ಅಬ್ಬಬ್ಬಾ… ಇಸ್ಟೊಂದು ದೊಡ್ಡ ಬಾತುಕೋಳಿ..!
ನೀವಂದುಕೊಂಡಂತೆ ಇದು ಖಂಡಿತ ಬಾತುಕೋಳಿಯಲ್ಲ. ಬಾತುಕೋಳಿಗಿಂತ ಸಾಕಷ್ಟು ದೊಡ್ಡದಾಗಿರುವ ಜಲಪಕ್ಷಿ. ನಂಬಲಿಕ್ಕೇ ಅಸಾಧ್ಯ. ಇದು ಮಾಂಸಹಾರಿಯೂ ಹೌದು, ಸಸ್ಯಹಾರಿಯೂ ಹೌದು!
ಹಾಗಾದರೆ ಇದಾವ ಜಾತಿಗೆ ಸೇರಿದ ಹಕ್ಕಿ ಎಂದು ತಡಕಾಡಿದರೆ ನಿಮಗೆ ಸಿಗದಿರುವ ಹಕ್ಕಿಯೇನಲ್ಲ. ಸುಲಭವಾಗಿಯೇ ಗುರುತಿಸುತ್ತೀರಿ. ಇದು ಹೆಜ್ಜಾರ್ಲೆ ಜಾತಿಗೆ ಸೇರಿದ ಹಕ್ಕಿ. ಗಾತ್ರದಲ್ಲಿ ಸಾಮಾನ್ಯ ಹೆಜ್ಜಾರ್ಲೆಗಿಂತ ದೊಡ್ಡದಾಗಿರುವ ಕಾರಣ ಇದನ್ನು ದೊಡ್ಡ ಹೆಜ್ಜಾರ್ಲೆ, ಬಿಳಿ ಜೋಳಿಗೆ ಕೊಕ್ಕ (Great White Pelicon) ಎಂದು ಕರೆಯುತ್ತಾರೆ.
ಈ ಜಾತಿಯ ಹಕ್ಕಿಗಳಲ್ಲಿ ಇದು ಭಾರೀ ಗಾತ್ರದ ಹಕ್ಕಿ. ಹದ್ದಿಗಿಂತ ದೊಡ್ಡದಾದ ಹಕ್ಕಿ. ರೆಕ್ಕೆ ಬಿಚ್ಚಿ ನಿಂತರೆ ಹಕ್ಕಿಯ ಅಗಲ ಕನಿಷ್ಠ ನಾಲ್ಕು ಅಡಿ ಇರುತ್ತದೆ. ಅಂದಾಜು ಎರಡರಿಂದ ಎರಡೂವರೆ ಅಡಿ ಉದ್ದವಿರುತ್ತದೆ. ಈ ಹಕ್ಕಿಗೆ ಯಾವತ್ತೂ ನೀರಿನಲ್ಲಿ ತೆಲಾಡುವುದೆಂದರೆ ಬಲು ಇಷ್ಟ. ಕೆರೆಯಲ್ಲೇ ಮುಳುಗೇಳುತ್ತ ಕಾಲ ಕಳೆಯುತ್ತದೆ. ಅಗಾಗ ಇನ್ನುಳಿದ ಜಲಜೀವಿಗಳಿಗೆ ತರ್ಲೆ ಮಾಡುತ್ತಿರುತ್ತದೆ.
ನೀರಿಗೆ ಬರುವ ಸಣ್ಣಪುಟ್ಟ ಜೀವಿಗಳು, ನೀರಲ್ಲೇ ಬೆಳೆಯುವ ಹುಲ್ಲುಗಳನ್ನು ತಿಂದು ಬದುಕುತ್ತವೆ. ಈ ಹಕ್ಕಿಯಲ್ಲಿ ಕಾಣಬಹುದಾದ ವಿಶೇಷವೆಂದರೆ ದೊಡ್ಡ ಹೆಜ್ಜಾರ್ಲೆ ಬೇಟೆಗಾಗಿ ದಿಡೀರ್ ಎಂದು ನೀರೊಳಗೆ ನುಗ್ಗಿ ಮೀನು, ಹಾವುಗಳನ್ನು ಹಿಡಿದು ತಿನ್ನುತ್ತದೆ. ಅದರಲ್ಲೂ ಇದರ ಬಲಿಷ್ಟ ಕೊಕ್ಕುಗಳು ಇದಕ್ಕೆ ಅನುಕೂಲವಾಗಿದೆ ಕೊಕ್ಕಿನ ಕೆಳಕ್ಕಿರುವ ಚೀಲ ಈ ಹಕ್ಕಿಯ ಬಂಡವಾಳ. ಕೊಕ್ಕು ಕತ್ತಿನಸ್ಟೇ ಉದ್ದವಾಗಿರುತ್ತದೆ.
ಸಾಮಾನ್ಯವಾಗಿ ವವೆಂಬರ್-ಮೇ ತಿಂಗಳಿನ ಅವಧಿಯಲ್ಲಿ ಎರಡರಿಂದ ಮೂರು ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಂತಾನೋತ್ಪತ್ತಿ ವೇಳೆ ನೆತ್ತಿಯ ಮೇಲೆ ಬೆಳ್ಳಗಿನ ಜುಟ್ಟು ಬರುತ್ತದೆ. ಈ ಹಕ್ಕಿಯ ದೇಹ ಬೆಳ್ಳಗಿರುತ್ತದೆ. ಅಥವಾ ಅಲ್ಲಲ್ಲಿ ಬೂದು ಮಿಶ್ರಿತ ಬೆಳ್ಳಗಿನ ಬಣ್ಣವಿರುತ್ತದೆ. ಕೊಕ್ಕು ಮತ್ತು ಕಾಲುಗಳಲ್ಲಿ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣ ಇರುತ್ತದೆ. ಸಣ್ಣ ಸಣ್ಣ ಮೀನುಗಳೆಂದರೆ ಈ ಹಕ್ಕಿಗೆ ಪಂಚಪ್ರಾಣ. ಇದಕ್ಕೆ ತನ್ನ ಕೊಕ್ಕಿನ ಕೆಳಕ್ಕಿರುವ ಜೋಳಿಗೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ.