- ಪೋಸ್ಟರ್ ರಚಿಸಿ ಜನಪ್ರಿಯತೆ ಹೆಚ್ಚಿಸಿಕೊಂಡ ಪ್ರತಿಭಾನ್ವಿತರು
- ಪಂದ್ಯಗಳು ನಡೆಯುವ 16 ನಗರಗಳಿಗೆ ಪ್ರತ್ಯೇಕ ಪೋಸ್ಟರ್
- ಗಣಪತಿ ಅಗ್ನಿಹೋತ್ರಿ
ಫಿಫಾ ವಿಶ್ವಕಪ್ ಫುಟ್ಬಾಲ್ ಹವಾ ಈಗ ವಿಶ್ವದೆಲ್ಲೆಡೆ ಆರಂಭವಾಗಿದೆ. ಭಾರತದಲ್ಲಿ ಕ್ರಿಕೆಟ್ ಹವಾ ಮುಂದೆ ಫುಟ್ಬಾಲ್ ಏನಿಲ್ಲದೇ ಇದ್ದರೂ, ಕೋಟ್ಯಂತರ ಅಭಿಮಾನಿಗಳಂತೂ ಇದ್ದೇ ಇದ್ದಾರೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಫುಟ್ಬಾಲ್ ಆಟಗಾರರನ್ನು ಆರಾಧಿಸುವಷ್ಟು ಅಭಿಮಾನವಿದೆ. ಅದರಲ್ಲೂ ಫಿಫಾ ವಿಶ್ವಕಪ್ ಸಮಯದಲ್ಲಂತೂ ಅಭಿಮಾನ ಉಕ್ಕಿ ಹರಿಯುತ್ತಿರುತ್ತದೆ. ಸಹಜವಾಗಿ ತಮಗಿಷ್ಟವಾದ ತಂಡ, ತಮಗಿಷ್ಟವಾದ ಆಟಗಾರ, ತಮಗಿಷ್ಟವಾದ ಕೋಚ್ ಎಂದು ಅವರ ಸಮವಸ್ತ್ರ (Jersey) ಧರಿಸಿಕೊಳ್ಳುವ, ತಂಡದ ಹೆಸರು ಬರೆಸಿಕೊಳ್ಳುವಂತಹ ಅಭಿಮಾನದ ಪರಾಕಾಷ್ಟೆಯನ್ನು ಕಾಣಬಹುದು. ವಿಶ್ವಕಪ್ ಫೈನಲ್ ಪಂದ್ಯ ಮುಗಿರುವ ತನಕ ಇನ್ನೂ ತರಾಹೇವಾರಿ, ವೈವಿಧ್ಯತೆಯ ಸುದ್ದಿಗಳ ಸುಗ್ಗಿ ಇದ್ದೇ ಇದೆ. ಇವೆಲ್ಲದರ ಜೊತೆಗೆ ಆರಂಭದಲ್ಲೇ ಒಂದು ಆಸಕ್ತಿದಾಯಕವಾದ ಮಾಹಿತಿಯೊಂದನ್ನು ನಿಮ್ಮ ಜೊತೆ ಇಲ್ಲಿ ಹಂಚಿಕೊಳ್ಳಬೇಕನಿಸಿತು. ಕಾರಣ, ಈ ಸುದ್ದಿಗಳೆಲ್ಲಾ ಮಹತ್ವ ಪಡೆಯದೇ ಕಮರಿ ಹೋಗಬಹುದಾದ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ತಮ್ಮೆಲ್ಲರ ಜೊತೆ ಹಂಚಿಕೊಳ್ಳಲೇ ಬೇಕು ಅನಿಸಿದ್ದು. ಏನದು ಅಂತಹ ಮಾಹಿತಿ?
ತಮಗೆಲ್ಲರಿಗೂ ಗೊತ್ತಿರುವಂತೆ ಫಿಫಾ ವಿಶ್ವಕಪ್ ಅಂದರೆ ನಮ್ಮ ನಿಮ್ಮ ಊರಲ್ಲೆಲ್ಲೋ ನಡೆಯುವ ಪಂದ್ಯಾವಳಿಯಂತಲ್ಲ. ಲಕ್ಷ ಲಕ್ಷ ಕೋಟಿ ಅಭಿಮಾನಿಗಳ, ಸಾವಿರಾರು ಕೋಟಿ ಹಣ ವಹಿವಾಟು ನಡೆಯುವಂತಹ ಪ್ರತಿಷ್ಠಿತ ಪಂದ್ಯಾವಳಿ. ಹೀಗಿರುವಾಗ ಪ್ರಚಾರ ಕಾರ್ಯಕ್ಕಾಗಿ ಏನೇನೋ ಪ್ರಯತ್ನಗಳೆಲ್ಲವೂ ನಡೆಯುತ್ತೆ. ಅದರಲ್ಲೇನು ವಿಶೇಷ ಅನಿಸಬಹುದು. ವಿಶೇಷ ಏನೆಂದರೆ ಈ ಆವೃತ್ತಿಯ ಪಂದ್ಯಾವಳಿಗಾಗಿ, ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂವರು ಖ್ಯಾತ ದೃಶ್ಯ ಕಲಾವಿದರು ಅಧಿಕೃತ ಪೋಸ್ಟರ್ಗಳನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ವಿಭಿನ್ನ ಪ್ರಚಾರ ಕಾರ್ಯದಲ್ಲಿ ಕಲಾವಿದರು ಭಾಗಿಯಾಗಿದ್ದಾರೆ. ಆಯೋಜನೆಯ ಜವಾಬ್ದಾರಿ ಹೊತ್ತಿರುವ ಅಮೆರಿಕಾ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಒಗ್ಗಟ್ಟಿನ, ಪರಸ್ಪರ ತಿಳವಳಿಕೆ, ಸಂಬಂಧ ಪ್ರತಿಬಿಂಬಿಸುವ ಹಿನ್ನೆಲೆಯಲ್ಲಿ ಈ ಮೂರು ರಾಷ್ಟçಗಳ ತಲಾ ಒಬ್ಬ ಕಲಾವಿದರು ಜೊತೆಗೂಡಿ ಪೋಸ್ಟರ್ಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಕೆನಡಾದ ಕಾರ್ಸನ್ ಟಿಂಗ್ (Carson Ting), ಮೆಕ್ಸಿಕೊದ ಮಿನೆರ್ವಾ ಜಿಎಂ (Minerva GM) ಮತ್ತು ಅಮೆರಿಕಾದ ಹ್ಯಾಂಕ್ ವಿಲ್ಲಿಸ್ ಥಾಮಸ್ (Hank Willis Thomas) ಇಂತಹದ್ದೊಂದು ಪ್ರತಿಷ್ಠಿತ ಪಂದ್ಯಾವಳಿಯ ಭಾಗವಾಗಿದ್ದಾರೆ. ಈ ಮೂಲಕ ಕಲಾಸಮುದಾಯದ ಜವಾಬ್ದಾರಿ, ಬದ್ಧತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಕಾರಣ ಮೂವರೂ ಕಲಾವಿದರು ಅಭಿನಂದನಾರ್ಹರು. ಕಲಾವಿದರಾಗಿ ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ.

