• ಮಿಶ್ರ ಮಾಧ್ಯಮದ ತಳಿ ಹಿಡಿದು ಹೊರಟ ಮಂಜುನಾಥ ಹೊನ್ನಾಪುರ
“ಪುನರ್ನಿರ್ಮಾಣ (reconstruction)” ಅರ್ಥಾತ್ “ಮರುನಿರ್ಮಾಣ”!
ಈ ಪದದಲ್ಲೆ ಯಾವುದೋ ಒಂದನ್ನು ಕಳೆದುಕೊಂಡಿದ್ದೇವೆ. ಹಾಗೆ ಹೊಸತೊಂದರ ಹುಟ್ಟು ಸಾಧ್ಯವಾಗುತ್ತಿದೆ. ನಿರ್ಮಾಣ(construction) ತನ್ನ ಅಸ್ಥಿತ್ವ ಕಳೆದುಕೊಂಡು ಬೇರಿನ್ನಾವುದೋ ರೂಪ ಪಡೆದುಕೊಂಡು ಅಸ್ಥಿತ್ವಕ್ಕಾಗಿ ಹೋರಾಟ ನಡೆಸಿದೆ. ಆದರೆ ಅದನ್ನೊಪ್ಪಲಾಗದ ಮನುಷ್ಯ ಮತ್ತೆ ತನ್ನ ಅನುಕೂಲಕ್ಕಾಗಿ ರೂಪ ಬದಲಾಯಿಸಲು ಹೊರಟಿದ್ದಾನೆ. ಅಂದರೆ ಪುನರ್ನಿರ್ಮಾಣ ಅಥವಾ ಮರುನಿರ್ಮಾಣ ಸಾಧ್ಯವಾಗಲಿದೆ.
ಈ ಇಡೀ ಪ್ರಕ್ರಿಯೆ ಕೇವಲ ಕಟ್ಟಡಕ್ಕಷ್ಟೇ ಸೀಮಿತವಾದುದಲ್ಲ. ಸೃಷ್ಟಿಯ ಪ್ರತಿಯೊಂದು ವಸ್ತುವೂ ರೂಪ ಬದಲಿಸುತ್ತ, ಅಸ್ಥಿತ್ವ ಕಳೆದುಕೊಂಡು ಇನ್ನೆಲ್ಲೋ ಅಸ್ಥಿತ್ವ ಕಂಡುಕೊಳ್ಳುತ್ತವೆ. ಅಗಾಧವಾದುದು ಅತಿಸಣ್ಣದಾಗಿಯೂ, ಚಿಕ್ಕದೆನಿಸಿಕೊಂಡಿದ್ದು ದೈತ್ಯಾಕಾರದ ರೂಪ ತಾಳಬಹುದು. ಇಂತಹ ಪುನರ್ನಿರ್ಮಾಣ ಪ್ರಕ್ರಿಯೆ ಯಾವುದೋ ಜೀವಿಯ ಅನುಕೂಲಕ್ಕಾಗಿ, ಪ್ರಕೃತಿ ಸಹಜವಾಗಿಯೂ ನಡೆಯಬಹುದು.
ಬಹಳ ಸಂದರ್ಭಗಳಲ್ಲಿ ಈ ಪ್ರಕ್ರಿಯೆ ಸೋಜಿಗ, ಅಚ್ಚರಿ ಅನಿಸುವುದಿದೆ. ಸಂತೋಷ, ದುಃಖಕ್ಕೂ ಕಾರಣವಾಗುವುದಿದೆ. ಇರುವೆಯೊಂದು ಹುತ್ತವನ್ನು ಮರುನಿರ್ಮಾಣ ಮಾಡಿಕೊಳ್ಳುವ, ಪಕ್ಷಿಯೊಂದು ಗೂಡನ್ನು ಪುನರ್ನಿಮಿಸಿಕೊಳ್ಳುವ, ಕಟ್ಟಡವೊಂದರ ಮರುನಿರ್ಮಾಣ ಕಾರ್ಯದವರೆಗೂ ನಡೆಯುವ ಪ್ರಕ್ರಿಯೆಯಲ್ಲಿ ನಿರ್ಜೀವಿಯೂ ಜೀವಿಯಾಗಿ ಕಾಣಿಸುತ್ತವೆ. ಹೇಗೇಗೋ ಚಲಿಸಿಬಿಡುತ್ತವೆ.
ಇಂತಹ ಆಸಕ್ತಿದಾಯಕ ವಿಚಾರವನ್ನು ಅಭಿವ್ಯಕ್ತಿಗೆ ಕಾರಣವಾಗಿಸಿಕೊಂಡಿರುವ ಕಲಾವಿದ ಮಂಜುನಾಥ ಹೊನ್ನಾಪುರ (Manjunath Honnapura ) ಅವರ ಇತ್ತೀಚಿನ ಕಲಾಕೃತಿಗಳ “The Art of Reconstruction” ಕಲಾಪ್ರದರ್ಶನ ಮಂಜುಶ್ರೀ ಫೌಂಡೇಷನ್ (Manjushree Foundation) ಸಹಯೋಗದಲ್ಲಿ ಬೆಂಗಳೂರಿನ ಎಂಕೆಎಫ್ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ.
| ಪ್ರಯೋಗಾತ್ಮಕ ಪ್ರಶಂಸನೀಯ ಪ್ರಯತ್ನ |
ಮಂಜುನಾಥ ಅವರ ಚಿಂತನೆಗಳು ಮಗದೊಂದು ಮಗ್ಗುಲು ಪಡೆದುಕೊಂಡಿವೆ. ಹೊಸತನದ ಹುಡುಕಾಟದ ಮೊಗ್ಗುಗಳು ನಿಧಾನವಾಗಿ ಅರಳಲಾರಂಭಿಸಿವೆ. ಅಭಿವ್ಯಕ್ತಿಯ ದಾಟಿ ಬದಲಿಸಿ ಸಂಚಲನದ ನಿರೀಕ್ಷೆಯೊಂದಿಗೆ ಚಲನೆಗೆ ವೇಗ ನೀಡಿದ್ದಾರೆ.
” Movement is the only way you have of affecting the world around you. ” ಇದು ಚಲನೆಯ ಕುರಿತು ಇಂಗ್ಲೆಂಡಿನ ವೈದ್ಯ, ನರವಿಜ್ಞಾನಿ ಡೇನಿಯಲ್ ವೊಲ್ಪರ್ಟ್ (Daniel Wolpert) ಅವರ ಮಾತು. ನಮ್ಮ ಸುತ್ತಲಿನ ಪ್ರಪಂಚದ ಮೇಲೆ ಪರಿಣಾಮ ಬೀರಲು ಸಾಧ್ಯವಾಗಬಲ್ಲ ಏಕೈಕ ಮಾರ್ಗ ಚಲನೆ ಎನ್ನುತ್ತಾರೆ. ಮಂಜುನಾಥ ಅವರು ಬಹುಶಃ ಈ ಸತ್ಯದ ಬೆನ್ನೇರಿದ್ದಾರೆ ಅನಿಸುತ್ತದೆ. ಚಲನೆ ಮಂಜುನಾಥ್ ಅವರ ಕಲಾಕೃತಿಗಳಲ್ಲಿ ಕಾಣಿಸಿದೆ. ಒಂದಷ್ಟು ದೂರ ಚಲಿಸಿದ್ದಾರೆ.
ಮಂಜುನಾಥ್ ಅವರ ಎಂದಿನ ಕಲಾಕೃತಿಗಳಿಗಿಂತ ಈ ಸರಣಿಯ ಕಲಾಕೃತಿಗಳು ವಿಭಿನ್ನವೆನಿಸುತ್ತವೆ. ಕಲಾಕೃತಿಗಳ ರಚನೆಯ ಪ್ರಕ್ರಿಯೆ (process), ಚಿಂತನಯ ವಿಧಾನ (thought process), ಮಾಧ್ಯಮ (medium) ಬಳಕೆ ಬದಲಾಯಿಸಿಕೊಂಡಿದ್ದಾರೆ. ಆದರೆ ಬಹಳ ಜಾಣತನದಿಂದ ತಮ್ಮ ಎಂದಿನ ಮುದ್ರಣ ಕಲೆಯ ಪ್ರೀತಿ, ಹಿತ-ಮಿತ ವರ್ಣಗಳ ನಂಟು, ರೇಖೆಗಳ ನಡುವಿನ ಅನುಸಂಧಾನಕ್ಕೆ ಧಕ್ಕೆ ತಂದುಕೊಳ್ಳದಿರುವುದು ಗಮನಾರ್ಹ.
