• ಇಂಡಿಯಾ ಆರ್ಟ್ ಫೇರ್‌ನಲ್ಲಿ ಕನ್ನಡತಿಯ “ಶೂನ್ಯ” ಪ್ರಯಾಣ | ಗಮನ ಸೆಳೆದ “ಮರೀಚಿಕೆ”
ಅಮೆರಿಕದ ಕ್ರಿಯಾಶೀಲ ನಿರ್ಮಾಪಕ, ವಾಣಿಜ್ಯೋಧ್ಯಮಿ ಶಾನ್ ಕೋರೆ ಕಾರ್ಟರ್ (Shawn Corey Carter) ಅವರು ಕನ್ನಡಿಯ(mirror) ಬಗ್ಗೆ ಹೀಗೊಂದು ಮಾತು ಹೇಳುತ್ತಾರೆ.
” ನಾನೊಂದು ಕನ್ನಡಿ. ನೀವು ನನ್ನೊಂದಿಗೆ ಶಾಂತಚಿತ್ತದಿಂದ ಇದ್ದರೆ ನಾನೂ ನಿಮ್ಮೊಂದಿಗೆ ಶಾಂತವಾಗಿರುತ್ತೇನೆ ಮತ್ತು ನಮ್ಮಿಬ್ಬರ ನಡುವೆ ಪರಸ್ಪರ ವಿನಿಮಯವೂ ಆರಂಭವಾಗುತ್ತದೆ. ನೀವು ಹೇಗೆ ನೋಡುತ್ತೀರೋ ಅದೇ ಪ್ರತಿಬಿಂಬವಾಗಿರುತ್ತದೆ. ಒಂದೊಮ್ಮೆ ನೀವು ನೋಡುತ್ತಿರುವುದು ನಿಮಗೆ ಇಷ್ಟವಾಗದೆ ಇದ್ದಲ್ಲಿ, ಪ್ರತಿಯಾಗಿ ಏನೋ ಮಾಡುತ್ತೀರಿ. ಆಗ ನಾನು ಸಹಾನುಭೂತಿ ಇಲ್ಲದವನಾಗಿ ಕಂಡರೆ ಅದಕ್ಕೆ ಕಾರಣ ನೀವೇ…” ಎನ್ನುತ್ತಾರೆ.
ಇಂತಹ ಪ್ರಸಂಗಳು ಆಗಾಗ ಎಲ್ಲರಿಗೂ ಎದುರಾಗಿರುತ್ತವೆ. ನಮ್ಮದೇ ಪ್ರತಿಬಿಂಬ ಎದುರಾದ ಸನ್ನಿವೇಶದಲ್ಲಿ ಅದೇನೋ ಗೊತ್ತಿಲ್ಲದೆ ಸಂಭಾಷಣೆಯೂ ಆರಂಭವಾಗಿರುತ್ತದೆ.
ಈ ಇಡೀ ಸನ್ನಿವೇಶವನ್ನು ಒಮ್ಮೆ ಊಹಿಸಿಕೊಂಡರೆ ನಗು ಮೊದಲ ಪ್ರತಿಕ್ರಿಯೆ ಆಗಿರುತ್ತದೆ. ಆದರೆ ಅರ್ಥಪೂರ್ಣವಾದ ಮಾತಿದು ಅನ್ನಿಸೋದು ತುಸು ತಡವಾಗಿ.
ಕನ್ನಡಿಯ ಮುಂದೆ ಅಥವಾ ನಮ್ಮದೇ ಪ್ರತಿಬಿಂಬ ಎದ್ದು ಕಾಣುವ ಯಾವುದೇ ವಸ್ತುವಿನ ಮುಂದೆ ಹೋದಾಗ ತತಕ್ಷಣ ನಮ್ಮ ಬಗ್ಗೆಯೇ ಯೋಚಿಸುತ್ತೇವೆ. ರೂಪ, ಉಡುಪು, ಹೆಮ್ಮೆ, ಗರ್ವ ಇತ್ಯಾದಿ ಭಾವ ಮೂಡುತ್ತವೆ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲವೆಂದರಂತೂ… ಮುಂದೇನೆಂದು ಹೇಳಬೇಕಿಲ್ಲ. ಅವರವರ ಕಲ್ಪನೆಗೆ ಬಿಟ್ಟುಬಿಡೋಣ.
