- Art Houz ಗ್ಯಾಲರಿಯಲ್ಲಿ ತ್ರಿಮೂರ್ತಿಗಳ ತ್ರಿಭಾವ ದರ್ಶನ
ಮನುಷ್ಯನ ಮನಸ್ಸು ಒಬ್ಬರಿಂದೊಬ್ಬರಲ್ಲಿ ಸಾಕಷ್ಟು ಭಿನ್ನತೆಯನ್ನು ಹೊಂದಿರುತ್ತದೆ. ಒಬ್ಬರು ಯೋಚಿಸಿದಂತೆ ಇನ್ನೊಬ್ಬರು ಯೋಚಿಸಲಾರರು. ಆಲೋಚನೆಗಳೇ ಭಿನ್ನವಾಗಿರುತ್ತವೆ. Everyone possesses a unique cognitive map. Factors like genetics, upbringings, and emotional states shape how we perceive the world. Consequently, individuals can evaluate the same information and arrive at completely different conclusions. ಈ ಕಾರಣಕ್ಕಾಗಿಯೇ ನಮ್ಮ ಸುತ್ತ ವೈವಿಧ್ಯತೆ ಇದೆ. ಮನುಷ್ಯನ ನಡತೆ, ನೋಟ, ಅಭಿಪ್ರಾಯ, ಆಲೋಚನೆಯಿಂದ ಹಿಡಿದು ಎಲ್ಲವೂ ವಿಭಿನ್ನವಾಗಿ ಕಾಣಿಸುತ್ತವೆ. ಎಷ್ಟೇ ಸಾಮ್ಯತೆ ಕಾಣಿಸಿದರೂ ಬಿನ್ನತೆ ಇದ್ದೇ ಇದೆ.
ಹಾಗೇ ಸದಾಕಾಲ ಸೃಜನಶೀಲನಾಗಿ ಬದುಕುವ ಕಲಾವಿದರಲ್ಲಿ ಈ ಭಿನ್ನತೆ ಇಲ್ಲದಿರುತ್ತದೆಯೇ? ಖಂಡಿತವಾಗಿ ಭಿನ್ನತೆ ಕಾಣಿಸಿಗಲಿದೆ. ಬಹುತೇಕ ಕಲಾವಿದರು ಪ್ರಕೃತಿ ಸೇರಿದಂತೆ ನಮ್ಮ ಬಾಹ್ಯ ಜಗತ್ತಿನ ಸಾವಿರಾರು ಸಂಗತಿಗಳಿಂದಲೇ ಪ್ರೇರೇಪಿತರಾಗುತ್ತಾರೆ. ಆ ಮೂಲಕ ತನ್ನ ಅಭಿವ್ಯಕ್ತಿಯಿಂದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಾರೆ. ಇಂತಹ ಭಿನ್ನ ಅಭಿವ್ಯಕ್ತಿಯನ್ನು ಶಕ್ತಿಯನ್ನಾಗಿಸಿಕೊಂಡಿರುವ ಪ್ರತಿಭಾವಂತ ಮೂವರು ಕಲಾವಿದರ ಕಲಾಕೃತಿಗಳ ‘TRIALOGUE-Beyond Similarities’ ಪ್ರದರ್ಶನ ಬೆಂಗಳೂರಿನ Art Houz ಗ್ಯಾಲರಿಯಲ್ಲಿ ನಡೆಯುತ್ತಿದೆ. ಕುಶಾಲ್ ಕುಮಾರ್ ಎನ್.ಎಸ್. (Kushal Kumar N.S.), ರಾಹುಲ್ ಮೇತ್ರೆ (Rahul Mhetre) ಮತ್ತು ವಿಶ್ವಾಸ್ ಎಂ. (Vishwas M.) ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ವಿಶ್ವಾಸ್ ಅವರು ಪ್ರಕೃತಿಯಲ್ಲಿನ ಅಚ್ಚರಿಗಳಲ್ಲೊಂದಾದ ಮರಗಳ ಸೌಂದರ್ಯವನ್ನೇ ಸ್ಫೂರ್ತಿಯಾಗಿಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಮರಗಳ ಮಹತ್ವ ಎಷ್ಟು ಎನ್ನುವ ಸಂದೇಶವನ್ನೂ ಅನಾವರಣಗೊಳಿಸುವ ಸೂಕ್ಷ್ಮ ಸಂದೇಶವನ್ನೂ ಅವರ ಕಲಾಕೃತಿಗಳಲ್ಲಿ ನೋಡಲು ಸಾಧ್ಯವಾಗಲಿದೆ. ಬಣ್ಣಗಳನ್ನು ನಿರ್ವಹಿಸಿರುವ ರೀತಿ ಆಸಕ್ತಿ ಮೂಡಿಸುತ್ತವೆ. The only source of knowledge is experience ಎನ್ನುವಂತೆ ವಿಶ್ವಾಸ್ ಅವರ ಕಲಾಕೃತಿಗಳಲ್ಲಿನ ಕೆಲವೊಂದಿಷ್ಟು ಬದಲಾವಣೆಗಳು ಅವರೊಳಗಿನ ಭಿನ್ನ ಆಲೋಚನೆಗಳ ಸೃಜನಶೀಲತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನೂ ತೆರೆದಿಡುತ್ತವೆ. ಅವರ ಕೆಲ ಕಲಾಕೃತಿಗಳು ನಿರೀಕ್ಷೆಯನ್ನು ಹೆಚ್ಚಿಸುವಂತಿವೆ.
ಕುಶಾಲ್ ಕುಮಾರ್ ಅವರು ಕೂಡ ಜೀವ ಸಂಕುಲದ ಸೌಂದರ್ಯ ಅರಸಿ ಹೊರಟಿದ್ದಾರೆ. ನಿಸರ್ಗ ಸ್ವರ್ಗದ ನೆಮ್ಮದಿಗಿಂತ ಬೇರಿನ್ನೇನು ಬೇಕೆನ್ನುವ ಭಾವ ಅವರ ಒಂದಿಷ್ಟು ಕಲಾಕೃತಿಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತವೆ. ಅಲಂಕಾರಿಕ ಧೋರಣೆ ಹೇಳುತ್ತವೆಯಾದರೂ, ಜತೆ ಜೊತೆಗೆ ಭಾವಾಭಿವ್ಯಕ್ತಿಯ ಚಹರೆ ಅಳವಡಿಸಿಕೊಳ್ಳುತ್ತಾ ಸಾಗಿದ್ದಾರೆ. ಎರಡು ವಿಭಿನ್ನ ಸರಣಿ ಕಲಾಕೃತಿಗಳನ್ನು ಪ್ರದರ್ಶಿಸಿ, ತಮ್ಮೊಳಗಿನ ಕಲಾವಿದನ ಭಿನ್ನ ಆಲೋಚನೆಗೆ ವೇದಿಕೆ ಸೃಷ್ಟಿಸಿಕೊಂಡಿದ್ದಾರೆ. ಇನ್ನು ರಾಹುಲ್ ಅವರ ಕಲಾಕೃತಿಗಳು ಜೀವನದ ಮೌಲ್ಯಗಳನ್ನು, ಕೌಟುಂಬಿಕ ಅನುಭವಗಳನ್ನು ತೆರೆದಿಡುವಂತಿವೆ. ಬಣ್ಣಗಳನ್ನು ದುಡಿಸಿಕೊಂಡಿರುವ ರೀತಿ ವಿಭಿನ್ನ, ವಸ್ತು ವಿಷಯ ಸಾಮಾನ್ಯ ಅನಿಸಬಹುದಾದ ಸಾಧ್ಯತೆ ಹೆಚ್ಚು.
ಸ್ನೇಹಿತರೆ, ಮೂವರು ಯುವ ಕಲಾವಿದರ ‘TRIALOGUE-Beyond Similarities’ ಕಲಾಪ್ರದರ್ಶನ ಜೂನ್ 30ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.






