ಗಮನಸೆಳೆಯುವ Art Expo New York!

Share This

  • ಕನ್ನಡಿಗ ಶಿವಾನಂದ ಶ್ಯಾಗೋಟಿ ಸೇರಿ ಕೆಲ ಭಾರತೀಯ ಕಲಾವಿದರು ಭಾಗಿ

ಪ್ರಪಂಚದ ಪ್ರತಿಷ್ಠಿತ ಆರ್ಟ್ ಫೇರ್‌ಗಳಲ್ಲಿ ಒಂದಾಗಿರುವ ಆರ್ಟ್ ಎಕ್ಸ್ಪೋ ನ್ಯೂಯಾರ್ಕ್ / Art Expo New York 2025 ಗಮನ ಸೆಳೆದಿದ್ದು, ಏಪ್ರಿಲ್ 6ರಂದು ಸಂಪನ್ನಗೊಳ್ಳಲಿದೆ. ಏಪ್ರಿಲ್ 3ರಿಂದ ಆರಂಭವಾಗಿರುವ ಪ್ರತಿಷ್ಠಿತ, ಬೃಹತ್ ಪ್ರದರ್ಶನದಲ್ಲಿ ಭಾರತೀಯ ಕಲಾವಿದರೂ ಸೇರಿದಂತೆ ಅನೇಕ ದೇಶಗಳ 200ಕ್ಕೂ ಹೆಚ್ಚು ಪ್ರದರ್ಶಕರು ಕಲಾಕೃತಿಗಳನ್ನು ಪ್ರದರ್ಶಿಸಿರುವುದಾಗಿ ಆಯೋಜಕರಾದ ರೆಡ್‌ವುಡ್ ಆರ್ಟ್ ಗ್ರೂಪ್ (Redwood Art Group) ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರತಿಷ್ಠಿತ ಕಲಾಪ್ರದರ್ಶನ ನ್ಯೂಯಾರ್ಕ್ನ ಮ್ಯಾನ್‌ಹ್ಯಾಟನ್ ಪೀಯರ್ 36ರಲ್ಲಿ ನಡೆಯುತ್ತಿದೆ.

ಭಾರತದ ಬೆರಳೆಣಿಕೆಯಷ್ಟು ಕಲಾವಿದರು ಈ ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಇವರಲ್ಲಿ ಸಂಪರ್ಕಕ್ಕೆ ಸಿಕ್ಕ ಕರ್ನಾಟಕದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದ ಶಿವಾನಂದ ಶ್ಯಾಗೋಟಿ ತಮ್ಮ ಅನುಭವ ಹಂಚಿಕೊAಡಿದ್ದಾರೆ. ನ್ಯೂಯಾರ್ಕ್ ನಂತಹ ಶ್ರೀಮಂತ ನಗರಿಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಬೇಕೆನ್ನುವ ಹಂಬಲ ಇತ್ತು. ಕನಸು ಇಂದು ನನಸಾಗಿಸಿಕೊಂಡಿದ್ದೇನೆ. ನನ್ನ ಕೆಲವೇ ಕೆಲವು ಇತ್ತೀಚಿನ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ. ಅನೇಕ ಗ್ಯಾಲರಿಯವರು, ಆರ್ಟ್ ಕಲೆಕ್ಟರ್‌ಗಳು ಕಲಾಕೃತಿಗಳನ್ನು ಕೊಂಡುಕೊಳ್ಳಲು ಆಸಕ್ತಿ ತೋರಿದ್ದಾರೆ. ಕೊಳ್ಳಲು ಬಯಸಿದ್ದಾರೆ. ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕಲಾಪ್ರಿಯರು ಕಲಾಕೃತಿಗಳನ್ನು ನೋಡಿ, ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಕಲಾಕೃತಿಗಳಿಗೆ ಸಂಬಂಧಿಸಿ ಸಾಕಷ್ಟು ಚರ್ಚಿಸಲು ಬಯಸುತ್ತಾರೆ. ಅವರ ಅಭಿಪ್ರಾಯಗಳು ನಮ್ಮನ್ನು ಇನ್ನೊಂದು ರೀತಿಯಿಂದ ಕಲಾಕೃತಿಗಳನ್ನು ರಚಿಸಲು ಪ್ರೇರಣೆಯಾಗುತ್ತವೆ. ಇದೊಂದು ಅದ್ಭುತ ಅನುಭವ” ಎನ್ನುತ್ತಾರೆ.

