“ಬಾಯಾರಿಕೆಯಿಂದ ಉಸಿರೇ ನಿಂತು ಹೋಗುತ್ತದೆನ್ನುವ ಸಂಕಷ್ಟದ ಗಳಿಗೆಯಲ್ಲಿ ಗುಟುಕು ನೀರು ಸಿಕ್ಕರೆ ಅದೆಷ್ಟು ಖುಷಿಯಾಗುತ್ತದೋ ಅದೇ ಅನುಭವ”
ಹೌದು ಸ್ನೇಹಿತರೇ… ವಾರದ ಹಿಂದೆಯೇ ನಿಮ್ಮೆಲ್ಲರ ಜೊತೆ ಇಂಥದ್ದೊAದು ಸುದ್ದಿಯಿಂದಾದ ಖುಷಿಯನ್ನು ಹಂಚಿಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ. ಆದರೆ ನನ್ನ ಕೆಲಸದ ಒತ್ತಡದಲ್ಲಿ ಸಾಧ್ಯವಾಗಿರಲಿಲ್ಲ. ಕ್ಷಮೆ ಇರಲಿ.
ಈ ಮೊದಲೇ ಹೇಳಿದಂತೆ ಈ ಸಂಕಷ್ಟದ ಕಾಲದಲ್ಲಿ ಅಂದರೆ ಕೊರೋನಾ ಎಂಬ ಸೋಂಕಿನಿAದಾದ ವ್ಯತಿರಿಕ್ತ ಪರಿಣಾಮಗಳ ನಡುವೆ ಹೀಗೊಂದು ‘ಪಾಸಿಟಿವ್’ ಸುದ್ದಿ ನನ್ನನ್ನು ಆಕರ್ಷಿಸಿತು. ಅನಿವಾರ್ಯವಾಗಿ ಎದುರಿಸಬೇಗಿ ಬಂದ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕಲಾವಿದರು ಊಹಿಸಿಕೊಳ್ಳಲಿಕ್ಕೂ ಸಾಧ್ಯವಾಗದ ರೀತಿಯಲ್ಲಿ ಸಂಕಷ್ಟ ಎದುರಿಸಬೇಕಾಯಿತು. ಈ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯ ನಡುವೆ ಆನ್‌ಲೈನ್ ಹರಾಜೊಂದರಲ್ಲಿ ದೇಶದ ಖ್ಯಾತ ಕಲಾವಿದರಾದ ಅಕ್ಬರ್ ಪದ್ಮಸೇ, ಎಸ್.ಎಚ್.ರಜಾ ಅವರ ಕಲಾಕೃತಿಗಳು ಉತ್ತಮ ಬೆಲೆಗೆ ಮಾರಾಟವಾಗಿರುವುದು ವಿಶೇಷವಾಗಿ ಗಮನ ಸೆಳೆಯುವಂತೆ ಮಾಡಿತು. ಕಾರಣ ಮತ್ತೆ ವಿವರಿಸಬೇಕಿಲ್ಲ. ಆರ್ಥಿಕ ಸಂಕಷ್ಟ ಕೇವಲ ಭಾರತಕ್ಕಷ್ಟೇ ಅಲ್ಲ, ವಿಶ್ವದ ಹೆಚ್ಚಿನ ರಾಷ್ಟ್ರಗಳ ಬಹುತೇಕ ಕ್ಷೇತ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಡುವೆಯೂ ಭರವಸೆಯ ಸುದ್ದಿಯೊಂದು ಇದೆಯಲ್ಲ ಎಂಬ ಕುತೂಹಲ ನನ್ನದಾಯಿತು.
ಮುಂಬೈನ ಪ್ರತಿಷ್ಠಿತ ಸಂಸ್ಥೆ ‘ಅಸ್ತಗುರು ಆನ್‌ಲೈನ್ ಆಕ್ಷನ್ ಹೌಸ್’ ಜುಲೈನಲ್ಲಿ ನಡೆಸಿದ ‘ಮಾಡರ್ನ್ ಇಂಡಿಯನ್ ಆರ್ಟ್’ ಹರಾಜಿನಲ್ಲಿ ಭಾರತದ ಖ್ಯಾತ ಕಲಾವಿದರ ಕಲಾಕೃತಿಗಳು ಕೋಟಿ ಕೋಟಿಗೆ ಮಾರಾಟವಾಗಿವೆ. ಸಂಸ್ಥೆ ಹೇಳಿಕೊಂಡಿರುವAತೆ 51.43 ಕೋಟಿ ರು. ವಹಿವಾಟು ನಡೆದಿದೆ. ಹರಾಜಿಗೆ ಇಡಲಾದ ಶೇ. 96ರಷ್ಟು ಕಲಾಕೃತಿಗಳು ಮಾರಾಟವಾಗಿವೆ. 