ ಮತ್ತು ಕಲಾಕೃತಿಗಳೇ ಕಲಾವಿದರ ಅನುಭವ ತೆರೆದಿಡುತ್ತವೆ. Thought Process ವಿಭಿನ್ನ ನೆಲೆಯಲ್ಲಿ ಇದ್ದಾಗ ಕಲಾಕೃತಿಗಳು ಭಿನ್ನವೆನಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಯರಾಮ ಭಟ್ ಅವರ ಕಲಾಕೃತಿಗಳು ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗಲಿವೆ ಅನಿಸುತ್ತವೆ.
ಸ್ನೇಹಿತರೆ, ಒಂದೊಳ್ಳೆಯ ಕಲಾಪ್ರದರ್ಶನ. ಇನ್ನೆರಡು ದಿನಗಳ ಕಾಲ ಮುಂದುವರಿಸಲು ಅವಕಾಶ ಸಿಕ್ಕಿದ್ದರಿಂದ ಕಲಾಪ್ರದರ್ಶನ ನಾಳೆ ಫೆಬ್ರುವರಿ 27ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಕಲಾವಿದ ಜಯರಾಮ ಭಟ್ ಅವರಿಗೆ ಮತ್ತು ಉತ್ತಮವಾಗಿ ಕ್ಯುರೇಟ್ ಮಾಡಿದ ಪಾರ್ವತಿ ಅವರಿಗೂ ಅಭಿನಂದನೆಗಳು 💐

Share This

Leave a Reply

Your email address will not be published. Required fields are marked *