ಶಿವಾನಂದ ಶ್ಯಾಗೋಟಿಯವರು ಉತ್ತರ ಕರ್ನಾಟಕ ಮೂಲದ ಕಲಾವಿದರಾಗಿದ್ದು, ಮೈಸೂರಿನ ಚಾಮರಾಜೇಂದ್ರ ಗವರ್ನಮೆಂಟ್ ಕಾಲೇಜ್ ಆಫ್ ವಿಶ್ಯುವಲ್ ಆರ್ಟ್ಸ್(CAVA)ನ ಪದವೀಧರರು. ನಿತ್ಯ ಘಟನಾವಳಿಗಳನ್ನೇ ತಮ್ಮದೆ ಆದ ಶೈಲಿಯಲ್ಲಿ ತಾವೇ ನಿರೂಪಿಸುತ್ತಿರುವಂತೆ ಕಲಾಕೃತಿಗಳನ್ನು ರಚಿಸುತ್ತಾರೆ. ಈ ಮೂಲಕ ಕಲಾಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಗಂಭೀರ ವಿಚಾರವನ್ನು ಕೊಂಚ ವಿಢಂಬನಾತ್ಮಕವಾಗಿ ಹೇಳಿ, ನೋಡುಗರಿಗೆ ನಾಟುವಂತೆ ಮಾಡುವ ಜಾಣ್ಮೆಯನ್ನು ಅಥವಾ ಕ್ರಿಯಾಶೀಲತೆಯನ್ನು ಇವರ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ. 2020ರಲ್ಲಿ ನಡೆದ 62ನೇ ರಾಷ್ಟ್ರೀಯ ವಾರ್ಷಿಕ ಕಲಾಪ್ರದರ್ಶನದಲ್ಲಿ ಇವರ ಕಲಾಕೃತಿಗೆ ಪ್ರಶಸ್ತಿ ಲಭಿಸಿತ್ತು. ಇದೀಗ ಆರ್ಟ್ ಆರ್ಟ್ ಎಕ್ಸ್ಪೋ ನ್ಯೂಯಾರ್ಕ್ ನಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ಈಗ ನಡೆಯುತ್ತಿರುವ 48ನೇ ಆವೃತ್ತಿಯ ಕಲಾಪ್ರದರ್ಶನ ಅಂದಾಜು 70,000 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾದ ಕೃತಕ ಗ್ಯಾಲರಿಗಳಲ್ಲಿ ಪ್ರಪಂಚದ ವಿವಿಧ ಭಾಗಗಳ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿನ ವಿಶೇಷತೆ ಏನೆಂದರೆ ಕಲಾವಿದರು ವೈಯಕ್ತಿಕವಾಗಿಯೂ ಗ್ಯಾಲರಿ ಸ್ಥಳಾವಕಾಶ ಪಡೆದು ಕಲಾಕೃತಿಗಳನ್ನು ಪ್ರದರ್ಶಿಸಬಹುದಾಗಿದೆ. ಅಲ್ಲದೆ, ಗ್ಯಾಲರಿಗಳು, ಸಂಘ-ಸಂಸ್ಥೆಗಳೂ ಗ್ಯಾಲರಿ ಪಡೆದು ಯಾವುದೇ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಬಹುದು. ಎಲ್ಲಾ ಪ್ರಕಾರದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ.  ಸದ್ಯ ಸಿಕ್ಕಿರುವ ಮಾಹಿತಿಯಂತೆ 1000ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗಿವೆ. ಈಗಾಗಲೇ ಸಾಕಷ್ಟು ಕಲಾಕೃತಿಗಳು ಮಾರಾಟವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಆವೃತ್ತಿಯಲ್ಲಿ ಸಾಕಷ್ಟು ಮಂದಿ ಮಹಿಳಾ ಮತ್ತು ಯುವ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಇಷ್ಟು ವರ್ಷಗಳ ಆವೃತ್ತಿಗಿಂತಲೂ ಆವೃತ್ತಿ ವಿಭಿನ್ನವಾದುದು. ಇದೊಂದು ಒಳ್ಳೆಯ ಬೆಳವಣಿಗೆಯೂ ಹೌದು.” ಎಂದು ರೆಡ್‌ವುಡ್ ಆರ್ಟ್ ಗ್ರೂಪ್ ಸಿಇಒ ಮತ್ತು ಅಧ್ಯಕ್ಷ ಎರಿಕ್ ಸ್ಮಿತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸ್ನೇಹಿತರೆ, ಇಂತಹದ್ದೊಂದು ಕಲಾಪ್ರದರ್ಶನ ಕುರಿತು ನಾನು ತಿಳಿದಿರುವ ಒಂದಿಷ್ಟು ಮಾಹಿತಿಯನ್ನು, ಶಿವಾನಂದ ಶ್ಯಾಗೋಟಿ ಅವರು ಹಂಚಿಕೊಂಡಿರುವ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಶ್ಯಾಗೋಟಿ ಅವರಿಗೆ ಅಭಿನಂದನೆಗಳು 

 

ಶಿವಾನಂದ ಶ್ಯಾಗೋಟಿ ಅವರ ಕಲಾಕೃತಿಗಳು

 

ಶಿವಾನಂದ ಶ್ಯಾಗೋಟಿ ಅವರ ಕಲಾಕೃತಿಗಳು

 


Share This

Leave a Reply

Your email address will not be published. Required fields are marked *