• ರಂಗೋಪನಿಷತ್ ಅಂಗಳದಲ್ಲಿ ‘ನೃತ್ಯ ನಿರಂತರ’ • ಧ್ಯಾನಿಸಿದ ಪವಿತ್ರಾ, ಸೃಷ್ಟಿ, ವಿದ್ಯಾ, ರಜನಿ
‘ ನೃತ್ಯ ನಿರಂತರ ‘, ಅಂದುಕೊಳ್ಳುವಷ್ಟು ಸುಲಭದ ಕಾಯಕವಲ್ಲ. ಅದರಲ್ಲೂ ವೃತ್ತಿಪರರಾಗಿ ತಮ್ಮದೇ ಆದ ಒಂದು ಸಿದ್ಧಾಂತಕ್ಕೆ ಒಗ್ಗಿಕೊಂಡ ಬಳಿಕವಂತೂ ನೃತ್ಯ ನಿರಂತರ ಅಷ್ಟು ಸುಲಭದ ಮಾತಲ್ಲ. ಆದರೆ ಇದು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ ಬೆಂಗಳೂರಿನ ಪ್ರತಿಷ್ಠಿತ ನೃತ್ಯ ಕೇಂದ್ರಗಳಲ್ಲಿ ಒಂದಾದ ಸಾಧನ ಸಂಗಮ.
ಮೊನ್ನೆ ಭಾನುವಾರ ಸಾಧನ ಸಂಗಮದ ರಂಗೋಪನಿಷತ್ ರಂಗ ಸಜ್ಜಿಕೆಯಲ್ಲಿ “ಯುಗಳ ನರ್ತನ” ಕಾರ್ಯಕ್ರಮ ಜರುಗಿತು. ನೃತ್ಯ ಕೇಂದ್ರದ ಜೂನಿಯರ್, ಸೀನಿಯರ್ ನರ್ತಕಿಯರು ಹಾಗೂ ಅತಿಥಿ ನೃತ್ಯ ಕಲಾವಿದರು ಪ್ರದರ್ಶನ ನೀಡಿದರು. ಆಕರ್ಷಣೀಯ ಕಾರ್ಯಕ್ರಮ ಇದಾಗಿತ್ತು. ನರ್ತಕಿಯಾಗಿ ಎತ್ತರಕ್ಕೆ ಬೆಳೆಯುವ ಕನಸು ಹೊತ್ತು ಈಗಷ್ಟೇ ನೃತ್ಯಾಭ್ಯಾಸ ಆರಂಭಿಸಿದ ಚಿಣ್ಣರು ತಾವು ಕಲಿತ ‘ಅಡವು’ಗಳನ್ನು ಸಭಿಕರ ಮುಂದೆ ಸಾದರಪಡಿಸಿದರು. ಹಿರಿಯ ವಿದ್ಯಾರ್ಥಿಗಳಾದ ಪವಿತ್ರಪ್ರಿಯಾ ಮತ್ತು ಸೃಷ್ಟಿ ಜೋಷಿ ಹಾಗೂ ಗುರು ಡಾ. ಸೌಂದರ್ಯ ಶ್ರೀವತ್ಸ ಅವರ ಶಿಷ್ಯೆಯರಾದ ವಿದುಷಿ ವಿದ್ಯಾ ಬಾಲಚಂದ್ರ ಮತ್ತು ವಿದುಷಿ ರಜನಿ ಕಲ್ಲೂರ್ ಅವರು ಅತ್ಯಂತ ಅಚ್ಚುಕಟ್ಟಾದ ಪ್ರದರ್ಶನದ ಮೂಲಕ ಗಮನ ಸೆಳೆದರು.
| ಸೃಷ್ಟಿ, ಪವಿತ್ರಪ್ರಿಯ ಪ್ರಭುದ್ಧ ನೃತ್ಯ |
ಸುನಾದ ವಿನೋದಿನಿ ರಾಗದ ಜತಿಸ್ವರಕ್ಕೆ ಪವಿತ್ರಾ ಮತ್ತು ಸೃಷ್ಟಿ ಜೋಷಿ ಅವರದ್ದು ಅತ್ಯಂತ ಶಿಸ್ತುಬದ್ಧವಾದ ನೃತ್ಯವೆನಿಸಿತು. ಭಾವಾಭಿನಯ, ಅಂಗ ಶುದ್ಧಿ ಮತ್ತು ಅಂಗಾಂಗಗಳ ವಿಕ್ಷೇಪಣೆ ಮೂಲಕ ಪ್ರೇಕ್ಷಕನ ಗಮನ ಬೇರೆಡೆ ಹೋಗದಂತೆ ನೋಡಿಕೊಂಡರು. ತಮ್ಮ ಪ್ರಭುದ್ಧತೆ ಪ್ರದರ್ಶಿಸಿದರು.
” ಗಾನಕ್ಕೆ ಮುಖ್ಯವೆನಿಸುವುದು ಸ್ವರ ಸ್ಥಾನ, ನೃತ್ತಕ್ಕೆ ಮುಖ್ಯವಾಗುವುದು ಲಯ ಸ್ಥಾನ. ಸಂಗೀತದಲ್ಲಿ ಸ್ವರವೇ ಪ್ರಧಾನ. ನೃತ್ತದಲ್ಲಿ ಜತಿ ಪ್ರಧಾನ. ” ಎಂದು ವಿದ್ವಾಂಸರೇ ಹೇಳಿದ್ದಾರೆ. ಹೀಗಾಗಿ ನೃತ್ತಕ್ಕೆ ಬೇಕಾದ ರೀತಿಯಲ್ಲೇ ಸಂಗೀತ ಮತ್ತು ನೃತ್ತ ಸಂಯೋಜನೆ ಮಾಡಿಕೊಳ್ಳಲಾಗುತ್ತದೆ. ಆದರೆ ಅದನ್ನು ಪ್ರಸ್ತುತಿಗೊಳಿಸುವಾಗ ಎಲ್ಲಿಯೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಕಾಳಜಿ ಇರಬೇಕು. ಇಬ್ಬರೂ ನರ್ತಕಿಯರಲ್ಲಿ ಈ ಸೂಕ್ಷ್ಮತೆ ಮತ್ತು ಜಾಗ್ರತೆ ಬಲವಾಗಿ ಕಾಣಿಸಿತು. ಮೆಚ್ಚುಗೆ ಮತ್ತು ಶ್ಲಾಘನೀಯ ಅಂಶವೂ ಹೌದು.
| ಅತಿಥಿ ಕಲಾವಿದರ ನೃತ್ಯಾಥಿತ್ಯ |
ನಟರಾಜನಲ್ಲಿ ಸಂಕಷ್ಟ ಪರಿಹರಿಸುವಂತೆ ನಿವೇದಿಸಿಕೊಳ್ಳುವ ಒಂದು ಸುಂದರ ಪದವರ್ಣದ ಮೂಲಕ ನೃತ್ತ ಆರಂಭಿಸಿದ ವಿದುಷಿ ವಿದ್ಯಾ ಬಾಲಚಂದ್ರ ಮತ್ತು ವಿದುಷಿ ರಜನಿ ಕಲ್ಲೂರ್ ಅವರು ನೃತ್ಯ ನಿಖರತೆಯ ಮೂಲಕ ಗಮನ ಸೆಳೆದರು.
ಮೈಸೂರು ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದ ವೀಣೆ ಶೇಷಣ್ಣ ಅವರ ರಚನೆಯ, ಗುರು ನರ್ಮದಾ ಅವರು ನೃತ್ಯ ಸಂಯೋಜಿಸಿರುವ, ರಾಗ ಷಣ್ಮುಖಪ್ರಿಯ, ಆದಿ ತಾಳದಲ್ಲಿ ನಿಬಂಧಗೊಂಡಿರುವ ” ದೇವಾದಿದೇವ ನಟರಾಜ… ” ಪದವರ್ಣ ಆಯ್ಕೆ ಸೂಕ್ತವೆನಿಸಿತು. ನಿಧಾನಗತಿಯಲ್ಲಿ ಸಾಗುವ ರಾಗಕ್ಕೆ ಹೆಜ್ಜೆ ಹಾಕುತ್ತಿದ್ದ ನರ್ತಕಿಯರಿಗೆ ಮೇಘರಾಜನೂ ಸಾತ್ ನೀಡುತ್ತಿದ್ದಾನೆಯೇ ಎನ್ನುವಂತಿತ್ತು. ಕರ್ನಾಟಕ ಸಂಗೀತದ ಮೇಳಕರ್ತ ರಾಗಗಳಲ್ಲಿ 56ನೇ ರಾಗವಾದ ಷಣ್ಮುಕಪ್ರಿಯದ ಆರೋಹಣ ಮತ್ತು ಅವರೋಹಣದ ಶುದ್ಧಸ್ವರಗಳು ಎಂತವರನ್ನೂ ಹಿಡಿದು ನಿಲ್ಲಿಸುತ್ತವೆ. ಇದಕ್ಕೆ ಅಷ್ಟೇ ಪರಿಶುದ್ಧ ನೃತ್ಯ, ಭಾವ-ಅಂಗಾಭಿನಯ ನರ್ತಕಿಯರಿಂದ ವ್ಯಕ್ತವಾಯಿತು.