ಈ ಮೂವರು ಕಲಾವಿದರ ಆಸಕ್ತಿಯಿಂದಾಗಿ ಪಂದ್ಯಾವಳಿಗಳು ನಡೆಯುವ ನಗರಗಳಿಗಾಗಿ ಅತ್ಯಂತ ಭಿನ್ನ ಮತ್ತು ಆಕರ್ಷಣೆಯ ಪೋಸ್ಟರ್ಗಳನ್ನು ರಚಿಸಿದ್ದಾರೆ. ಆಯಾ ನಗರಿಯ ಫುಟ್ಬಾಲ್ ಅಭಿಮಾನಿಗಳೂ ಈ ಪೋಸ್ಟರ್ಗಳನ್ನು ಫಿಫಾ ವಿಶ್ವಕಪ್ ವೆಬ್ಸೈಟ್ (https://www.fifa.com/) ಮೂಲಕ ಪಡೆಯಬಹುದಾಗಿದೆ. ಸಾಂಸ್ಕೃತಿಕ, ಮಾನಸಿಕವಾಗಿ ಮತ್ತು ಭೌಗೋಳಿಕವಾಗಿ ಸ್ಥಳೀಯ ಫುಟ್ಬಾಲ್ ಅಭಿಮಾನಿಗಳನ್ನು ಆರ್ಷಿಸುವ ರೀತಿಯಲ್ಲಿ ಪೋಸ್ಟರ್ಗಳು ರಚನೆಯಾಗಿವೆ. ಫಿಫಾ ವಿಶ್ವಕಪ್ ಇತಿಹಾಸವಷ್ಟೇ ಅಲ್ಲ, ಕಲಾ ಇತಿಹಾಸದಲ್ಲೂ ಹೊಸದೊಂದು ಅಧ್ಯಾಯವನ್ನು ಈ ಮೂವರು ಕಲಾವಿದರು ಆರಂಭಿಸಿದ್ದಾರೆ. ವಿಶ್ವದ ಪ್ರತಿಷ್ಠಿತ 48 ತಂಡಗಳು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದ 16 ನಗರಗಳಲ್ಲಿ ಆಡಲಿವೆ. ಈ 16 ನಗರಗಳನ್ನು ನಾನಾ ಕಾರಣಗಳಿಂದ ಹೃದಯಸ್ಪರ್ಶಿಯಾಗಿಸುವ ರೀತಿಯಲ್ಲಿ ಪೋಸ್ಟರ್ಗಳನ್ನು ರಚಿಸಲಾಗಿದೆ. ಒಂದೊಂದು ಪೋಸ್ಟರ್ಗಳಲ್ಲಿಯೂ ಬಳಕೆಯಾಗಿರುವ ಬಣ್ಣಗಳು, ಆಕಾರಗಳು, ವಿಷಯ-ವಿಚಾರಗಳು ಸಂಗ್ರಹಯೋಗ್ಯವಾದವು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಪ್ರಯತ್ನದ ಮೂಲಕ ಪ್ರಪಂಚಕ್ಕೆ ಕಲಾವಿದರು ಎಷ್ಟು ಮುಖ್ಯರಾಗುತ್ತಾರೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಈ ಮೂವರು ಕಲಾವಿದರ ಸಂಕ್ಷಿಪ್ತವಾದ ಪರಿಚಯ ಈ ಸಂದರ್ಭದಲ್ಲಿ ಅವಶ್ಯಕವಾದುದು ಎಂದು ಭಾವಿಸುತ್ತೇನೆ. ಈ ಕುರಿತ ಮಾಹಿತಿ ಇಲ್ಲಿದೆ.

ಕಾರ್ಸನ್ ಟಿಂಗ್ (Carson Ting): ಕೆನಡಾ ಕಲಾವಿದ. ಟೊರೊಂಟೊದಲ್ಲಿ ಜನಿಸಿದ ಇವರು ಸದ್ಯ ವ್ಯಾಂಕೋವರ್ನಲ್ಲಿ ವಾಸವಿದ್ದಾರೆ. ಚೇರ್ಮನ್ ಟಿಂಗ್ (Chairman Ting) ಎನ್ನುವ ವಿನ್ಯಾಸ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಓಂಟಾರಿಯೋ ಕಾಲೇಜ್ ಆಫ್ ಆರ್ಟ್ & ಡಿಸೈನ್ (Ontario College of Art & Design) ನಲ್ಲಿ ಪದವಿ ಪಡೆದುಕೊಂಡು ತದನಂತರದ ದಿನಗಳಲ್ಲಿ ಲೆಕ್ಸಸ್ (Lexus), ಸೋನಿ (Sony), ಹೋಂಡಾ (Honda) ದಂತಹ ಪ್ರತಿಷ್ಠಿತ ಕಂಪನಿಗಳ ಜಾಹೀರಾತುಗಳ ನಿರ್ಮಾಣಗಳಿಗೆ ಕಲಾ ನಿರ್ದೇಶಕರಾಗಿ ಸೇವೆ ಆರಂಭಿಸಿದರು. ತದನಂತರ ನೈಕಿ ಜೋರ್ಡಾನ್ (Nike Jordan) ಬ್ರ್ಯಾಂಡ್ ತಂಡವನ್ನು ಸೇರಿಕೊಂಡರು. ಅಷ್ಟೇ ಅಲ್ಲ, ಓಲಿಂಪಿಕ್ ಅಭಿಯಾನದಲ್ಲೂ ಪ್ರಮುಖ ಪಾತ್ರವಹಿಸಿದ ಕಲಾವಿದರು ಇವರು. ಈಗ ತಮ್ಮದೇ ಆದ ಸಂಸ್ಥೆಯನ್ನು ಹೊಂದಿದ್ದಾರೆ.
