ಮುಂಗಾರು ಹೊತ್ತಲ್ಲಿ ಪ್ರಕೃತಿ ದರ್ಶನ

Share This

  • ಗಮನ ಸೆಳೆದ ” BOUNDLESS BOUNTY “

ವಿಶ್ವ ಪ್ರಸಿದ್ಧ ಕಲಾವಿದರಾದ ಲೆಯನಾರ್ಡೋ ಡಾ ವಿನ್ಸಿ( Leonardo da Vinci), ಜಾನ್ ಜೇಮ್ಸ್ ಆಡುಬೋನ್( John James Audubon), ಮಾರಿಯಾ ಸಿಬಿಲ್ಲಾ ಮೆರಿಯನ್ (Maria Sibylla Merian) ಸೇರಿದಂತೆ ಇನ್ನೂ ಅನೇಕರು ದೃಶ್ಯ ಕಲೆಯನ್ನು ಬಳಸಿಕೊಂಡು ಕಲೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಷ್ಟಕ್ಕೂ ಇವರೆಲ್ಲರ ಈ ಕೊಡುಗೆಗೆ ಸ್ಫೂರ್ತಿಯೇ ಈ ಪ್ರಕೃತಿ. ಇವೆಲ್ಲವನ್ನೂ ಗಮನಿಸಿದಾಗ ಮನುಷ್ಯನ ಆವಿಷ್ಕಾರಗಳಿಗೆ ಯಾವುದೋ ಒಂದು ರೂಪದಲ್ಲಿ ಪ್ರಕೃತಿ ಪ್ರೇರಣೆಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಉಳಿಯುವುದಿಲ್ಲ.

“If you truly love nature, you will find beauty everywhere.”
ಪ್ರಸಿದ್ಧ ಕಲಾವಿದ ವಿನ್ಸೆಂಟ್ ವ್ಯಾನ್ ಗೋ (Vincent van Gogh) ಅವರ ಈ ಮಾತಿನಂತೆ ಪ್ರಕೃತಿಯನ್ನು ನಾವು ಪ್ರೀತಿಸುವುದೇ ಖರೆಯಾದರೆ, ಎಲ್ಲೆಡೆ ಪ್ರಕೃತಿಯ ಸೌಂದರ್ಯ ಕಾಣಬಹುದು. ಸೌಂದರ್ಯ ಗುರುತಿಸಿ ಅನುಭವಿಸುವ ಪ್ರೀತಿ ಪ್ರಾಮಾಣಿಕವಾಗಿ ಇರಬೇಕಷ್ಟೆ. ಪ್ರಾಮಾಣಿಕತೆ ಪ್ರಶ್ನಾರ್ಹವಾದಲ್ಲಿ ಸೌಂದರ್ಯ ಕಾಣಿಸುವುದು ತುಸು ಮಾತ್ರವಾದೀತು.

 

| ಪಂಚಮರ ‘ ಪಾಂಚಜನ್ಯ ‘ |
ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗಿ ಸ್ಫೂರ್ತಿ ಪಡೆದ ಹಿರಿಯ ಕಲಾವಿದರಾದ ಅಶೋಕ್ ಯು., ವಿ. ಹರಿರಾಮ್, ಎಸ್.ಜಯರಾಮ್ ರೆಡ್ಡಿ, ಕೆ.ಜಿ.ಲಿಂಗದೇವರು ಮತ್ತು ಸಂಜಯ್ ಚಾಪೋಲ್ಕರ್ ಅವರ ಕಲಾಕೃತಿಗಳ ” BOUNDLESS BOUNTY ” ಸಮೂಹ ಕಲಾಪ್ರದರ್ಶನ ಬಸವನಗುಡಿಯ Indian Institute of World Culture (IIWC) ಗ್ಯಾಲರಿಯಲ್ಲಿ ನಡೆಯುತ್ತಿದೆ. ಅಶೋಕ್ ಅವರ ಕೆಲವು ರೇಖಾ ಚಿತ್ರಗಳು ಮತ್ತು ಹರಿರಾಮ್ ಅವರ ಕೆಲವು ತೆಳು ವರ್ಣಗಳಿಂದ ಕೂಡಿದ ನವ್ಯೋತ್ತರ ಸಂಕೇತ (symbolic) ಪ್ರಧಾನ ಅಭಿವ್ಯಕ್ತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಜಲವರ್ಣದ ಕಲಾಕೃತಿಗಳಾಗಿವೆ. ಪ್ರದರ್ಶಿತ 100ಕ್ಕೂ ಹೆಚ್ಚು ಕಲಾಕೃತಿಗಳಲ್ಲಿ 19ನೇ ಶತಮಾನದಲ್ಲಿ ತಲೆ ಎತ್ತಿದ ಇಂಪ್ರೆಷನಿಸ್ಟರ ಪ್ರಭಾವ ಕಾಣಿಸುತ್ತದೆ. ಹಾಗಂತ ಸಂಪೂರ್ಣ ಒಗ್ಗಿಕೊಂಡಿವೆ ಎನ್ನಲಾಗದು. ಆ ನಂತರದ ದಿನಗಳಲ್ಲಿ ಆವಿಷ್ಕಾರವಾದ ಸಾಧ್ಯತೆಗಳನ್ನೂ ಮೈಗೂಡಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತವೆ.

