ತ್ರಿವೇಣಿ ಸಂಗಮದಲ್ಲಿ ಕುಲಕರ್ಣಿ ಕಲಾಕೃತಿ ದರ್ಶನ

Share This

– 1980-90ರ ದಶಕದ ಕಲಾಕೃತಿಗಳ ಪ್ರದರ್ಶನ
– ಗಣೇಶ ಗ್ಯಾಲರಿಯಿಂದ ಪ್ರದರ್ಶನ ಆಯೋಜನೆ
“Beyond the influence of Indian culture and its ethos, my horizons are universal”
ತಮ್ಮ ಕಲಾಕೃತಿಗಳ ಬಗ್ಗೆ ಹೀಗೆ ಹೇಳಿದ್ದು ನಮ್ಮ ಬೆಳಗಾವಿ ಮೂಲದ ಕಲಾವಿದ ಕೆ.ಎಸ್.ಕುಲಕರ್ಣಿ (Krishna Shamrao Kulkarni).
1916ರಲ್ಲಿ ಕರ್ನಾಟಕದ ಗಡಿ ಪ್ರದೇಶ ಬೆಳಗಾವಿಯಲ್ಲಿ ಜನಿಸಿದ ಕೆ.ಎಸ್.ಕುಲಕರ್ಣಿ ಅವರು ದೇಶ-ವಿದೇಶಗಳಲ್ಲಿ ತಮ್ಮ ಕಲಾಪ್ರದರ್ಶನ ಕೈಗೊಂಡು ಖ್ಯಾತರಾದ ಕಲಾವಿದರು. ನವದೆಹಲಿಯ ಪ್ರತಿಷ್ಠಿತ ಕಲಾ ಕೇಂದ್ರಗಳಲ್ಲಿ ಒಂದಾಗಿರುವ ತ್ರಿವೇಣಿ ಸಂಗಮದ ಸಂಸ್ಥಾಪಕರೂ ಹೌದು. ಇವರ ಅಪರೂಪದ ಕಲಾಕೃತಿಗಳ ಪ್ರದರ್ಶನವನ್ನು ನವದೆಹಲಿಯ ತ್ರಿವೇಣಿ ಸಂಗಮದಲ್ಲಿ ಗ್ಯಾಲರಿ ಗಣೇಶ ಆಯೋಜಿಸಿತ್ತು.
ಕುಲಕರ್ಣಿ ಅವರ ಕಲಾಕೃತಿಗಳು ಬಹಳ ವಿಭಿನ್ನ. ಆಧುನಿಕ ಕಲಾವಿದರಿಗೆ ಸ್ಫೂರ್ತಿ. ಆಧುನಿಕ ಕಲಾ ಪರಂಪರೆಯಲ್ಲಿ ಅಳಿಸಲಾಗದ ರೇಖೆಯಿಂದ ಛಾಪೊತ್ತಿದ ಕಲಾವಿದರು. ಇಂತಹ ಮೇರು ಕಲಾವಿದರ ಕಲಾಕೃತಿಗಳನ್ನು ನೋಡುವ ಅವಕಾಶ ಕಳೆದವಾರ ಲಭಿಸಿತು.
‘ESOTERIC EXPRESSIONS’ ಶೀರ್ಷಿಕೆಯಡಿ ‘ಗ್ಯಾಲರಿ ಗಣೇಶ’ ಸಂಸ್ಥೆಯ ಸಂಸ್ಥಾಪಕಿ, ನಿರ್ದೇಶಕಿ ಶೋಭಾ ಭಾಟಿಯಾ ಅವರು ಈ ಕಲಾಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ. 1980 ಮತ್ತು 1990ರ ದಶಕದಲ್ಲಿ ಅವರು ರಚಿಸಿರುವ ವರ್ಣಚಿತ್ರ ಮತ್ತು ರೇಖಾ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿರುವ ಅಮೂರ್ತ ಶೈಲಿಯ ಕಲಾಕೃತಿಳು ಕ್ಯೂಬಿಸ್ಟ್ಗಳನ್ನು ನೆನಪಿಸಿದವು. ಆಧುನಿಕ ಕಲಾ ಸಿದ್ಧಾಂತವನ್ನು ಬಲವಾಗಿ ನಂಬಿದ್ದರು ಎನ್ನುವುದಕ್ಕೆ ಅವರ ಕಲಾಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.
ಕುಲಕರ್ಣಿ ಅವರು ಅಜಂತಾದ ಭಿತ್ತಿ ಚಿತ್ರಗಳಿಂದ ಪ್ರಭಾವಿತರಾಗಿದ್ದು, ಅದೇ ರೀತಿಯಲ್ಲಿ ಮನುಷ್ಯಾಕೃತಿಗಳನ್ನು ಬಳಕೆ ಮಾಡುವ ಅಭ್ಯಾಸ ಬೆಳೆಸಿಕೊಂಡರು. ತದನಂತರದ ದಿನಗಳಲ್ಲಿ ಆಧುನಿಕ ಸ್ಪರ್ಶದಿಂದಾಗಿ ತಮ್ಮದೇ ಶೈಲಿಯತ್ತ ನಡೆಸಿದ ಪ್ರಯತ್ನ ಗಮನಾರ್ಹ. ಅದೇ ರೀತಿ ಹಳ್ಳಿಯ ಜೀವನ ಶೈಲಿಯಿಂದಲೂ ಪ್ರಭಾವಿತರಾಗಿದ್ದರು. ಅನೇಕ ಕಲಾಕೃತಿಗಳಲ್ಲಿ ಇವು ಪ್ರತಿಬಿಂಬಿತವಾಗಿವೆ.
