ವಾರದ ಹಿಂದಷ್ಟೇ ಮಾತನಾಡಿದ್ದೆವು. ಅವರೀಗ ನಮ್ಮೊಂದಿಗಿಲ್ಲ!
ಹೌದು, ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವುದನ್ನು ನಂಬಲು ನಿಜಕ್ಕೂ ಸಾಧ್ಯವಾಗುತ್ತಿಲ್ಲ. ಆಘಾತಕಾರಿ ಸುದ್ದಿ. ನಿಧನ ವಾರ್ತೆಯೇ ಸುಳ್ಳಾಗಲಿ ಅಂದುಕೊಂಡರೂ, ಮತ್ತೆ ಮತ್ತೆ ಅದೇ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಕಿವಿಗೆ ಅಪ್ಪಳಿಸುತ್ತಲೇ ಇತ್ತು. ಪರಿಣಾಮ ಮನಸ್ಸು ಮೌನಕ್ಕೆ ಜಾರಿಕೊಂಡಿದೆ. ವಿಧಿ ಇಷ್ಟೊಂದು ಕ್ರೂರಿಯಾಕೆ ಅನಿಸಲಾರಂಭಿಸಿದೆ.
ಮಂಗಳೂರಿನ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಉಪನ್ಯಾಸಕರಾಗಿದ್ದ, ಹಿರಿಯ ಕಲಾವಿದ ಸೈಯದ್ ಆಸಿಫ್ ಅಲಿ ಅವರು ನಿಧನರಾಗಿದ್ದಾರೆ. ಅವರಿನ್ನು ನೆನಪು ಮಾತ್ರ. ಕರ್ನಾಟಕ ಕಲಾಕ್ಷೇತ್ರಕ್ಕೆ, ಅದರಲ್ಲೂ ಕಲಾ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಇತ್ತೀಚಿಗಷ್ಟೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆದ “The Hidden Gems of Western Ghat” ಸಮೂಹ ಚಿತ್ರಕಲಾ ಪ್ರದರ್ಶನಕ್ಕಾಗಿ ಕಲಾಕೃತಿಯನ್ನು ಕೇಳಿದ ಸಂದರ್ಭದಲ್ಲಿ ಅತ್ಯಂತ ಖುಷಿಯಿಂದ ಒಪ್ಪಿಕೊಂಡು, ಕಲಾಕೃತಿಯೊಂದನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದರು. ಕಲಾಪ್ರದರ್ಶನದ ಬಳಿಕ ಇಡೀ ಕಾರ್ಯಕ್ರಮದ ಎಲ್ಲಾ ವರದಿಯನ್ನೂ ಪಡೆದುಕೊಂಡು ಖುಷಿ ಪಡೆದಿದ್ದರು. ದುರಾದೃಷ್ಟವಶಾತ್ ಸೈಯದ್ ಅವರು ಇಂದು ನಮಗೆ ನೆನಪು ಮಾತ್ರ. ಇಬ್ಬರು ಮಕ್ಕಳು, ಅಪಾರ ಶಿಷ್ಯವೃಂದ, ಸ್ನೇಹ ಬಳಗವನ್ನು ಅಗಲಿದ್ದಾರೆ. ಅವರೊದಿಗಿನ ಸ್ನೇಹಗುಣ ಬಲ್ಲವರು ಮಾತ್ರ ಹೇಳಿಯಾರು. ನಿಸ್ಕಲ್ಮಶ ಮನಸ್ಸಿನ ಆತ್ಮೀಯರ ಅಗಲುವಿಕೆ ಅರಗಿಸಿಕೊಳ್ಳುವುದು ಬಹಳ ಕಷ್ಟ. ಸೈಯದ್ ಸರ್ ನೀವು ನಮ್ಮನ್ನೆಲ್ಲ ಬಿಟ್ಟು ಹೋಗಿರಬಹುದು, ಆದರೆ ನಿಮ್ಮ ಸ್ನೇಹ ಅಜರಾಮರ.
ಕಳೆದ ಮೂರು ದಶಕಗಳಿಂದ ಕಲಾಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸೈಯದ್ ಅವರು ಎಲ್ಲಾ ಮಾಧ್ಯಮಗಳಲ್ಲಿ ವಿಶೇಷವಾದ ಹಿಡಿತ ಸಾಧಿಸಿರುವ ಕಲಾವಿದರಾಗಿದ್ದವರು. ಅದರಲ್ಲೂ ಜಲವರ್ಣದಲ್ಲಿ ಅಪ್ರತಿಮ ಸಾಧನೆ ಅವರದು. ಚಿತ್ರದುರ್ಗ ಮೂಲದ ಸೈಯದ್ ಅವರು ನೂರಾರು ಶಿಷ್ಯರ ಅಚ್ಚುಮೆಚ್ಚಿನ ಶಿಕ್ಷಕರು. ಪ್ರತಿಭೆ, ಸ್ನೇಹ, ಆತ್ಮೀಯತೆಯಿಂದಲೇ ಕರ್ನಾಟಕದ ಬಹುತೇಕ ಎಲ್ಲಾ ಭಾಗದ ಕಲಾವಿದರಿಗೆ ಚಿರಪರಿಚಿತರಾಗಿದ್ದವರು. ಅವರಿಂದು ನಮ್ಮೊಂದಿಗಿಲ್ಲ. ನಾವೆಂದೂ ಮರೆಯಲಾಗದ ಅಚ್ಚೊತ್ತಿ ತೆರೆಯ ಮರೆಗೆ ಸರಿದಿದ್ದಾರೆ. ಅವರ ಆತ್ಮಕಕ್ಕೆ ಸದ್ಗತಿ ಸಿಗಲಿ.




