- ಗಮನ ಸೆಳೆದ ಮೆಹ್ತಾ ಅವರ ಮ್ಯೂಸಿಯಂ ಸ್ಟೈಲ್ ಕಲಾಪ್ರದರ್ಶನ
ಪ್ರತಿಷ್ಠಿತ ಕಲಾಪ್ರದರ್ಶನಗಳ ಸಾಲಿಗೆ ಸೇರಿದ ಆರ್ಟ್ ಮುಂಬೈ ಮೂರನೇ ಆವೃತ್ತಿ ಕಲಾರಸಿಕರ, ಕಲಾವಿದರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 13ರಿಂದ 16ರ ತನಕ ಇಲ್ಲಿನ ಮಹಾಲಕ್ಷ್ಮೀ ರೇಸ್ಕೋರ್ಸ್ ಆವರಣದಲ್ಲಿ ನಡೆದ 3ನೇ ಆವೃತ್ತಿಯಲ್ಲಿ 82 ಪ್ರದರ್ಶಕರು 2000ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಇಡೀ ವಿಶ್ವವೇ ಗಮನಿಸಬೇಕಾದ ರೀತಿಯಲ್ಲಿ ಆರ್ಟ್ ಮುಂಬೈ ಆಯೋಜನೆಯಾಗಿತ್ತು.
ಭಾರತದ ಪ್ರಮುಖ ಗ್ಯಾಲರಿಗಳು ತಮ್ಮ ಜೊತೆಗಿರುವ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿದ್ದರೆ, ಇನ್ನೊಂದಿಷ್ಟು ಗ್ಯಾಲರಿಗಳು ಹೊಸ ಮುಖಗಳನ್ನು ಪರಿಚಯಿಸುವ ಪ್ರಯತ್ನಕ್ಕೂ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿ ಕಾಣಿಸಿತು. ರೇಖಾಚಿತ್ರಗಳು, ವರ್ಣಚಿತ್ರಗಳು, ಶಿಲ್ಪ, ಪ್ರತಿಷ್ಠಾಪನಾ ಕಲಾಕೃತಿಗಳು ಸೇರಿದಂತೆ ಸಮಕಾಲೀನ ಕಲಾ ಸಂದರ್ಭಗಳಲ್ಲಿ ಏನೆಲ್ಲಾ ಕಲಾ ಪ್ರಕಾರಗಳನ್ನು ನೋಡಲು ಸಾಧ್ಯವೋ ಅವೆಲ್ಲವೂ ಈ ಕಲಾಪ್ರದರ್ಶನದಲ್ಲಿ ಇದ್ದವು.
ಮೆಹ್ತಾ ಕಲಾಕೃತಿಗಳು ಆಕರ್ಷಣೆ
ದೇಶದ ಪ್ರಸಿದ್ಧ ಕಲಾವಿದ, ತಾಯೆಬ್ ಮೆಹ್ತಾ ಅವರ ಸ್ಮರಣೆ ಈ ಸಾಲಿನ ಆರ್ಟ್ ಮುಂಬೈ ಆಕರ್ಷಣೆಯಾಗಿತ್ತು. ಶತಮಾನೋತ್ಸವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮ್ಯೂಸಿಯಂ ಶೈಲಿಯಲ್ಲಿ ಅವರ ಜೀವಮಾನ ಸಾಧನೆ ಪ್ರತಿಬಿಂಬಿಸುವ, ಹಿನ್ನೋಟ ಕಟ್ಟಿಕೊಡುವಂತಹ ಕಲಾಪ್ರದರ್ಶನ ಆಯೋಜನೆಯಾಗಿತ್ತು. ಭಾರತೀಯ ಕಲಾಕ್ಷೇತ್ರದಲ್ಲಿ ಮೆಹ್ತಾ ಅವರ ಕಲಾ ಜೀವನದಲ್ಲಿ ರಚನೆಯಾಗಿರುವ ಅನೇಕ ಶ್ರೇಷ್ಠ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಉತ್ತಮ ಸಾಧನೆ ಮಾಡಿರುವ ಕಲಾವಿದರೊಬ್ಬರಿಗೆ ಕಲಾಸಮುದಾಯವೊಂದು ಸಲ್ಲಿಸುತ್ತಿರುವ ಗೌರವ ಇದಾಗಿದೆ.












