• ಪ್ರದರ್ಶನಕ್ಕೆ ಸಾಕ್ಷಿಯಾದ ದೆಹೆಲಿಯ ಬಿಕಾನೆರ್ ಹೌಸ್ | ಕೈಜೋಡಿಸಿದ ಗ್ಯಾಲರಿ ಇಸ್ಪೇಸ್
ಚತುರ್ಯುಗಗಳಾದ ಕೃತಯುಗ (krita yuga), ತ್ರೇತಾಯುಗ (treta yuga), ದ್ವಾಪರಯುಗ (dwapara yuga) ಅಥವಾ ಕಲಿಯುಗದ್ದೋ (Kali yuga) ಗೊತ್ತಿಲ್ಲ. ಅದರಾಚೆಗಿನ ಯುಗ ಯುಗಗಳ ಇತಿಹಾಸ ಮರು ಸೃಷ್ಟಿಯಾಗುತ್ತಿವೆಯೇನೋ ಎಂದೆನಿಸುವ ಅಭಿವ್ಯಕ್ತಿ. ತಮಗಿರುವ ಸ್ವಾತಂತ್ರ್ಯದ ಚೌಕಟ್ಟು ಮೀರದ ಜಾಗ್ರತೆ.
ವರ್ಷ ವರ್ಷವೇ ಕಳೆದು ಹೊಸ ವರ್ಷ ಬಂದಾಗಲೆಲ್ಲ ಅದೆಷ್ಟು ಸಂಗತಿಗಳು ಅಧ್ಯಾಯದ ಪುಟ ಸೇರಿ ಆಯಾ ಕಾಲಘಟ್ಟದಲ್ಲೆ ಕಮರಿ ಹೋದವೇನೋ ಎಂದು ಕಾಡುವ ಉತ್ತರವಿಲ್ಲದ ಪ್ರಶ್ನೆಗಳು. ಅಲ್ಲೋ ಇಲ್ಲೋ ಎಲ್ಲೆಲ್ಲೋ ಕಾಣಸಿಗುವ ಪಳೆಯುಳಿಕೆಗಳೇ ಕಲಾಕೃತಿಯಾದವೇ? ಕಾಲ್ಪನಿಕವೇ? ಭ್ರಮೆಯೇ? ಸತ್ಯವೆಷ್ಟು? ಮಿಥ್ಯವೆಷ್ಟು? Never ending questions… ಬಗೆದಷ್ಟೂ ಆಳಕ್ಕೆ ಕರೆದೊಯ್ಯುವ ಇತಿಹಾಸ, ಅದರಾಚೆ ಎಳೆದು ನಿಲ್ಲಿಸುವ ಕಲಾಕೃತಿಗಳು!
ಹೀಗೆ ಇತಿಹಾಸದ ಪುಟಗಳನ್ನು ಮೆಲುಕು ಹಾಕುವಂತೆ ಪ್ರೇರೇಪಿಸುವ ಕಲಾಕೃತಿ ನವದೆಹಲಿಯಲ್ಲಿ ನಡೆದ ಇಂಡಿಯಾ ಆರ್ಟ್ ಫೇರ್ 15ನೇ ಆವೃತ್ತಿಯಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಪ್ರದರ್ಶನದ ಭಾಗವಾಗಿದ್ದ ಗ್ಯಾಲರಿ ಇಸ್ಪೇಸ್ (Gallery espace)ನಲ್ಲಿ ಪ್ರದರ್ಶಿಸಲ್ಪಟ್ಟ, ವಿಭಿನ್ನ ನೆಲೆಯಲ್ಲಿ ನಿಂತು ನೋಡಬಹುದಾದ ಕಲಾಕೃತಿ ಮಂಜುನಾಥ್ ಕಾಮತ್ (Manjunath Kamath) ಅವರದ್ದಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದ, ಕನ್ನಡಿಗ ಮಂಜುನಾಥ್ ಕಾಮತ್ ಅವರ ಅಭಿವ್ಯಕ್ತಿಯ ಶೈಲಿ, ಆಯ್ದುಕೊಳ್ಳುವ ವಸ್ತುವಿಷಯ ಕುತೂಹಲಕಾರಿಯಾಗಿತ್ತು. ಕಲಾಕೃತಿಯನ್ನು ಮತ್ತೆ ಮತ್ತೆ ನೋಡಬೇಕು ಮತ್ತು ಅದರೊಳಗಿನ ವಸ್ತು ವಿಷಯಗಳ ಜೊತೆ ಅನುಸಂಧಾನ ನಡೆಸಬೇಕು ಅನಿಸುವಂತಿತ್ತು. ಸಾಕಷ್ಟು ಪರಿಣಾಮಕಾರಿ, ಅಚ್ಚುಕಟ್ಟಾದ ನಿರ್ವಹಣೆ ಕಾಮತ್ ಅವರ ಕಲಾಕೃತಿಗಳಲ್ಲಿ ನೋಡಲು ಸಾಧ್ಯವಾಯಿತು.