ಮಿನೆರ್ವಾ ಜಿಎಂ (Minerva GM): ಮೆಕ್ಷಿಕನ್ ಕಲಾವಿದೆ. ಕೆರಿಬಿಯನ್ ಮೂಲದವರಾದ ಇವರು ಈಗ ಮೆಕ್ಸಿಕೊದಲ್ಲಿ ವಿನ್ಯಾಸಕಿಯಾಗಿ, ಖ್ಯಾತ ಇಲಸ್ಟ್ರೇಟರ್ ಆಗಿ ಸಂಪಾದಕೀಯ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಜಾಹೀರಾತು ಮತ್ತು ಜವಳಿ ಕ್ಷೇತ್ರದಲ್ಲೂ ಪ್ರಸಿದ್ಧ ವಿನ್ಯಾಸಕಿಯಾಗಿ ಪ್ರಚಲಿತರು. ಟೊಲುಕಾದಲ್ಲಿ ಜನಿಸಿದ ಇವರು, ಟೆಕ್ನೊಲೋಜಿಕೊ ಡಿ ಮಾಂಟರ್ರಿ (Tecnológico de Monterrey) ಇಂದ ಪದವಿ ಪಡೆದುಕೊಂಡಿದ್ದಾರೆ. ಮೆಕ್ಸಿಕೊದಲ್ಲಿ ವೃತ್ತಿ ಆರಂಭಿಸಿದ ಇವರು, ಅನೇಕ ಅಂತಾರಾಷ್ಟ್ರೀಯ ಆಯೋಜಕರ ಜೊತೆ, ಪ್ರತಿಷ್ಠಿತ ಈವೆಂಟ್ಗಳಿಗೆ ವಿನ್ಯಾಸಕಿಯಾಗಿ, ಇಲಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಕಲಾಕೃತಿಯ ಮೂಲಕ ಸ್ಥಳೀಯ ಕಥೆ ಹೇಳುವಂತಹ ಚಿತ್ರಗಳನ್ನು ಸಮಕಾಲೀನ ನೆಲೆಯಲ್ಲಿ ರಚಿಸುವ ಪ್ರೌಢಿಮೆ ಇವರದ್ದಾಗಿದೆ.
ಹ್ಯಾಂಕ್ ವಿಲ್ಲಿಸ್ ಥಾಮಸ್ (Hank Willis Thomas): ನ್ಯೂಯಾರ್ಕ್ ಮೂಲದ ಕಲಾವಿದರು. ಪರಿಕಲ್ಪನಾ (conceptual) ಕಲಾವಿದರಾಗಿ ಪ್ರಸಿದ್ಧರು. ನ್ಯೂಜರ್ಸಿಯ ಪ್ಲೇನ್ಫೀಲ್ಡ್ (Plainfield)ನಲ್ಲಿ ಜನಿಸಿದ ಇವರು, ನ್ಯೂಯಾಕ್ ವಿಶ್ವವಿದ್ಯಾನಿಯದಿಂದ ಬಿ.ಎಫ್.ಎ. ಪದವಿಯನ್ನು, ಕ್ಯಾಲಿಫೋರ್ನಿಯಾ ಕಾಲೇಜ್ ಆಫ್ ಆರ್ಟ್ಸ್ (California College of the Arts) ನಿಂದ ಎಂ.ಎಫ್.ಎ. ಪದವಿಯನ್ನು ಪಡೆದುಕೊಂಡಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೆರಿಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಇವರ ಶಿಲ್ಪ ಕಲಾಕೃತಿಗಳು, ಪ್ರತಿಷ್ಠಾಪನಾ ಕಲಾಕೃತಿಗಳು ವಿಶ್ವದ ಅನೇಕ ಕಡೆಗಳಲ್ಲಿ ನೋಡಬಹುದಾಗಿದೆ.

















