ನೀರಿನಂತೆ ಹರಿಯುವ ಅಂದಾನಿ ರೇಖೆಗಳು

Share This

• ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಪ್ರದರ್ಶನ

ಕರ್ನಾಟಕದ ಉತ್ತರ ಭಾಗದಲ್ಲಿ ನವ್ಯ ಕಲಾಪರಂಪರೆ ಬೆಳೆದುಬಂದ ದಾರಿಯನ್ನು ಗಮನಿಸಿದಾಗ, ನವ್ಯ ಕಲೆಯನ್ನು ಬೆಳೆಸಿದವರ ಸ್ಮರಿಸುವ ಹೊತ್ತಲ್ಲಿ ಪ್ರೊ. ವಿ.ಜಿ.ಅಂದಾನಿ ಅವರ ಪಾತ್ರ ತುಸು ಜಾಸ್ತಿ ಅನಿಸುತ್ತಿರುತ್ತದೆ. ಕಲಾಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಮತ್ತು ಸ್ವತಃ ಕಲಾವಿದರಾಗಿ, ಕಲಾಶಿಕ್ಷಕರಾಗಿ ಸೇವೆ ಸಲ್ಲಿಸಿದ ಪರಿ ಇದಕ್ಕೊಂದು ಪ್ರಮುಖ ಕಾರಣ ಅನಿಸುತ್ತದೆ. ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಕಲಾ ಶಿಕ್ಷಣದ ಕುರಿತಾಗಿ ಒಂದಿಷ್ಟು ತಿಳವಳಿಕೆ ಇದೆ ಎಂದಾದರೆ ಅದಕ್ಕೆ ವಿ.ಜಿ.ಅಂದಾನಿ ಅವರ ಕೊಡುಗೆಯೂ ಇದೆ.
ಕನ್ನಡನಾಡಿನ ಹಿರಿಯ ಕಲಾವಿದರಲ್ಲಿ ಒಬ್ಬರಾದ ಪ್ರೊ. ವಿ.ಜಿ.ಅಂದಾನಿ ಅವರು ರಚಿಸಿರುವ ಕಲಾಕೃತಿಗಳ ಪ್ರದರ್ಶನ ಇದೀಗ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1ರಲ್ಲಿ ನಡೆಯುತ್ತಿದೆ. ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ಈ ಕಲಾಪ್ರದರ್ಶನ ಆಯೋಜನೆಯಾಗಿದೆ.

ಬಹಳ ಹಿತ-ಮಿತ ವರ್ಣಗಳ ಬಳಕೆ ಅವರ ಕಲಾಕೃತಿಗಳಲ್ಲಿನ ವಿಶೇಷ. ರೇಖಾ ಪ್ರಧಾನವಾದ ಕಲಾಕೃತಿಗಳನ್ನೇ ಪ್ರದರ್ಶಿಸಲಾಗಿದೆ. ಮುದ್ರಣ (printmaking) ಮತ್ತು ರೇಖಾಚಿತ್ರಗಳು ಗಮನ ಸೆಳೆಯುವಂತಹ ಕಲಾಕೃತಿಗಳು. ಸಂಯೋಜನೆ (composition) ಮತ್ತು ಶೈಲಿ (style) ವಿಭಿನ್ನವೆನಿಸುತ್ತವೆ. ನೀರಿನಂತೆ ಹರಿಯುವ ರೇಖೆಗಳು ಮನಸ್ಸಿಗೆ ನಾಟುವಂತವು. ಮರೆಯದಂತೆ ಕಾಡುವ ರೇಖೆಗಳಾಗಿವೆ.
ನಿತ್ಯ ಜೀವನದ, ಅನುಭವದ ಅಂಗಳದಿಂದ ಆಯ್ದುಕೊಂಡ, ಮಾನವ ಸಹಜ ಗುಣ ಪ್ರತಿಪಾದಿಸುವ, ಸಾಮಾಜಿಕ ಕಳಕಳಿಯ ವಿಚಾರಗಳೇ ಅಂದಾನಿ ಅವರ ಕಲಾಕೃತಿಗಳ ರಚನೆಗೆ ವಿಷಯವಾಗಿವೆ. ನವ್ಯ ಕಲಾ ಸಂದರ್ಭದ ಪ್ರಭಾವ ಅವರ ಕಲಾಕೃತಿಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಲು ಸಾಧ್ಯವಿದೆ.
Friends, ನಾಳೆ 30-08-2024ಕ್ಕೆ ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಭೇಟಿ ಕೊಡಿ.

 

| ಅಂದಾನಿ ಅವರ ಕಿರು ಪರಿಚಯ |
ಪ್ರೊ. ವಿ.ಜಿ. ಅಂದಾನಿಯವರು ಹುಟ್ಟಿದ್ದು ಕಲಬುರಗಿ ಜಿಲ್ಲೆಯ ಕೀರಣಗಿ ಎಂಬ ಊರಿನಲ್ಲಿ. ತಂದೆ ಗುರಪ್ಪ, ತಾಯಿ ನೀಲಗಂಗವ್ವ.
ಅಂದಾನಿ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ. ಹೀಗಾಗಿ ಮುಂದೆ ಚಿತ್ರಕಲೆಯಲ್ಲೆ ಡಿಪ್ಲೊಮಾ ಪದವಿ ಪಡೆದುಕೊಂಡರು. ಬನಸ್ಥಲಿ ವಿದ್ಯಾಪೀಠದಿಂದ ಭಿತ್ತಿ ಚಿತ್ರಕಲೆಯಲ್ಲಿ ವಿಶೇಷ ತರಬೇತಿ ಪಡೆದುಕೊಂಡರು. ಅನೇಕ ಪ್ರತಿಷ್ಠಿತ ಸಂಸ್ಥೆಗಳು ನಡೆಸಿರುವ ಕಲಾ ಶಿಬಿರ, ಕಲಾಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.
ಐಡಿಯಲ್ ಕಾಲೇಜ್ ಆಫ್ ವಿಷುಯಲ್ ಆರ್ಟ್ಸ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ, ದೃಶ್ಯ ಕಲಾಮಂದಿರದ ಪ್ರಾಂಶುಪಾಲರಾಗಿ, ರಾಜ್ಯ ಕಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿ, ತಿರುಪತಿಯ ಪದ್ಮಾವತಿ ವಿ.ವಿ. ಪಠ್ಯಕ್ರಮ ಸಮಿತಿ, ಕಲಬುರಗಿ, ಬೆಂಗಳೂರು ವಿ.ವಿ. ಪಠ್ಯಕ್ರಮ ಸಮಿತಿ ಸೇರಿದಂತೆ ಅನೇಕ ಸಮಿತಿಗಳ ಸದಸ್ಯರಾಗಿ ಸಲ್ಲಿಸಿದ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸರಕಾರದ ಫೆಲೋಷಿಪ್, ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಹಾಗೂ ಕೇಂದ್ರ ಲಲಿತಕಲಾ ಅಕಾಡಮಿ ಪ್ರಶಸ್ತಿಗಳು ಅಂದಾನಿ ಅವರ ಮುಡಿಗೇರಿವೆ. ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

 

 


Share This

Leave a Reply

Your email address will not be published. Required fields are marked *