ಛಂಬಲ್ ಕಣಿವೆ ಅನುಭವ ಬಿಚ್ಚಿಟ್ಟ ಡಾ.ಮುಹಮ್ಮದ್ 

Share This

• ಚಿತ್ರಕಲಾ ಪರಿಷತ್ತಲ್ಲಿ ಒಂದೊಳ್ಳೆಯ ಕಾರ್ಯಕ್ರಮ
ಪದ್ಮಶ್ರೀ ಪುರಸ್ಕೃತ ಕರಿಂಗಮಣ್ಣು ಕುಳಿಯಿಲ್ ಮುಹಮ್ಮದ್, ಬಹಳ ಮಂದಿಗೆ ಡಾ. ಕೆ.ಕೆ. ಮುಹಮ್ಮದ್ ಎಂದೇ ಚಿರಪರಿಚಿತರು. ಭಾರತೀಯ ಪುರಾತತ್ವ ಶಾಸ್ತ್ರಜ್ಞರ ಬಗ್ಗೆ ಮಾಹಿತಿ ಬಲ್ಲವರು ಇವರ ಸೇವೆಯನ್ನು ಸ್ಮರಿಸದೇ ಇರಲಾರರು. ಕಾರಣ ಅವರ ಸೇವಾವಧಿಯಲ್ಲಿ ಕೈಗೊಂಡಿರುವ ಕಾರ್ಯ ಎಲ್ಲರನ್ನೂ ನಿಬ್ಬೆರಗಾಗಿಸುವಂತದ್ದು. ಶ್ರೀಯುತರ ವೃತ್ತಿಜೀವನದ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿಸಿಕೊಳ್ಳುವ ಅವಕಾಶವೊಂದನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಮಾಡಿ ಕೊಟ್ಟಿತ್ತು. ನಿನ್ನೆ ಗುರುವಾರ ಸಾಯಂಕಾಲ ನಡೆದ ಕಾರ್ಯಕ್ರಮವೊಂದರಲ್ಲಿ ಮುಹಮ್ಮದ್ ಅವರು “Conservation challenges of Temples in the Chambal Valley” ವಿಷಯ ಕುರಿತು ಮಾತನಾಡಿದರು. ಛಂಬಲ್ ಕಣಿವೆಯ ದೇವಾಲಯಗಳ ಸಂರಕ್ಷಣಾ ಸವಾಲುಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅನೇಕ ಹೊಸ ಹೊಸ ವಿಚಾರಗಳು ಅವರ ಅನುಭವದ ರೂಪದಲ್ಲಿ ಹೊರಬಂದವು.
ತಮ್ಮ ವೃತ್ತಿಜೀವನದ ಪ್ರಮುಖ ಘಟ್ಟವೆಂದು ಹೇಳಿಕೊಳ್ಳುವ ಮುಹಮ್ಮದ್ ಅವರು, ಛಂಬಲ್ ಕಣಿವೆ ಪ್ರದೇಶಗಳಲ್ಲಿನ ಸಾವಿರಾರು ವರ್ಷಗಳ ಹಿಂದಿನ ದೇವಾಲಯಗಳನ್ನು ಹೇಗೆ ಪುನರ್ ನಿರ್ಮಾಣ ಮಾಡಿದೆವು, ಆ ಸಂದರ್ಭದಲ್ಲಿ ಅಲ್ಲಿನ ಡಕಾಯಿತರ ತಂಡದೊಂದಿಗೆ ಹೇಗೆಲ್ಲಾ ಹೋರಾಟ ನಡೆಸಬೇಕಾಯಿತು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುಳ್ಳಿನ ಹಾದಿ ಹೇಗಿತ್ತು, ಅವರ ಸಹಕಾರ ಹೇಗೆ ಸಿಕ್ಕಿತು… ಹೀಗೆ ನಾನಾ ರೀತಿಯ ಅನುಭವಗಳನ್ನು ಸಂಕ್ಷಿಪ್ತವಾಗಿಯೇ ಹೇಳಿಕೊಂಡು ಹೋದರು. ಮಾತಿನ ಆರಂಭದಲ್ಲೇ ಕೆಲವು ವ್ಯಕ್ತಿಗಳ, ಡಕಾಯಿತರ ಮುಖ ಪರಿಚಯ ಮಾಡಿಕೊಟ್ಟರು. ಅವರಿಂದಾದ ಸವಾಲುಗಳ ಬಗ್ಗೆಯೂ ತಿಳಿಸುತ್ತಾ, ದೇವಾಲಯಗಳ ಪುನರ್ ನಿರ್ಮಾಣ ಕಾರ್ಯ ಹೇಗೆ ಸಾಧ್ಯವಾಯಿತು ಎನ್ನುವುದರ ಬಗ್ಗೆ ವಿವರಿಸಿದರು. ಪುರಾತತ್ವ ಸರ್ವೇಕ್ಷಣ ಅಧಿಕಾರಿಯೊಬ್ಬರು ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಎನ್ನುವುದರ ಮಾಹಿತಿ ಹಂಚಿಕೊಂಡರು.