ವರ್ಣಚಿತ್ರ ಮತ್ತು ಶಿಲ್ಪ ಕಲಾಕೃತಿಗಳ ರಚನೆಯಲ್ಲಿ ನಿರಂತರವಾಗಿ ಸಮತೋಲನ ಕಾಯ್ದುಕೊಂಡು ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಅಪ್ರತಿಮ ಕಲಾವಿದ ಎಂದರೆ ಅತಿಶಯೋಕ್ತಿ ಆಗಲಾರದು. ಇತಿಹಾಸದ ಅನೇಕ ಅಂಶಗಳನ್ನು (elements) ಕ್ರಿಯಾತ್ಮಕವಾಗಿ ದುಡಿಸಿಕೊಳ್ಳುವುದು, ಮೂಲದ ಜಾಡು ಹಿಡಿದು ಕಥೆ ಹೇಳುವ ರೀತಿಯಲ್ಲಿ ಇಡೀ ಕಲಾಕೃತಿಯನ್ನು ತಮ್ಮತನವೆಂದು ಹೇಳಿಕೊಳ್ಳುವಂತಹ ಶೈಲಿಯಲ್ಲಿ ನಿರೂಪಿಸುವ ಪ್ರಕ್ರಿಯೆ ನೋಡುಗರ ಕೌತುಕ ಹೆಚ್ಚಿಸುತ್ತದೆ. ಕಥೆಯೊಂದನ್ನು ಹೇಳುತ್ತಲೆ ಇನ್ನೊಂದು, ಮತ್ತೊಂದು ಕಥೆಗಳಿಗೆ, ಕಥೆಯೊಳಗಿನ ಕಥೆಯೊಂದನ್ನು ಹೇಳುವ ಗುಣ ಅವರ ಕಲಾಕೃತಿಗಳಲ್ಲಿ ಕಾಣಿಸುತ್ತದೆ. ಸಮಕಾಲೀನ (contemporary) ಸಂದರ್ಭದಲ್ಲಿ ತಮ್ಮ ಕಲಾಕೃತಿಗಳ ಮೂಲಕ ಗಮನಸೆಳೆಯುತ್ತಿರುವ ದೇಶಿ ಸೊಗಡಿನ ಕಲಾವಿದರಾಗಿ ಮಂಜುನಾಥ್ ಕಾಮತ್ ಕಾಣಿಸಿಕೊಳ್ಳುತ್ತಾರೆ.
ಭಂಜಿತ ಶಿಲ್ಪಗಳ, ಐತಿಹಾಸಿಕ ತಾಣಗಳಲ್ಲಿ ಸಿಗುವ ಕಟ್ಟಡಗಳ ಅವಶೇಷಗಳ ಹೋಲಿಕೆಯ ವಿನ್ಯಾಸಗಳನ್ನು ಕಲಾಕೃತಿಯಲ್ಲಿ ಹೇರಳವಾಗಿ ಬಳಸಿಕೊಳ್ಳುತ್ತಾರೆ. ಶತಶತಮಾನಗಳ ಶಿಲ್ಪವೊಂದರ ಯಾವುದೋ ಅಂಗ(organ), ಅವುಗಳಲ್ಲಿ ಬಳಕೆಯಾದ ಇನ್ನಾವುದೋ ಶೈಲಿಯ ಆಭರಣ(juwels), ಆಯುಧ(weapon), ಪೀಠೋಪಕರಣ(furniture) ಹಾಗೂ ವಿನ್ಯಾಸಗಳನ್ನು ದುಡಿಸಿಕೊಳ್ಳುವ ಪ್ರಕ್ರಿಯೆ, ವಿಧಾನ ಊಹಿಸಲಾಗದ್ದು. ಆಧುನೀಕರಣ ಕ್ರಾಂತಿಯ ಪ್ರಭಾವದ ನಡುವೆ ಪೌರಾಣಿಕ (mythological) ಕಥೆಗಳನ್ನೂ ಹೇಳುತ್ತವೆ ಕಾಮತ್ ಅವರ ಕಲಾಕೃತಿಗಳು.
ಸಂಯೋಜಿಸುವ(composition) ವಿಧಾನದಲ್ಲಿಯೇ ಅವರ ಏಕಾಗ್ರತೆ, ಅನುಭವ, ಆದರ್ಶೀಕರಿಸುವ ಪ್ರವೃತ್ತಿ ಕಾಣಲು ಸಾಧ್ಯವಿದೆ. ಸ್ವಾಭಾವಿಕತೆ, ಸೃಜನಶೀಲತೆ, ಪ್ರಾಮಾಣಿಕತೆ, ನೈತಿಕತೆಯ ಜೊತೆಗೆ ಪ್ರಭುತ್ವ, ಉತ್ತರದಾಯಿತ್ವ ಕಾಮತ್ ಅವರ ಕಲಾಕೃತಿಗಳ ಹಿಂದಿರುವ ಗುಟ್ಟು ಎನ್ನುವುದನ್ನು ಧೈರ್ಯವಾಗಿ ಹೇಳಬಹುದು.
| ಬಿಕಾನೆರ್ ಹೌಸ್ ಗ್ಯಾಲರಿಯಲ್ಲಿ ಪ್ರದರ್ಶನ |
ಮಂಜುನಾಥ್ ಕಾಮತ್ ಅವರ ” Shakekthu Shalpaka ” ಏಕವ್ಯಕ್ತಿ ಕಲಾಪ್ರದರ್ಶನ ದೆಹಲಿಯ ಬಿಕಾನೇರ್ ಹೌಸ್ ಗ್ಯಾಲರಿಯಲ್ಲಿ ನಡೆಯುತ್ತಿದ್ದು, ಫೆಬ್ರವರಿ 16ರಂದು ಸಂಪನ್ನಗೊಳ್ಳಲಿದೆ.
Vikatonarva / Coloured Terracotta ಕಲಾಕೃತಿ ಇಡೀ ಕಲಾಪ್ರದರ್ಶನದ showstopper. ಬೃಹತ್ ಅಳತೆಯ ಈ ಶಿಲ್ಪ ಹಾಗೂ ಇದೇ ಪ್ರಕಾರದ ಇನ್ನಷ್ಟು ಶಿಲ್ಪಗಳು ಪ್ರದರ್ಶನವನ್ನು ಇನ್ನೊಂದು ಅಂತಸ್ತಿನೆತ್ತರಕ್ಕೆ ಕೊಂಡೊಯ್ಯುತ್ತವೆ. Bojh ಶೀರ್ಷಿಕೆಯ ಕಲಾಕೃತಿಯಲ್ಲಿ ಪ್ರತಿಷ್ಠಾಪಿಸಲಾದ ಎಂಟು ವಿಭಿನ್ನ ಅಳತೆಯ ಸಣ್ಣ ಗಾತ್ರದ ಶಿಲ್ಪಗಳು ಸೇರಿದಂತೆ ಎಲ್ಲವೂ ಬೇರೆ ಬೇರೆ ಆಯಾಮದಿಂದ ನೋಡಬಹುದಾದ ಕಲಾಕೃತಿಗಳು.
| ಕನ್ನಡಿಗ ಅನ್ನೋದು ಹೆಮ್ಮೆ |
1972 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮಂಜುನಾಥ್ ಕಾಮತ್ ಅವರು ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷುಯಲ್ ಆರ್ಟ್ಸ್ (CAVA)ದಲ್ಲಿ ಕಲಾಶಿಕ್ಷಣ ಪಡೆದುಕೊಂಡಿದ್ದಾರೆ. ಶಿಲ್ಪಕಲೆಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಚಾರ್ಲ್ಸ್ ವ್ಯಾಲೇಸ್ ಟ್ರಸ್ಟ್ ವಿದ್ಯಾರ್ಥಿವೇತನದಲ್ಲಿ ಕಾರ್ಡಿಫ್‌ನಲ್ಲಿರುವ ವೇಲ್ಸ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ & ಡಿಸೈನ್‌ನಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ಇಲ್ಲಿ ಅವರೊಳಗಿನ ವೃತ್ತಿಪರ ಕಲಾವಿದ ಅನಾವರಣಗೊಳ್ಳಲು ಸಾಧ್ಯವಾಯಿತು. ಶಿಲ್ಪ, ಚಿತ್ರ ಮತ್ತು ಡಿಜಿಟಲ್ ಕಲಾಪ್ರಕಾರಗಳಲ್ಲಿ ಹಿಡಿತ ಸಾಧಿಸಿರುವ ಮಂಜುನಾಥ್ ಕಾಮತ್ ಅವರು ನಮ್ಮ ನೆಲದ ಪ್ರತಿಭಾವಂತ ಕಲಾವಿದ ಎನ್ನುವುದು ನಮಗೆ ಹೆಮ್ಮೆ.
ಕಾಮತ್ ಅವರ ಕಲಾಕೃತಿಗಳು ‘ಡಿಜಿಫೆಸ್ಟಾ’ ಗ್ವಾಂಗ್ಜು ಸಿಟಿ ಮ್ಯೂಸಿಯಂ, ಗ್ವಾಂಗ್ಜು ಬಿನಾಲೆ, ಚಾಂಗ್ವಾನ್ ಆರ್ಟ್ ಫೆಸ್ಟಿವಲ್, ಇಂಡಿಯಾ ಆರ್ಟ್ ಸಮ್ಮಿಟ್, ಆರ್ಟ್ ದುಬೈ, ಏಷ್ಯನ್ ಕಾಂಟೆಂಪರರಿ ಆರ್ಟ್ ಸಿಂಗಾಪುರ ಸೇರಿದಂತೆ ವಿಶ್ವದ ಅನೇಕ ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡಿವೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಕಿರಣ್ ನದಾರ್ ಮ್ಯೂಸಿಯಂ, ಅಲ್ಕಾಜಿ ಫೌಂಡೇಶನ್ ಸೇರಿದಂತೆ ಅನೇಕ ಗಣ್ಯರ ಕಲಾಸಂಗ್ರಹದಲ್ಲಿ ಕಾಮತ್ ಅವರ ಕಲಾಕೃತಿಗಳು ಸೇರಿವೆ.