• MAPPING PERIPHERY & CENTRE ಒಂದೊಳ್ಳೆಯ ಕಲಾಪ್ರದರ್ಶನ
ಸಮಕಾಲೀನ ಸಂದರ್ಭ ಮೀರಿದ ಆಲೋಚನೆಗಳು, ಅಂಚಿನಾಚೆಯ ಊಹಿಸಲಾಗದ ದಿಕ್ಸೂಚಿ. ಅಪರಿಮಿತ, ಅಸಂಗತ, ಹಿತ, ಮಿತ ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆಂದು ತಂದಿಟ್ಟಾಗ ಸಹಜತೆಯ ಪರಿಮಿತಿಯಲ್ಲೇ ನೋಡುಗರನ್ನು ಹಿಡಿದಿಡುವ ಒಂದು ಪ್ರಯತ್ನ. ವಿಭಿನ್ನ ಆಲೋಚನೆಗಳು ಹೇಳುವ ಸಂದೇಶಕ್ಕಾಗಿ ಹುಡುಕಾಡಬೇಕಿಲ್ಲ. ಶಿಸ್ತಿನಿಂದ ಕೂಡಿದ ಪ್ರಸ್ತುತಿಗೆ ತುಸು ಕಾಲ ನಿಂತು ಮುಂದೆ ಸಾಗಬೇಕೆನ್ನುವ ಭಾವ. ಒಟ್ಟಾರೆ ಗ್ಯಾಲರಿಯ ಕಾಂತಿಯ ಗುಣ ಹೆಚ್ಚಿಸುವ ಯತ್ನಕ್ಕೆ ಯಶ ಸಿಕ್ಕಿದೆ. ನೋಡುಗರಿಗೆ ಖುಷಿ ದಕ್ಕುತ್ತಿದೆ!
ಕರ್ನಾಟಕದ ಪ್ರತಿಷ್ಠಿತ ಕಲಾ ಸಂಸ್ಥೆ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದ ‘ನಮ್ಮ ಆರ್ಟ್ ಬೆಂಗಳೂರು ನ್ಯಾಷನಲ್ ಆರ್ಟ್ ಫೇರ್’ 2ನೇ ಆವೃತ್ತಿ ಹಿನ್ನೆಲೆಯಲ್ಲಿ ಆಯೋಜನೆಯಾದ ಆಯ್ದ ಕಲಾವಿದರ ಕಲಾಕೃತಿಗಳ ‘MAPPING PERIPHERY & CENTRE ಕಲಾಪ್ರದರ್ಶನ ಆಪ್ತವೆನಿಸಿತು. ‘ನಮ್ಮ ಆರ್ಟ್ ಬೆಂಗಳೂರು’ 2ನೇ ಆವೃತ್ತಿಗೆ ಈ ಕಲಾಪ್ರದರ್ಶನ ಮೆರಗು ನೀಡಿದೆ. ಕಲಾ ಇತಿಹಾಸಗಾರ್ತಿ ಲೀನಾ ವಿನ್ಸೆಂಟ್ ಅವರು ಈ ಕಲಾಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದು, ಕಲಾವಿದರ ಮತ್ತು ಕಲಾಕೃತಿಗಳ ಆಯ್ಕೆಯಲ್ಲಿ ಜಾಣತನ ತೋರಿದ್ದಾರೆ. ಅಚ್ಚುಕಟ್ಟಾದ ಪ್ರಸ್ತುತಿ ಪ್ರದರ್ಶನದ ಗುಣಮಟ್ಟ ಹೆಚ್ಚಿಸಿದೆ. ಒಂದೊಳ್ಳೆಯ ಕಲಾಪ್ರದರ್ಶನ ವೀಕ್ಷಿಸುವ ಅವಕಾಶವನ್ನು ಚಿತ್ರಕಲಾ ಪರಿಷತ್ ಮತ್ತು ಲೀನಾ ವಿನ್ಸೆಂಟ್ ಅವರು ಮಾಡಿಕೊಟ್ಟಿದ್ದಾರೆ.
ಇದಲ್ಲದೆ ‘ನಮ್ಮ ಆರ್ಟ್ ಬೆಂಗಳೂರು ನ್ಯಾಷನಲ್ ಆರ್ಟ್ ಫೇರ್’ 2ನೇ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಇನ್ನಿತರೇ ಕಲಾವಿದರ ಕಲಾಕೃತಿಗಳು ವಿಭಿನ್ನ ಮತ್ತು ಸೊಗಸಾಗಿವೆ. ಮನೆಗೊಂದು ಕಲಾಕೃತಿ ಕೊಂಡು ಕಲಾವಿದರ ಬೆನ್ನು ತಟ್ಟುವವರು ಇಂತಹದ್ದೊಂದು ಅವಕಾಶ ಕೈಚೆಲ್ಲಬೇಡಿ. ತಪ್ಪದೆ ಚಿತ್ರಕಲಾ ಪರಿಷತ್ ಭೇಟಿಗೆ ಮರೆಯಬೇಡಿ. ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಬಂದು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು. ಕಲಾವಿದರಿಗೆ ಇಂತಹದ್ದೊಂದು ಅವಕಾಶ ಮಾಡಿಕೊಟ್ಟ ಚಿತ್ರಕಲಾ ಪರಿಷತ್ ಆಡಳಿತ ಮಂಡಳಿಗೂ ಧನ್ಯವಾದಗಳು.