” Playing their own Dice ” ಕಲಾಕೃತಿಯಲ್ಲಿ ವಿಭಿನ್ನ ಮಾಧ್ಯಮಗಳ ಸಮ್ಮಿಲನ ಒಂದು ವಿಶೇಷ. (ವೈಯಕ್ತಿಕವಾಗಿ ನನಗೆ ಆಪ್ತವೆನಿಸಿದ ಕಲಾಕೃತಿ) ನಮ್ಮ ಪರಿಸರ, ನಿತ್ಯ ನಾವು ಕಾಣುವ, ಅನುಭವಿಸುವ ವಿಚಾರಗಳೇ ಕಲಾಕೃತಿಗೆ ವಸ್ತು ವಿಷಯ ಮಾಡಿಕೊಂಡಿದ್ದಾರೆ. ಈ ಪ್ರಯತ್ನ ಹೊಸದಲ್ಲ. ಆದರೆ ದುಡಿಸಿಕೊಂಡಿರುವ ಜಾಣ್ಮೆ ಮಹತ್ವ, ಮೌಲ್ಯ ಹೆಚ್ಚಿಸಿದೆ. ಈ ಕಲಾಕೃತಿಯಲ್ಲಿ ಮುದ್ರಣ ಕಲಾ ಪ್ರಕಾರವನ್ನು ಒಂದು ಮಾಧ್ಯಮವಾಗಿ ದುಡಿಸಿಕೊಂಡಿದ್ದಾರೆ. ಪ್ರದರ್ಶಿತ ಬಹುತೇಕ ಕಲಾಕೃತಿಗಳು ಪ್ರಯೋಗಶೀಲ ಪ್ರಕ್ರಿಯೆಯಿಂದ ಕೂಡಿದೆ. ಬಹುಶಃ ಕೆಲವು ಕಲಾಕೃತಿಗಳು ಚೌಕಟ್ಟಿನ (frame) ಕಾರಣಕ್ಕಾಗಿ ತನ್ನ ಸೌಂದರ್ಯವನ್ನು (beauty) ತುಸು ಕಳೆದುಕೊಂಡಿವೆಯೇನೋ ಅನಿಸುತ್ತೆ ಅಥವಾ ದೃಷ್ಟಿಕೋನದ ಭಿನ್ನತೆಯೂ ಇರಬಹುದು.
Friends, ಖಂಡಿತವಾಗಿ ಒಳ್ಳೆಯ ಕಲಾಪ್ರದರ್ಶನ. ಬಿಡುವು ಮಾಡಿಕೊಂಡು ಹೋಗಿಬನ್ನಿ. ಕಲಾಪ್ರದರ್ಶನ ಏಪ್ರಿಲ್ 23ರಂದು ಸಂಪನ್ನಗೊಳ್ಳಲಿದೆ.
ಮಂಜುನಾಥ ಹೊನ್ನಾಪುರ ಅವರಿಗೆ ಅಭಿನಂದನೆಗಳು . ಕಲಾವಿದರ ಪರವಾನಗಿ ಇಲ್ಲದೆ ನಿಮ್ಮೊಂದಿಗೆ ಇನ್ನೊಂದು ವಿಚಾರ ಹಂಚಿಕೊಳ್ಳುತ್ತೇನೆ. ಈ ಸರಣಿಯ ಕಲಾಕೃತಿಗಳು ಶೀಘ್ರದಲ್ಲೇ ಮುಂಬೈನ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.