50 ಕಲಾಕೃತಿಗಳ ಪೈಕಿ 48 ಕಲಾಕೃತಿಗಳು ಮಾರಾಟವಾಗಿವೆ. ವಿಶೇಷವೆಂದರೆ ಅನೇಕ ಕಲಾವಿದರ ಕಲಾಕೃತಿಗಳು ಇದೇ ಮೊದಲ ಬಾರಿಗೆ ಹರಾಜಿನಲ್ಲಿದ್ದವು. ಕೆಲ ಕಲಾವಿದರ ಕಲಾಕೃತಿಗಳು ದಾಖಲೆ ಬೆಲೆಗೆ ಮಾರಾಟವಾಗಿವೆ ಎಂಬ ಅಂಶ ಸಹಜವಾಗಿಯೇ ಕಲಾವಲಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಅಕ್ಬರ್ ಪದ್ಮಸೇ ಅವರ 1962ರಲ್ಲಿ ರಚಿಸಲ್ಪಟ್ಟ “ಲ್ಯಾಂಡ್‌ಸ್ಕೇಪ್” ಶೀರ್ಷಿಕೆಯ ಕಲಾಕೃತಿ 4,30,33,811 ರು.ಗೆ ಮಾರಾಟವಾಗಿದೆ. ಎಸ್.ಎಚ್.ರಜಾ ಅವರ “ಜಲ ಬಿಂದು” ಶೀರ್ಷಿಕೆಯ ಕಲಾಕೃತಿ 4,16,09,969 ರು.ಗೆ ಮಾರಾಟವಾಗಿದೆ. ಎಫ್.ಎನ್, ಸೊಜಾ ಅವರ ತೈಲವರ್ಣದ “ಯೆಲ್ಲೋ ಬಿಲ್ಡಿಂಗ್ಸ್” ಶೀರ್ಷಿಕೆಯ ಕಲಾಕೃತಿ 3,93,37,805 ರು.ಗೆ ಮಾರಾಟವಾಗಿದೆ. ಇದಲ್ಲದೆ, ಪ್ರಭಾಕರ್ ಬಾರ್ವೆ ಅವರ “ಫಸ್ಟ್ ಕ್ಲೌಡ್” ಶೀರ್ಷಿಕೆಯ ಕಲಾಕೃತಿ 1,19,31,214 ರು.ಗೆ, ಕರುನಾಡಿನ ಖ್ಯಾತ ಕಲಾವಿದ ಕೆ.ಕೆ.ಹೆಬ್ಬಾರ್ ಅವರ “ಗೋಲ್ಡ್ ಅಂಡ್ ರೆಡ್” ಶೀರ್ಷಿಕೆಯ ಕಲಾಕೃತಿ 98,43,253 ರು.ಗೆ ಮಾರಾಟವಾಗಿದೆ.
ಇಲ್ಲಿ ಯಾವ ಕಲಾವಿದರ ಯಾವ ಕಲಾಕೃತಿ ಎಷ್ಟು ಹಣಕ್ಕೆ ಮಾರಾಟವಾದವು ಎನ್ನುವುದು ಮುಖ್ಯವಲ್ಲ. ಪ್ರಕ್ರಿಯೆಯಲ್ಲಿ ಪಾಸಿಟಿವ್ ಅಂಶಗಳು ಸಹಜವಾಗಿ ಪ್ರತಿಯೊಬ್ಬ ಕಲಾವಿದನ ಆತ್ಮವಿಶ್ವಾಸ ಹೆಚ್ಚಿಸಬಲ್ಲದು. ಅದಕ್ಕಿಂತ ಮುಖ್ಯವಾಗಿ ಕಲಾಕೃತಿಯನ್ನು ಕೊಂಡುಕೊಳ್ಳುವ, ಕಲಾವಿದರನ್ನು ಪ್ರೋತ್ಸಾಹಿಸುವ ಅನೇಕ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಅನೇಕರಲ್ಲಿಯೂ ಈ ಪಾಸಿಟಿವ್ ಮೂವ್‌ಮೆಂಟ್ ಪರಿಣಾಮ ಬೀರಬಲ್ಲದು. ಇದೇ ಸ್ಫೂರ್ತಿಯಾಗಬಲ್ಲದು. ಕೊರೋನಾ ಸಂಕಷ್ಟವನ್ನು ಮೆಟ್ಟಿನಿಂತು ಮತ್ತೆ ಕಲಾಕೃತಿಗಳು ಉತ್ತಮ ಮಾರುಕಟ್ಟೆ ಕಂಡುಕೊಳ್ಳುವಂತೆ ಆದಲ್ಲಿ ಕಲಾವಿದರಲ್ಲಿ ಆತ್ಮವಿಶ್ವಾಸ ಹೆಚ್ಚಬಲ್ಲದು. ಇನ್ನಷ್ಟು ವಿಭಿನ್ನವಾದ ಕಲಾಕೃತಿಗಳನ್ನು ರಚಿಸುವ ಆತ್ಮಶಕ್ತಿ ಕಲಾವಿದನಲ್ಲಿ ಮೂಡಲು ಸಾಧ್ಯ.
ಸದ್ಯ ಕಲಾವಿದರಿಗೆ ಈ ಸಂಕಷ್ಟದಿಂದ ಪಾರಾಗುವುದೇ ಈಗ ದೊಡ್ಡದೊಂದು ಸವಾಲಾಗಿದೆ. ಪ್ರತಿಯೊಬ್ಬ ಕಲಾವಿದ ಈ ಸಂಕಷ್ಟವನ್ನೆಲ್ಲಾ ಮೆಟ್ಟಿನಿಲ್ಲಲಿ ಎನ್ನುವುದೇ ಈ ಲೇಖನದ ಆಶಯ.