• ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ “Unseen Impressions” ಕಲಾಪ್ರದರ್ಶನ
ಯಾವುದೇ ಕಲಾಕೃತಿ ತನ್ನ ಒಳಹೂರಣದ ಕಾರಣಕ್ಕಾಗಿ ನೋಡುಗರ ಗಮನ ಸೆಳೆಯುವಂತೆ ಮಾಡುತ್ತದೆ ಎಂದಾದರೆ, ಅದು ಆ ಕಲಾಕೃತಿಯ ಹಿಂದಿನ ಶ್ರಮಕ್ಕೆ ಸಿಕ್ಕ ಪ್ರತಿಫಲ. ಕಲಾವಿದ ಅಥವಾ ಕಲಾವಿದೆ ತನ್ನ ಆತ್ಮತೃಪ್ತಿಗಾಗಿ ಕಲೆಯ ಸದ್ಬಳಕೆ ಮಾಡಿಕೊಂಡಾಗ ಸಹಜವಾಗಿಯೇ ಕಲಾಕೃತಿ ಯಶಸ್ಸಿನ ದಡ ಸೇರಿಸಲಿದೆ. ಅದೊಂದು ಅತ್ಯಂತ ಯಶಸ್ವಿ ಅಭಿವ್ಯಕ್ತಿ ಆಗಲಿದೆ. ಕಲೋಪಾಸಕರಿಗೆ ಆಪ್ತವಾಗಲಿದೆ.
ಅಮೆರಿಕದ ಪ್ರಸಿದ್ಧ ಲೇಖಕಿ ಆಯನ್ ರಾಂಡ್ ಮನುಷ್ಯ ಸಹಜ ಆಲೋಚನೆಗೆ ಸಂಬಂಧಿಸಿ ಹೀಗೊಂದು ಮಾತು ಹೇಳುತ್ತಾರೆ, ಅದೇನೆಂದರೆ “The question isn’t who is going to let me, it’s who is going to stop me”. ಮನುಷ್ಯ ತನ್ನ ಆಲೋಚನ ಲಹರಿಯನ್ನೇ ಧನಾತ್ಮಕ (positive) ಆಗಿಸಿಕೊಳ್ಳಬೇಕು ಎಂಬರ್ಥದಲ್ಲಿ ಆಯನ್ ಹೇಳುತ್ತಾರೆ. “ನಮಗ್ಯಾರು ಅವಕಾಶ ಕೊಡುತ್ತಾರೆ” ಎನ್ನುವ ಆಲೋಚನೆ ಬಿಟ್ಟು ನಮ್ಮನ್ನಾರು ತಡೆಯಬಲ್ಲರು ಎನ್ನುವುದು ಧನಾತ್ಮಕ ಚಿಂತನೆಯಾಗಿ ಕಾಣಿಸುತ್ತದೆ.
ಇಂತಹದ್ದೊಂದು ಆತ್ಮವಿಶ್ವಾಸಕ್ಕೆ ಉದಾಹರಣೆ ಆಗಬಲ್ಲ ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆಯುತ್ತಿರುವ ದೇವಿಪ್ರಿಯಾ ಅವರ “Unseen Impressions” ಶೀರ್ಷಿಕೆಯಡಿ ನಡೆಯುತ್ತಿದೆ. ಪ್ರಕೃತಿ ಸಹಜತೆಯ ವಿಚಾರ, ಆಲೋಚನೆಗಳ ಕಾರಣಕ್ಕಾಗಿ, ಕಲಾಕೃತಿಗಳ ಆಂತರ್ಯದ ಸಂದೇಶಕ್ಕಾಗಿ ಮತ್ತು ಪ್ರಯೋಗಾತ್ಮಕ ತಂತ್ರಗಾರಿಕೆ, ಮೃವಳಿಕೆಯ ಕಾರಣಕ್ಕಾಗಿ ಕಲಾಪ್ರದರ್ಶನ ಗಮನ ಸೆಳೆಯುವಂತಿದೆ.
ಎಲ್ಲವೂ ಒಂದೇ, ಎಲ್ಲದರಲ್ಲೊಂದೊಂದು ವಿಶೇಷ ಎನ್ನುವಂತಹ ಕಲಾಕೃತಿಗಳನ್ನು ದೇವಿಪ್ರಿಯಾ ಅವರು ಪ್ರದರ್ಶಿಸಿದ್ದಾರೆ. ಪ್ರಕೃತಿ ಯಾವ ಯಾವ ಕಾರಣಕ್ಕಾಗಿ ಸ್ಫೂರ್ತಿ ಆಗಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಕೃಷ್ಣ ವರ್ಣ ತುಸು ಜಾಸ್ತಿ ಅನಿಸಿದರೂ ರೇಖೆಗಳ ಹರಿವು ಸಮತೋಲನ ಕಾಪಾಡಿಕೊಳ್ಳುವಂತಿವೆ. Enclosed Ecosystems, Winged Armor, Sanctuaries of Connection, Softness of Strength, Unannounced Purpose ಶೀರ್ಷಿಕೆಯ ಕಲಾಕೃತಿಗಳು ಆಪ್ತವೆನಿಸಿದವು. ಕೆಲವೊಂದು ಕಲಾಕೃತಿಗಳಲ್ಲಿ ಕಾಣಿಸುವ ಉದ್ದೇಶಪೂರ್ವಕವಾಗದ ಅಪೂರ್ಣತೆಯ ನಿರ್ವಹಣೆ ಪ್ರಶ್ನೆ ಹುಟ್ಟುಹಾಕುತ್ತವೆಯಾದರೂ ಒಂದೊಳ್ಳೆಯ ಪ್ರಯತ್ನವಾಗಿ ನೋಡುಗರ ಕುತೂಹಲ ಇಮ್ಮಡಿಗೊಳಿಸುತ್ತವೆ. ಮುದ್ರಣ ತಂತ್ರವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದೂ ಗಮನಾರ್ಹ.
ಇನ್ನು ಕಲಾಕೃತಿಗಳಲ್ಲಿನ ಅನೇಕ ಅಂಶಗಳು (elements) ಕಲಾವಿದೆಯ ಆಲೋಚನೆಗಳ ಮೇಲಿನ ಗಾಢ ಪ್ರಭಾವಕ್ಕೆ ಸಾಕ್ಷಿಯಾಗಿವೆ. ವಿಭಿನ್ನ ಭಾವನೆಗಳನ್ನೂ ನೇರಾನೇರವಾಗಿ ತಲುಪಿಸುವ ಪ್ರಯತ್ನವೂ ಹೌದು.
ಸ್ನೇಹಿತರೆ “Unseen Impressions” ಕಲಾಪ್ರದರ್ಶನ ಅಕ್ಟೋಬರ್ 16, ನಾಳೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.