| ರೋಚಕ ಕಲಾಪಯಣ |
ಹೌದು, ಅವರಿಗಿನ್ನೂ 11ನೇ ವಯಸ್ಸು. ಆಟವಾಡಿಕೊಂಡು ಇರಬೇಕಾದ ವಯಸ್ಸದು. ಆದರೆ ಪ್ರಪಂಚ ಅರಿಯುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರು. ಆ ದಿನಗಳಲ್ಲೇ ಅನೇಕ ರೀತಿಯ ಸವಾಲುಗಳನ್ನು ಎದುರಿಸಿದ್ದರು. ಇದರ ನಡುವೆಯೂ ಬಹಳ ಎತ್ತರಕ್ಕೆ ಬೆಳೆದು ನಿಂತರು. ತಮ್ಮ ಓದಿನ ಸಮಯದಲ್ಲಿ ಸೈನ್ ಬೋರ್ಡ್ ಗಳನ್ನು ಬರೆದು ಅದರಿಂದ ಸಂಪಾದಿಸಿದ ಹಣವನ್ನೆಲ್ಲ ಓದಿಗಾಗಿ ಬಳಸಿಕೊಳ್ಳುತ್ತಿದ್ದರು.
ಮುಂಬೈನ ಜೆ.ಜೆ.ಸ್ಕೂಲ್ ಆಫ್ ಆರ್ಟ್ ನಲ್ಲಿ ಡಿಪ್ಲೊಮಾ ಪದವಿ ಪಡೆದ ಬಳಿಕ, 1943ರಲ್ಲಿ ದೆಹಲಿಯತ್ತ ಹೆಜ್ಜೆ ಇಟ್ಟರು. ಜವಳಿ ಉದ್ಯಮದ ಸಂಸ್ಥೆಯೊಂದರಲ್ಲಿ ವಿನ್ಯಾಸಕಾರರಾಗಿ ಸೇರಿಕೊಂಡರು. ಇನ್ನುಳಿದ ಸಹೋದ್ಯೋಗಿಗಳ ಜೊತೆ ಲಾಹೋರ್ ಮತ್ತು ದೆಹಲಿ ನಡುವೆ ಪ್ರಯಾಣ ನಡೆಸುತ್ತಿದ್ದರು. ದೆಹಲಿಯಲ್ಲಿ ಅವರ ಪ್ರಭಾವವನ್ನು ಬಹಳ ಚೆನ್ನಾಗಿಯೇ ಬೆಳೆಸಿಕೊಂಡಿದ್ದರು. ಎಲ್ಲರ ಪ್ರೀತಿಪಾತ್ರರಾಗಿ ಬೆಳೆದರು.
ಕುಲಕರ್ಣಿ ಅವರು ಆಲ್ ಇಂಡಿಯಾ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ ಸದಸ್ಯರಾಗಿದ್ದರು. ದೆಹಲಿಯ ಶಿಲ್ಪಿ ಚಕ್ರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 1973ರಿಂದ 1978ರ ತನಕ ನವದೆಹಲಿಯ ಲಲಿತಕಲಾ ಅಕಾಡೆಮಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕುಲಕರ್ಣಿ ಅವರು ದೇಶವಿದೇಶಗಳಲ್ಲಿ ಸಾಕಷ್ಟು ಕಲಾಪ್ರದರ್ಶನ ಆಯೋಜಿಸುತ್ತದರು. ಅದರಲ್ಲೂ ವಿಶೇಷವಾಗಿ ದಕ್ಷಿಣ ಅಮೆರಿಕಾ ಕಲಾ ಸಮುದಾಯದ ಜೊತೆ ಸಂಬಂಧ ಹೊಂದಿದ್ದರು. ಕುಲಕರ್ಣಿ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1994ರಲ್ಲಿ ಕುಲಕರ್ಣಿ ಅವರು ನಿಧನರಾದ ಬಳಿಕ ಅನೇಕ ಗ್ಯಾಲರಿಗಳು ಅವರ ಕಲಾಕೃತಿಗಳನ್ನು ಆಗಾಗ‌ ಪ್ರದರ್ಶಿಸುತ್ತ ಬಂದಿವೆ.

 

 

 

 

 

 

 

 

 

 

 


Share This

Leave a Reply

Your email address will not be published. Required fields are marked *