ಪ್ರಹ್ಲಾದರ ಆಹ್ಲಾದಕರ ಕಲಾಭಿವ್ಯಕ್ತಿ

Share This

• ಗಮನಸೆಳೆಯುವ ಜಲವರ್ಣ ಕಲಾಕೃತಿಗಳು

ಇಂಪ್ರೆಷನಿಸ್ಟ್ (impressionist) ಕಲಾ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮತ್ತು 19ನೇ ಶತಮಾನದ ದ್ವಿತೀಯಾರ್ಧದಲ್ಲಿ ಫ್ರೆಂಚ್ ಕಲಾಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಕಲಾವಿದರಲ್ಲಿ ಕ್ಲೌಡ್ ಮೊನೆಟ್ (Claude Monet) ಒಬ್ಬರು. ಆ ಕಾಲಘಟ್ಟದಲ್ಲಿ ಲಂಡನ್ ಮತ್ತು ಪ್ಯಾರಿಸ್‌ನಲ್ಲಿ ನಡೆದ ಕೈಗಾರಿಕಾ ಕ್ರಾಂತಿಗೆ ಧ್ವನಿಯಾಗಿ ವಾಯು ಮಾಲಿನ್ಯವನ್ನು ತಮ್ಮ ಚಿತ್ರಗಳಲ್ಲಿ ಪ್ರತಿಬಿಂಬಿಸಿದ ವಿಶಿಷ್ಟ, ವಿಭಿನ್ನ ಧೋರಣೆಯ ಕಲಾವಿದ ಮೊನೆಟ್.
” Every day i discover more and more beautiful things. It’s enough to drive one mad. I have such a desire to do everything, my head is bursting with it. “
ಮೊನೆಟ್ ಹೇಳುವ ಈ ಮಾತು ಕೆಲವೊಂದು ಸಂದರ್ಭಗಳಲ್ಲಿ ಪ್ರಸ್ತುತ ಅನಿಸುತ್ತೆ. ಪ್ರತಿ ದಿನವೂ ಸುಂದರವಾದ ಸಂಗತಿಗಳನ್ನು ನೋಡುತ್ತಲೇ ಇರುತ್ತೇನೆ. ಇವು ನನ್ನನ್ನು ಹುಚ್ಚನನ್ನಾಗಿಸುತ್ತೆ ಎನ್ನುತ್ತಲೇ, ತಮ್ಮ ಚಿತ್ರ ರಚನೆಯ ಹಿಂದಿನ ಸ್ಫೂರ್ತಿ ಏನೆನ್ನುವುದನ್ನೂ ಹೇಳುತ್ತಲೆ, ಇವೆಲ್ಲವನ್ನೂ ರಚಿಸಬೇಕೆನ್ನುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲ, ಇವೆಲ್ಲವೂ ನನ್ನ ತಲೆ ಕೆಡಿಸುತ್ತಿವೆ ಎಂದು ತಮ್ಮ ತುಡಿತವನ್ನು ಹೇಳುತ್ತಾರೆ.
ಮೊನೆಟ್ ನೆನಪು ಮಾಡಿಕೊಳ್ಳಲು ಕಾರಣ ಇಷ್ಟೆ. ದಾವಣಗೆರೆ ಮೂಲದವರಾದ ಪ್ರಹ್ಲಾದ್ ಕೆ.ವಿ. ಆಚಾರ್ಯ ( Prahlad K V Acharya ) ಅವರ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ 3ನೇ ಗ್ಯಾಲರಿಯಲ್ಲಿ ನಡೆಯುತ್ತಿದೆ.
ವಿಶೇಷವಾಗಿ ಅವರ ಜಲವರ್ಣ ನಿಸರ್ಗ ಚಿತ್ರಗಳು ಗಮನಸೆಳೆದವು. ನಿರಂತರ ಅಭ್ಯಾಸ ಮತ್ತು ನಂಬಿಕೆಯ ಜೊತೆಗೆ ಅವರು ಪ್ರಕೃತಿಯಲ್ಲಿ ವಿರಮಿಸಿದರ ಪ್ರತಿಬಿಂಬವೇ ಈ ಕಲಾಕೃತಿಗಳು ಅನಿಸಿದವು. ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಹೊಸತನದ ಹುಡುಕಾಟವೂ ಅವರನ್ನು ಕಾಡಿಸಿದೆ ಎನ್ನುವುದನ್ನು ಕೆಲವು ಕಲಾಕೃತಿಗಳು ಬಹಳ ಸ್ಪಷ್ಟವಾಗಿ ಹೇಳುತ್ತವೆ. ಪ್ರಕೃತಿಯನ್ನೇ ವಸ್ತುವಾಗಿಸಿಕೊಂಡು ಈ ಪ್ರಯತ್ನಕ್ಕೆ ಇಳಿದಿರುವುದು ಕಂಡುಬರುತ್ತದೆ. ಕಲಾವಿದ ನಿಂತ ನೀರಾಗಿರಲು ಬಯಸಲಾರ ಎನ್ನುವುದಕ್ಕೆ ಇವೆಲ್ಲವೂ ಸಾಕ್ಷ್ಯವಾಗಬಲ್ಲವು. ಕಲಾವಿದರ ದಿಕ್ಸೂಚಿಯೂ ಹೌದು.
ಪ್ರದರ್ಶಿತ ಜಲವರ್ಣ ಕಲಾಕೃತಿಗಳು ಪ್ರಹ್ಲಾದ್ ಅವರ ವ್ಯಕ್ತಿತ್ವ ಹೇಳುವಂತಿವೆ. ಮಿತಭಾಷಿ, ಮೃದು ಸ್ವಭಾವದವರಾದ ಪ್ರಹ್ಲಾದ್ ಅವರು ಬಹುತೇಕ ಜಲವರ್ಣ ಕಲಾಕೃತಿಗಳಲ್ಲಿ ಮಿತವರ್ಣಿಯಾಗಿ ಕಾಣಿಸುತ್ತಾರೆ. ಕೆಲವು ಕಲಾಕೃತಿಗಳಲ್ಲಿ ಗಾಢ ವರ್ಣಗಳ ಬಳಕೆಯೂ ಅವರನ್ನು ಆಕರ್ಷಿಸಿದೆ. ನವ್ಯದತ್ತ ಹೊರಳಿಕೊಳ್ಳುವ ಪ್ರಯತ್ನವೂ ಇದೆ.
ಒಟ್ಟಾರೆಯಾಗಿ ಪ್ರಕೃತಿಯ ಮಹತ್ವ, ಸೌಂದರ್ಯ, ಅಗತ್ಯತೆಯನ್ನು ಬೆಂಗಳೂರಿಗರಿಗೆ ಉಣಬಡಿಸುವ ಪ್ರಹ್ಲಾದ್ ಅವರ ಈ ಪ್ರದರ್ಶನ ಯಶಸ್ವಿಯಾಗಲೆಂದು ಹಾರೈಸೋಣ. wish you all the best sir 💐.
Friends, ಈ ಕಲಾಪ್ರದರ್ಶನ ಮಾರ್ಚ್ 28ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ. ಪ್ರಹ್ಲಾದ್ ಆಚಾರ್ಯರ ಆಹ್ಲಾದಕರ ಕಲಾಕೃತಿಗಳನ್ನು ನೋಡಿ ಬನ್ನಿ.

 


Share This

Leave a Reply

Your email address will not be published. Required fields are marked *