ಆನಂತರದ ಆಯ್ಕೆ ರಾಗ ಮಾಲಿಕೆ, ಆದಿ ತಾಳದಲ್ಲಿ ವಿದ್ವಾಂಸರಾದ ಯೋಗಾನರಸಿಂಹ ಅವರು ರಚಿಸಿರುವ ” ಅದಿಗೋ ಬರುತಿಹನೆ ಶ್ರೀರಾಮ.. ” ದೇವರನಾಮ. ಸೀತಾಮಾತೆ ಸ್ವಯಂವರಕ್ಕೆ ಆಗಮಿಸುತ್ತಿರುವ ಸ್ಪುರದ್ರೂಪಿ ಶ್ರೀರಾಮಚಂದ್ರನ ಸೌಂದರ್ಯಕ್ಕೆ ಬೆರಗಾಗಿ ಸಂಭ್ರಮಿಸುವ ಸನ್ನಿವೇಶವದು. ಸೀತೆಯ ಸಂಭ್ರಮ ನೋಡಿ ಸಖಿಯರಲ್ಲಿ ಕುತೂಹಲ ಮನೆಮಾಡಿದೆ. ಜಾನಕಿ ಲಜ್ಜೆಯಿಂದಲೇ ಹೆಜ್ಜೆ ಹಾಕುತ್ತಿದ್ದಾಳೆ. ಈ ಅದ್ಭುತ ಸಂಯೋಜನೆಗೆ ಬಹಳ ಜಾಣತನದ ಪ್ರದರ್ಶನ ನೀಡಿದರು. ಆಂಗಿಕಾಭಿನಯ, ಭಾವಾಭಿನಯ ಗಮನ ಸೆಳೆಯಿತು. ಅಂತಿಮವಾಗಿ ಶತಾವಧಾನಿ ಆರ್. ಗಣೇಶ್ ಅವರ ಸಾಹಿತ್ಯದ, ವಿದುಷಿ ನಾಗವಲ್ಲಿ ನಾಗರಾಜ್ ಸಂಯೋಜನೆಯ ದುರ್ಗಾ ರಾಗ, ಆದಿ ತಾಳದಲ್ಲಿ ನಿಭಂದಿತ ತಿಲ್ಲಾನದ ಮೂಲಕ ” ಯುಗಳ ನರ್ತನ ” ಸಂಪನ್ನಗೊಳಿಸಿದರು.
| ರಂಗೋಪನಿಷತ್ ರಂಗದಲ್ಲಿ ನೃತ್ಯ ನಿರಂತರ! |
ರಾಜ್ಯೋತ್ಸವ ಪುರಸ್ಕೃತ, ಕರ್ನಾಟಕ ಕಲಾಶ್ರೀ, ಗುರು ಜ್ಯೋತಿ ಪಟ್ಟಾಭಿರಾಮ್ ಅವರು 24 ವರ್ಷಗಳ ಹಿಂದೆ ಆರಂಭಿಸಿದ ನೃತ್ಯ ನಿರಂತರ ಕಾರ್ಯಕ್ರಮ ನಿರಂತರ. ಕೋವಿಡ್ ಸಂದರ್ಭದಲ್ಲಿಯೂ ನಿಲ್ಲಿಸದೆ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು ಆನ್‌ಲೈನ್ ಮೂಲಕ ನೃತ್ಯಾಸಕ್ತರನ್ನು ತಲುಪಿದ್ದಾರೆ. ನೃತ್ಯ ಗುರು ಡಾ.ಸಾಧನಾಶ್ರೀ ಅವರು ಇಂತಹದ್ದೊಂದು ಸುಂದರ ಪರಿಕಲ್ಪನೆಯನ್ನು ನೃತ್ಯ ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. ನೂರಾರು ಮಂದಿ ಕಿರಿಯ- ಹಿರಿಯ ನರ್ತಕಿ, ನರ್ತಕರ ನೃತ್ಯಕ್ಕೆ ರಂಗೋಪನಿಷತ್ ಸಾಕ್ಷಿಯಾಗಿದೆ.
ಹೆಸರಾಂತ ನೃತ್ಯಗಾರ್ತಿ, ಸಂಯೋಜಕಿ ಗುರು ನಂದಿನಿ ರಮಣಿ ಅವರು ಸಂದರ್ಶನವೊಂದರಲ್ಲಿ ದಾಖಲಿಸಿದ ಮಾತೊಂದು ನೆನಪಿಗೆ ಬರುತ್ತಿದೆ.
” Today’s dance pattern is focused towards different goals. It revolves round the survival and the successful sustenance of the individual artiste. While aiming at this, the artiste has to take care of various commercial aspects of the art, which serves as a “form of entertainment and a medium of communication.”
ಕಲಾವಿದರು ಅಥವಾ ಯಾವುದೇ ಕಲಾರಾಧನೆ ಸಂಸ್ಥೆ ಅಸ್ಥಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗೆ ಅಂಟಿಕೊಳ್ಳುವುದು ಅನಿವಾರ್ಯವಾಗಿದೆ. ಸಾಧನ ಸಂಗಮವನ್ನು ಕೇವಲ ಭರತನಾಟ್ಯದಂತಹ ಶಾಸ್ತ್ರಿಯ ಶಿಕ್ಷಣಕ್ಕೆ ಮೀಸಲಿರಿಸಿ ಸವಾಲುಗಳ ನಡುವೆಯೂ ಯಶಸ್ಸಿನ ದಡ ಸೇರಿಸುವಲ್ಲಿ ಗುರು ಜ್ಯೋತಿ ಪಟ್ಟಾಭಿರಾಮ್ ಅವರ ಕಾರ್ಯ ಅಭಿನಂದನೀಯ.