| ಶೂನ್ಯವಲ್ಲದ ಶೂನ್ಯ;
ಭ್ರಮೆ ಮತ್ತು ಮರೀಚಿಕೆ! |
ಕಳೆದ ವಾರ ದೆಹಲಿಯಲ್ಲಿ ನಡೆದ ಇಂಡಿಯಾ ಆರ್ಟ್ ಫೇರ್ “ಮೆಗಾ ಆರ್ಟ್ ಶೋ”ನಲ್ಲಿ ಪ್ರದರ್ಶಿಸಲ್ಪಟ್ಟ ಕನ್ನಡತಿ ಸಿರಿ ದೇವಿ ಖಂಡವಿಲ್ಲಿ (Siri Devi Khandavilli) ಅವರ ಮೂರು ಕಲಾಕೃತಿಗಳ ಎದುರು ನಿಂತಾಗ ಅರೆ ಕ್ಷಣ ಕಳೆದುಹೋದ ಅನುಭವ. ಕಲಾಕೃತಿಯೊಂದು ನೋಡುಗರನ್ನು ತಲ್ಲೀನರಾಗುವಂತೆ ಮಾಡುತ್ತದೆ ಎಂದಾದರೆ ರಚಿಸಿದ ಕಲಾವಿದೆ/ಕಲಾವಿದನ ಶ್ರಮ ಸಾರ್ಥಕವಾಗಿದೆ ಎಂದರ್ಥ. ಕಲಾಕೃತಿಗೆ ನ್ಯಾಯ ಸಂದಾಯವಾಗಿದೆ ಎಂದೂ ಧೈರ್ಯವಾಗಿ ಹೇಳಿಬಿಡಬಹುದು. ಸಿರಿ ದೇವಿ ಅವರ ಕಲಾಕೃತಿಗಳಲ್ಲಿ ಅವರ ಹೆಸರಿನಲ್ಲಿರುವಂತಹ ದೈವತ್ವದ ಸಿರಿ ಭಾವ ಇತ್ತು. ಮೇಲ್ನೋಟಕ್ಕೆ ಅಮೂರ್ತವಾಗಿ ಅಥವಾ ಶೂನ್ಯವಾಗಿ ಕಾಣಿಸಿದರೂ ಎದುರು ನಿಲ್ಲುವ ನೋಡುಗ ಕ್ಷಣಕಾಲ ಬೆತ್ತಲಾಗುತ್ತಾನೆ. ಅದರರ್ಥ ತನ್ನ ವ್ಯಕ್ತಿತ್ವವನ್ನು ಈ ಕಲಾಕೃತಿಯಲ್ಲಿ ಕಂಡುಕೊಳ್ಳುವ ಪ್ರಯತ್ನಕ್ಕಿಳಿಯುತ್ತಾನೆ. ಸಿರಿ ದೇವಿ ಅವರು ಅಷ್ಟು ಅಚ್ಚುಕಟ್ಟಾಗಿ, ವಿಭಿನ್ನ ತಂತ್ರಗಾರಿಕೆಯಿಂದ ಈ ಕಲಾಕೃತಿಗಳನ್ನು ರಚಿಸಿದ್ದಾರೆ. ಕನ್ನಡಿಯ ಮುಂದೆ ನಿಲ್ಲುವಾಗ ಯಾವ ಭಾವ ನಮ್ಮನ್ನು ಆವರಿಸಿಕೊಂಡಿರುತ್ತದೋ ಅದೇ ಭಾವ ಈ ಕಲಾಕೃತಿಗಳ ಮುಂದೆ ನಿಂತಾಗ ಇತ್ತು. ಕಾರಣ ಕಲಾಕೃತಿಗಳಲ್ಲಿ ನಮ್ಮ ಪ್ರತಿಬಿಂಬ ಅಸ್ಪಷ್ಟವಾಗಿ ಕಾಣಿಸುವಂತೆ ನಿರ್ವಹಿಸಿದ್ದರು. ಈ ಮೈವಳಿಕೆಗಾಗಿ ಕಲಾವಿದೆ ಆಯ್ದುಕೊಂಡಿರುವ ಮಾಧ್ಯಮದ ಬಗ್ಗೆಯೂ ಸಹಜವಾಗಿಯೇ ಕುತೂಹಲ ನೋಡುಗರನ್ನು ಆವರಿಸಿಕೊಳ್ಳುವಂತೆ ಮಾಡಿದ್ದು ಕಂಡುಬಂತು. “ಶೂನ್ಯ(Shoonya)” ಶೀರ್ಷಿಕೆಯ ಕಲಾಕೃತಿಗಳು ಗ್ಯಾಲರಿಗೆ ಭೇಟಿ ನೀಡುವ ಬಹುತೇಕ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತಿತ್ತು. ಮೌನಕ್ಕೆ ಜಾರಿಕೊಳ್ಳುವಂತೆ ಮಾಡುವಂತಿತ್ತು. ಆಧ್ಯಾತ್ಮ ಕಲಾಕೃತಿಯಲ್ಲಿ ಏನೂ ಇಲ್ಲ ಎನ್ನುವುದನ್ನು ಹೇಳುತ್ತಲೇ ಎಲ್ಲವೂ ಇದೆ ಎನ್ನುವುದನ್ನು ತೋರ್ಪಡಿಸುವ ನಿರ್ವಹಣೆ ಶ್ಲಾಘನೀಯ.
ಅವರದೇ ವ್ಯಾಖ್ಯಾನ ದಾಖಲಿಸುವುದಾದರೆ, ” ಶೂನ್ಯ ಎನ್ನುವುದು ಎಲ್ಲವೂ ಉದ್ಭವಿಸುವಂತಹ, ಮರಳಿ ಕೊಡುವಂತಹ ಸ್ಥಳ “. ವಾಸ್ತವವಾಗಿ ಎಷ್ಟು ಸಮರ್ಥನೀಯ ಎನ್ನುವುದು ಅವರವರ ಅಭಿಪ್ರಾಯಕ್ಕೆ ಬಿಟ್ಟುಬಿಡೋಣ. ಸಮಕಾಲೀನ (contemporary) ನೆಲೆಯಲ್ಲಿ ಸಿರಿ ದೇವಿ ಅವರ ಈ ಪ್ರಯತ್ನ ಖಂಡಿತವಾಗಿ ಹೊಸ ಅನುಭವಕ್ಕೆ ಕಾರಣವಾಗಿಸುತ್ತದೆ. ಅಷ್ಟೇ ಅಲ್ಲ ಈ ಕಾಲಘಟ್ಟದಲ್ಲಿ ದಾಖಲಾಗಬೇಕಾದ ಕಲಾಕೃತಿಯೂ ಹೌದು.
“ಮರೀಚಿಕೆ (Marichike)” ಶೀರ್ಷಿಕೆಯ ಕಲಾಕೃತಿ ಕೂಡ ಗಮನ ಸೆಳೆಯುವಂತಿದೆ. ಈ ಕಲಾಕೃತಿಯಲ್ಲೂ ಕನ್ನಡಿಯ ಗುಣವಿರುವುದನ್ನು ಕಾಣಬಹುದು. ಉಬ್ಬು ಶಿಲ್ಪಕ್ಕೆ ಹೋಲುವ ಕಲಾಕೃತಿ ಇದಾಗಿದೆ. ಈ ಶಿಲ್ಪಕ್ಕಾಗಿ ಲೋಹ ಕರಗಿಸಿ ಆ ಲೋಹವನ್ನು ಬಳಸಿಕೊಂಡಿದ್ದಾರೆ. ಕರಗಿ ದ್ರವ ರೂಪ ಪಡೆದ ಬಳಿಕ ಆಕಾರವಿಲ್ಲದ ಲೋಹವಾಗಿ ಕಾಣಿಸಿದರೂ ಅದನ್ನು ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಹೆಸರೇ ಹೇಳುವಂತೆ ಕಲಾಕೃತಿಯು ಮನುಷ್ಯ ತನ್ನ ಪ್ರಯಾಣದಲ್ಲಿ ಎಷ್ಟು ಭ್ರಮಾತ್ಮಕವಾಗಿ ಸಾಗುತ್ತಿರುತ್ತಾನೆ ಎನ್ನುವುದನ್ನು ಈ ಕಲಾಕೃತಿಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
| ಚಿಂತನೆಗೆ ಜೀವ ತುಂಬಿದ ಕೋವಿಡ್! |
ವಿಶ್ವವನ್ನೇ ಬೆಚ್ಚಿಬೀಳಿಸಿದ ಕೋವಿಡ್ ಅದೆಷ್ಟೋ ಹೊಸತುಗಳಿಗೆ, ಅದೆಷ್ಟೋ ಹೊಸ ಅನ್ವೇಷಣೆಗೆ ಕಾಣವಾಯಿತು ಎನ್ನುವುದಕ್ಕೆ ಸಿರಿ ದೇವಿ ಅವರ ಕಲಾ ಪ್ರಯಾಣವೂ ಸಾಕ್ಷಿಯಂತಿದೆ. ಅವರೇ ಹೇಳಿಕೊಂಡಿರುವಂತೆ ಕಳೆದೆರಡು ವರ್ಷಗಳ ಹಿಂದೆ ಕೋವಿಡ್ ನಡುವೆಯೂ ಅಮೆರಿಕ ಪ್ರಯಾಣ ಬೆಳೆಸಿ ತಂಗಬೇಕಾದ ಸನ್ನಿವೇಶದಲ್ಲಿ ಬೇರೆಲ್ಲಿಯೂ ಹೋಗಲಾಗದೆ ರೂಮಿನಲ್ಲೇ ಇದ್ದ ಸಂದರ್ಭದಲ್ಲಿ ಪ್ರಯೋಗಾತ್ಮಕ ಕಲಾಕೃತಿಗಳ ಚಿಂತನೆಗೆ ಕಾಲ ಒದಗಿಬಂತು ಎನ್ನುತ್ತಲೇ ತಾವು ವಾಸವಿದ್ದ ರೂಮಿನಿಂದ ಆಚೆ ಕಾಣಿಸುತ್ತಿದ್ದ ಗ್ರ್ಯಾಂಡ್ ಕ್ಯಾನಾನ್ (Grand Canyon) ಭೂದೃಶ್ಯಗಳನ್ನು ಮೆಲುಕು ಹಾಕುತ್ತಾರೆ. ಅಮೆರಿಕಾದ ಅರಿಜೋನ್ ಪ್ರಾಂತ್ಯದಲ್ಲಿನ ಕೊಲೆರಾಡೋ ನದಿ ನೀರಿನ ಕೊರೆತದಿಂದ ಸೃಷ್ಟಿಯಾದ ಕಂದರಗಳು ಸಿರಿ ದೇವಿ ಅವರ ಮೇಲೆ ಬಲವಾದ ಪ್ರಭಾವ ಬೀರಿರುವುದನ್ನು ಅವರ ಒಕ್ಕಣಿಕೆಯಿಂದ ತಿಳಿಯಲು ಸಾಧ್ಯ. ಈ ಭೂದೃಶ್ಯಾವಳಿಗಳು ತಮ್ಮ ವುಡ್‌ಕಟ್ ಕಲಾಕೃತಿಗಳಿಗೆ ಸ್ಫೂರ್ತಿಯೂ ಹೌದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಹೊಕುಸೈ (Hokusai) ಕಲೆಯೂ ತಮಗೆ ಪ್ರೇರಣೆ. ಕೋವಿಡ್ ಪ್ರಕ್ಷುಬ್ಧತೆಯ ನಡುವೆ ಪ್ರಕೃತಿಯ ಅನೇಕ ವಿಚಾರಗಳು ಮರುಯೌವ್ವನಕ್ಕೆ ಕಾರಣವಾಯಿತು ಎಂದು ಹೇಳಿಕೊಳ್ಳುತ್ತಾರೆ.
ಸಿರಿ ದೇವಿ ಅವರ ಕಲಾಕೃತಿಗಳ ಹಿಂದಿನ ಶ್ರಮವನ್ನು ಗಮನಿಸಿ ಹೇಳುವುದಾದರೆ, ಅವರಲ್ಲಿರುವ ಕಲಾವಿದ ಹುಡುಕಾಟದ ಮಹಾಗುಣ ಹೊಂದಿರುವ ಸಂಶೋಧಕ ಎಂದರೆ ಅತಿಶಯೋಕ್ತಿ ಆಗಲಾರದು. ತಮ್ಮ ಹುಡುಕಾಟದ ಗುಣದಿಂದಲೇ ಅವರು ಇಂದು ಈ ಎತ್ತರಕ್ಕೆ ಬೆಳೆದಿದ್ದಾರೆ.
| ಯಾರಿವರು ಸಿರಿ ದೇವಿ ಖಂದವಿಲ್ಲಿ?! |
ಈ ಪ್ರಶ್ನೆ ನಿಮ್ಮಲ್ಲಿಯೂ ಮೂಡಿರಬಹುದು. ಸಿರಿ ದೇವಿ ಅಪ್ಪಟ ಕನ್ನಡತಿ. ಕನ್ನಡದ ಪ್ರಖ್ಯಾತ ಸಿನಿಮಾ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ ಅವರ ಮಗಳು. ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅತ್ಯಂತ ಪ್ರೀತಿ ಬೆಳೆಸಿಕೊಂಡಿದ್ದರು. ಖ್ಯಾತ ಕಲಾವಿದೆ ಸುಶೀಲಾ ದೇವಿ ಅವರಲ್ಲಿ ಮೈಸೂರು ಸಾಂಪ್ರದಾಯಿಕ ಕಲೆಯನ್ನು ಅಭ್ಯಾಸ ಮಾಡಿಕೊಂಡಿರುವ ಸಿರಿ ದೇವಿ ಅವರು ಬಿಎಫ್‌ಎ, ಎಂಎಫ್‌ಎ ಪದವೀಧರೆ. ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇಂಟರ್ ಮೀಡಿಯಾ ಪದವಿಯನ್ನು ಪಡೆದುಕೊಂಡಿರುವ ಸಿರಿ ದೇವಿ ಅವರು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಶಿಲ್ಪಕಲೆ ಪದವಿ ಕೂಡ ಪಡೆದುಕೊಂಡಿದ್ದಾರೆ. ಇವರ ಕಲಾಕೃತಿಗಳು ದೇಶ, ವಿದೇಶಗಳ ಪ್ರತಿಷ್ಠಿತ ಮ್ಯೂಸಿಯಂ, ಗ್ಯಾಲರಿಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ.