• ದಲಿತ, ರೈತ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಹೊಂದಿದವರು
ಕರ್ನಾಟಕದ ಅಂತಾರಾಷ್ಟ್ರಿಯ ಖ್ಯಾತಿಯ ಕಲಾವಿದ, ಪ್ರತಿಷ್ಠಿತ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ. ಶಿವಪ್ರಸಾದ್ (ಕೆ.ಟಿ.ಎಸ್.) ಅವರು 2026, ಜೂನ್ 30 ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.
ಆಧುನಿಕ ಕಲಾಕ್ಷೇತ್ರ ಕಂಡ ಮೇರು ಕಲಾವಿದರಾದ ಕೆ.ಟಿ.ಎಸ್. ಅವರಿಗೆ 79 ವರ್ಷ ವಯಸ್ಸಾಗಿತ್ತು. ಶ್ರೀಯುತರು ಕುಟುಂಬ ಸದಸ್ಯರನ್ನು, ಅಪಾರ ಕಲಾಬಂಧುಗಳನ್ನು, ಹಿತೈಷಿಗಳನ್ನು ಅಗಲಿದ್ದಾರೆ. ಹಾಸನ ಮೂಲದವರಾದ ಕೆ.ಟಿ.ಎಸ್. ಅವರು ಅಸಾಮಾನ್ಯ ಕಲಾವಿದರು. ಅಷ್ಟೇ ಅಲ್ಲ, ಚಿಂತಕರಾಗಿ, ಸಾಮಾಜಿಕ ಹೋರಾಟಗಾರರಾಗಿ, ಛಾಯಾಗ್ರಾಹಕರಾಗಿ ಗುರುತಿಸಿಕೊಂಡವರು. ದಲಿತ ಚಳವಳಿ, ರೈತ ಹೋರಾಟಗಳಲ್ಲಿ ಪಾಲ್ಗೊಂಡು, ಮುಂಚೂಣಿಯಲ್ಲಿದ್ದು ಕಲಾವಿದರ ಪರವಾದ ಗಟ್ಟಿ ಧ್ವನಿ ಮೊಳಗಿಸಿದ ಅಪರೂಪ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದರು. ಸಮಾಜಮುಖಿ ಕಲಾವಿದ ಅನಿಸಿಕೊಂಡಿದ್ದರು. ಕಲಾಕ್ಷೇತ್ರದ ಮಟ್ಟಿಗೆ ನಿಷ್ಠುರವಾದಿಯಾಗಿ ಕಾಣಿಸಿಕೊಂಡಿದ್ದರು.
ಫೋಟೋ ರಿಯಲಿಸಂ, ಪಾರ್ಪ್ ಆರ್ಟ್ ಮತ್ತು ಅಮೂರ್ತತೆಯ ವಿಭಿನ್ನ ಸಂಯೋಜನಾತ್ಮಕ ಶೈಲಿಯನ್ನು ಅಳವಡಿಸಿಕೊಂಡು ಕಲಾಕೃತಿಗಳನ್ನು ರಚಿಸುವ ಮೂಲಕ ಕರ್ನಾಟಕ ಕಲಾ ಇತಿಹಾಸದ ಪುಟಗಳಲ್ಲಿ ಹೊಸದೊಂದು ಛಾಪು ಮೂಡಿಸಿದ್ದರು. ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆರ್ಟ್ ನಲ್ಲಿ 1973ರಲ್ಲಿ ಪದವಿ ಪಡೆದುಕೊಂಡಿದ್ದ ಶ್ರೀಯುತರು ದೇಶಾದ್ಯಂತ ಅಪಾರ ಸ್ನೇಹ ಬಳಗ ಹೊಂದಿದ್ದರು. ಕರ್ನಾಟಕದ ಕಲಾಬಳಗಕ್ಕೆ ಕೆ.ಟಿ.ಎಸ್. ಎಂದೇ ಖ್ಯಾತರಾಗಿದ್ದ ಇವರು, 2001ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಕರ್ನಾಟಕ ಲಲಿತಕಲಾ ಪ್ರಶಸ್ತಿಯನ್ನು ಮೂರು ಬಾರಿ ತಮ್ಮ ಮುಡಿಗೇರಿಸಿಕೊಂಡಿದ್ದರು.
ಕೆ.ಟಿ. ಶಿವಪ್ರಸಾದ್ ಅವರ ನಿಧನ ಕರ್ನಾಟಕ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ. ಹೋಗಿ ಬನ್ನಿ ಸರ್.