| ನಮ್ಮ ಆರ್ಟ್ ಬೆಂಗಳೂರು 2ನೇ ಆವೃತ್ತಿ ಯಶಸ್ವಿ |
ಚಿತ್ರಕಲಾ ಪರಿಷತ್ ಆಡಳಿತ ಮಂಡಳಿ ನಮ್ಮ ಆರ್ಟ್ ಬೆಂಗಳೂರು 2ನೇ ಆವೃತ್ತಿಯನ್ನು ಬಹಳ ಯಶಸ್ವಿಯಾಗಿ ಆಯೋಜಿದ್ದನ್ನು ಉಲ್ಲೇಖಿಸಲೇಬೇಕು. ಖಂಡಿತವಾಗಿ ಇದೊಂದು ಯಶಸ್ಸು. ಮೊದಲನೇ ಆವೃತ್ತಿಗಿಂತಲೂ ವೃತ್ತಿಪರತೆ ಇರುವುದಾಗಿ ಕಲಾಸಮುದಾಯ ಗುರುತಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಚೆನ್ನಾಗಿ ಆಯೋಜನೆ ಆಗುತ್ತದೆನ್ನುವ ಭರವಸೆ ಹೆಚ್ಚಿಸಿದೆ.
ಇಪ್ಪತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ನೆರವೇರಿಸಿದ ಚಿತ್ರಕಲಾ ಪರಿಷತ್ ಇನ್ನೊಂದು ಹೊಸ ಮೈಲುಗಲ್ಲು ತಲುಪಲಿ. ನಮ್ಮೆಲ್ಲರ ಕಳಕಳಿ ಇಷ್ಟೆ, ಇಂತಹ ಆರ್ಟ್ ಫೇರ್ ಗಳು ಕಲಾವಿದರಿಗೆ ಆರ್ಥಿಕ ಶಕ್ತಿ ಹೆಚ್ಚಿಸುವ ವೇದಿಕೆಯಾಗಲಿ.
ಈ ಹಿಂದೆ ಕರ್ನಾಟಕ ಲಲಿತಕಲಾ ಅಕಾಡೆಮಿ ಆಸಕ್ತಿ ವಹಿಸಿ ಕರ್ನಾಟಕ ಸರ್ಕಾರದ ಸಹಕಾರದಿಂದ “ಚಿತ್ರ ಪರಿಷೆ” ನಡೆಸಿತು. ಆದರೆ, ಇದು ಪ್ರತಿವರ್ಷ ನಡೆಯುವಂತೆ ಆಗಲೇ ಇಲ್ಲ. ಸರ್ಕಾರ ಮನಸ್ಸು ಮಾಡಿದರೆ ಕಲಾವಿದರಿಗೆ ಅನುಕೂಲವಾಗುವಂತಹ ಒಂದು ಸುಂದರ ವೇದಿಕೆ ಕಲ್ಪಿಸುವುದು ಕಷ್ಟವಾಗುವುದೇ ಇಲ್ಲ. ಸರ್ಕಾರ ಮನಸ್ಸು ಮಾಡಿದರೆ ಇಡೀ ವಿಶ್ವದ ಗಮನ ಸೆಳೆಯುವಂತಹ ಕಲಾಪ್ರದರ್ಶನ ಆಯೋಜನೆ ಮಾಡಲು ಸಾಧ್ಯ ಎನ್ನುವುದಕ್ಕೆ ನೆರೆ ರಾಜ್ಯ ಕೇರಳದಲ್ಲಿ ನಡೆಯುವ ಕೊಚ್ಚಿ ಮುಜರೀಸ್ ಬೆನಾಲೆ ( Kochi-Muziris Biennale ) ಅತ್ಯುತ್ತಮ ಉದಾಹರಣೆ. ಕೇರಳ ಸರ್ಕಾರದ ಸಹಕಾರದಿಂದ ಇದು ಸಾಧ್ಯವಾಗಿದೆ.
ಕರ್ನಾಟಕದಲ್ಲಿ ಸರ್ಕಾರ ಮಾಡಬಹುದಾದ ಒಂದೊಳ್ಳೆಯ ಪ್ರಯತ್ನವನ್ನು ಖಾಸಗಿ ಸಂಸ್ಥೆಯೊಂದು ಯಶಸ್ವಿಯಾಗಿ ಮಾಡುತ್ತಿರುವುದು ಅಭಿನಂದನಾರ್ಹ. ಈ ಶ್ರೇಯ ಚಿತ್ರಕಲಾ ಪರಿಷತ್ ಹಾಲಿ ಅಧ್ಯಕ್ಷರಾದ ಬಿ.ಎಲ್. ಶಂಕರ್ ಮತ್ತು ಆಡಳಿತ ಮಂಡಳಿಯ ಸದಸ್ಯ ವೃಂದಕ್ಕೆ, ಸಿಬ್ಬಂದಿ ವರ್ಗಕ್ಕೆ ಸಲ್ಲಬೇಕು.
ಸ್ನೇಹಿತರೆ, ನಮ್ಮ ಆರ್ಟ್ ಬೆಂಗಳೂರು 2ನೇ ಆವೃತ್ತಿ ಮೇ10, ಭಾನುವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಕಲಾಕೃತಿ ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿ.

























