• ನೆಲೆಯಾಚೆಗಿನ ಅಲೆಗಳ ಛೇದಿಸುವ ಪ್ರಗತಿ ದಾಲ್ವಿ ಕಲಾಕೃತಿಗಳು
ಕಾಣಿಸದ ಧ್ವನಿಗಳು ಕೇಳಿಸುವುದು ಹೇಗೆ? ಅಥವಾ ಕಾಣಿಸದ ಧ್ವನಿಗಳು ಆಕಾರವಾಗಿ ಗೋಚರಿಸುವುದಾದರೆ ಅದು ಹೇಗೆಸಾಧ್ಯ? ಧ್ವನಿಯೂ ಕಾಣಿಸುತ್ತಿಲ್ಲ, ಆದರೆ ಆಕಾರವಾಗಿ ಗೋಚರಿಸುತ್ತಿದೆ!
ಮನುಷ್ಯ ಭಾವನೆಗಳು ಅನೇಕ ಸಂದರ್ಭಗಳಲ್ಲಿ ಸಾರ್ವಜನಕವಾದಾಗ ಮನುಷ್ಯ ಬೆತ್ತಲಾಗುತ್ತಾ ಹೋಗುತ್ತಾನೆ. ಅದನ್ನು ಸ್ವೀಕರಿಸುವುದು, ಸ್ವೀಕರಿಸದೇ ಇರುವುದು ಪ್ರಕ್ರಿಯೆಯ ನಂತರದ ಕ್ರಿಯೆ. ಅದು ಪ್ರತಿಕ್ರಿಯೆಯೂ ಆಗಿರಬಹುದು. ಇಂತಹ ಅನೇಕ ಸಂಕೀರ್ಣ ಸಂಗತಿಗಳು ಆಧುನಿಕ ಜೀವನಕ್ಕೆ ಒಗ್ಗಿಕೊಂಡಿರುವ ಸಮಾಜದಲ್ಲಿ ಅತಿ ಎನಿಸುವ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಇನ್ನು ಕೆಲ ಸಂದರ್ಭಗಳಲ್ಲಿ ಪ್ರಾಮುಖ್ಯತೆ ಪಡೆಯದೇ ಕಮರಿಹೋಗುವ ಸಾಧ್ಯತೆಗಳೂ ಇವೆ. ಈ ಎರಡೂ ಸಹಜವಾದ ಪ್ರಕ್ರಿಯೆಗಳು ಮತ್ತು ಸಮಾಜದ ಮೇಲೆ ಗಂಭೀರ ಪರಿಣಾಮವನ್ನೂ ಉಂಟುಮಾಡಬಲ್ಲ ವಿಚಾರಗಳಾಗಿವೆ.
ಮುಂಬೈನ ಪ್ರತಿಷ್ಠಿತ ಜೆ.ಜೆ. ಸ್ಕೂಲ್ ಆಫ್ ಆರ್ಟ್ನ ಕಲಾಶಿಕ್ಷಣ ಮುಗಿಸಿ ಕಳೆದೊಂದು ದಶಕದಿಂದ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರಗತಿ ದಾಲ್ವಿ ಜೈನ್ ಅವರ “Shapes of Unseen Voices” ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ 7ನೇ ಗ್ಯಾಲರಿಯಲ್ಲಿ ನಡೆಯುತ್ತಿದೆ. ಲೆಖಕಿ ನಳಿನಿ ಮಾಳವೀಯ ಅವರು ಈ ಕಲಾಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ. ಒಂದಿಷ್ಟು ಅಮೂರ್ತ ವರ್ಣಚಿತ್ರ, ಇನ್ನೊಂದಿಷ್ಟು ಉದ್ದೇಶಿತ ಪ್ರತಿಷ್ಠಾಪನಾ ಕಲಾಕೃತಿಗಳು, ಸಾಂದರ್ಭಿಕ ಸಾರಭರಿತ ವಿಡಿಯೋ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ವರ್ಣಚಿತ್ರಗಳಲ್ಲಿನ ಅಮೂರ್ತ ಭಾವಕ್ಕೂ ಇನ್ನುಳಿದ ವಿಭಿನ್ನ ಕಲಾಪ್ರಕಾರಗಳಲ್ಲಿ ರೂಪ ತಾಳಿದ ಕಲಾಕೃತಿಗಳಲ್ಲಿ ಗಂಭೀರ ಸಾಮ್ಯತೆಯಾಗಲಿ, ವಿಚಾರ ಪ್ರಚುರ ಪಡಿಸುವ ಸಂವೇದನೆಯಾಗಲಿ ನಿಖರವಾಗಿಸದೇ ನಿಗೂಢವಾಗಿಸಿದೆ. ಆದರೆ ಅಭಿವ್ಯಕ್ತಿ ಹೀಗೆ ಇರಬೇಕೆನ್ನುವ ಯಾವ ನಿಯಮವೂ ಇಲ್ಲವಾದ್ದರಿಂದ ಕಲಾವಿದೆ ಭಾವನಾತ್ಮಕವಾಗಿಯೇ ನೋಡುಗರನ್ನು ತಮ್ಮತ್ತ ಕೇಂದ್ರೀಕರಿಸಿಕೊಳ್ಳುವ ಯಶಸ್ವಿ ಪ್ರಯತ್ನವನ್ನು ಈ ಪ್ರದರ್ಶನದಲ್ಲಿ ಮಾಡಿದ್ದಾರೆ. ಪ್ರದರ್ಶಿತ ಎಲ್ಲಾ ಕಲಾಕೃತಿಗಳೂ ನೋಡುಗನಲ್ಲಿ ಕಲಾವಿದೆಯ ಪೂರ್ವಾಪರ ತಿಳಿದು ನೋಡಿದರೆ ಇನ್ನಷ್ಟು ಸ್ಪಷ್ಟತೆ ಸಿಗಬಹುದೆನ್ನುವ ಭಾವ ಮೂಡಿಸುತ್ತವೆ. ಮಾರ್ಮಿಕವಾಗಿ ವ್ಯಾಖ್ಯಾನಿಸುವುದಾದರೆ, “ಕಥೆ ಹೇಳುವ ಕಲಾಕೃತಿಗಳಲ್ಲಿ ಧ್ವನಿ ಕೇಳಿಸದಂತೆಯೂ, ಧ್ವನಿಯೆತ್ತುವ ಕಲಾಕೃತಿಗಳಲ್ಲಿ ಧ್ವನಿಯೇ ಅಗೋಚರ”. ಒಟ್ಟಾರೆ ಕಲಾವಿದೆಯ ವಿಭಿನ್ನ ದೃಷ್ಟಿಕೋನದ ಅಭಿವ್ಯಕ್ತಿಯ ಕಲಾಪ್ರದರ್ಶನ ಇದಾಗಿದೆ.
ತಾನು ಭಾವಾರ್ಥಿ ಎನ್ನುವ ಮೂಲಕವೇ ನೋಡುಗರನ್ನೂ ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ತಾಯ್ತನದ ಪ್ರಯತ್ನ ಒಂದಾದರೆ, ಕೌಂಟುಂಬಿಕ ಮತ್ತು ಸಾಮಾಜಿಕ ಭಾವನೆಗಳೇ ನನ್ನನ್ನು ಕಲಾವಿದೆಯನ್ನಾಗಿಸಿದೆ ಎಂದು ಪ್ರತಿಪಾದಿಸಿಕೊಳ್ಳುವ ರೀತಿಯಲ್ಲಿ ಪ್ರಗತಿ ದಾಲ್ವಿ ಬಹಳ ಜಾಣತನ ತೋರಿದ್ದಾರೆ. ಜೀವಿಗಳ ಅದರಲ್ಲೂ ಮುಖ್ಯವಾಗಿ ಮನುಷ್ಯ ಭಾವನೆಗಳಿಗೆ ಬೆಲೆಯೇ ಇಲ್ಲವೇನೋ ಎಂಬ ಪರಿಸ್ಥಿತಿಯನ್ನು ಇಂದಿನ ಸಮಾಜದಲ್ಲಿ ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಗತಿ ದಾಲ್ವಿ ಅವರ ಅಭಿವ್ಯಕ್ತಿ ಆಶಾವಾದವನ್ನೂ ಮುಂದಿಡುತ್ತಿದೆ. ಆಶಾಭಾವ ನಿರೀಕ್ಷಿಸುತ್ತಿದೆ. ಇನ್ನು ಪ್ರಗತಿ ದಾಲ್ವಿ ಅವರ ಅಮೂರ್ತ ವರ್ಣಚಿತ್ರಗಳು ಅವರ ಕುಂಚದ ಬಿರುಸು ಹೇಳುತ್ತಿವೆ. ಬಣ್ಣಗಳ ಮೂಲಕ ತಮ್ಮ ಮನಃಶಾಂತಿಗಾಗಿ ನಡೆಸಿದ ಹುಡುಕಾಟದ ಆಧ್ಯಾತ್ಮದ ಭಾವಾಭಿವ್ಯಕ್ತಿಯೇ ಈ ಅಮೂರ್ತ ಕಲಾಕೃತಿಗಳು ಎನ್ನುವಂತಿವೆ. ಬಹುಶಃ ಈ ವರ್ಣಚಿತ್ರಗಳು ಇನ್ನುಳಿದ ಕಲಾಕೃತಿಗಳು ನೋಡುಗರನ್ನು ತಲುಪಬಹುದಾದ ದೃಷ್ಟಿಕೋನದ ಮಾರ್ಗದಲ್ಲಿ ಅಥವಾ ವೇಗದಲ್ಲಿ ತಲುಪುವಲ್ಲಿ ಕೊಂಚ ಹಿಂದುಳಿದು ಬಿಡಬಹುದು. ಹೀಗಾಗಿ ಗ್ಯಾಲರಿಯಲ್ಲಿ ಕಲಾವಿದೆಯ ಉಪಸ್ಥಿತಿ ಅನಿವಾರ್ಯ.
| i dont chase anymore |
ಪ್ರಗತಿ ದಾಲ್ವಿ ಅವರು ಹಿರಿಯ ಕಲಾವಿದೆ ಜಯಶ್ರೀ ಪೊದಾರ್ ಅವರ ಜೊತೆಗೂಡಿ ನಡೆಸಿದ “i dont chase anymore” ಪ್ರದರ್ಶನ ಗಮನ ಸೆಳೆಯಿತು. ಈ ಇಬ್ಬರ ಪ್ರಯತ್ನ ಅನಂತ ನಡಿಗೆ(infinity walk)ಯ ಭಾಗವೇನೋ ಅನಿಸಿತು. ಪ್ರಯತ್ನ ಸ್ವಾಗತಾರ್ಹ, ಶ್ಲಾಘನೀಯ ಮತ್ತು ಅರ್ಥಪೂರ್ಣ. ಅನುಭವಿಸಿದಾಗಲೇ ಇದರ ಪ್ರಯೋಜನ ಅನುಭವಿಸಲು ಸಾಧ್ಯವಾಗೋದು. ಇನ್ಫಿನಿಟಿ ವಾಕ್ ಬಗ್ಗೆ ವಿವರಿಸಿದರೆ ಪುಟಗಟ್ಟಲೇ ಬರೆಯಬೇಕಾದೀತು. ಆದರೆ ಇದನ್ನೇ ನೇರವಾಗಿ ಹೇಳದೆ ಸಂದೇಶ ಕೊಡುವ “ಕಾಣದ ಧ್ವನಿಯ ಆಕಾರ” ಇದಾಗಿತ್ತು ಎನ್ನಬಹುದು.
ಪ್ರಗತಿ ದಾಲ್ವಿ ಜೈನ್ ಸವರಿಗೆ ಅಭಿನಂದನೆಗಳು
ಸ್ನೇಹಿತರೆ, ಸಾಧ್ಯವಾದರೆ ಬಿಡುವು ಮಾಡಿಕೊಂಡು ಕಲಾಪ್ರದರ್ಶನ ವೀಕ್ಷಿಸಿ ಬನ್ನಿ. ಮಾರ್ಚ್ 6ರಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ.