-
ಇನ್ನಷ್ಟು ಕಲಾವಿದರಿಗೆ ವೇದಿಕೆ ಸಿಗುವಂತಾಗಲಿ
-
ಕಲಾವಿದ ಎಸ್. ಜಿ. ವಾಸುದೇವ್ ಸಾರಥ್ಯ
ಯಾವುದೇ ಗಿಡ ಮರವಾಗಿ ಬೆಳೆಯುವಾಗ ಎದುರಾಗಬಹುದಾದ ಸವಾಲುಗಳು ಒಂದಲ್ಲ ಎರಡಲ್ಲ… ನೂರಾರು. ಅದರಲ್ಲೂ ಇತ್ತೀಚಿನ ದಿನಗಳ ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲಿ ಬೆಳವಣಿಗೆ ಭಲೇ ಕಷ್ಟ!
ಕರ್ನಾಟಕದ ಕಲಾಕ್ಷೇತ್ರ ಇಂದು ಹೆಮ್ಮೆಯಿಂದ ಹೇಳಿಕೊಳ್ಳುವ, ಸಂಭ್ರಮಿಸುವ ಸಾಧನೆಯ ಮೈಲಿಗಲ್ಲನ್ನು(milestone) “Art Park” ಕ್ರಮಿಸಿದೆ. 75ನೇ ಆವೃತ್ತಿಯ ಖುಷಿಯಲ್ಲಿದೆ. ನಾಡಿನ ಖ್ಯಾತ ಕಲಾವಿದರಾದ ಡಾ. ಎಸ್.ಜಿ.ವಾಸುದೇವ್ ಅವರ ಸಾರಥ್ಯದಲ್ಲಿ ಪ್ರತಿ ತಿಂಗಳು ನಡೆದುಬಂದ ಒಂದು ದಿನದ ವಾರಾಂತ್ಯದ “ಕಲಾಕೂಟ” ಮರವಾಗಿ ಬೆಳೆದು ಹೆಮ್ಮರವಾಗಿ ಬೆಳೆಯುವ ಭರವಸೆ, ವಿಶ್ವಾಸ ಮೂಡಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಶಿಲ್ಪವನ ಉದ್ಯಾನವೇ ಆರ್ಟ್ ಪಾರ್ಕ್ ಎನ್ನುವಷ್ಟು ಕಲಾವಿದರ, ಕಲಾಪ್ರಿಯರ ಮನದಲ್ಲಿ ಅಚ್ಚೊತ್ತಿದೆ.
ಕಲಾವಿದರು… ಕಲೆ, ಕಲಾವಿದರಿಗೋಸ್ಕರ ಆರಂಭವಾದ Art Park ಈಗಾಗಲೇ ರಾಜ್ಯದ ಅನೇಕ ಕಲಾವಿದರ ಕಲಾ ವಿಕಸನಕ್ಕೆ ವೇದಿಕೆಯಾಗಿದೆ. ಕಲಾಪ್ರದರ್ಶನಕ್ಕೆ ಗ್ಯಾಲರಿಯೇ ಅಂತಿಮ ಅಲ್ಲ ಎನ್ನುವುದನ್ನು ಮಗದೊಮ್ಮೆ ಮನದಟ್ಟು ಮಾಡಿಕೊಟ್ಟಿದೆ. ಕಲಾವಿದರ ಆರ್ಥಿಕ ಬೆಳವಣಿಗೆಗೆ ತನ್ನಿಂದಾಗಬಹುದಾದ ದಾರಿ ಕಲ್ಪಿಸಿದೆ. ಕಲಾವಿದರು ಹೆಮ್ಮೆಯಿಂದ ತಮ್ಮ ಸ್ವವಿವರ(bio data)ದಲ್ಲಿ ದಾಖಲಿಸಿಕೊಳ್ಳುವ ಗೌರವ ಸಂಪಾದಿಸಿದೆ. ಯುವ ಕಲಾವಿದರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಎಲೆಮರೆಯ ಕಲಾವಿದರಿಗೂ ವೇದಿಕೆ ಕಲ್ಪಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಥೆಯೊಂದನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬಹುದಾದ ಸಾಧ್ಯತೆಯ ಸತ್ಯದರ್ಶನ ಮಾಡಿಸಿದೆ.
ಸಾರ್ಥಕತೆಯ ನಂದಾ ದೀಪ ಕಲಾವಿದರ ಮನದಲ್ಲಿ ಬೆಳಗಲು ಶ್ರಮಿಸಿದ ಸಂಸ್ಥೆಗಳ ಸಾಲಿನಲ್ಲಿ Art Park Bengaluru ಪಾತ್ರವೂ ಮಹತ್ವದ್ದು ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ಉದ್ಯಾನವನಗಳು ಕೇವಲ ಟೈಂಪಾಸ್ ಮಾಡುವವರ, ವಾಕಿಂಗ್ ಮಾಡುವವರ, ಹರಟೆ ಹೊಡೆಯುವವರ ಅಡ್ಡವಾಗದೆ ಕಲಾ ಸಂಸ್ಕ್ರತಿಯ ದೇಗುಲವಾಗಿಸುವ Art Park ಪ್ರಯತ್ನ ಯಶಸ್ವಿಯಾಗಿದೆ.
| 75ನೇ ಆವೃತ್ತಿಯ ಸಂಭ್ರಮ |
Art Park ಈಗ 75ನೇ ಆವೃತ್ತಿಯ ಸಂಭ್ರಮದಲ್ಲಿದೆ. ಇದೇ ಭಾನುವಾರ, ಏಪ್ರಿಲ್ 21, 2024ರಂದು ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಇದಕ್ಕೆ ಸಾಕ್ಷಿಯಾಗಲಿದೆ. ಅನೇಕ ಗಣ್ಯರ ಉಪಸ್ಥಿತಿಯಲ್ಲಿ 75ನೇ ಆವೃತ್ತಿ ನಡೆಯಲಿದೆ. Art Park ಕುರಿತಾದ ಸಂವಾದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಆಸಕ್ತರಿಗೆ ಒಂದೊಳ್ಳೆಯ ಕಾರ್ಯಕ್ರಮ.
75ನೇ ಆವೃತ್ತಿಯ ಸಂಭ್ರಮದಲ್ಲಿರುವ Art Park ಒಕ್ಕೂಟಕ್ಕೆ ಹಾರ್ದಿಕ ಅಭಿನಂದನೆಗಳು. ಇನ್ನಷ್ಟು ಹೊಸ ಕಲಾವಿದರಿಗೆ Art Park ವೇದಿಕೆಯಾಗಲಿ. 2017ರಲ್ಲಿ ಕೆಲ ಕಾಲ ನನಗೂ ಸದಸ್ಯನಾಗಿ ಪಾಲ್ಗೊಳ್ಳುವ ಅವಕಾಶ ಒದಗಿಬಂದಿತ್ತು. ಅಳಿಲು ಸೇವೆ ಸಲ್ಲಿಸಿದ ತೃಪ್ತಿ.
(ಇಲ್ಲಿರುವ ಛಾಯಾಚಿತ್ರಗಳು ಈ ಹಿಂದೆ ನಡೆದ Art Park ಕಾರ್ಯಕ್ರಮಗಳದ್ದು)