ಸಂಜಯ್ ಚಾಪೋಲ್ಕರ್, ಜಯರಾಮ್ ರೆಡ್ಡಿ, ಕೆ.ಜಿ.ಲಿಂಗದೇವರು ಅವರ ಕಲಾಕೃತಿಗಳಲ್ಲಿ ನೈಜಗೊಳಿಸುವುದರ ಪ್ರಯತ್ನ ಹೆಚ್ಚೆಚ್ಚು ಕಾಣಿಸುತ್ತವೆ. ಈ ಮೂವರ ಕಲಾಕೃತಿಗಳಲ್ಲಿ ದೈನಿಕ ಅಭ್ಯಾಸದ (daily practice) ಸುಳಿವಿದೆ. ಪ್ರಯೋಗಶೀಲತೆಯ ತುಡಿತ ಕಾಣಿಸುತ್ತಿದೆ. ಒಂದೇ ನೆಲೆಯಲ್ಲಿ ನಿಲ್ಲಬಹುದಾದ ಕಲಾಕೃತಿಗಳಾಗಿವೆ. ಅಶೋಕ್ ಅವರ ಜಲವರ್ಣ ಕಲಾಕೃತಿಗಳಲ್ಲಿ ಕುಂಚದ ಬೀಸು (brush stroke) ಪ್ರಾಧಾನ್ಯತೆ ಪಡೆದುಕೊಂಡಿವೆ. ಹಾಗೇ ಅವರ ರೇಖಾ ಚಿತ್ರಗಳಲ್ಲಿ ಮೋಡಿ ಗೊಳಿಸುವ ಸತ್ವ ಮತ್ತು ಶಕ್ತಿ ಇದೆ. ಮೂಡ್ ಸೃಷ್ಟಿಸುವಜಾಣತನವಿದೆ. ಬಹುಶಃ ಅಶೋಕ್ ಅವರಿಗೆ ಇದನ್ನು ಇನ್ನಷ್ಟು ಪ್ರಚುರಪಡಿಸಲು ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಗಳು ನಿಚ್ಚಳ. ಹರಿರಾಮ್ ಅವರ ಬಹುತೇಕ ಕಲಾಕೃತಿಗಳು ವಿಭಿನ್ನ ಅಭಿವ್ಯಕ್ತಿಯಾಗಿಯೇ ಕಾಣಿಸುತ್ತವೆ. ಪ್ರಕೃತಿಯನ್ನು ನೋಡುವ ವಿಧಾನವೇ ಬೇರೆಯಾಗಿದೆ. ಹೂ, ಹಣ್ಣುಗಳ ಸಾರ (essence) ಹೀರುವ ದುಂಬಿಯಂತೆ ಪ್ರಕೃತಿಯ ಅಮೂರ್ತ ಸಾರಾಂಶ ಅಥವಾ ಒಳಸ್ವರೂಪ (inwardness) ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಅನಿಸುತ್ತವೆ. ಅವರ ಈ ಹುಡುಕಾಟ ಇನ್ನಷ್ಟು ಕುತೂಹಲ ಮತ್ತು ನಿರೀಕ್ಷೆ ಹುಟ್ಟುಹಾಕುವಂತಿವೆ.

ಒಟ್ಟಾರೆಯಾಗಿ ಈ ಕಲಾಪ್ರದರ್ಶನ ಗಮನಸೆಳೆದಿದೆ. ಒಂದಿಷ್ಟು ಒಳ್ಳೆಯ ಕಲಾಕೃತಿಗಳಿಗೆ ಸಾಕ್ಷಿಯಾಗಿಸಿದೆ.
ಪಂಚಮರ ಕಲಾಪಯಣ ಮುಂದುವರಿಯಲಿ. ಯುವ ಕಲಾವಿದರಿಗೆ ಪ್ರೇರಣೆಯಾಗಲಿ.

| IIWC ಅಭಿನಂದನಾರ್ಹ |
ಒಂದೊಳ್ಳೆಯ ಕಲಾಪ್ರದರ್ಶನ ಆಯೋಜಿಸಿದ Indian Institute of World Culture (IIWC) ಅಭಿನಂದನಾರ್ಹ. ಕಲಾವಿದರಲ್ಲಿ ವಿಶ್ವಾಸ ಹೆಚ್ಚಿಸುವ ಹಾಗೂ ಕಲೆಗೆ ಸಿಗಬೇಕಾದ ನೈಜ, ಅಗತ್ಯ ಪ್ರೋತ್ಸಾಹ ಇದು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ.

Friends, ಈ ಕಲಾಪ್ರದರ್ಶನ ಜೂನ್ 2, ಭಾನುವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.

 

 

 

 

 


Share This

Leave a Reply

Your email address will not be published. Required fields are marked *