ಅರ್ಚನಾ ತೆರೆದಿಟ್ಟ ನೆರಳು-ಬೆಳಕಿನ ಭಾವ ಸಂಗಮ!

Share This

• ಸುಮುಖ ಗ್ಯಾಲರಿಯಲ್ಲಿ ” WEAVING LIGHT ” ಕಲಾಪ್ರದರ್ಶನ

“Travel is an eye-opening experience that allows us to gain a fresh outlook and draw on new cultures and surroundings to push ourselves and our art to a new level”

ಹೌದು, ಪ್ರತಿಯೊಬ್ಬ ಕಲಾವಿದರಿಗೂ ಪ್ರಯಾಣದಲ್ಲಿ ಸಿಗುವ ಅನುಭವಗಳು ಹೊಸದೊಂದು ಅನ್ವೇಷಣೆಗೆ ನೆರವಾಗಬಲ್ಲದು. ವಿಭಿನ್ನ ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಾಗಲಿದೆ. ಈ ಮೂಲಕ ಕಲಾಭಿವ್ಯಕ್ತಿಯನ್ನು ಇನ್ನೊಂದು ಹಂತಕ್ಕೆ ದಾಟಿಸಲು ಸಹಕಾರಿಯಾಗಲಿದೆ. ಅನೇಕ ಸಂದರ್ಭಗಳಲ್ಲಿ ಪ್ರಯಾಣಗಳು ಗೊತ್ತು ಗುರಿ ಇಲ್ಲದ ಪ್ರಯಾಣವಾಗಿ ಬಿಡಬಹುದು. ಇದಕ್ಕೆ ಅವಕಾಶ ಆಗದ ರೀತಿಯಲ್ಲಿ ಪೂರ್ವತಯಾರಿ ಆದರೆ ಪ್ರಯಾಣ ಒಂದು ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ. ಮುಂದೆ ಈ ಅನ್ವೇಷಣೆಯೇ ಯಶಸ್ವಿ ಸಾಧನೆಯಾಗಿಯೋ ಅಥವಾ ಅನುಭವವಾಗಿಯೋ ಇರಲು ಸಾಧ್ಯ. ಪ್ರಯಾಣವು ಯಾವತ್ತೂ ಒಂದು ಹೊಸ ವಿಚಾರಕ್ಕೆ, ಹೊಸ ತಂತ್ರಗಾರಿಕೆಗೆ, ಹೊಸ ಯೋಜನೆಗೆ, ನಿರ್ವಹಣೆಯ ಹೊಸ ರೂಪ ಮತ್ತು ರಚನೆಗೆ ತೆರೆದುಕೊಳ್ಳಲು ಪ್ರೇರೇಪಿಸುತ್ತದೆ.
ಬೆಂಗಳೂರಿನ ಸುಮುಖ ಆರ್ಟ್ ಗ್ಯಾಲರಿಯಲ್ಲಿ ಆರಂಭವಾಗಿರುವ ” WEAVING LIGHT ” ಕಲಾಪ್ರದರ್ಶನ ಇಂತಹದ್ದೊಂದು ಹೊಸ ವಿಚಾರ, ಹೊಸ ಮಾಧ್ಯಮ, ಹೊಸ ರಚನೆ, ಸಂಯೋಜನೆ, ನಿರ್ವಹಣೆಯ ಜೊತೆ ಜೊತೆಗೆ ವಿಭಿನ್ನ ಅನುಭವ ನೀಡುವಂತಿದೆ. ಕಲಾವಿದೆ ಅರ್ಚನಾ ಹಂದೆ ಅವರ ಹುಡುಕಾಟದ ಮುಂದುವರಿದ ಭಾಗವೆಂದು ಹೇಳಬಹುದಾದ ಈ ಕಲಾಪ್ರದರ್ಶನ ಅವರ ದೃಷ್ಟಿಕೋನದ ನಿಖರ ನೋಟಕ್ಕೆ ಕನ್ನಡಿ ಹಿಡಿದಂತಿದೆ.

 

 

| ಬೆಳಕು ಮತ್ತು ನೆರಳು! |
ಈ ಎರಡು ರಚನೆಗಳ ಹಿಂದಿನ ಪರಿಕಲ್ಪನೆ ವಿಶಾಲವಾದುದು. ಅರ್ಚನಾ ಹಂದೆ ಅವರು ನೇಯ್ಗೆಯಲ್ಲಿ ಬಳಸಲಾಗುವ ” Jacquard loom ” ಕಾರ್ಡ್‌ಗಳನ್ನು (Jacquard perforated punching cards) ಬಳಸಿಕೊಂಡು ಪ್ರತಿಷ್ಠಾಪನೆಯ ರಚನಾತ್ಮಕ ಕಲಾಕೃತಿಯ ಮೂಲಕ ನೋಡುಗರನ್ನು ಕತ್ತಲಲ್ಲೇ ನಿಲ್ಲಿಸಿ ಹೊಸ ದಿಕ್ಕಿನತ್ತ ಕರೆದೊಯ್ಯುವ ಪ್ರಯತ್ನ ನಡೆಸುತ್ತಾರೆ. ಕತ್ತಲೆಯಲ್ಲಿ ನೆಳಕು ಚೆಲ್ಲುವ ಮೂಲಕ ನೆರಳು ಹೊಸದೊಂದು ರೂಪ ತಾಳುವ ಮೂಲಕ ಇಡೀ ನೇಕಾರರ ಬದಕನ್ನೂ ವಿಭಿನ್ನವಾಗಿ ಸಮಾಜಕ್ಕೆ ತಲುಪಿಸುತ್ತಿದ್ದಾರೆನೋ ಎಂದು ಭಾಸವಾಗುವಂತೆ ಅಭಿವ್ಯಕ್ತಿಗೊಳಿಸಿದ್ದಾರೆ.
ಅನುಭವ ಇರುವ ನೋಡುಗನಿಗೆ ಈ ಕಲಾಕೃತಿ ತಕ್ಷಣಕ್ಕೆ ಮಲೆನಾಡಿನ ಚಪ್ಪರದ ನೆನಪು ಮಾಡಿದರೂ ಅಚ್ಚರಿ ಇಲ್ಲ. ಅದಕ್ಕೆ ಅತ್ಯಂತ ಹೆಚ್ಚಿನ ಸಾಮ್ಯತೆ ಇರುವಂತೆ ಹ್ಯಾಂಡ್‌ಲೂಮ್ ಕಾರ್ಡ್ಗಳನ್ನು ಬಳಸಿಕೊಂಡಿದ್ದಾರೆ. ಪ್ರತಿಯೊಂದು ಕಾರ್ಡ್ಗಳನ್ನು ಜೋಡಿಸಲು ನೇಯ್ಗೆಯ ವಿಧಾನವನ್ನೇ ಅನುಸೆರಿಸಿದ್ದಾರೆ. ಈ ಕಾರಣಕ್ಕಾಗಿ ಈ ಕಲಾಕೃತಿ ನೇಕಾರರಿಗೆ ಇನ್ನಷ್ಟು ಆಪ್ತ ಎನಿಸುವಂತಿದೆ. ವಿಭಿನ್ನವಾದ ವಿನ್ಯಾಸದಿಂದ ಕೂಡಿರುವ ಕಾರ್ಡ್ಗಳ ಮೇಲಿನ ರಂಧ್ರಗಳ ಮೂಲಕ ಬೆಳಕು ಹಾದು ಹೋಗುವಾದ ರೂಪತಾಳುವ ನೆರಳು ಎದುರಿನ ಗೋಡೆಯನ್ನು, ನೆಲವನ್ನು ರಂಗೋಲಿ ಮೂಲಕ ಅಲಂಕರಿಸಿದ ಭಾವ ಮೂಡುತ್ತದೆ. ಒಟ್ಟಾರೆ ನೆರಳು-ಬೆಳಕಿನ ಆಟವೇ ಒಂದು ಕಲಾಕೃತಿಯಾಗಿ ನೋಡುಗರ ಎದುರು ನಿಲ್ಲುತ್ತದೆ. ಅರ್ಚನಾ ಹಂದೆ ಅವರು ತಮ್ಮ ಈ ಕಲಾಕೃತಿ ಮೂಲಕ ಹೊಸ ಆಯಾಮದಲ್ಲಿ ನೋಡಲು ನೋಡುಗರನ್ನು ಚಿಂತನೆಗೆ ಹಚ್ಚುತ್ತಾರೆ.
ನೆರಳು ಬೆಳಕಿನ ಆಟದಲ್ಲಿನ ನೋಟಕ್ಕೂ ಮೊದಲು ಅರ್ಥ ಮಾಡಿಕೊಳ್ಳಬೇಕಾದ್ದು ಪಾರದರ್ಶಕ ಮತ್ತು ಅಪಾರದರ್ಶಕದ ನಡುವಿನ ವ್ಯತ್ಯಾಸವನ್ನು. ಅರ್ಚನಾ ಹಂದೆ ಅವರು ಇದನ್ನೇ ಪರೋಕ್ಷವಾಗಿ ಈ ಕಲಾಕೃತಿ ಮೂಲಕ ಹೇಳುತ್ತಿದ್ದಾರೆ ಅನಿಸುತ್ತದೆ. ಬೆಳಕು ಅಪಾರದರ್ಶಕ ವಸ್ತುವಿನ ಮೂಲಕ ಹಾದು ಹೋಗಲು ಸಾಧ್ಯವಿಲ್ಲವಾದ್ದರಿಂದ ಅಲ್ಲಿ ನೆರಳಿನ ರಚನೆಗೆ ಸಾಧ್ಯವಾಗುತ್ತದೆನ್ನುವ ಪರಿಕಲ್ಪನೆಯನ್ನು ಕಲಾಕೃತಿಗೆ ಬಳಸಿಕೊಂಡಿದ್ದಾರೆ. ” Jacquard loom ” ಕಾರ್ಡ್ಗಳ ಮೇಲಿನ ಬೆಳಕು ಸೃಷ್ಟಿಸುವ ನೆರಳುಗಳು ಸಹಜವಾಗಿ ಮೂರು ಪ್ರಕಾರದ ನೆರಳುಗಳನ್ನು ನೆನಪಿಸುತ್ತವೆ. ಬಹಳ ಮಂದಿಗೆ ಶಾಲಾ ದಿನಗಳಲ್ಲಿ ಓದಿರುವ ಸಂದರ್ಭ ಮರುಕಳುಸಬಹುದು. ಅಂಬ್ರಾ (umbra), ಪೆನಂಬ್ರಾ (penumbra) ಮತ್ತು ಆಂಟುಂಬ್ರಾ (antumbra) ಈ ನೆರಳುಗಳೇ ಅರ್ಚನಾ ಹಂದೆ ಅವರ ” WEAVING LIGHT ” ಕಲಾಪ್ರದರ್ಶನದ ಹಿಂದಿನ ಪ್ರಧಾನ ಸೂತ್ರ ಎನ್ನಬಹುದು. ಈ ಬಗ್ಗೆ ವಿವರಿಸಲು ಹೋದರೆ ಪುಟಗಟ್ಟಲೆ ಬರೆಯಬೇಕಾದೀತು. ಸದ್ಯಕ್ಕೆ ಇಷ್ಟು ಸಾಕೆನಿಸುತ್ತೆ.
ಒಟ್ಟಾರೆ ಈ ಕಲಾಪ್ರದರ್ಶನ ಕೇವಲ ಕಲೆಯಷ್ಟೇ ಅಲ್ಲ. ವಿಜ್ಞಾನದ ಭಾಗವೂ ಹೌದು. ಅರ್ಚನಾ ಅವರ ಅನ್ವೇಷಣಾ ಪ್ರಯತ್ನದ ಭಾಗವೂ ಹೌದು. ಬಹಳ ಸರಳವಾದ ವಿಧಾನದೊಂದಿಗೆ ನಿರ್ವಹಿಸುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಾರೆ.

| ಯಾರಿವರು ಅರ್ಚನಾ ಹಂದೆ? |
ಕರ್ನಾಟಕದ ಪ್ರತಿಭಾನ್ವಿತ ಕಲಾವಿದೆ. ಅರ್ಚನಾ ಹಂದೆ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಬಾಂಬೆ ಮತ್ತು ಬೆಂಗಳೂರಿನಲ್ಲಿ ವಾಸವಿರುತ್ತಾರೆ.
1991 ರಲ್ಲಿ ಶಾಂತಿನಿಕೇತನದ ವಿಶ್ವ-ಭಾರತಿಯಲ್ಲಿ ಪ್ರಿಂಟ್‌ಮೇಕಿಂಗ್‌ನಲ್ಲಿ ಪದವಿ ಪಡೆದುಕೊಂಡರು. 1993 ರಲ್ಲಿ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ MFA ಮುಗಿಸಿ ನಿರಂತರವಾಗಿ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಅರ್ಚನಾ ಅವರ ಕಲಾಕೃತಿಗಳಲ್ಲಿ ಸೃಜನಶೀಲತೆ, ವೈವಿಧ್ಯತೆ ಕಾಣಲು ಸಾಧ್ಯ. ಅನೇಕ ಕಲಾಪ್ರದರ್ಶನಗಳ ಕ್ಯುರೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ರೋಮ್‌ನ Z2O, ಸಾರಾ ಝಾನಿನ್ ಗ್ಯಾಲರಿ, ಮುಂಬೈನ ಗ್ಯಾಲರಿ ಕೆಮೊಲ್ಡ್, ದೆಹಲಿಯ ನೇಚರ್ ಮೋರ್ಟೆ ಮತ್ತು JNU, ಮುಂಬೈನ ಲೇಕರೆನ್ ಮುಂತಾದ ಕಡೆ ಏಕವ್ಯಕ್ತಿ ಕಲಾಪ್ರದರ್ಶನ ಆಯೋಜಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ವಿಶ್ವದ ಪ್ರತಿಷ್ಠಿತ ಕಲಾ ಸಮ್ಮೇಳನಗಳಲ್ಲಿಯೂ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

 

 

 

 


Share This

Leave a Reply

Your email address will not be published. Required fields are marked *