ಹೆಸರು ಮಾತ್ರ ಕರಿ ಕೊಕ್ಕರೆ. ಆದರೆ ಆ ಕಪ್ಪಿನಲ್ಲೂ ಸೌಂದರ್ಯ ಇಟ್ಟಿದ್ದಾನೆ ಸೃಷ್ಟಿಕರ್ತ. ಕಪ್ಪು ಬಣ್ಣದಲ್ಲೂ ಸೌಂದರ್ಯವಿದೆ ಎನ್ನುವುದನ್ನು ತೋರಿಸಲಿಕ್ಕಾಗಿಯೇ ಅದನ್ನು ಸರಿದೂಗಿಸುವ ಕೆಂಪು, ತೆಳುಗೆಂಪು ಮತ್ತು ಬಿಳಿಬಣ್ಣ ನೀಡಿದ್ದಾನೆ.
ಈ ‘ಕಪ್ಪು ಕೊಕ್ಕರೆ’ (Black Stork )ಯ ದೇಹದ ಬಹುತೇಕ ಭಾಗ ಕಪ್ಪಗಾಗಿದ್ದರೂ ಕೊಕ್ಕು ಮತ್ತು ಕಾಲುಗಳಿಗೆ ಮಾತ್ರ ಕೆಂಪು ಬಣ್ಣ. ಎದೆ, ಹೊಟ್ಟೆ ಭಾಗ ಬೆಳ್ಳಗಾಗಿರುತ್ತದೆ. ಇದರಿಂದಾಗಿ ಕಪ್ಪು ಕೊಕ್ಕರೆಗೆ ವಿಭಿನ್ನ ಸೌಂದರ್ಯ.
ವಯ್ಯಾರದ ನಡಿಗೆಯಲ್ಲಿ ಈ ಕಪ್ಪು ಕೊಕ್ಕರೆ ಜನಪ್ರಿಯ. ಮೊಣಕಾಲನ್ನು ಒಂದಕ್ಕೊಂದು ಬಡಿದುಕೊಳ್ಳುತ್ತಾ ನಿಧಾನಗತಿಯಲ್ಲಿ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ನೀರಂಚಿನಲ್ಲಿ ಅಪ್ಸರೆ.
ಇನ್ನೊಂದು ವಿಚಾರ, ಈ ಹಕ್ಕಿ ಅಂತಿಂಥ ಕೊಕ್ಕರೆಯಲ್ಲ. ಇನ್ನುಳಿದ ಕೊಕ್ಕರೆಗಳಿಗಿಂತ ಭಿನ್ನ. ಹೆಚ್ಚು ಕಡಿಮೆ ಒಂದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಎರಡೂ ರೆಕ್ಕೆಗಳನ್ನು ಅಗಲಿಸಿದರೆ ಒಂದೂವರೆ ಮೀಟರ್ ಗೂ ದೊಡ್ಡದಾದ ಹಕ್ಕಿ ಇದು. ಮೂರರಿಂದ ನಾಲ್ಕು ಕೆಜಿಯಸ್ಟು ತೂಗುವ ತನ್ನ ದೇಹವನ್ನು ಹೊತ್ತು ಅಲೆದಾಡುವುದೆಂದರೆ ಇದಕ್ಕೆ ಸ್ವಲ್ಪ ಆಲಸ್ಯ. ಆದರೂ ಕೆಸರು ಕೆರೆಯಲ್ಲಿ ಆಹಾರಕ್ಕಾಗಿ ದಿನವೆಲ್ಲ ಬೇಟೆಯಾಡುತ್ತದೆ.
ವಿಶೇಷವೆಂದರೆ ಕರಿ ಕೊಕ್ಕರೆಗೆ ಗ್ರಹಣ ಶಕ್ತಿ ಜಾಸ್ತಿ. ಅದೆಸ್ಟೇ ದೂರದಲ್ಲಿ ತನಗೆ ಕಿರಿಕಿರಿ ಆಗುವಂತ ಸಪ್ಪಳವಾದರೂ ತಟ್ಟನೆ ಕೂಗಿಕೊಳ್ಳುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಜಾಗಕ್ಕೆ ಸೇರಿಕ್ಕೊಳ್ಳುತ್ತದೆ. ಭೇಟೆಗಾಗಿ ಎಲ್ಲೆಲ್ಲಿಗೋ ಪ್ರಯಾಣ ಬೆಳೆಸುತ್ತದೆ. ದಿನಕ್ಕೆ 250 ರಿಂದ 300 ಕಿ.ಮೀ ದೂರಕ್ಕೆ ಕ್ರಮಿಸುವ ಸಾಮರ್ಥ್ಯ ಈ ಹಕ್ಕಿಗಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಒಮ್ಮೆ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಚಾಳಿಗಾಲದಲ್ಲಿ ವಲಸೆ ಹೋಗುತ್ತಿರುತ್ತದೆ. ಈ ಹಕ್ಕಿ ಭಾರತದ ಕೆಲವು ಭಾಗದಲ್ಲಿ ಕಾಣಸಿಗುತ್ತದೆಯಾದರೂ ಅಪರೂಪ. ಕೆರೆಗಳಲ್ಲಿರುವ ಏಡಿ, ಮೀನು, ಕಪ್ಪೆಗಳೇ ಇದರ ಆಹಾರ.
ಚಿತ್ರ ಕೃಪೆ: ಅಂತರ್ಜಾಲ