ಮಹಾರಾಷ್ಟ್ರ ಮೂಲದ ಖ್ಯಾತ ಕಲಾವಿದ ದಿವಂಗತ ವಿ.ಎಸ್.ಗಾಯತೊಂಡೆ ಅವರ ಕಲಾಕೃತಿ ಮುಂಬೈನಲ್ಲಿ ನಡೆದ ಆಕ್ಷನ್ ನಲ್ಲಿ 32 ಕೋಟಿ ರುಪಾಯಿಗೆ ಮಾರಾಟವಾಗಿದೆ. ಇದೊಂದು ದಾಖಲೆ. ಭಾರತೀಯ ಕಲಾ ಇತಿಹಾಸದಲ್ಲಿಯೇ ಇಷ್ಟೊಂದು ಮೊತ್ತಕ್ಕೆ ಯಾವ ಕಲಾವಿದರ ಕಲಾಕೃತಿಯೂ ಮಾರಾಟವಾದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ ಇದೊಂದು ಹೊಸ ಇತಿಹಾಸವೇ.
ಕಲಾಕ್ಷೇತ್ರದ ಪ್ರತಿಷ್ಠಿತ ಆಕ್ಷನ್ ಹೌಸ್ ಗಳಲ್ಲಿ ಒಂದಾದ ಪುಂಡೊಲ್ಸ್ ಸೆಪ್ಟೆಂಬರ್ 3ರಂದು ಆನ್ ಲೈನ್ ಹರಾಜು ಆಯೋಜನೆ ಮಾಡಿತ್ತು. ಈ ಹರಾಜಿನಲ್ಲಿ ಭಾರತದ ಅನೇಕ ಹಿರಿಯ ಕಲಾವಿದರ ಕಲಾಕೃತಿಗಳನ್ನು ಹರಾಜಿಗೆ ಇಡಲಾಗಿತ್ತು.
1974ರಲ್ಲಿ ಗಾಯತೊಂಡೆ ಅವರು ರಚಿಸಿದ ಶೀರ್ಷಿಕೆ ರಹಿತ ತೈಲವರ್ಣದ ಕಲಾಕೃತಿಯೊಂದು 32 ಕೋಟಿಗೆ ಮಾರಾಟವಾಗಿದೆ. ಕೊರೋನಾ ಲಾಕ್ಡೌನ್ ಬಳಿಕ ಆರ್ಥಿಕ ಸ್ಥಿತಿ ಕುಸಿದಿದ್ದರೂ ಈ ಮೊತ್ತಕ್ಕೆ ಮಾರಾಟ ಆಗಿರುವುದು ಸಹಜವಾಗಿಯೇ ಒಂದು ಸಿಹಿ ಸುದ್ದಿ. ಇದೀಗ ಭಾರತೀಯ ಕಲಾ ಕ್ಷೇತ್ರದ ಅತ್ಯಂತ ದುಬಾರಿ ಕಲಾಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಮೈಲಿಗಲ್ಲುಗಳು ಕಲಾ ಇತಿಹಾಸದಲ್ಲಿ ದಾಖಲಾಗಬೇಕು ಕೂಡ. ಮುಂದಿನ ಪೀಳಿಗೆಗೆ ತಲುಪಬೇಕು.
ಗಾಯತೊಂಡೆ ಅವರ ಇದ್ದೆ ಸರಣಿಯ ಇನ್ನೊಂದು ಕಲಾಕೃತಿ 2015ರಲ್ಲಿ ಮುಂಬೈನಲ್ಲಿಯೇ ನಡೆದ ಹಾರಾಜಿನಲ್ಲಿ 29.3 ಕೋಟಿ ರುಪಾಯಿಗೆ ಮಾರಾಟವಾಗಿತ್ತು. 2010ರಲ್ಲಿ ನಡೆದ ಹರಾಜಿನಲ್ಲಿ ಎಸ್.ಎಚ್. ರಜಾ ಅವರ ಕಲಾಕೃತಿಯೊಂದು 16.3 ಕೋಟಿ ರುಪಾಯಿಗೆ ಮಾರಾಟವಾಗಿತ್ತು. 2015ರಲ್ಲೇ ಅಮೃತಾ ಶೇರ್ಗಿಲ್ ಅವರ ಕಲಾಕೃತಿಯೊಂದು 23.4 ಕೋಟಿ ರುಪಾಯಿಗೆ ಮಾರಾಟವಾಗಿತ್ತು ಎಂದು ಪುಂಡೊಲ್ಸ್ ಸಂಸ್ಥೆ ಮಾಹಿತಿ ನೀಡಿದೆ.
ಅಷ್ಟಕ್ಕೂ ಈ ಕಲಾಕೃತಿಯ ಬಗ್ಗೆ ಹೇಳದೆ ಇದ್ದರೆ ಹೇಗೆ…
ಗಾಯತೊಂಡೆ ಅವರು ೧೯೭೪ರಲ್ಲಿ ಕ್ಯಾನ್ವಾಸಿನ ಮೇಲೆ ರಚಿಸಿದ ತೈಲವರ್ಣದ ಕಲಾಕೃತಿ ಇದು. ಅಷ್ಟಕ್ಕೂ ಈ ಕಲಾಕೃತಿ ಪ್ರಸ್ತುತ ಜಪಾನಿನ ಗ್ಲೆನ್‌ಬರಾ ಆರ್ಟ್ ಮ್ಯೂಸಿಯಂ ಸಂಗ್ರಹದಲ್ಲಿದೆ. ಇದು ಜಪಾನಿನ ಖ್ಯಾತ ಆರ್ಟ್ ಕಲೆಕ್ಟರ್ (ಕಲಾಕೃತಿ ಸಂಗ್ರಾಹಕ) ಮಸನೋರಿ ಫುಕುಓಕಾ ಅವರಿಗೆ ಸೇರಿದ ಮ್ಯೂಸಿಯಂ. ಶೀರ್ಷಿಕೆ ರಹಿತವಾದ ಕಲಾಕೃತಿ ಅಮೂರ್ತವಾದ ಭಾವದಿಂದ ಕೂಡಿದ್ದರೂ ಒಂದು ಕ್ಷಣ ಮೌನವಾಗಿಸಿ ಹಿಡಿದು ನಿಲ್ಲಿಸುವಂತಿದೆ. ತಕ್ಷಣಕ್ಕೆ ಮುದ್ರಣದ ಮೈವಳಿಕೆಯಿಂದ ಕೂಡಿರುವಂತೆ ಭಾಸವಾಗುವಂತಿದೆ. ಅಷ್ಟು ಸೊಗಸಾಗಿ ರಚನೆಗೊಂಡಿರುವ ಕಾಲಾಕೃತಿ ಇದಾಗಿದೆ.
ಇದೀಗ ಈ ಕಲಾಕೃತಿ ಹೆಸರೇಳಲಿಚ್ಚಿಸದ ಅಂತಾರಾಷ್ಟ್ರೀಯ ಸಂಗ್ರಾಹಕರೊಬ್ಬರು ಖರೀದಿಸಿದ್ದಾರೆ ಎಂದು ಪುಂಡೊಲ್ಸ್ ಹೇಳಿಕೊಂಡಿದೆ. ಅಲ್ಲದೆ ಈ ಕಲಾಕೃತಿ ೨೦೧೫ರಲ್ಲಿ ಅಮೆರಿಕದ ನ್ಯೂಯಾರ್ಕ್ ಮತ್ತು ಇಟಲಿಯ ವೆನಿಸ್ ನಗರದಲ್ಲಿ ಪ್ರದರ್ಶನಗೊಂಡಿತ್ತು.
ಇನ್ನು ಈ ಹರಾಜಿನಲ್ಲಿ ಶಿಮ್ಲಾ ಮೂಲದ ಖ್ಯಾತ ಕಲಾವಿದ ದಿವಂಗತ ಜಗದೀಶ್ ಸ್ವಾಮಿನಾಥನ್ ಅವರ ಕಲಾಕೃತಿಯೂ 9.5 ಕೋಟಿ ದಾಖಲೆ ರುಪಾಯಿಗೆ ಮಾರಾಟವಾಗಿದೆ. ಇದು ಈ ಕಲಾವಿದರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು.