ಹಬ್ಬಕ್ಕೂ ಮೊದಲೇ “ಕೃತಿ” ಗಣೇಶ ಪ್ರದರ್ಶನ

Share This

• IIWC ಗ್ಯಾಲರಿಯಲ್ಲಿ “ಕೃತಿ” ಕಲಾಪ್ರದರ್ಶನ
ಪುರಾಣಗಳಲ್ಲಿನ ಅದೆಷ್ಟೋ ಪಾತ್ರಗಳು, ದೃಶ್ಯಗಳು ಗೊತ್ತಿದ್ದೂ ಗೊತ್ತಿಲ್ಲದೆಯೂ ಚಿತ್ರವಾಗಿ, ಶಿಲ್ಪವಾಗಿ ಸಾವಿರಾರು ವರ್ಷಗಳ ಹಿಂದೆಯೇ ರಚಿಸಲ್ಪಟ್ಟಿವೆ. ದೇವಾನುದೇವತೆಗಳನ್ನೇ ಅತಿ ಹೆಚ್ಚು ಚಿತ್ರ, ಶಿಲ್ಪವಾಗಿಸಿರುವುದು ವಿಶೇಷ. ಇಂತಹ ಚಿತ್ರ, ಶಿಲ್ಪಗಳಲ್ಲಿ ಪ್ರಾದೇಶಿಕತೆಯ ಪ್ರಭಾವವೂ (regional influence) ಇರುವುದನ್ನು ಕಾಣುತ್ತೇವೆ. ಭಾರತೀಯ ಸಂಸ್ಕೃತಿಯ ಮೂಲವೇ ಈ ಚಿತ್ರ, ಶಿಲ್ಪಗಳು ಎನ್ನುವಷ್ಟು ಸೊಗಸಾಗಿ ಬಿಂಬಿಸಲ್ಪಟ್ಟಿವೆ. ಭಾರತೀಯರಾದ ನಾವು ಇದನ್ನು ನಂಬಿಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ. ಸಂಸ್ಕೃತಿ ಎಂದೇ ಅನುಸರಿಸಿಕೊಂಡು ಬಂದಿದ್ದೇವೆ.
ಬಹುಶಃ ಸಾಮಾಜಿಕ ವಿಚಾರಗಳಿಗಿಂತಲೂ ದೇವಾನುದೇವತೆಗಳ ಪ್ರಭಾವವೆ ಹೆಚ್ಚು ಎಂದರೆ ತಪ್ಪಾಗಲಿಕ್ಕಿಲ್ಲ. ಶತಶತಮಾನಗಳ ಇತಿಹಾಸ ಗಮನಿಸಿದಾಗ ಈ ಅಂಶಗಳು ಗೊತ್ತಾಗುತ್ತವೆ. ಅಂದಿನಿಂದ ಇಂದಿನ ತನಕ ಲಕ್ಷಾಂತರ ಚಿತ್ರ, ಶಿಲ್ಪಗಳು ರಚನೆಯಾಗಿವೆ. ಅವೆಲ್ಲವೂ ಒಂದಲ್ಲಾ ಒಂದು ರೀತಿಯಿಂದ ಪುರಾಣಗಳ ಪ್ರಭಾವಕ್ಕೊಳಗಾಗಿವೆ. ಜನಪದ, ಸಾಂಪ್ರದಾಯಿಕ, ಭಿತ್ತಿ ಚಿತ್ರಗಳಿಂದ ಹಿಡಿದು ಸಮಕಾಲೀನ ಕಲಾ ಪ್ರಕಾರಗಳಲ್ಲಿಯೂ ದೇವತೆಗಳನ್ನು ಕಾಣಬಹುದು. ಪ್ರಾದೇಶಿಕತೆ ಮತ್ತು ಆ ಕಾಲಘಟ್ಟದ ಆಡಳಿತಕ್ಕೆ ಅನುಗುಣವಾಗಿ ಒಂದಿಷ್ಟು ಬದಲಾವಣೆ ಆಗಿರಬಹುದೇ ಹೊರತು ಮೂಲ ಪುರಾಣ ದೃಶ್ಯ, ಪಾತ್ರಗಳೇ ಆಗಿವೆ.
ಪ್ರಥಮ ಪೂಜಿತ ಗಣೇಶ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಾನೆ. ಪ್ರಾಚೀನ ಶಿಲ್ಪ ಮತ್ತು ಚಿತ್ರಗಳಲ್ಲಿ ಗಣೇಶನ ಪ್ರಭಾವ ತುಸು ಜಾಸ್ತಿ. ಬಹುಶಃ ವಿಕಟನಾಗಿರುವ (ವಿಲಕ್ಷಣ ರೂಪ ಹೊಂದಿರುವವ) ಕಾರಣಕ್ಕೋ ಏನೊ ಗೊತ್ತಿಲ್ಲ. ಸಹಸ್ರಾರು ಆಕಾರ-ವಿಕಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಮೂರ್ತ ಮತ್ತು ಅಮೂರ್ತ ರೂಪ ತಾಳಿದ್ದಾನೆ. ಗಣೇಶನ ರೂಪಗಳು ಒಂದಲ್ಲ ಎರಡಲ್ಲ ಸಹಸ್ರಾರು. ದೃಶ್ಯ ಮಾಧ್ಯಮದ ಎಲ್ಲಾ ಸಾಧ್ಯತೆಗಳಲ್ಲಿ ಗಣೇಶ ಮೂಡಿದ್ದಾನೆ.
ತರಹೇವಾರಿ ಗಣೇಶನನ್ನು ಕಣ್ತುಂಬಿಕೊಳ್ಳಬೇಕು ಅನಿಸಿದರೆ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಗ್ಯಾಲರಿಗೆ ಭೇಟಿ ನೀಡಿ.
ಪರಂ ಕಲ್ಚರ್ (Param Culture) ಆಯೋಜಿಸಿರುವ “ಪರಂಪರಾ” ಸರಣಿ ಸಂಸ್ಕೃತಿಯ ಮೊದಲ ಕಲಾ ಪ್ರದರ್ಶನ “ಕೃತಿ” ಶಿಸ್ತುಬದ್ಧವಾಗಿ ಆಯೋಜನೆಗೊಂಡಿದೆ. ಕಲಾವಿದರಾದ ಸಂಜಯ್ ಚಾಪೋಲ್ಕರ್ ಕ್ಯುರೇಟ್ ಮಾಡಿದ್ದು, ರಾಜ್ಯದ ಹಿರಿಯ ಕಲಾವಿದರಾದ ಚಂದ್ರನಾಥ ಆಚಾರ್ಯ, ಎಂ.ಎಸ್.ಮೂರ್ತಿ, ಜೀಯರ್ ಗೋವಿಂದರಾಜು, ಕೆ.ಜಿ.ಲಿಂಗದೇವರು, ಪಿ.ವಿ.ಭಾಸ್ಕರನ್ ಆಚಾರಿ, ವೈ.ಎಸ್.ನಂಜುಂಡಸ್ವಾಮಿ, ಅಶೋಕ್ ಭಂಡಾರೆ, ಎಂ.ಎನ್. ಮೂರ್ತಿ, ಅಶೋಕ್ ಬಿ.ಎಸ್. ಸೇರಿದಂತೆ 30 ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಆಭರಣಾಲಂಕೃತ, ವರ್ಣಾಲಂಕೃತ, ರೇಖಾ ಲಾಲಿತ್ಯದಿಂದ ಕೂಡಿರುವ ಗಣೇಶನ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.
ಮುಂಬರುವ ದಿನಗಲ್ಲಿ ಇನ್ನಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಪರಂ ಕಲ್ಚರ್ ಮುಂದಾಳುಗಳಾದ ಖ್ಯಾತ ಗಾಯಕ, ಸಂಗೀತ ಸಂಯೋಜಕ ಪ್ರವೀಣ್ ಡಿ ರಾವ್ ಮತ್ತು ಕಲಾವಿದ, ಮರಳು ಚಿತ್ರ ಪರಿಣತ ರಾಘವೇಂದ್ರ ಹೆಗಡೆ ತಿಳಿಸಿದ್ದಾರೆ.
ಸ್ನೇಹಿತರೆ, ಕಲಾಪ್ರದರ್ಶನ ಆಗಸ್ಟ್ 4ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.

Share This

Leave a Reply

Your email address will not be published. Required fields are marked *