• ವರ್ಲ್ಡ್ ಕಲ್ಚರ್ ಗ್ಯಾಲರಿಯಲ್ಲಿ ಕೆ.ಜಿ. ಲಿಂಗದೇವರು ಕಲಾಪ್ರದರ್ಶನ
ಮನುಷ್ಯಾಕೃತಿಗಳು ಭಾವಗಳಾಗಿ ಹಾರಾಡುತ್ತಿವೆ, ಹರಿದಾಡುತ್ತಿವೆ. ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಓಡಾಡುತ್ತಿವೆ. ಕೆಲವು ಮಾತನಾಡಿಸುತ್ತವೆ, ಇನ್ನು ಕೆಲವು ಮೌನವಾಗಿಸುತ್ತವೆ. ಚೌಕಟ್ಟಿನೊಳಗಿನ ದೇಹಗಳು ಸಮಾಜದ ಮನಸ್ಸುಗಳಂತೆ ಎಲ್ಲೆಲ್ಲೋ ಸುತ್ತುತ್ತವೆ. ಅದರಾಚೆ ಬರಲಾಗದೆ ತೊಳಲಾಡುತ್ತವೆ!
ಕಲಾವಿದ ಕೆ.ಜಿ. ಲಿಂಗದೇವರು ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಒಂದು ಒಳನೋಟ ಇದು. ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಗ್ಯಾಲರಿಯ ಗೋಡೆಗಳು ಲಿಂಗದೇವರು ಅವರ ಕಲಾಕೃತಿಗಳ ಮಾನವಾಕೃತಿಗೇ ದೇಹವಾಗಿದೆ.
ಗಾಢ ವರ್ಣಗಳಿಂದ ಕೂಡಿರುವ ಕಲಾಕೃತಿಗಳಿಗೆ ಮತ್ತು ನೀರಿನಂತೆ ಹರಿವ ರೇಖೆಗಳಿಗೆ ಬದುಕಿನ ನಿತ್ಯಾನುಭವಗಳು ವಿಷಯವಾಗಿವೆ. ಮನುಷ್ಯನ ಮನಸ್ಸುಗಳ ಬೇರೆ ಬೇರೆ ಸ್ಥಿತಿ-ಗತಿಗಳು, ಅವನೊಳಗಿನ ಭಾವಗಳು, ಬಾಹ್ಯ ಭಂಗಿಗಳು ಆಕೃತಿಯ ರೂಪವಾಗಿ ಛೇದಿಸುವ ಪರಿ ಕಲಾವಿದನ ಅಭಿವ್ಯಕ್ತಿಗೆ ಪ್ರೇರಣೆಯಾಗಿವೆ. ಕಲಾಕೃತಿಗಳು ಈ ಸಂಗತಿಗಳನ್ನು ಸ್ಪಷ್ಟವಾಗಿಯೂ, ಅತಿ ರಂಜಿತವಾಗಿಯೂ ಹೇಳುವಂತೆ ಇವೆ. ಅನೇಕ ಕಲಾಕೃತಿಗಳಲ್ಲಿ ಲಿಂಗದೇವರು ಅವರು ಬಣ್ಣಗಳನ್ನು ದುಡಿಸಿಕೊಳ್ಳುವ ತಂತ್ರಗಾರಿಕೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಪ್ರಯೋಗಾತ್ಮಕ ಪ್ರಯತ್ನ ನಡೆಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಈ ಬಗೆಯ ಬಣ್ಣ ಪ್ರಯೋಗ ಕಲಾವಿದನೊಳಗಿನ ಹುಡುಕಾಟದ ತೀವ್ರತೆಯನ್ನು ತೋರಿಸುತ್ತವೆ.
ರೇಖೆಗಳನ್ನೇ ಪ್ರಧಾನವಾಗಿಸಿಕೊಂಡು ರಚಿಸಿರುವ ಕಲಾಕೃತಿಗಳಲ್ಲೂ ಮಾನವಾಕೃತಿಗಳೆ ಪ್ರಮುಖ ವಸ್ತುವಿಷಯವಾಗಿವೆ. ಕೆಲವು ಹಿತ ಮತ್ತು ಆಪ್ತವಾಗಿಸುವಂತಿವೆ. ಇನ್ನು ಕೆಲವು ಕಲಾವಿದನ ಭಾವ ತೀವ್ರತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಮನುಷ್ಯನ ಮನಸ್ಸುಗಳು ಹೇಗೇಗೋ ಹರಿದಾಡುತ್ತವೆ ಎನ್ನುವ ಸಂದೇಶದೊಂದಿಗೆ ಮನುಷ್ಯಾಕೃತಿಗಳನ್ನು ಹರಿದಾಡಿಸಿದ್ದಾರೆ ಕಲಾವಿದ ಕೆ.ಜಿ.ಲಿಂಗದೇವರು. ಪ್ರದರ್ಶಿತ ಕೆಲವು ರೇಖಾ ಚಿತ್ರಗಳನ್ನು ಗಮನಿಸಿದಾಗ ಕನಿಷ್ಠೀಯತಾವಾದದ (minimalism) ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೇನೊ ಅನಿಸುವುದುಂಟು. ಆದರೆ, ಈ ಬಗ್ಗೆ ನಿಖರವಾಗಿ ಹೇಳಬಹುದಾದ ಸಾಧ್ಯತೆ ಕಡಿಮೆ. ಬಹುಶಃ ಅವರ ಇತ್ತೀಚಿನ ಅಥವಾ ಮುಂದಿನ ಕಲಾಕೃತಿಗಳು ಇದಕ್ಕೊಂದು ಉತ್ತರ ನೀಡಬಹುದೆಂದು ಊಹಿಸಬಹುದು.
Congratulations sir
wish you all the best.
ಸ್ನೇಹಿತರೆ, ಕಲಾಪ್ರದರ್ಶನ ಜನವರಿ 30ರ ತನಕ ವೀಕ್ಷಣೆಗೆ ಲಭ್ಯವಿ ಬಿಡುವು ಮಾಡಿಕೊಂಡು ಹೋಗಿ ಬನ್ನಿ.