ಯಾವುದೇ ಕಟ್ಟಡ ಕುಸಿದಾಗ ಮತ್ತೆ ಅದೇ ರೀತಿಯಲ್ಲಿ ಮರು ನಿರ್ಮಾಣ ಕಾರ್ಯ ಕೈಗೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ಸಾವಿರಾರು ವರ್ಷಗಳ ಹಿಂದಿನ ದೇವಾಲಯವನ್ನು ಪುನರ್ ನಿರ್ಮಾಣ ಎಷ್ಟು ಸವಾಲುಗಳನ್ನು ಒಳಗೊಂಡಿರುತ್ತದೆ ಎಂದು. ಹತ್ತಾರು ಶೈಲಿಯ ದೇವಾಲಯಗಳು ಇರುವ ಭಾರತದಲ್ಲಿ ಇತಿಹಾಸ ಅರಿಯದೆ, ಶೈಲಿಗಳ ಬಗ್ಗೆ ಮಾಹಿತಿ ಇಲ್ಲದೆ, ಆಳವಾದ ಅಧ್ಯಯನವಿಲ್ಲದೆ, ಪುನರ್ ನಿರ್ಮಾಣದ ಅನುಭವ ಇಲ್ಲದೆ ಈ ಕೆಲಸಕ್ಕೆ ಮುಂದಾಗುವುದು ಅಷ್ಟು ಸುಲಭವಲ್ಲ. ಹೀಗಿರುವಾಗ ಡಾ. ಮುಹಮ್ಮದ್ ಅವರು ಇಂತಹ ಅನೇಕ ಸವಾಲುಗಳಿಗೆ ಎದೆಗುಂದದೆ, ಎಲ್ಲಿಯೂ ಇತಿಹಾಸಕ್ಕೆ, ಸಂಸ್ಕೃತಿಗೆ ಚ್ಯುತಿ ಬರದ ರೀತಿಯಲ್ಲಿ, ಸಾಮಾಜಿಕವಾಗಿ ಎದುರಾಗುವ ಸವಾಲುಗಳನ್ನೂ ಮೆಟ್ಟಿನಿಂತು ಕರ್ತವ್ಯ ಪಾಲನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಭಾರತದ ಯಶಸ್ವಿ ಪುರಾತತ್ವ ಸರ್ವೇಕ್ಷಣ ಅಧಿಕಾರಿ ಎನಿಸಿಕೊಂಡಿದ್ದಾರೆ. ನಿಜಕ್ಕೂ ಅವರ ವೃತ್ತಿ ಜೀವನ ನಿಬ್ಬೆರಗಾಗಿಸುವಂತಿದೆ.
ಪತ್ರಕರ್ತನಾಗಿ ಸೇವೆ ಸಲ್ಲಿಸಿರುವ ನಾನು ಈ ಅಧಿಕಾರಿಯ ಬಗ್ಗೆ ಓದಿಕೊಂಡಿರುವಂತೆ ಛಂಬಲ್ ಕಣಿವೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಮುಹಮ್ಮದ್ ಅವರು ಅಲ್ಲಿನ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ರಾಜಕಾರಣಿಗಳು, ಯಾವ ಕೆಲಸಕ್ಕೂ ಹೇಸದ ರೌಡಿ, ಡಕಾಯಿತರು, ಗಣಿ ಉದ್ಯಮಿಗಳ ವಿರುದ್ಧ ಹೋರಾಡಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿರುವ ಘಟನೆಗಳು ಕಾದಂಬರಿಯಾಗಲಿದೆ, ಒಬ್ಬ ಒಳ್ಳೆಯ ನಿರ್ದೇಶಕನಿಗೆ ಸಿನಿಮಾವೊಂದನ್ನು ನಿರ್ಮಿಸಲು ಉತ್ತಮ ಸರಕಾಗಲಿದೆ. ಪುನರ್ ನಿರ್ಮಾಣ ಕಾರ್ಯದ ವೇಳೆಯೇ ಇದೇ ಸಮಾಜದ ಕೆಲ ದುರುಳರು ಕೆಡವಿದ ಉದಾಹರಣೆಯೂ ಇದೆ. ನಿಜಕ್ಕೂ ಅವರ ಮಾತುಗಳಲ್ಲಿ ಕೇಳಿಸಿಕೊಂಡಿರುವ ಕೆಲವು ಮಾತುಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗುವುದರಲ್ಲಿ ಯಾವ ಅನುಮಾನವಿಲ್ಲ.
ಶ್ರೀಯುತರ ಸಾಧನೆಗೆ, ಸರ್ಕಾರಿ ಸೇವೆಗೆ, ಸಾಮಾಜಿಕ ಕಾರ್ಯಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇಂತಹ ಅಧಿಕಾರಿಗಳು ಇದ್ದಾಗ, ಇಚ್ಚಾಶಕ್ತಿ ಉಳ್ಳವರಿಂದ ಈ ದೇಶದ ಇತಿಹಾಸ, ಸಂಸ್ಕೃತಿ ಉಳಿದುಕೊಳ್ಳಲು ಸಾಧ್ಯವಾಗಲಿದೆ. ಅಯೋಧ್ಯಾ ರಾಮಮಂದಿರ ತೀರ್ಪಿನಲ್ಲಿ ಪ್ರಮುಖ ಪಾತ್ರವಹಿಸಿರುವವರಲ್ಲಿ ಒಬ್ಬರಾಗಿರುವ ಡಾ.ಕೆ.ಕೆ. ಮುಹಮ್ಮದ್ ಅವರು ಮೂಲತಃ ಕೇರಳದವರು.
ಸ್ನೇಹಿತರೆ ಹೀಗೆ ಬರೆಯುತ್ತ ಹೋದರೆ ಡಾ. ಕೆ.ಕೆ. ಮುಹಮ್ಮದ್ ಅವರ ಬಗ್ಗೆ ಸಾಕಷ್ಟು ಆಸಕ್ತಿದಾಯಕ ಸಂಗತಿಗಳನ್ನು ಬರೆಯಬಹುದು. ದೇವರು ಅವರಿಗೆ ಇನ್ನಷ್ಟು ಸಾಧನೆ ಮಾಡುವ ಶಕ್ತಿ ಕೊಡಲಿ.

Share This

Leave a Reply

Your email address will not be published. Required fields are marked *